ಗ್ರಾಮದಲ್ಲಿ ನರಕಯಾತನೆ ಅನುಭವಿಸುವಂತಹ ಕೃತ್ಯಗಳನ್ನು ಎಸಗಿದ್ದಾರೆ. ಮಹಿಳೆಯರ ಚಿನ್ನದ ಸರ ಕಸಿದುಕೊಂಡಿದ್ದಾರೆ. ಪಡಿತರ ಅಂಗಡಿಗಳಲ್ಲಿ ಆಹಾರ ಧಾನ್ಯಗಳನ್ನು ದೋಚಿದ್ದಾರೆ. ಹಲವು ಮನೆಗಳಲ್ಲಿ ಚಿನ್ನಾಭರಣಗಳನ್ನು ಲೂಟಿ ಮಾಡಿದ್ದಾರೆ. ಶಿವಾಜಿಯ ನಿಜವಾದ ಭಕ್ತರು ಇಂತಹ ಕೆಲಸಗಳನ್ನು ಮಾಡುವುದಿಲ್ಲ. ಇಲ್ಲವರೆಲ್ಲರೂ ಶಿವಾಜಿ ಹೆಸರಿನಲ್ಲಿ ಲೂಟಿ, ಹಿಂಸಾಚಾರ ಮಾಡುತ್ತಿರುವ ಧರೋಡೆಕೋರರು, ಗೂಂಡಾಗಳು – ಇದು ಜುಲೈ 14ರಂದು ಗ್ರಾಮದಲ್ಲಿ ನಡೆದ ಹಿಂಸಾಚಾರದಿಂದ ಬದುಕನ್ನು ಕಳೆದುಕೊಂಡಿರುವ ನಿವಾಸಿ ಜಫ್ರಾನ್ ಅವರ ಅಳಲಿನ ಮಾತುಗಳು.
ಜುಲೈ 14ರ ಬೆಳಗ್ಗೆ ಜ್ರಫ್ರಾನ್ ಅವರು ತಮ್ಮ ಅಂಗಡಿಯನ್ನು ತೆರೆದರು. ಈ ವೇಳೆ, ಅವರ ಅಂಗಡಿಯಿಂದ ಸ್ವಲ್ಪವೇ ದೂರದಲ್ಲಿದ್ದ ಐತಿಹಾಸಿಕ ವಿಶಾಲಗಡ್ ಕೋಟೆಯ ತಪ್ಪಲಿನಲ್ಲಿ ನೂರಾರು ಪ್ರತಿಭಟನಾಕಾರರು ಸೇರಿದ್ದರು. ಅವರೆಲ್ಲರೂ ತಾವು ಮರಾಠ ರಾಜ ಛತ್ರಪತಿ ಶಿವಾಜಿಯ ಕಟ್ಟಾ ಅನುಯಾಯಿಗಳು ಎಂದು ಹೇಳಿಕೊಳ್ಳುತ್ತಿದ್ದರು. ಕೋಟೆಯಲ್ಲಿನ ಅಕ್ರಮ ಅತಿಕ್ರಮಣಗಳ ವಿರುದ್ಧ ಪ್ರತಿಭಟಿಸಲು ಮಾಜಿ ರಾಜ್ಯಸಭಾ ಸದಸ್ಯ ಛತ್ರಪತಿ ಸಂಭಾಜಿ ರಾಜೆ ನೀಡಿದ್ದ ಕರೆ ಮೇರೆಗೆ ಅವರೆಲ್ಲರೂ ಅಲ್ಲಿ ಜಮಾಯಿಸಿದ್ದರು.
