- ಬಿಬಿಎಂಪಿ ಗುತ್ತಿಗೆ ಪಡೆದಿದ್ದ ಕಾಮಗಾರಿಯಲ್ಲಿ ವೆಂಕಟೇಶ್‌ಗೆ ನಷ್ಟ
- ಕ್ಲಾಸ್ 1 ಗುತ್ತಿಗೆದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದ ವೆಂಕಟೇಶ್ ಎ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಗುತ್ತಿಗೆದಾರರೊಬ್ಬರು ಲೇವಾದೇವಿಗಾರರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ವೆಂಕಟೇಶ್ ಎ ಎಂದು ಗುರುತಿಸಲಾಗಿದೆ. ಇವರು ಬಸವೇಶ್ವರನಗರ ನಿವಾಸಿಯಾಗಿದ್ದು, ಕ್ಲಾಸ್ 1 ಗುತ್ತಿಗೆದಾರರಾಗಿದ್ದರು.
“ವಿಶ್ವನಾಥ್, ಧರ್ಮೇಂದ್ರ ಬಾಬು, ಚಂದ್ರು, ಗೋಪಿ ಹಾಗೂ ಇತರ ಲೇವಾದೇವಿಗಾರರು ನನ್ನ ಪತಿಗೆ ಕಿರುಕುಳ ನೀಡಿದ್ದಾರೆ” ಎಂದು ಮೃತನ ಪತ್ನಿ ದೇವಿಕಾ ಎಂ.ಬಿ ಬಸವೇಶ್ವರನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
“ಪಾಲಿಕೆ ಗುತ್ತಿಗೆ ಪಡೆದಿದ್ದ ಕಾಮಗಾರಿಯಲ್ಲಿ ಪತಿಗೆ ನಷ್ಟವಾಗಿದೆ. ಲೇವಾದೇವಿದಾರರಿಂದ ಬಡ್ಡಿಗೆ ಸಾಲ ಪಡೆದಿದ್ದರು. 2015ರಿಂದ ಸಾಯುವವರೆಗೂ ವೆಂಕಟೇಶ್ ಬಡ್ಡಿ ಕಟ್ಟಲು ಆಸ್ತಿ ಸೇರಿದಂತೆ ಸುಮಾರು ₹20 ಕೋಟಿ ಕಳೆದುಕೊಂಡಿದ್ದಾರೆ” ಎಂದು ದೇವಿಕಾ ಪೊಲೀಸರಿಗೆ ತಿಳಿಸಿದ್ದಾರೆ.
“ವಿಶ್ವನಾಥ್ ಸೇರಿದಂತೆ ನಾಲ್ವರೂ ವೆಂಕಟೇಶ್‌ಗೆ ಹಣ ವಾಪಸ್ ಕೊಡು, ಇಲ್ಲವೇ ಸಾಯಿ ಎಂದು ನಿಂದಿಸಿದ್ದಾರೆ. ಹಣಕ್ಕಾಗಿ ವೇಂಕಟೇಶ್ ಅವರನ್ನು ಇವರೆಲ್ಲರೂ ಪೀಡಿಸುತ್ತಿದ್ದರು. ಸಾಲ ತೀರಿಸಲು ವೆಂಕಟೇಶ್ ಮತ್ತು ಅವರ ಕುಟುಂಬದವರು ನಮ್ಮ ಮನೆಯ ಮಾರಾಟಕ್ಕಾಗಿ ಡೀಲ್ ಮಾಡಿಸಿದ್ದರು. ವಿಶ್ವನಾಥ್ ಅವರು ಏ. 30ರೊಳಗೆ ಮನೆಯಿಂದ ಹೊರಬರುವಂತೆ ಗಡುವು ನೀಡಿದ್ದರು. ಹೊರಬರದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದರು. ಧರ್ಮೇಂದ್ರ ಬಾಬು ಮತ್ತು ಆತನ ಚಿಕ್ಕಪ್ಪ ಖಾಲಿ ಚೆಕ್ ಮತ್ತು ಸ್ಟಾಂಪ್ ಪೇಪರ್ ಮೇಲೆ ವೆಂಕಟೇಶ್ ಸಹಿ ತೆಗೆದುಕೊಂಡಿದ್ದರು” ಎಂದು ಹೇಳಿದ್ದಾರೆ.
ನಾಲ್ವರ ವಿರುದ್ಧ ಐಪಿಸಿ ಸೆಕ್ಷನ್ 306 (ಆತ್ಮಹತ್ಯೆಗೆ ಪ್ರಚೋದನೆ) ಅಡಿಯಲ್ಲಿ ಪ್ರಕರಣವನ್ನು ಕೈಗೆತ್ತಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಬಸವೇಶ್ವರನಗರ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ನೀರಿಗಾಗಿ ನೆರೆಹೊರೆಯವರೊಂದಿಗೆ ಜಗಳ ; ಮಹಿಳೆ ಆತ್ಮಹತ್ಯೆ
ಸೋಮವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ವೆಂಕಟೇಶ್ ಮನೆಯಲ್ಲಿ ಗಂಜಿ ಕುಡಿದು ಸ್ವಲ್ಪ ಸಮಯದ ನಂತರ ಕೆಳಗೆ ಬರುವುದಾಗಿ ಪತ್ನಿ ದೇವಿಕಾಗೆ ಹೇಳಿ ತಾರಸಿಗೆ ಹೋಗಿದ್ದರು. 30 ನಿಮಿಷವಾದರೂ ವೆಂಕಟೇಶ್ ಕೆಳಗೆ ಬರದ ಕಾರಣ ದೇವಿಕಾ ತಾರಸಿಯ ರೂಮಿಗೆ ಹೋಗಿದ್ದಾರೆ. ಅಲ್ಲಿ ಬಾತ್ ರೂಂ ಬಾಗಿಲು ಬೀಗ ಹಾಕಿರುವುದನ್ನು ಕಂಡು ಪತಿಯನ್ನು ಹುಡುಕಿದ್ದಾರೆ. ಈ ವೇಳೆ ಪತಿಯ ಕುತ್ತಿಗೆಗೆ ಹಗ್ಗವನ್ನು ಕಟ್ಟಿಕೊಂಡು ನೆಲದ ಮೇಲೆ ಬಿದ್ದಿರುವುದನ್ನು ಕಂಡು ಗಾಬರಿಯಾಗಿ ಬಾಗಿಲ ತೆರೆದಿದ್ದಾರೆ. ನಂತರ ವೆಂಕಟೇಶ್ ಅವರನ್ನು ಕೆಸಿ ಜನರಲ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ.