ನಾಗರಿಕ ಸೇವಾ ಪರೀಕ್ಷೆಯಲ್ಲಿ ವಂಚನೆಗೆ ಯತ್ನಿಸಿದ ಆರೋಪದ ಮೇಲೆ ಪ್ರೊಬೇಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ವಿರುದ್ಧ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಶುಕ್ರವಾರ ಎಫ್‌ಐಆರ್ ದಾಖಲಿಸಿದೆ ಎಂದು ವರದಿಯಾಗಿದೆ.
ವರದಿಗಳ ಪ್ರಕಾರ, ಯುಪಿಎಸ್‌ಸಿ ಎಫ್‌ಐಆರ್ ದಾಖಲಿಸಿರುವುದು ಮಾತ್ರವಲ್ಲದೆ, ಖೇಡ್ಕರ್ ಅವರ ನೇಮಕಾತಿಯನ್ನು ರದ್ದುಗೊಳಿಸಲು ಶೋಕಾಸ್ ನೋಟಿಸ್ (ಎಸ್‌ಸಿಎನ್) ನೀಡಿದೆ. ಅಷ್ಟೇ ಅಲ್ಲದೆ, ಮುಂದಿನ ಯಾವುದೇ ಯುಪಿಎಸ್‌ಸಿ ಪರೀಕ್ಷೆಗಳು ಅಥವಾ ಆಯ್ಕೆಗಳಲ್ಲಿ ಭಾಗವಹಿಸದಂತೆ ಅವರನ್ನು ಡಿಬಾರ್ ಮಾಡಲು ಯೋಜಿಸಿದೆ.
ಖೇಡ್ಕರ್ ಅವರು ಐಎಎಸ್ ಪಡೆಯುವ ವೇಳೆ ಮತ್ತು ಪುಣೆಯಲ್ಲಿ ನಿಯೋಜನೆಗೊಳ್ಳುವ ವೇಳೆ ಅಂಗವೈಕಲ್ಯ ಮತ್ತು ಇತರ ಹಿಂದುಳಿದ ವರ್ಗ (OBC) ಕೋಟಾವನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂಬ ಆರೋಪವನ್ನೂ ಎದುರಿಸುತ್ತಿದ್ದಾರೆ.
ಈ ವರದಿ ಓದಿದ್ದೀರಾ?: ಅಕ್ರಮವಾಗಿ ‘ಕೆಂಪು ಬೀಕನ್’ ಅಳವಡಿಸಿದ್ದ ಐಎಎಸ್ ಅಧಿಕಾರಿಯ ಆಡಿ ಕಾರು ವಶ
ಈ ನಡುವೆ, ತಮ್ಮ ಖಾಸಗಿ ಕಾರಿಗೆ ಅಕ್ರಮವಾಗಿ ‘ಕೆಂಪು ಬೀಕನ್’ ದೀಪವನ್ನು ಅಳವಡಿಸಿದ ಆರೋಪದ ಮೇಲೆ ಖೇಡ್ಕರ್ ಅವರ ಐಷಾರಾಮಿ ಕಾರನ್ನೂ ಪೊಲೀಸರು ಭಾನುವಾರ ಜಪ್ತಿ ಮಾಡಿದ್ದಾರೆ.
ಬುಧವಾರ, ಖೇಡ್ಕರ್ ಅವರ ತಾಯಿ ಮನೋರಮಾ ಖೇಡ್ಕರ್ ಅವರನ್ನು ರೈತರಿಗೆ ಬಂದೂಕು ತೋರಿ, ಬೆದರಿಕೆ ಹಾಕಿದ ಆರೋಪದ ಮೇಲೆ ಬಂಧಿಸಲಾಗಿದೆ. ಜುಲೈ 20ರವರೆಗೆ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ.