ದಾವಣಗೆರೆ ನಗರದ ವಿನೋಬ ನಗರದ 4ನೇ ಮುಖ್ಯ ರಸ್ತೆಯಲ್ಲಿ ಕೆ ಎಸ್ ವೈನ್ ಲ್ಯಾಂಡ್ ಸ್ಥಳಾಂತರಕ್ಕೆ ಒತ್ತಾಯಿಸಿ ಜುಲೈ 19ರಂದು ಪ್ರತಿಭಟನೆ ನಡೆಸಲಾಗುವುದೆಂದು ಮಹಿಳೆಯರು ಎಚ್ಚರಿಕೆ ನೀಡಿದರು.
ದಾವಣಗೆರೆಯಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ವಿನೋಬ ನಗರದ ನಿವಾಸಿ ಅನುಪಮಾ ರವಿಕುಮಾರ್ ಅವರು, “ಮದ್ಯದಂಗಡಿ ಸ್ಥಳಾಂತರಿಸುವಂತೆ ಒತ್ತಾಯಿಸಿ ಈ ಹಿಂದೆಯೇ ಮನವಿ ಸಲ್ಲಿಸಿದ್ದು, ಸಂಬಂಧಪಟ್ಟ ಇಲಾಖೆಗಳ, ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಹಲವು ಬಾರಿ ಅಬಕಾರಿ ಇಲಾಖೆಯ ಗಮನಕ್ಕೆ ತಂದರೂ ಕೂಡಾ ಇದಕ್ಕೆ ಕಿವಿಗೊಡದೆ ನಿರ್ಲಕ್ಷ್ಯ ವಹಿಸಿದ್ದಾರೆ. ಹಾಗಾಗಿ ಕೂಡಲೇ ಬಾರ್ ಸ್ಥಳಾಂತರ ಮಾಡಬೇಕೆಂದು ಒತ್ತಾಯಿಸಿ ಜುಲೈ 19ರಂದು ಬೆಳಿಗ್ಗೆ 11-30ಕ್ಕೆ ಬಾರ್ ಮುಂಭಾಗ ಪ್ರತಿಭಟನೆ ನಡೆಸಲಾಗುವುದು” ಎಂದು ಹೇಳಿದರು.
“ವಿನೋಬ ನಗರದ 4ನೇ ಮುಖ್ಯ ರಸ್ತೆ ಹೆಬ್ಬಾಗಿನಲ್ಲಿ ಈ ಮದ್ಯದಂಗಡಿ ಇದ್ದು, ಈ ರಸ್ತೆಯು ವಿನೋಬ ನಗರ, ಯಲ್ಲಮ್ಮ ನಗರ, ಶಾಂತಿ ನಗರಕ್ಕೆ ಹೋಗುವ ನಿವಾಸಿಗಳಿಗೆ ಈ ವೈನ್ ಅಂಗಡಿಯಿಂದ ಬಹಳಷ್ಟು ತೊಂದರೆಗಳಾಗುತ್ತಿವೆ. ಈ ಅಂಗಡಿಯು ಹೆಬ್ಬಾಗಿಲಿನಲ್ಲಿರುವ ಕಾರಣ ಮದ್ಯಪಾನ ಸೇವಿಸುವವರು ಕುಡಿದ ಅಮಲಿನಲ್ಲಿ ರಸ್ತೆಯ ಮೇಲೆ, ರಸ್ತೆಯ ಬದಿಯಲ್ಲಿ ಅಡ್ಡಾದಿಡ್ಡಿಯಾಗಿ ವಾಹನಗಳನ್ನು ನಿಲ್ಲಿಸುವುದು ಹಾಗೂ ಮದ್ಯಪಾನದ ನಶೆಯಲ್ಲಿ ಪರಸ್ಪರ ಜಗಳ ಮಾಡಿ ಸಾರ್ವಜನಿಕರಿಗೆ ಬಹಳಷ್ಟು ತೊಂದರೆ ಉಂಟುಮಾಡುತ್ತಿರುವ ಘಟನೆಗಳು ಸಾಮಾನ್ಯವಾಗಿವೆ” ಎಂದರು.
“ಕುಡಿತದ ನಶೆಯಲ್ಲಿ ಅಕ್ಕಪಕ್ಕ ಇರುವಂತಹ ವಾಸ ಸ್ಥಳಗಳ, ಮನೆಗಳ ಮುಂದೆ ಮೂತ್ರ ವಿಸರ್ಜನೆ ಮಾಡುವುದು, ವಾಂತಿ ಮಾಡುವುದರಿಂದ ಮನೆಯಲ್ಲಿರುವ, ಮಹಿಳೆಯರು, ವಿದ್ಯಾರ್ಥಿಗಳಿಗೆ ಇದರಿಂದ ಬಹಳ ತೊಂದರೆಯಾಗುತ್ತದೆ. ಅಕ್ಕಪಕ್ಕದ ಮನೆಯಲ್ಲಿರುವ ಹೆಣ್ಣು ಮಕ್ಕಳಿಗೆ ಮನೆಯಿಂದ ಹೊರಗೆ ಬರಲು ಇರಿಸು ಮುರುಸಾಗಿರುತ್ತದೆ. ಇದಲ್ಲದೇ ನಶೆಯಲ್ಲಿ ತಮ್ಮ ವಾಹನಗಳನ್ನು ಅಕ್ಕಪಕ್ಕದ ಮನೆಗಳ ಮುಂದೆ ನಿಲ್ಲಿಸಿ ತೊಂದರೆ ಕೊಡುವುದು ಸಾಮಾನ್ಯವಾಗಿದೆ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಭಾವೈಕ್ಯತೆಯ ಮೊಹರಂ; ಸಾರ್ವಜನಿಕರಿಗೆ ತಿನಿಸು, ಪಾನೀಯ ವಿತರಣೆ
“ಈ ಹಿಂದೆ ಬಡಾವಣೆ ಪೊಲೀಸ್ ಠಾಣೆಯಲ್ಲಿ ಖುದ್ದು ಈ ಮದ್ಯದ ಅಂಗಡಿ ಮಾಲೀಕರು ಅಂಗಡಿಯನ್ನು ಸ್ಥಳಾಂತರಿಸುವುದಾಗಿ ಲಿಖಿತ ರೂಪದಲ್ಲಿ ಪತ್ರ ನೀಡಿದ್ದರು. ಆದರೂ ಸಹ ಅಬಕಾರಿ ಇಲಾಖೆಯವರು ಈ ಮದ್ಯದ ಅಂಗಡಿ ಸ್ಥಳಾಂತರಿಸದೆ ಪರವಾನಿಗೆ ನವೀಕರಿಸಿದ್ದಾ”ರೆ ಎಂದು ದೂರಿದರು.
ವಿಜಯಲಕ್ಷ್ಮೀ ನಿರಂಜನ್, ಭಾಗೀರಥಿ ಪಾಂಡುರಂಗ, ಸರೋಜಾ ವಿಜಯಕುಮಾರ್, ಷಂಷದ್ ಸೈಯದ್ ಸೈಫುಲ್ಲಾ, ನಿವೇದಿತಾ ಸಚ್ಚಿನ್, ವಿಜಯಮ್ಮ ಶೀಲವಂತ್ ಇದ್ದರು.