ರಾಜ್ಯದ ಖಾಸಗಿ ಕೈಗಾರಿಕೆಗಳು ಹಾಗೂ ಇತರೆ ಸಂಸ್ಥೆಗಳಲ್ಲಿ ಆಡಳಿತಾತ್ಮಕ ಹುದ್ದೆಗಳಲ್ಲಿ ಶೇ.50ರಷ್ಟು ಮತ್ತು ಆಡಳಿತೇತರ ಹುದ್ದೆಗಳಲ್ಲಿ ಶೇ.75ರಷ್ಟು ಕನ್ನಡಿಗರಿಗೆ ಮೀಸಲಾತಿ ನೀಡುವ ಮಸೂದೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ಸಿಎಂ ಸಿದ್ಧರಾಮಯ್ಯ ಹೇಳಿದ್ದರು. ಆದರೆ, ಕೆಲವೇ ಗಂಟೆಗಳಲ್ಲಿ ಮಸೂದೆಯನ್ನು ತಡೆಹಿಡಿಯಲಾಗಿದೆ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು. ಸದ್ಯ ಈ ವಿಚಾರಕ್ಕೆ ಸಂಬಂಧಿಸಿದಂತೆ ಪರ-ವಿರೋಧದ ಚರ್ಚೆಗಳು ನಡೆಯುತ್ತಿವೆ. ಅದು ಕೂಡ ಜಾಗತಿಕ ಮಟ್ಟದಲ್ಲಿ ಉನ್ನತ ಸ್ಥಾನದಲ್ಲಿರುವವರು, ಕಂಪನಿಯ ಮಾಲೀಕರು ಖಾಸಗಿ ಉದ್ಯೋಗದಲ್ಲಿ ಮೀಸಲಾತಿ ನೀಡುವ ಸರ್ಕಾರದ ನಡೆಯನ್ನ ಖಂಡಿಸಿದ್ದಾರೆ. ಆದರೆ, ಕನ್ನಡಪರ ಸಂಘಟನೆಗಳು ಸರ್ಕಾರದ ನಿರ್ಧಾರಕ್ಕೆ ಸಂತಸ ವ್ಯಕ್ತಪಡಿಸಿದ್ದರು. ಆದರೆ, ಅವರ ಸಂತಸಕ್ಕೆ ಸರ್ಕಾರವೇ ತಣ್ಣೀರು ಎರಚಿದೆ.
ಕರ್ನಾಟಕದಲ್ಲಿ ಪ್ರತಿಯೊಬ್ಬ ಕನ್ನಡಿಗನಿಗೆ ಉದ್ಯೋಗ ಸಿಗಬೇಕು ಎಂಬ ಒತ್ತಾಯಗಳು ಹಲವಾರು ವರ್ಷಗಳಿಂದಲೂ ಕೇಳಿಬರುತ್ತಿವೆ. ಕಾಂಗ್ರೆಸ್ ಕೂಡ ರಾಜ್ಯದಲ್ಲಿರುವ ಖಾಸಗಿ ಕಂಪನಿಗಳಲ್ಲಿನ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡಬೇಕು ಎಂಬುದನ್ನು ಹೇಳುತ್ತಲೇ ಇತ್ತು. ಆದರೆ, ಇದೀಗ ಮಸೂದೆಯನ್ನು ಮಂಡಿಸಿ, ಹಿಂಪಡೆದುಕೊಂಡಿದೆ. ಇಬ್ಬಂದಿ ನೀತಿಯನ್ನು ಪ್ರದರ್ಶಿಸಿದೆ. ಖಾಸಗಿ ಕಂಪನಿಗಳ ಒತ್ತಡಕ್ಕೆ ಮಣಿದ ಸರ್ಕಾರ ಮಸೂದೆಯನ್ನು ಹಿಂತೆಗೆದುಕೊಂಡಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಸರ್ಕಾರದ ನಡೆಯ ಬಗ್ಗೆ ಕೋಟ್ಯಂತರ ಕನ್ನಡಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಐಟಿ-ಬಿಟಿ ನಗರವೆಂದೇ ಪ್ರಸಿದ್ಧಿ ಪಡೆದಿರುವ ಬೆಂಗಳೂರಿನಲ್ಲಿ ಹಲವಾರು ದೈತ್ಯ ಕಂಪನಿಗಳಿವೆ. ಸರ್ಜಾಪುರ ರಸ್ತೆ, ಮಾನ್ಯತಾ ಟೆಕ್ ಪಾರ್ಕ್, ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ಹಲವು ಕಡೆಗಳಲ್ಲಿ ಖಾಸಗಿ ಕಂಪನಿಗಳೇ ತುಂಬಿವೆ. ಈ ಕಂಪನಿಗಳು ಇರುವುದು ಕರ್ನಾಟಕದ ನೆಲದಲ್ಲಿ, ಬಳಸುತ್ತಿರೋದು ಕನ್ನಡ ನಾಡಿನ ನೀರು, ರಸ್ತೆ, ವಿದ್ಯುತ್. ಆದರೆ, ಈ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಬಹುತೇಕರು ಕನ್ನಡಿಗರಲ್ಲ. ಬೇರೆ ಬೇರೆ ರಾಜ್ಯಗಳಿಂದ, ದೇಶಗಳಿಂದ ಹಲವು ಜನ ವಲಸೆ ಬಂದು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಬೆಂಗಳೂರಿನಲ್ಲಿ ಹುಡುಕಿದರೆ ಮೂಲ ಬೆಂಗಳೂರಿಗರು ಸಿಗುವುದು ಕಷ್ಟ. ಇನ್ನು ನಗರದಲ್ಲಿರುವ ದೊಡ್ಡ ದೊಡ್ಡ ಕಂಪನಿಗಳಿಂದ ಹಿಡಿದು ಚಿಕ್ಕ ಚಿಕ್ಕ ಕಂಪನಿಗಳವರೆಗೆ ಜಾಲಾಡಿದರೂ 1%ರಷ್ಟು ಕನ್ನಡಿಗರು ಸಿಗಬಹುದು. ಆದರೆ, ಬಹುತೇಕ ಅನ್ಯ ಭಾಷೆಯ ಜನರೇ ದೊಡ್ಡ ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ.
ರಾಜ್ಯದ 2.9ಕೋಟಿ ಉದ್ಯೋಗಿಗಳಲ್ಲಿ ಶೇ.24.7ರಷ್ಟು (73.8 ಲಕ್ಷ) ಜನರು ಸಂಘಟಿತ ವಲಯದಲ್ಲಿದ್ದಾರೆ. ಈ ಪ್ರಮಾಣ ದೇಶದ ಸರಾಸರಿಗಿಂತ ಶೇ.20ರಷ್ಟು ಹೆಚ್ಚಿದೆ. ರಾಜ್ಯದಲ್ಲಿ ಪ್ರತಿವರ್ಷ 13.5 ಲಕ್ಷ ಜನರು ಇಪಿಎಫ್ಒ, ಇಎಸ್ಐಸಿ ಅಡಿ ನೋಂದಾಯಿಸಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ನಿರುದ್ಯೋಗ ಪ್ರಮಾಣ ಶೇ.2.7ರಷ್ಟಿದ್ದು, ದೇಶದ ಸರಾಸರಿಗಿಂತ ಶೇ.4.2ರಷ್ಟು ಕಡಿಮೆಯಿದೆ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟ (ಎಫ್ಐಸಿಸಿಐ) ಹಾಗೂ ಕ್ವೆಸ್ ಸಂಸ್ಥೆ ಜಂಟಿಯಾಗಿ ಹೊರತಂದ ವರದಿಯಲ್ಲಿ ಹೇಳಲಾಗಿದೆ.
ಉದ್ಯೋಗ ಸ್ಥಿತಿ ಸೂಚ್ಯಂಕದಲ್ಲಿ ಕರ್ನಾಟಕವು 2005ರಲ್ಲಿ 11ನೇ, 2012ರಲ್ಲಿ 8ನೇ, 2019ರಲ್ಲಿ 8ನೇ ಮತ್ತು 2022ರಲ್ಲಿ 14ನೇ ಸ್ಥಾನ ಹೊಂದಿತ್ತು. ವರ್ಷದಿಂದ ವರ್ಷಕ್ಕೆ ಉದ್ಯೋಗ ಪರಿಸ್ಥಿತಿಗಳ ಸೂಚ್ಯಂಕದಲ್ಲಿ ಕುಸಿತ ಕಂಡುಬಂದಿದೆ. ಆದರೂ ಕೂಡ ರಾಜ್ಯ ಸರ್ಕಾರ ಕನ್ನಡಿಗರಿಗೆ ಪ್ರಾತಿನಿಧ್ಯ ಕೊಡದೆ, ವಲಸೆ ಬಂದ ಕಾರ್ಮಿಕರಿಗೆ ಪ್ರಾಮುಖ್ಯತೆ ಕೊಟ್ಟರೆ ಕನ್ನಡಿಗರ ಭವಿಷ್ಯ ಏನು ಎಂಬ ಪ್ರಶ್ನೆ ಮೂಡುತ್ತದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕೂಡ ಕನ್ನಡಿಗರ ಹಿತ ಕಾಯುವ ದೃಷ್ಟಿಯಿಂದ ಈ ಮಸೂದೆಯನ್ನು ಜಾರಿಗೆ ತರಲು ಮುಂದಾಗಿತ್ತು.
ಆದರೆ, ಉದ್ಯಮಿಗಳು ಮತ್ತು ಉದ್ಯಮ ಒಕ್ಕೂಟಗಳಿಂದ ಭಾರೀ ವಿರೋಧ ವ್ಯಕ್ತವಾಯಿತು. ರಾಜ್ಯದ ಖಾಸಗಿ ಕಂಪನಿಗಳಿಗೆ ಆಂಧ್ರ ಸೇರಿದಂತೆ ನೆರೆ ರಾಜ್ಯಗಳು ಗಾಳ ಹಾಕಲು ಹವಣಿಸಿದವು. ಅಲ್ಲದೇ, ಇನ್ಫೋಸಿಸ್ ಸಹಸಂಸ್ಥಾಪಕರಾದ ಮೋಹನ್ ದಾಸ್ ಪೈ, ಬಯೋಕಾನ್ ಮುಖ್ಯಸ್ಥರಾದ ಕಿರಣ್ ಮಜುಂದಾರ್ ಶಾ ಸೇರಿದಂತೆ ಉದ್ಯಮ ವಲಯದ ಅನೇಕ ದಿಗ್ಗಜರು ರಾಜ್ಯ ಸರ್ಕಾರದ ನಿರ್ಧಾರವನ್ನು ಟೀಕಿಸಿದರು. ಯುಪಿಐ ಪೇಮೆಂಟ್ ಮೊಬೈಲ್ ಅಪ್ಲಿಕೇಷನ್ ಆದ ಫೋನ್ ಪೇ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಸಮೀರ್ ನಿಗಮ್, ‘ಕರ್ನಾಟಕದಲ್ಲಿರುವ ಕಂಪನಿಗಳು ಕನ್ನಡಿಗರಿಗೆ ಕೆಲಸ ನೀಡಲೇಬೇಕು ಎಂದು ಮೀಸಲಾತಿ ಹೇರುತ್ತಿರುವುದು ನಾಚಿಕೆಗೇಡಿತನ’ ಎಂದಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ರಾಜ್ಯ ಸರ್ಕಾರ ಮಸೂದೆಗೆ ತಾತ್ಕಾಲಿಕ ತಡೆ ಹಿಡಿಯಿತು.
ವಿಧೇಯಕದಲ್ಲಿ ಏನಿದೆ?
