‘ನಟ ದರ್ಶನ್ ಗೆ ಮನೆ ಊಟ ಪಡೆಯಲು ಅನುಮತಿ ನೀಡಿದರೆ ಮತ್ತು ಅದನ್ನು ಉಂಡು ನಾಳೆ ಅವರಿಗೆ ಏನಾದರೂ ಹೆಚ್ಚುಕಡಿಮೆ ಆದರೆ ಅದಕ್ಕೆ ಜೈಲು ಅಧಿಕಾರಿಗಳೇ ಹೊಣೆಯಾಗಬೇಕಾಗುತ್ತದೆ. ಹಾಗಾಗಿ, ದರ್ಶನ್ ಕೋರಿರುವ ಮನೆ ಊಟ ಮತ್ತು ಇತರೆ ಸವಲತ್ತುಗಳ ಬೇಡಿಕೆಯನ್ನು ಯಾವ ಕಾರಣಕ್ಕೂ ಮನ್ನಿಸಬಾರದು’ ಎಂದು ಪ್ರಾಸಿಕ್ಯೂಷನ್ ಹೈಕೋರ್ಟ್‌ಗೆ ಮನವಿ ಮಾಡಿದೆ.
‘ನನಗೆ ಮನೆಯಿಂದ ಊಟ, ಬಟ್ಟೆ, ಚಾಕು, ಕತ್ತರಿ, ಫೋರ್ಕ್ ಮತ್ತು ಪುಸ್ತಕಗಳನ್ನು ತರಿಸಿಕೊಳ್ಳಲು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಜೈಲು ಅಧೀಕ್ಷಕರಿಗೆ ನಿರ್ದೇಶಿಸಬೇಕು’ ಎಂದು ಕೋರಿ ದರ್ಶನ್ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಸ್.ಆರ್.ಕೃಷ್ಣಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಪ್ರಕರಣದ ವಿಶೇಷ ಪ್ರಾಸಿಕ್ಯೂಟರ್ ಪಿ.ಪ್ರಸನ್ನ ಕುಮಾರ್ ಮತ್ತು ಹೆಚ್ಚುವರಿ ಅಡ್ವೊಕೇಟ್ ಜನರಲ್ ವಿ.ಜಿ.ಭಾನುಪ್ರಕಾಶ್ ಅವರು ದರ್ಶನ್ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಪೀಠಕ್ಕೆ ಲಿಖಿತ ಆಕ್ಷೇಪಣೆ ಸಲ್ಲಿಸಿದರು.
‘ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣ ಇಡೀ ಕರ್ನಾಟಕವನ್ನೇ ಬೆಚ್ಚಿಬೀಳಿಸಿದೆ. ಈ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್ ಆರೋಗ್ಯ ಚೆನ್ನಾಗಿಯೇ ಇದೆ. ಒಂದು ವೇಳೆ ಏನಾದರೂ ವ್ಯತ್ಯಯ ಉಂಟಾದರೆ ಜೈಲಿನಲ್ಲೇ ಉತ್ತಮ ಚಿಕಿತ್ಸಾ ಸೌಲಭ್ಯವಿದೆ. ಅಂತೆಯೇ, ಪ್ರತಿಯೊಬ್ಬ ಕೈದಿಯ ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕಾಂಶಯುಕ್ತ ಆಹಾರವನ್ನೇ ನೀಡಲಾಗುತ್ತಿದೆ’ ಎಂದು ವಿವರಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸರಕಾರಕ್ಕೆ ಇಕ್ಕಟ್ಟು ತಂದ ಖಾಸಗಿ ಮೀಸಲು ಸಮಸ್ಯೆ
‘ಕರ್ನಾಟಕ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಕೈಪಿಡಿ–2021ರ ನಿಯಮ 720 ಹಾಗೂ 728ರ ಅನುಸಾರ ಕೊಲೆ ಪ್ರಕರಣದ ವಿಚಾರಣಾಧೀನ ಕೈದಿಗಳನ್ನು ಜೈಲಿನಲ್ಲಿ ವಿಶೇಷ ನಿಗಾದಲ್ಲಿಯೇ ಇರಿಸಬೇಕಾಗುತ್ತದೆ. ಅವರು ಪರಾರಿಯಾಗುವ ಅಥವಾ ಆತ್ಮಹತ್ಯೆಗೆ ಪ್ರಯತ್ನಿಸುವಂತಹ ಸಾಧ್ಯತೆಗಳಿರುತ್ತವೆ. ಇಂತಹವರಿಗೆ ಖಾಸಗಿಯಾಗಿ ಮನೆಯಿಂದ ಊಟ, ಬಟ್ಟೆ, ಹಾಸಿಗೆ, ಕುಡಿಯುವ ನೀರಿನ ಲೋಟ, ತಟ್ಟೆ, ಚಪ್ಪಲಿ, ಚಮಚ, ಫೋರ್ಕ್ ಹಾಗೂ ಇತರೆ ಅಗತ್ಯ ವಸ್ತುಗಳನ್ನು ತರಿಸಿಕೊಳ್ಳಲು ಅವಕಾಶವಿಲ್ಲ’ ಎಂದು ಸ್ಪಷ್ಟಪಡಿಸಿದೆ.
ಆಕ್ಷೇಪಣೆ ಸ್ವೀಕರಿಸಿದ ನ್ಯಾಯಪೀಠ ಶುಕ್ರವಾರ (ಜುಲೈ 19) ಅರ್ಜಿ ವಿಚಾರಣೆ ನಡೆಸುವುದಾಗಿ ತಿಳಿಸಿತು. ದರ್ಶನ್ ಪರ ಹಿರಿಯ ವಕೀಲ ಕೆ.ಎನ್.ಫಣೀಂದ್ರ ಹಾಜರಿದ್ದರು.
ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್ ಸೇರಿ 17 ಮಂದಿಯ ನ್ಯಾಯಾಂಗ ಬಂಧನದ ಅವಧಿಯನ್ನು ವಿಸ್ತರಿಸಿ 24ನೇ ಎಸಿಎಂಎಂ ನ್ಯಾಯಾಲಯ ಗುರುವಾರ ಆದೇಶಿಸಿದೆ.