ಅವರಲ್ಲಿ ಹೆಚ್ಚಿನವರು ಕೊಲ್ಲಾಪುರ ಜಿಲ್ಲೆಯವರು. ಇನ್ನೂ ಕೆಲವರು ಪುಣೆಯಿಂದ ಬಂದಿದ್ದರು. ರಾಜೆ ಅವರು ವಿಶಾಲಗಡ್ ಕೋಟೆಯ ಮೇಲಿನ ಅಕ್ರಮ ಅತಿಕ್ರಮಣಗಳ ವಿರುದ್ಧ ಶಾಂತಿಯುತ ಪ್ರತಿಭಟನೆಗೆ ಕರೆಕೊಟ್ಟಿರುವುದಾಗಿ ಹೇಳಿದ್ದರೂ, ಅಲ್ಲಿ ಜಮಾಯಿಸಿದ್ದ ಹಲವರು ದೊಣ್ಣೆಗಳು, ಕತ್ತಿಗಳು, ಕೊಡಲಿಗಳು ಮತ್ತು ಮಚ್ಚುಗಳನ್ನು ಹಿಡಿದು, ಝಳಪಿಸುತ್ತಿದ್ದರು. ಅವರ ವರ್ತನೆಯೇ ಅವರು ಗಲಾಟೆ, ಹಾನಿ ಉಂಟುಮಾಡುವ ಉದ್ದೇಶದಿಂದಲೇ ಬಂದಿದ್ದಾರೆ ಎಂಬುದನ್ನು ಸೂಚಿಸುತ್ತಿತ್ತು ಎಂದು ಜಫ್ರಾನ್ ಹೇಳುತ್ತಾರೆ.
ಅಂದು, ಸಂಜೆಯ ವೇಳೆಗೆ ಗಜಾಪುರದಲ್ಲಿ ಸುಮಾರು 40 ಮನೆಗಳು ಮತ್ತು ಅಂಗಡಿಗಳನ್ನು ಧ್ವಂಸಗೊಳಿಸಲಾಗಿತ್ತು. ಮಸೀದಿಯ ಮೇಲೆ ದಾಳಿ ನಡೆಸಲಾಗಿತ್ತು. ಹಲವಾರು ಸ್ಥಳೀಯರ ಮೇಲೆ ಹಲ್ಲೆ ನಡೆಸಿದ್ದು, ಸ್ಥಳೀಯರು ಗಾಯಗೊಂಡಿದ್ದರು. ಜಫ್ರಾನ್ ಅವರ ಅಂಗಡಿಯನ್ನೂ ಲೂಟಿ ಮಾಡಲಾಗಿತ್ತು. ಇಡೀ ಊರಿಗೆ ಊರೇ ನಾಶಗೊಂಡ ಸ್ಥಿತಿ ತಲುಪಿತ್ತು.
‘ವಿಶಾಲಗಡದಲ್ಲಿ ಅಕ್ರಮ ಒತ್ತುವರಿಯಾದರೆ, ನಮ್ಮ ಗ್ರಾಮದ ಮೇಲೇಕೆ ದಾಳಿ?’
ಶಿವಾಜಿ ಮಹಾರಾಜರ 13ನೇ ವಂಶಸ್ಥ ಕೊಲ್ಲಾಪುರದ ರಾಜರ್ಷಿ ಛತ್ರಪತಿ ಶಾಹು ಅವರ ಮೊಮ್ಮಗ ಸಂಭಾಜಿ ರಾಜೆ ಅವರು ಛತ್ರಪತಿ ಶಿವಾಜಿ ಕಾಲದ ಕೋಟೆಗಳನ್ನು ಉಳಿಸಲು ಸಕ್ರಿಯವಾಗಿ ಹೋರಾಟ ನಡೆಸುತ್ತಿದ್ದಾರೆ. ಮಾಜಿ ರಾಜ್ಯಸಭಾ ಸದಸ್ಯರೂ ಆಗಿರುವ ಅವರು ಸುಮಾರು ಒಂದು ವರ್ಷದಿಂದ ‘ವಿಶಾಲಗಡ ಮೋರ್ಚಾಕೂಟ’ವನ್ನು ಮುನ್ನಡೆಸುತ್ತಿದ್ದಾರೆ.
ಜುಲೈ 14 ರಂದು, ಅವರ ಪ್ರತಿಭಟನಾಕಾರರು ಜೈ ಭವಾನಿ, ಜೈ ಶಿವಾಜಿ ಹಾಗೂ ‘ಮಹಾರಾಜಂಚ ಕಿಲ್ಲಾ ವಾಚ್ವಾ ರೇ ವಾಚ್ವಾ’ (ರಾಜನ ಕೋಟೆಯನ್ನು ಉಳಿಸಿ) ಎಂಬ ಘೋಷಣೆ ಕೂಗುತ್ತಾ ವಿಶಾಲಗಡ ಕೋಟೆಯ ಬಳಿ ಜಮಾಯಿಸಿದ್ದರು.
ಪ್ರತಿಭಟನಾ ಸ್ಥಳಕ್ಕೆ ಸಂಭಾಜಿ ರಾಜೇ ತೆರಳುವ ಮುನ್ನ, ಕೆಲವು ದುಷ್ಕರ್ಮಿಗಳು ಕೋಟೆ ಬಳಿಯಿದ್ದ ರೆಹಮಾನ್ ಮಲಿಕ್ ದರ್ಗಾದ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಈ ಸಂದರ್ಭದಲ್ಲಿ ಕೆಲವು ನಿವಾಸಿಗಳು ಮತ್ತು ಪೊಲೀಸರಿಗೆ ಗಾಯಗಳೂ ಆಗಿದ್ದವು. ಗಾಯಗೊಂಡ ಕೆಲ ನಿವಾಸಿಗಳು ಪ್ರತಿದಾಳಿ ನಡೆಸಿದರು. ನಂತರ ಪರಿಸ್ಥಿತಿ ಹತೋಟಿ ಮೀರಿತು. ಇದರಿಂದಾಗಿ ಪೊಲೀಸರು ಕೋಟೆಯನ್ನು ಸುತ್ತುವರೆದರು. ಕೋಟೆಗೆ ಪ್ರವೇಶವನ್ನು ನಿರ್ಬಂಧಿಸಿದರು. ಇದರಿಂದ ಉದ್ರಿಕ್ತರಾದ ಪ್ರತಿಭಟನಾನಿರತ ಗುಂಪು ಗಜಾಪುರ ಗ್ರಾಮದ ಮುಸ್ಲಿಂ ಪ್ರದೇಶ ಮುಸಲ್ಮಾನ್‌ವಾಡಿಗೆ ನುಗ್ಗಿತು. ಅಲ್ಲಿನ ಅಂಗಡಿಗಳು ಮತ್ತು ಮನೆಗಳ ಮೇಲೆ ದಾಳಿ ನಡೆಸಿತು.
“ಐದಾರು ಮಂದಿಯುಳ್ಳ ಹಲವಾರು ಗುಂಪುಗಳು ನನ್ನ ಮನೆಗೆ ನುಗ್ಗಿದವು. ನಮ್ಮ ಮನೆಯ ಬಳಿಯಿದ್ದ ಕಾರುಗಳ ಗಾಜನ್ನು ಒಡೆದು ಹಾಕಿದರು. ಅದರ ಇಂಜಿನ್ ಅನ್ನು ಹಾಳುಮಾಡಿದರು. ನಮ್ಮ ಕಿರಾಣಿ ಅಂಗಡಿಯನ್ನೂ ಲೂಟಿ ಮಾಡಿದರು. ಅಂಗಡಿಯಲ್ಲಿದ್ದ ದಿನಸಿ ಡಬ್ಬಗಳನ್ನು ದೋಚಿಕೊಂಡು ಹೋದರು. ಅಂಗಡಿಯಲ್ಲಿ ಸಣ್ಣ ಫ್ರಿಡ್ಜ್ ಇತ್ತು. ಅದನ್ನೂ ಹೊರತಂದು ಒಡೆದು ಹಾಕಿದರು. ಸುಮಾರು 30 ದ್ವಿಚಕ್ರ ವಾಹನಗಳು ಹಾಗೂ 20 ಕಾರುಗಳನ್ನು ಆ ದರೋಡೆಕೋರ ಗುಂಪು ಸುಟ್ಟು ಹಾಕಿತು” ಎಂದು ಜಫ್ರಾನ್ ಘಟನೆಯನ್ನು ವಿವರಿಸಿದ್ದಾರೆ.
ಮತ್ತೋರ್ವ ಸಂತ್ರಸ್ತೆ ರಜಿಯಾ ಹೇಳುವಂತೆ, “ನಾನು ನನ್ನ ನೆರೆಹೊರೆಯವರೊಂದಿಗೆ ಮನೆಯಲ್ಲಿ ಕುಳಿತಿದ್ದೆ. ಇದ್ದಕ್ಕಿದ್ದಂತೆ ಗದ್ದಲ ಕೇಳಿಸಿತು. ಹತ್ತಿರದ ಅಂಗಡಿಯೊಂದರಲ್ಲಿ ಪುರುಷರ ಗುಂಪುಗಳು ಲೂಟಿ ಮಾಡುವುದನ್ನು ನಾವು ನೋಡಿದೆವು. ಅವರಲ್ಲಿ ಕೆಲವರು ‘ಖಾಲಿ ಕರೊ’ (ಸ್ಥಳವನ್ನು ಖಾಲಿ ಮಾಡಿ) ಎಂದು ಹೇಳುತ್ತಿದ್ದರು. ಇನ್ನೂ ಕೆಲವರು ದೊಣ್ಣೆಗಳಿಂದ ಅಂಗಡಿಯ ವಸ್ತುಗಳನ್ನು ಒಡೆದು ಹಾಕುತ್ತಿದ್ದರು. ನಾವು ತಕ್ಷಣ ನಮ್ಮ ಮಕ್ಕಳನ್ನು ಒಳಗೆ ಎಳೆದುಕೊಂಡು ಬಾಗಿಲು ಮತ್ತು ಕಿಟಕಿಗಳನ್ನು ಮುಚ್ಚಿಕೊಂಡೆವು” ಎಂದು ಹೇಳಿದ್ದಾರೆ.
“ನಾವು ಅಡುಗೆಮನೆಯಲ್ಲಿ ಮೌನವಾಗಿ ಅಡಗಿ ಕುಳಿತಿದ್ದೆವು. ಆದರೆ, ಆ ಗುಂಪು ನಮ್ಮ ಮನೆಯ ಮುಂಭಾಗದ ಬಾಗಿಲನ್ನು ಬಡಿಯುತ್ತಿತ್ತು. ಅವರು ಮೂರ್ನಾಲ್ಕು ನಿಮಿಷಗಳ ಕಾಲ ಬಾಲಿಗು ಬಡಿದರು. ನಾವು ಅಡುಗೆ ಮನೆಯ ಬಾಗಿಲಿನಿಂದ ತಪ್ಪಿಸಿಕೊಂಡು ಕಾಡಿಗೆ ಓಡಿದೆವು. ಸಂಜೆ ಮನೆಗೆ ಮರಳಿ ಬಂದು ನೋಡಿದಾಗ, ಮನೆಯ ಮುಂಭಾಗದ ಎರಡೂ ಕಿಟಕಿಗಳು ಮುರಿದುಹೋಗಿದ್ದವು. ನೆಲದ ಮೇಲೆ ಕಲ್ಲುಗಳು ಮತ್ತು ಗಾಜಿನ ಚೂರುಗಳು ಬಿದ್ದಿದ್ದವು. ಬಾಗಿಲುಗಳನ್ನು ಒಡೆದಿದ್ದರು. ಕಪಾಟುಗಳಲ್ಲಿ ಚಿನ್ನಾಭರಣಗಳನ್ನು ದೋಚಿದ್ದರು” ಎಂದು ರಜಿಯಾ ಹೇಳಿದ್ದಾರೆ.
“ವಿಶಾಲಗಡದಲ್ಲಿ ಅಕ್ರಮ ತೆರವು ನಡೆಯುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ತೆರವು ಕಾರ್ಯಾಚರಣೆ ನಡೆದಿದ್ದಾಗೆಲ್ಲ ಅಲ್ಲಿ ಪೊಲೀಸರನ್ನು ನಿಯೋಜಿಸಲಾಗುತ್ತಿತ್ತು. ಕೋಟೆಯ ಅಕ್ರಮ ಒತ್ತುವರಿ ವಿಚಾರ ವಿಶಾಲಗಡ ನಿವಾಸಿಗಳು ಮತ್ತು ಸಂಸದ ರಾಜೇ ಅವರ ನಡುವಿನದ್ದು. ಆದರೆ, ಅವರು ನಮ್ಮ ಗ್ರಾಮದ ಮೇಲೆ ಯಾಕೆ ದಾಳಿ ಮಾಡಿದರು? ಇದು ಕೇವಲ ಗೂಂಡಾಗಿರಿ” ಎಂದು ಜಫ್ರಾನ್ ಹೇಳಿದ್ದಾರೆ.
ಸಂಸದ ಶಾಹು ಮಹಾರಾಜ್ ಮತ್ತು ಶಾಸಕ ಸತೇಜ್ ಪಾಟೀಲ್ ಸೇರಿದಂತೆ ‘ಇಂಡಿಯಾ’ ಮೈತ್ರಿಕೂಟದ ನಿಯೋಗವು ಮಂಗಳವಾರ ರಜಾಪುರಕ್ಕೆ ಭೇಟಿ ನೀಡಿದ್ದು, ಸಂತ್ರಸ್ತರ ಅಳಲನ್ನು ಆಲಿಸಿದೆ. ಸಂತ್ರಸ್ತ ಕುಟುಂಬಗಳಿಗೆ ಆಹಾರ ಸಾಮಗ್ರಿಗಳನ್ನು ನೀಡಿದೆ. ನಿಯೋಗದೊಂದಿಗೆ ಮಾತನಾಡಿದ ಹಲವಾರು ಮಹಿಳೆಯರು ಪರಿಹಾರ ಮತ್ತು ನ್ಯಾಯಕ್ಕಾಗಿ ಆಗ್ರಹಿಸಿ, ತಮ್ಮ ಅಳಲು ತೋಡಿಕೊಂಡಿದ್ದಾರೆ.
“ಗೂಂಡಾಗಳು ವೃದ್ಧರು, ಮಕ್ಕಳೆನ್ನದೆ ಎಲ್ಲರ ಮೇಲೂ ದಾಳಿ ನಡೆಸಿದ್ದಾರೆ. ನಮ್ಮ ಮೇಲೆ ಕತ್ತಿ ಮತ್ತು ಚಾಕುಗಳಿಂದ ಹಲ್ಲೆ ನಡೆಸಿದ್ದಾರೆ. ನಮ್ಮ ಆಸ್ತಿ, ವಸ್ತುಗಳನ್ನು ನಾಶ ಮಾಡಿದ್ದಾರೆ. ನಾವು ಮಾಡಿದ್ದ ತಪ್ಪೇನು? ನಮ್ಮ ಮೇಲೆ ಯಾಕೆ ದಾಳಿ ನಡೆಸಿದರು. ನಮಗೆ ನ್ಯಾಯ ಬೇಕು” ಎಂದು ಮಹಿಳೆಯೊಬ್ಬರು ಸಂಸದ ಶಾಹು ಮಹಾರಾಜ್ ಎದುರು ಹೇಳುವುದು ಕಂಡುಬಂದಿತು.
ಮಾಧ್ಯಮಗಳೊಂದಿಗೆ ಮಾತನಾಡಿದ ಶಾಹು ಮಹಾರಾಜ್, “ನಾವು ಸಂಬಂಧಿತ ಅಧಿಕಾರಿಗಳೊಂದಿಗೆ ಕೊಲ್ಲಾಪುರದಲ್ಲಿ ಚರ್ಚೆ ನಡೆಸುತ್ತೇವೆ. ಸಂತ್ರಸ್ತ ಕುಟುಂಬಗಳಿಗೆ ನ್ಯಾಯಯುತವಾಗಿ ಪರಿಹಾರ ಕೊಡಿಸುತ್ತೇವೆ” ಎಂದು ಹೇಳಿದ್ದಾರೆ.
ಪೊಲೀಸರು ಅಥವಾ ಅಧಿಕಾರಿಗಳ ಅನುಮತಿಯಿಲ್ಲದೆ ಕೋಟೆಯ ಬಳಿ ಪ್ರತಿಭಟನೆ ನಡೆಸಲಾಗಿದೆ. ಅದಾಗ್ಯೂ, ಕೋಟೆ ಮತ್ತು ಹತ್ತಿರದ ಪ್ರದೇಶಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಅದೇ ರೀತಿ, ಗಜಾಪುರದಲ್ಲೂ ಭದ್ರತೆಗಾಗಿ ಪೊಲೀಸ್ ಪಡೆಯನ್ನು ನಿಯೋಜಿಸಬೇಕಿತ್ತು ಎಂದು ಅನೇಕ ಸ್ಥಳೀಯರು ಭಾವಿಸುತ್ತಾರೆ.
“ಧ್ವಂಸ, ದಾಳಿ ನಡೆಯಬೇಕಿದ್ದ ವಿಶಾಲಗಡದಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಆದರೆ, ಸಭೆ ನಡೆಯುವ ಸ್ಥಳ ಬೆಟ್ಟದ ತಪ್ಪಲಿನಲ್ಲಿದೆ ಎಂಬುದು ಗೊತ್ತಿದ್ದರೂ, ಸುತ್ತಮುತ್ತಲಿನ ಗ್ರಾಮಗಳಿಗೆ ಪೊಲೀಸರು ಭದ್ರತೆಯನ್ನಾಗಲೀ, ರಕ್ಷಣೆಯನ್ನಾಗಲೀ ಕೊಡಲಿಲ್ಲ. ನಮ್ಮ ಹಳ್ಳಿಯೂ ದಾಳಿಗೆ ಒಳಗಾಗಬಹುದು ಎಂಬುದನ್ನು ಅವರು ನಿರೀಕ್ಷಿಸಿರಲಿಲ್ಲವೇ” ಎಂದು ಜಫ್ರಾನ್ ಪ್ರಶ್ನಿಸಿದ್ದಾರೆ.
ಈ ವಿಚಾರದಲ್ಲಿ ಪೊಲೀಸ್ ಸಿಬ್ಬಂದಿಯ ವೈಫಲ್ಯವನ್ನು ಪ್ರಶ್ನಿಸಬೇಕು ಎಂದು ಶಾಸಕ ಸತೇಜ್ ಪಾಟೀಲ್ ಹೇಳಿದ್ದಾರೆ. ಹಿಂಸಾಚಾರವು ಪೂರ್ವ ಯೋಜಿತವಾಗಿರಬಹುದು ಎಂದು ಅವರು ಆರೋಪಿಸಿದ್ದಾರೆ.
“ನಾವು ಸಂತ್ರಸ್ತ ಕುಟುಂಬಗಳೊಂದಿಗೆ ಮಾತನಾಡಿದ್ದೇವೆ. ಅವರು ಭಾರೀ ನಷ್ಟವನ್ನು ಅನುಭವಿಸಿದ್ದಾರೆ. ಮುಖ್ಯಮಂತ್ರಿ ಮತ್ತು ಇಬ್ಬರೂ ಉಪಮುಖ್ಯಮಂತ್ರಿಗಳು ಈ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು. ಹಿಂಸಾಚಾರದಲ್ಲಿ ಭಾಗಿಯಾಗಿರುವವರ ಹೆಸರುಗಳನ್ನು ಬಹಿರಂಗಗೊಳಿಸಲಾಗಿಲ್ಲ. ಅಧಿಕಾರದಲ್ಲಿರುವವರು ಆರೋಪಿಗಳನ್ನು ರಕ್ಷಿಸಲು ಪ್ರಯತ್ನಿಸುತ್ತಿರುವಂತೆ ಕಾಣುತ್ತಿದೆ” ಎಂದು ಸತೇಜ್ ಪಾಟೀಲ್ ಹೇಳಿದ್ದಾರೆ.
ಇನ್ನು ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ರಾಜ್ಯಸಭಾ ಸದಸ್ಯ ಸಂಭಾಜಿ ರಾಜೆ, “ಘಟನೆಗೆ ಅಧಿಕಾರಿಗಳೇ ಕಾರಣ. ಅಕ್ರಮ ಒತ್ತುವರಿಗೆ ಅವಕಾಶ ನೀಡದಿದ್ದರೆ, ಈ ಪರಿಸ್ಥಿತಿ ಎಂದಿಗೂ ಉದ್ಭವಿಸುತ್ತಿರಲಿಲ್ಲ” ಎಂದು ಹೇಳಿದ್ದಾರೆ.
“ಹಿಂಸಾಚಾರವು ಪೂರ್ವ ಯೋಜಿತವಾಗಿರಲು ಸಾಧ್ಯವಿಲ್ಲ. ನಾನು ಆಡಳಿತಾರೂಢ ಮಹಾಯುತಿ ಅಥವಾ ವಿರೋಧ ಪಕ್ಷದ ಮಹಾ ವಿಕಾಸ್ ಅಘಾಡಿ ಮೈತ್ರಿಗಳೊಂದಿಗೆ ರಾಜಕೀಯವಾಗಿ ಸಂಬಂಧ ಹೊಂದಿಲ್ಲ. ನಾನು ಪ್ರಬುದ್ಧ ರಾಜಕಾರಣಿಯೇನೂ ಅಲ್ಲ. ರಾಜಕೀಯಕ್ಕೆ ಹೊಸಬನಾಗಿದ್ದೇನೆ” ಎಂದು ಹೇಳಿಕೊಂಡಿದ್ದಾರೆ.
ಹಿಂಸಾಚಾರದ ಕುರಿತು ಪೊಲೀಸರು ಈವರೆಗೆ ನಾಲ್ಕು ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. ಇದರಲ್ಲಿ 500 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಹಾಗೂ 21 ಜನರನ್ನು ಬಂಧಿಸಲಾಗಿದೆ. ಅದಾಗ್ಯೂ, ಎಫ್‌ಐಆರ್ ಮತ್ತು ಆರೋಪಿಗಳ ವಿವರಗಳನ್ನು ಇನ್ನೂ ಬಹಿರಂಗಗೊಳಿಸಲಾಗಿಲ್ಲ. ಎಫ್‌ಐಆರ್‌ನಲ್ಲಿ ಕೋಟೆ ಬಳಿ ಪ್ರತಿಭಟನೆಗೆ ಕರೆಕೊಟ್ಟು, ಹಿಂಸಾಚಾರಕ್ಕೆ ಕಾರಣರಾದ ಸಂಭಾಜಿ ರಾಜೆ ಹೆಸರಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಯಾವುದೇ ಆರೋಪಿಗಳನ್ನು ಅವರ ಧರ್ಮವನ್ನು ಲೆಕ್ಕಿಸದೆ ಬಂಧಿಸಲಾಗುವುದು ಎಂದು ಪೊಲೀಸರು ಹೇಳಿರುವುದಾಗಿ ವರದಿಯಾಗಿದೆ.
ಜಮಿಯತ್ ಉಲೇಮಾ-ಎ-ಹಿಂದ್ ನೇತೃತ್ವದ ಹಲವಾರು ಮುಸ್ಲಿಂ ಸಂಘಟನೆಗಳು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೊಲ್ಲಾಪುರದ ಅಧಿಕಾರಿಗಳಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ. ಸಂಭಾಜಿ ರಾಜೇ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ನಡುವೆ, ‘‘ಪೊಲೀಸರು ತಮ್ಮ ಅಸಮರ್ಥತೆಯನ್ನು ಮುಚ್ಚಿಕೊಳ್ಳಲು ಅಮಾಯಕ ಶಿವಾಜಿ ಭಕ್ತರನ್ನು ಗುರಿಯಾಗಿಸಿ, ಎಫ್‌ಐಆರ್ ದಾಖಲಿಸಿದ್ದಾರೆ. ನಿಜವಾದ ದುಷ್ಕರ್ಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು. ನಿವೃತ್ತ ನ್ಯಾಯಾಧೀಶರಿಂದ ಸ್ವತಂತ್ರ ತನಿಖೆ ನಡೆಸಬೇಕು” ಎಂದು ಹಿಂದುತ್ವವಾದಿ ಸಂಘಟನೆಗಳು ಆಗ್ರಹಿಸಿವೆ.
ವರದಿ ಮೂಲ: ದಿ ಕ್ವಿಂಟ್