ಈಗಾಗಲೇ ತಿಳಿಸಿರುವಂತೆ, ರಾಜ್ಯದ ಖಾಸಗಿ ಕೈಗಾರಿಕೆಗಳು ಮತ್ತು ಇತರೆ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಆಡಳಿತಾತ್ಮಕ ಹುದ್ದೆಗಳಿಗೆ ಶೇ.50 ಹಾಗೂ ಆಡಳಿತಾತ್ಮಕವಲ್ಲದ ಹುದ್ದೆಗಳಿಗೆ ಶೇ.75 ಮೀಸಲಾತಿ ಕಲ್ಪಿಸಲಾಗಿತ್ತು. ಕೈಗಾರಿಕಾ ಮಂಡಳಿ ನಿರ್ದೇಶಕ ಹುದ್ದೆಗಳನ್ನು ಮೀಸಲಾತಿ ವ್ಯಾಪ್ತಿಗೆ ತಂದಿರಲಿಲ್ಲ. ಸರ್ಕಾರದ ಆದೇಶದಲ್ಲಿ ಸ್ಥಳೀಯರು ಎಂದರೆ ರಾಜ್ಯದಲ್ಲಿ ಹುಟ್ಟಿ, 15 ವರ್ಷಗಳ ಕಾಲ ಇಲ್ಲಿಯೇ ನೆಲೆಸಿ ಕನ್ನಡ ಭಾಷೆಯನ್ನು ಓದಲು ಬರೆಯಲು ಬರಬೇಕು ಎಂದು ಹೇಳಲಾಗಿತ್ತು.
ಇನ್ನು ಆಡಳಿತಾತ್ಮಕ ಹುದ್ದೆಗಳು ಯಾವುವು ಎಂದೂ ಸ್ಪಷ್ಟನೆ ನೀಡಲಾಗಿತ್ತು. ಸೂಪರ್ ವೈಸರ್, ಮ್ಯಾನೇಜರ್, ತಾಂತ್ರಿಕ, ಆಪರೇಷನ್, ಕೈಗಾರಿಕೆ ಮತ್ತು ಉದ್ಯಮಗಳ ಇತರ ಉನ್ನತ ಹುದ್ದೆಗಳನ್ನು ಒಳಗೊಂಡಿರುತ್ತದೆ. ಆಡಳಿತಾತ್ಮಕವಲ್ಲದ ಹುದ್ದೆಗಳು ಎಂದರೆ ಗುಮಾಸ್ತ, ಪರಿಣಿತ ಇಲ್ಲದ, ಅರೆ ಪರಿಣಿತಿ ಹೊಂದಿದ ಹುದ್ದೆಗಳು ಸೇರುತ್ತವೆ. ಒಂದು ವೇಳೆ ಅರ್ಹ ಅಭ್ಯರ್ಥಿಗಳು ಲಭ್ಯವಿಲ್ಲದೇ ಹೋದಲ್ಲಿ ಕೈಗಾರಿಕೆಗಳು ಬೇರೊಬ್ಬರನ್ನು ನೇಮಕ ಮಾಡಿಕೊಳ್ಳುವಂತಿಲ್ಲ. ಬದಲಾಗಿ ಸ್ಥಳೀಯ ಅಭ್ಯರ್ಥಿಗಳಿಗೆ ತರಬೇತಿ ನೀಡಿ ನೇಮಕ ಮಾಡಿಕೊಳ್ಳಬೇಕೆಂದು ಮಸೂದೆ ಹೇಳುತ್ತಿತ್ತು. ಹಾಗೆಂದು ಕೈಗಾರಿಕೆಗಳಿಗೆ ರಿಯಾಯಿತಿಯೇ ಇಲ್ಲ ಎಂದು ಹೇಳುವಂತಿರಲಿಲ್ಲ. ಆಡಳಿತಾತ್ಮಕವಲ್ಲದ ಹುದ್ದೆಗಳಲ್ಲಿ ಅಗತ್ಯವಿರುವಷ್ಟು ಅಭ್ಯರ್ಥಿಗಳು ಲಭ್ಯವಿಲ್ಲದೇ ಹೋದಲ್ಲಿ ಮೀಸಲಾತಿಯನ್ನು ಶೇ.50ಕ್ಕೆ ಮತ್ತು ಆಡಳಿತಾತ್ಮಕ ಹುದ್ದೆಗಳಲ್ಲಿ ಶೇ.25ಕ್ಕೆ ಮೀಸಲಾತಿಯನ್ನು ಇಳಿಸಬಹುದಾಗಿತ್ತು.
ರಾಜಧಾನಿ ಬೆಂಗಳೂರಿಗೆ ಬರುವ ವಲಸಿಗರ ಸಂಖ್ಯೆ ವಿಪರೀತವಾಗಿದೆ. ಒಂದು ಹಂತದಲ್ಲಿ ಬೆಂಗಳೂರಿನಲ್ಲಿ ಕನ್ನಡಿಗರೇ ಅಲ್ಪಸಂಖ್ಯಾತರಾಗುವ ಭಯ ಕಾಡುತ್ತಿದೆ ಎಂದು ಕನ್ನಡಪರ ಹೋರಾಟಗಾರರು ಆತಂಕ ವ್ಯಕ್ತಪಡಿಸುತ್ತಾ ಬಂದಿದ್ದಾರೆ. ಇವರ ಕೂಗಿಗೆ ಓಗೊಟ್ಟ ಸರ್ಕಾರ, ವಿಧೇಯಕವನ್ನು ಅಂಗೀಕರಿಸುವ ಧೈರ್ಯ ಪ್ರದರ್ಶಿಸುವ ಅಗತ್ಯವಿತ್ತು, ಆಯಿತು.
ಅಕಸ್ಮಾತ್ ವಿಧೇಯಕವನ್ನು ಸರ್ಕಾರ ಜಾರಿಗೆ ತರಲು ಮುಂದಾದರೆ, ಇದರ ವಿರುದ್ಧ ಖಾಸಗಿ ಕಂಪೆನಿಗಳು ನ್ಯಾಯಾಲಯದ ಮೆಟ್ಟಿಲೇರಬಹುದು. ಸರ್ಕಾರದ ನಿರ್ಧಾರ ಅಲ್ಲಿ ಮಾನ್ಯವಾಗುತ್ತದೆ ಎನ್ನುವಂತಿಲ್ಲ. ಏಕೆಂದರೆ, 2020ರಲ್ಲಿ ಹರಿಯಾಣದಲ್ಲಿ ಇದೇ ರೀತಿಯ The Haryana State Employment of Local Candidates Act, 2020 ಕಾನೂನು ಜಾರಿಯಾಗಿತ್ತು. ಇದನ್ನು ವಿರೋಧಿಸಿ ಹರಿಯಾಣದ ಕಾರ್ಖಾನೆ ಮಾಲೀಕರು ಹೈಕೋರ್ಟಿನ ಮೆಟ್ಟಿಲೇರಿದ್ದರು. 2023ರ ನವೆಂಬರ್ 17ರಂದು ಹರಿಯಾಣ ಹೈಕೋರ್ಟ್ ಈ ಕಾನೂನು ಸಂವಿಧಾನ ವಿರೋಧಿಯೆಂದು ರದ್ದು ಮಾಡಿತ್ತು. ಇಂಥದ್ದೇ ಸಮಸ್ಯೆ 2012-13ರಲ್ಲಿ ಪಕ್ಕದ ತಮಿಳುನಾಡು ಸರ್ಕಾರಕ್ಕೂ ಎದುರಾಗಿತ್ತು. ಕಡಿಮೆ ಸಂಬಳಕ್ಕೆ ಸುಲಭಕ್ಕೆ ಸಿಗುವ ವಲಸಿಗರ ಸಂಖ್ಯೆ ಹೆಚ್ಚಾದಾಗ, ಸ್ಥಳೀಯರಿಗೆ ಉದ್ಯೋಗ ಸಿಗದಿದ್ದಾಗ, ತಮಿಳರು ಆತಂಕಕ್ಕೊಳಗಾಗಿದ್ದರು. ಆಗ ತಮಿಳುನಾಡು ಸರ್ಕಾರ ಖಾಸಗಿ ಮೀಸಲಾತಿಯನ್ನು ಅಲ್ಲಿಯೂ ಅಳವಡಿಸಿತ್ತು. ಪರ-ವಿರೋಧ ಚರ್ಚೆಗಳಿಗೂ ಅವಕಾಶ ನೀಡಿತ್ತು. ಕೊನೆಗೆ ಭಾಷಾಪ್ರೇಮಿಗಳಾದ ತಮಿಳರು ಮೇಲುಗೈ ಸಾಧಿಸುವಲ್ಲಿ ಸಫಲರಾದರು.
ಬೆಂಗಳೂರಿನಲ್ಲಿ ದೈತ್ಯವಾಗಿ ಬೆಳೆದು ನಿಂತಿರುವ ಕಂಪೆನಿಗಳು ಕನ್ನಡಿಗರಿಗೆ ಉದ್ಯೋಗ ನೀಡುವ ಸಂದರ್ಭದಲ್ಲಿ, ಕನ್ನಡಿಗರಲ್ಲಿ ಗುಣಮಟ್ಟವಿಲ್ಲ, ಪ್ರತಿಭೆಯಿಲ್ಲ, ಕೌಶಲ್ಯವಿಲ್ಲ ಎಂಬರ್ಥದ ಮಾತುಗಳನ್ನು ಆಡುತ್ತಿವೆ. ಹಾಗಾದರೆ, ಕರ್ನಾಟಕದಲ್ಲಿಯೇ ಹುಟ್ಟಿ ಬೆಳೆದು ತನ್ನದೇ ಆದ ದೊಡ್ಡ ಹೆಸರನ್ನು ಪಡೆದುಕೊಂಡಿರುವ ಇನ್ಫೋಸಿಸ್ ನಾರಾಯಣಮೂರ್ತಿ ಅವರು ಪ್ರತಿಭಾವಂತರಲ್ಲವೇ, ಕೌಶಲ್ಯವಿಲ್ಲವೇ ಎಂಬ ಪ್ರಶ್ನೆ ಎದುರಾಗುತ್ತದೆ. ಮೀಸಲಾತಿಯಿಂದ ಬೆಂಗಳೂರಿನ ಘನತೆಗೆ ಧಕ್ಕೆ ಬರುತ್ತದೆ ಎಂದು ಕರ್ನಾಟಕದಲ್ಲಿ ಹುಟ್ಟಿ, ಇಲ್ಲಿಯೇ ಕಂಪೆನಿ ಕಟ್ಟಿ ಬೆಂಗಳೂರಿಗೆ ಕೀರ್ತಿ ತಂದ ಕಿರಣ್ ಮಜುಂದಾರ್ ಶಾ ಹೇಳಿಕೆ ಹಾಗೂ ಕನ್ನಡಿಗರೆಂದು ಗುರುತಿಸಿಕೊಂಡಿರುವ ಮೋಹನ್ ದಾಸ್ ಪೈಯಂತಹ ಉದ್ಯಮಿಗಳೇ ಸ್ಥಳೀಯರ ವಿರುದ್ಧ, ಕನ್ನಡಿಗರ ವಿರುದ್ಧ ಮಾತುಗಳನ್ನಾಡುತ್ತಿರುವುದು ವಿಪರ್ಯಾಸದ ಸಂಗತಿ.
ಹಾಗೆಯೇ ನೈಸರ್ಗಿಕವಾಗಿ ಶ್ರೀಮಂತ ರಾಜ್ಯವಾಗಿರುವ ಕೇರಳದ ಕಮ್ಯೂನಿಸ್ಟ್ ಪಕ್ಷದ ನಾಯಕರು, ಕನ್ನಡಿಗರಿಗೆ ಮೀಸಲಾತಿ ತಪ್ಪು ನಡೆ ಎಂದಿದ್ದಾರೆ. ಅಲ್ಲಿ ಉದ್ಯೋಗ ಸೃಷ್ಟಿಸಲಾಗದೇ, ಬೆಂಗಳೂರಿನಲ್ಲಿ ಆಶ್ರಯ ಪಡೆದಿರುವವರು ಸರ್ಕಾರಕ್ಕೆ ಪಾಠ ಮಾಡುತ್ತಿರುವುದು ಹಾಸ್ಯಾಸ್ಪದವಾಗಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಸರಕಾರಕ್ಕೆ ಇಕ್ಕಟ್ಟು ತಂದ ಖಾಸಗಿ ಮೀಸಲು ಸಮಸ್ಯೆ
ಕನ್ನಡಿಗನೇ ಸಾರ್ವಭೌಮ ಎನ್ನುವುದು ಬರೀ ಘೋಷಣೆ
ಕರ್ನಾಟಕದಲ್ಲಿರುವ ಖಾಸಗಿ ಕಂಪನಿಗಳು ಕನ್ನಡಿಗರಿಗೆ ಉದ್ಯೋಗ ನೀಡದೆ, ಅನ್ಯ ರಾಜ್ಯ ಮತ್ತು ಅನ್ಯ ದೇಶಗಳ ಪ್ರಜೆಗಳಿಗೆ ಕೆಲಸ ನೀಡುತ್ತಿದ್ದಾರೆ. ಕನ್ನಡ ನಾಡಲ್ಲಿ ಹುಟ್ಟಿದ ಕನ್ನಡಿಗರಿಗೆ ಕರ್ನಾಟಕದಲ್ಲಿ ಉದ್ಯೋಗ ಸಿಗದೇ ಬೇರೆ ರಾಜ್ಯ ಮತ್ತು ಬೇರೆ ದೇಶಗಳಿಗೆ ವಲಸೆ ಹೋಗುವ ಪರಿಸ್ಥಿತಿ ಉದ್ಭವವಾಗಿದೆ.
ಖಾಸಗಿ ಉದ್ಯಮ ಎಂದರೆ, ಕೇವಲ ಐಟಿ-ಬಿಟಿ ಸಾಫ್ಟ್‌ವೇರ್ ಕಂಪನಿಗಳು ಮಾತ್ರವಲ್ಲ, ಹಲವಾರು ಉತ್ಪನ್ನಗಳನ್ನು ತಯಾರಿಸುವ ಕಾರ್ಖಾನೆಗಳು ಕೂಡ ಖಾಸಗಿ ಉದ್ಯಮಗಳೇ. ಇಲ್ಲಿಯೂ ಹೆಚ್ಚಿನವರು ಹೊರ ರಾಜ್ಯಗಳಿಂದ ಬಂದವರೇ ಕೆಲಸ ಮಾಡುತ್ತಿದ್ದಾರೆ. ಆದಾಗ್ಯೂ, ಕನ್ನಡಿಗರಲ್ಲಿ ಬಹುತೇಕರು ಮಾಡಲಿಚ್ಛಿಸದ ಕೆಲಸಗಳನ್ನು ಈ ವಲಸೆ ಕಾರ್ಮಿಕರು ಅತಿ ಕಡಿಮೆ ಸಂಭಾವನೆಗೆ ಮಾಡುತ್ತಿದ್ದಾರೆ.
ಹಾಗೆ ನೋಡಿದರೆ, ಈ ವಿಧೇಯಕದಲ್ಲಿ ಉದ್ಯಮಗಳಿಗೆ ಹಾನಿಯಾಗುವಂತಹ ಯಾವುದೇ ಅಂಶಗಳಿರಲಿಲ್ಲ. ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಬೇಕು ಎಂಬ ಆಗ್ರಹ ಮಾತ್ರವಿತ್ತು. ಸರ್ಕಾರವೇನೂ ಇಂತಹವರಿಗೇ ಉದ್ಯೋಗ ನೀಡಿ ಎಂದು ಒತ್ತಡ ಹೇರಿರಲಿಲ್ಲ. ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ, ಕನ್ನಡಿಗರಿಗೆ ಮೊದಲ ಆದ್ಯತೆ ಎಂಬುದು, ಹೇಳಿಕೆಯಾಗಿಯೇ ಉಳಿದಿದೆ.