ಅವಿಭಜಿತ ಕೋಲಾರದಲ್ಲಿ 4 ಸಾವಿರಕ್ಕೂ ಹೆಚ್ಚು ಕೆರೆಗಳು ಇದ್ದವು. ಇಂದು ಅಕಾಲಿಕ ಮಳೆ, ಒತ್ತುವರಿಗಳಿಂದ ಕೆರೆಗಳು ಕಡಿಮೆಯಾಗುತ್ತಿವೆ. ತುಂಬಿ ಕೋಡಿ ಹರಿದು ಸಂಭ್ರಮ ನೀಡುತ್ತಿದ್ದ ನೂರಾರು ಕೆರೆಗಳಿಗೆ ಜೀವ ತುಂಬುತ್ತಿದ್ದ ಪಾಲಾರ್ ನದಿ ಬತ್ತಿ ಹೋಗಿದೆ ಎಂದು ಸಂವಾದ ಯುವಜನ ಸಂಸ್ಥೆಯ ಮಂಜುನಾಥ್ ಜಿ.ಕೆ. ಹೇಳಿದರು.
ಕೋಲಾರದ ರಾಮಸಾಗರದಲ್ಲಿ ಯುವ ಮುನ್ನಡೆ ಮತ್ತು ಸಂವಾದ ತಂಡ ಆಯೋಜಿಸಿದ್ದ ‘ಪರಿಸರ ನ್ಯಾಯಕ್ಕಾಗಿ ಯುವ ಧ್ವನಿ – ಜೀವನದಿ ಪಾಲಾರ್ ಗಾಗಿ ನಮ್ಮ ಹೆಜ್ಜೆ’ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. “ಪಾಲಾರ್ ನದಿ ಕೋಲಾರದಲ್ಲಿದೆ ಎಂಬ ವಿಷಯವೇ ಹಲವರಿಗೆ ತಿಳಿದಿಲ್ಲ. ಆದ್ದರಿಂದಲೇ ನೀರು ಪೂರೈಕೆಯ ಹೆಸರಿನಲ್ಲಿ ಬೆಂಗಳೂರಿನ ಕೈಗಾರಿಕಾ ತ್ಯಾಜ್ಯ, ಕೊಳಚೆ ನೀರು, ಘನ ತ್ಯಾಜ್ಯ ಕೋಲಾರ ಜಿಲ್ಲೆಗೆ ಹರಿಯುತ್ತಿದ್ದು, ಅನಾಹುತಗಳನ್ನು ಸೃಷ್ಠಿಸುತ್ತಿವೆ. ಬೆಂಗಳೂರಿನಿಂದ ಬರುವ ಕೆಸಿ ವ್ಯಾಲಿ ನೀರು ಜಿಲ್ಲೆಯ ಜಲ ಮೂಲಗಳನ್ನೇ ಹಾಳುಗೆಡವಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬೇತಮಂಗಲದಲ್ಲಿ ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ಅರಿವು ಶಿವಪ್ಪ, “ದಶಕಗಳ ಹಿಂದೆ ತುಂಬಿ ಹರಿಯುತ್ತಿದ್ದ ಕೋಲಾರದ ಕೆರೆಗಳ ಸಮೀಪ ಸ್ನಾನಘಟ್ಟಗಳು ಇದ್ದವು. ಹಲವರ ಬದುಕಿಗೆ ಜೀವಾಳವಾಗಿದ್ದವು. ಹಿಂದೆ ವಿಶಾಲವಾಗಿ ಹರಿದು ನದಿಯಂತೆ ಕಾಣುತ್ತಿದ್ದ ಪಾಲಾರ್ , ಇಂದು ಕಾಲುವೆಯಂತಾಗಿದೆ. ಇದರ ಬಗ್ಗೆ ಎಚ್ಚರಿಕೆ ವಹಿಸದಿದ್ದರೆ ಕೆಲವೇ ವರ್ಷಗಳಲ್ಲಿ ಸಂಪೂರ್ಣ ನಶಿಸಿಹೋಗಲಿದೆ” ಎಂದು ಆತಂಕ ವ್ಯಕ್ತಪಡಿಸಿದರು.
ಸುಗಟೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಭೂಪತಿಗೌಡ ಅವರು ಮಾತನಾಡಿ, “ಪಾಲಾರ್ ಹಿಂದೆ ತುಂಬಿ ಹರಿಯುತ್ತಿತ್ತು. ಆದರೆ ಈಗ ಪಾಲಾರ್ ಅಂದರೆ ಕೊಳಚೆ ನೀರಿನ ಕಾಲುವೆ ಎಂಬ ಪರಿಸ್ಥಿತಿ ಎದುರಾಗಿದೆ. ಈ ಸ್ಥಿತಿ ಬದಲಾಯಿಸಲು ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರಿಗೂ ಅರಿವು ನೀಡುತ್ತಿದ್ದೇವೆ” ಎಂದು ಹೇಳಿದರು.
ಜಾಥಾದಲ್ಲಿ ರಾಮಸಾಗರದ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ನಟರಾಜ್, ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯ ಮುಖ್ಯ ಶಿಕ್ಷಕಿ ನುಸ್ರತ್ ಜಹಾ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಶ್ರೀನಿವಾಸ್, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಚಂದ್ರಪ್ಪ ವಿ., ಮಾಜಿ ಅಧ್ಯಕ್ಷ ಹೇಮರೆಡ್ಡಿ, ಈನೆಲ ಈಜಲ ಸಾಂಸ್ಕೃತಿಕ ಸಂಸ್ಥೆಯ ವೆಂಕಟಾ ಚಲಪತಿ ಭಾಗವಹಿಸಿದ್ದರು.
ಹಲವಾರು ವಿದ್ಯಾರ್ಥಿಗಳು, ಯುವಜನರು ತಂಬಳ್ಳಿ, ಮಣಿಘಟ್ಟ, ಎಸ್ ಅಗ್ರಹಾರದಲ್ಲಿ ಹಾಡು, ನಾಟಕದ ಮೂಲಕ ಅರಿವು ಮೂಡಿಸಿದರು.