ತಮಿಳುನಾಡು ಸಚಿವ, ಡಿಎಂಕೆ ಯುವ ಘಟಕದ ಕಾರ್ಯದರ್ಶ ಉದಯನಿಧಿ ಸ್ಟಾಲಿನ್ ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡಲಾಗುತ್ತದೆ ಎಂಬ ವರದಿ, ಊಹಾಪೋಹಗಳು ಹರಿದಾಡುತ್ತಿವೆ. ಈ ಬಗ್ಗೆ ಪ್ರಿಕ್ರಿಯಿಸಿರುವ ಉದಯನಿಧಿ ಎಲ್ಲ ವರದಿಗಳನ್ನು ತಳ್ಳಿ ಹಾಕಿದ್ದಾರೆ. ತಮಿಳುನಾಡು ಸಚಿವ ಸಂಪುಟದಲ್ಲಿರುವ ಎಲ್ಲ ಸಚಿವರೂ ಉಪಮುಖ್ಯಮಂತ್ರಿಗಳೇ ಆಗಿದ್ದಾರೆ ಎಂದು ಹೇಳಿದ್ದಾರೆ.
ಶನಿವಾರ ಮಾತನಾಡಿದ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರ ಪುತ್ರ ಉದಯನಿಧಿ, “ಉಪ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಅನೇಕ ಸುದ್ದಿ ವರದಿಗಳು ಕಂಡುಬರುತ್ತಿವೆ. ಆದರೆ, ನಮ್ಮ ಸರ್ಕಾರದ ಎಲ್ಲ ಮಂತ್ರಿಗಳು ಉಪ ಮುಖ್ಯಮಂತ್ರಿಗಳೆಂದು ನಾನು ಈ ಹಿಂದೆಯೇ ಪತ್ರಿಕೆಗಳಿಗೆ ಹೇಳಿದ್ದೇನೆ. ನಾನು ಯಾವುದೇ ಹುದ್ದೆಯ ಆಕಾಂಕ್ಷಿಯಲ್ಲ. ಯುವ ಘಟಕದ ಕಾರ್ಯದರ್ಶಿ ಹುದ್ದೆಯೇ ನನ್ನ ನೆಚ್ಚಿನ ಹುದ್ದೆ” ಎಂದು ಹೇಳಿದ್ದಾರೆ.
“ಕಳೆದ ಚುನಾವಣೆಯಲ್ಲಿ ಕೆಲಸ ಮಾಡಿದಂತೆ, 2016ರ ಚುನಾವಣೆಯಲ್ಲಿಯೂ ಕೆಲಸ ಮಾಡಿ ಗೆಲುವು ಸಾಧಿಸಬೇಕು ಎಂಬುದೇ ನಮ್ಮ ಗುರಿ. ಯಾವುದೇ ಮೈತ್ರಿ ನಮ್ಮ ಪ್ರತಿಸ್ಪರ್ಧಿಯಾಗಿ ಬಂದರೂ, ನಮ್ಮ ಡಿಎಂಕೆ ಮೈತ್ರಿಕೂಟವೇ ಚುನಾವಣೆಯಲ್ಲಿ ಜಯಭೇರಿ ಬಾರಿಸುತ್ತದೆ. ಎಂ.ಕೆ ಸ್ಟಾಲಿನ್ ಅವರು ಮತ್ತೆ ತಮಿಳುನಾಡಿನ ಮುಖ್ಯಮಂತ್ರಿ ಆಗಲಿದ್ದಾರೆ” ಎಂದು ಹೇಳಿದ್ದಾರೆ.
“ಪಕ್ಷಕ್ಕೆ ಪ್ರತಿ ಮನೆಯಿಂದ ಯುವ ಕಾರ್ಯಕರ್ತರನ್ನು ಸೇರಿಸಬೇಕೆಂಬುದು ನಮ್ಮ ಉದ್ದೇಶವಾಗಿದೆ. ಅದಕ್ಕಾಗಿ, ಕಾರ್ಯಕರ್ತರು ಹೆಚ್ಚಿನ ಕೆಲಸ ಮಾಡಬೇಕು. ರಾಜ್ಯಾಧ್ಯಂತ ಸಕ್ರಿಯವಾಗಿ ಸಂಚರಿಸಿ, ಯುವ ಘಟಕಕ್ಕೆ ಜಿಲ್ಲಾ ಮಟ್ಟದ ಪದಾಧಿಕಾರಿಗಳನ್ನು ನೇಮಿಸಲಾಗುತ್ತಿದೆ” ಅವರು ಹೇಳಿದ್ದಾರೆ.