ಹಿರೇಮಠ ಸಂದರ್ಶನ-1 | ಮನುಷ್ಯನಲ್ಲಿ ಮನುಷ್ಯತ್ವನೇ ಇಲ್ಲ ಅಂದ್ರೆ, ಪ್ರಕೃತಿ ಸರಿಪಡಿಸಲಾಗದ ರೀತಿ ಬುಡಮೇಲಾಗ್ತದೆ

Date:

Advertisements

ಪರಿಸರ ಕಾರ್ಯಕರ್ತ ಮತ್ತು ಭ್ರಷ್ಟಾಚಾರ ವಿರೋಧಿ ಹೋರಾಟಗಾರ, ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್‌.ಆರ್ ಹಿರೇಮಠ ಅವರು ಹಲವಾರು ವರ್ಷಗಳಿಂದ ರಾಜ್ಯದಲ್ಲಿ ಭ್ರಷ್ಟಾಚಾರದ ವಿರುದ್ಧ ನಿರಂತರವಾಗಿ ಹೋರಾಟ ನಡೆಸುತ್ತಿದ್ದಾರೆ. ಕರ್ನಾಟಕದಲ್ಲಿ ಅದರಲ್ಲೂ, ಬಳ್ಳಾರಿಯಲ್ಲಿ ನಡೆದ ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟ ನಡೆಸಿ, ಯಶಸ್ವಿಯಾಗಿರುವ ಹಿರೇಮಠ ಅವರು ಬಳ್ಳಾರಿ ಗಣಿ ಕುಳಗಳೆಂದೇ ಕುಖ್ಯಾತಿ ಹೊಂದಿದ್ದ ಗಾಲಿ ಜನಾರ್ದನ ರೆಡ್ಡಿಯ ಗಣಿಗಾರಿಕೆ ಮಾಫಿಯಾವನ್ನು ಬಯಲಿಗೆಳೆಯುವಲ್ಲಿ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಜೈಲು ಸೇರುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಅವರನ್ನು ಲೇಖಕಿ ರೂಪಾ ಹಾಸನ ಅವರು ಸಂದರ್ಶಿಸಿದ್ದು, ಅದರ ಮೊದಲ ಭಾಗ ಇಲ್ಲಿದೆ.

• ಅಮೆರಿಕಾದಿಂದ ಭಾರತಕ್ಕೆ ಬಂದಾಗ ನೀವು ಮೊದಲು ಮಾಡಿದ ಕೆಲಸ?
ಭಾರತದೊಳಗೆ ನಾನು 1979ರಾಗ ಕಾಲಿಟ್ಟ ಮೊಟ್ಟ ಮೊದಲಿಗೆ ಮಾಡಿದ ಕೆಲಸ, ಜಯಪ್ರಕಾಶ್ ನಾರಾಯಣ್ ಅವರನ್ನ ಹೋಗಿ ಭೇಟಿ ಆಗಿದ್ದು. ಅಮೆರಿಕಕ್ಕೆ ಜೆಪಿ ಬಂದಿದ್ದಾಗ ಸನ್ಮಾನ ಮಾಡಿದ್ವಿ ಅವರನ್ನ. ಯಾಕೆಂದರೆ ಏನೂ ರಕ್ತಪಾತ ಇರಲಾರದೇ ಭಾರತದ ಚಿತ್ರ ಬದಲಾಯ್ತು ನೋಡಿ- ಇಂದಿರಾಗಾಂಧಿ, ಅವರ ಮಗ, ಅರ್ಧ ಕ್ಯಾಬಿನೆಟ್ ಎಲ್ಲಾ ಅವರು ಮನಿಗೆ ಹೋಗುವಂಗೆ ಮಾಡಿದ್ರು. ಇದೇನು ಸಣ್ಣದು, ಸಾಮಾನ್ಯ ಅಲ್ಲ. ಮೊದಲನೇ ದಿವಸ ನಾನು ಮುಂಬೈದೊಳಗೆ ಇಳಿದಾಗ ಇಂಡಿಯನ್ ಎಕ್ಸ್‌ಪ್ರೆಸ್ ಟವರ್‌ದೊಳಗ ರೆಸ್ಟ್ ತೊಗೋತಾ ಇದ್ರು, ಆಗಿನ್ನೂ ಜಸ್‌ಲೋಕ್ ಹಾಸ್ಪಿಟಲ್‌ದಿಂದ ಬಂದಿದ್ರು. ಹೋಗಿ ಅವರನ್ನ ಭೆಟ್ಟಿಯಾದೆ. ಹಳ್ಳಿಗಳಿಗೆ ಹೋಗಿ ಕೆಲಸ ಮಾಡ್ತೀನೆಂದು ಗೊತ್ತಾದಾಗ ಸಂತೋಷದಾಗೆ ಬೆನ್ನು ತಬ್ಬಿ ಹಾರೈಸಿದ್ರು. ಅದು ನನ್ನ ತಂದೆಯ ಆಶೀರ್ವಾದ ಇದ್ದಂಗೆ ಅಂದ್ಕೊಂಡೇನಿ. ಆನಂತರ ಊರಿಗೆ ಬಂದು, ಸಹಮನಸ್ಕರೊಂದಿಗೆ ಕೂಡಿಕೊಂಡು ಐಡಿಎಸ್ ಸ್ಥಾಪನೆ ಮಾಡಿ, ಬುಡಮಟ್ಟದ ಅಭಿವೃದ್ಧಿ ಕೆಲಸ ಕಾರ್ಯ ಆರಂಭ ಮಾಡಿದೆವು.

• ಇದಕ್ಕೂ ಮೊದಲು ನೀವು ಕಾರ್ಪೊರೇಟ್ ಸೆಕ್ಟರ್‌ನಲ್ಲಿ ಕೆಲಸ ಮಾಡಿದವರಲ್ವಾ?
ಹೌದು. ಕಾರ್ಪೊರೇಟ್ ಸೆಕ್ಟರ್‌ನಾಗೆ ಹತ್ತು ವರ್ಷ ಕೆಲ್ಸ ಮಾಡಿ ಕಳ್ದೇನಿ. ಅವರು ಹೆಂಗೆ ನಿರ್ಧಾರ ತೊಗೋತಾರೆ, ಅವರ ಗುರಿ ಏನು? ಹೆಂಗೆ ಯೋಜನೆ ಮಾಡ್ತಾರೆ? ಎಲ್ಲಾ ನಂಗೆ ಗೊತ್ತದಾ, ಅವರ ಉದ್ದೇಶ ಏನಂಥ ಸರಿಯಾಗಿ ತಿಳಿದದ. ಅಲ್ಲಿ ಆರ್ಥಿಕ ಹೂಡಿಕೆ ಹೆಂಗೆ ಮಾಡ್ತಾರಂದ್ರೆ… ಇದರೊಳಗೆ ಮನುಷ್ಯತ್ವನೇ ಇರೋದಿಲ್ಲ! ಮನುಷ್ಯರನ್ನೇ ಯಂತ್ರಗಳನ್ನಾಗಿ ಮಾಡಿ, ಸಾಧನಗಳನ್ನಾಗಿ ಮಾಡಿ ಬಳಸ್ತಾರವ್ರು. ಆಧುನಿಕ ಸಂಸ್ಕೃತಿ, ಅಭಿವೃದ್ಧಿ ಅಂದ್ರೆ ಬೃಹತ್ ಪ್ರಮಾಣದಾಗ ಪ್ರಕೃತಿ ನಾಶ. ಹಿಂಗಿರುವಾಗ ನಾವು ಇದರಿಂದ ಏನೇ ಬೃಹತ್ ಉತ್ಪಾದನೆ ಮಾಡಿದ್ರು… ಮನುಷ್ಯ, ಮನುಷ್ಯತ್ವನೇ ಇಲ್ಲ ಅಂತಂದ್ರೆ, ಪ್ರಕೃತಿ ಸರಿಪಡಿಸಲಾಗದಂಗೆ ಬುಡಮೇಲಾಗ್ತದಂದ್ರೆ, ಈ ಅಭಿವೃದ್ಧಿ ಎಲ್ಲಿಗೆ ಹೋಗಿ ತಲುಪ್ತದಾ? ಇದು ಮಾನವ ಕುಲಕ್ಕಿರುವ ಗಂಡಾಂತರ. ಇದನ್ನ ಹೆಂಗಾದರೂ ಬದಲಾಯಿಸಲೇಬೇಕಾಗೇದ. ಇದನ್ನೆಲ್ಲಾ ಹತ್ತಿರದಿಂದ ಅನುಭವಿಸಿ, ಅಲ್ಲಿಂದ ಬಚಾವಾಗಿ ಹೊರಬಂದೀನಿ. ಈ ಕಾರ್ಪೊರೇಟ್ ವಿದ್ಯಮಾನವನ್ನ ಅರ್ಥವಾಗೂ ಹಂಗ ನಮ್ಮ ಮಂದಿಗೆ ತಿಳಿಸ್ಬೇಕದ.

Advertisements

• ಭಾರತದಲ್ಲಿ ಐಡಿಎಸ್ ಕಾರ್ಯ ಚಟುವಟಿಕೆ ಆರಂಭಿಸುವಾಗ ನಿಮ್ಮ ಆಲೋಚನೆ ಹೇಗಿತ್ತು?
ಅಂಬೇಡ್ಕರ್ ಕನಸು -ಅಸ್ಪೃಶ್ಯತೆ, ತಾರತಮ್ಯ ರಹಿತವಾದ ಹಳ್ಳಿಗಳಾಗಿತ್ತು.. ನಾನೊಬ್ಬ ಇಂಜಿನಿಯರ್. ಆಮೇಲೆ ಎಂಬಿಎ ಪದವಿ ಪಡೆದವ. ನಾನು ಅಮೆರಿಕ ಬಿಟ್ಟು ಇಲ್ಲಿಗೆ ಬಂದಿದ್ದು ಯಾರನ್ನೂ ವಿರೋಧ ಮಾಡ್ಲಿಕ್ಕಲ್ಲ. ನಮ್ಮದೇನಂದ್ರ ಉದ್ದೇಶ- ಬಡವರ ಸಾಮಾಜಿಕ ಮತ್ತು ಆರ್ಥಿಕ ಸಶಕ್ತೀಕರಣ. ಅದು ಮೊದಲು ಶುರುವಾಗೋದು ತಳಸಮುದಾಯದವರ ಕಾಲೋನಿಯಿಂದ. ಅವರು ಸಾಮಾಜಿಕ ಆರ್ಥಿಕವಾಗಿ ಹಿಂದುಳಿದಾರ, ಆಮೇಲೆ ಜನತಾ ಕಾಲೋನಿ… ಎಲ್ಲಿ ಜನರಿಗೆ ಇರಲಿಕ್ಕೆ ಕೂಡ ತಲೆ ಮೇಲೆ ಒಂದು ಸೂರು ಕೂಡ ಇಲ್ಲವೋ ಅಲ್ಲಿಂದ ಪ್ರಾರಂಭ ಆಗ್ತದ. ಇದು ನಮ್ಮ ಮೇಲಿನ ಬಹಳೇ ದೊಡ್ಡ ಗುರುತರ ಜವಾಬ್ದಾರಿ, ಇದೇ ನಿಜವಾದ ರಾಷ್ಟ್ರ ನಿರ್ಮಾಣ ಅದ. ‘ವಾರ್ ಈಸ್ ಟೂ ಪ್ರೀಶಿಯಸ್ ಎ ಥಿಂಗ್, ಟು ಬಿ ಲೆಫ್ಟ್ ಟು ದ ಜನರಲ್ಸ್ ಅಲೋನ್’. ‘ಯುದ್ದದ ಮಹತ್ವ ಎಷ್ಟು ಅಂದ್ರ, ಅದು ಸೇನಾನಿಗೆ ಮಾತ್ರ ಸಂಬಂಧ ಪಟ್ಟಿದ್ದು ಅಂತ್ಹೇಳಿ ಸುಮ್ನಿರಂಗಿಲ್ಲ’- ಅಂದ್ರ ಇದನ್ನ ಬರೀ ಸರ್ಕಾರಕ್ಕೆ ಅಂತ ಬಿಟ್ರ ಆಗೂದಿಲ್ಲ. ಈ ಗುರಿಯನ್ನ ಮೊದಲು ನಮ್ಮ ಜೀವನದಲ್ಲಿ ಅಳವಡಿಸಬೇಕು. ಆಮೇಲೆ ಜನ ಜೀವನದಲ್ಲೂ ಅಳವಡಿಕೆಯಾಗಬೇಕು.

ಹಿರೇಮಠ

• ನಿಮ್ಮ ಹೋರಾಟಗಳ ದೃಷ್ಟಿಕೋನ? ಉದಾಹರಣೆ ಮೂಲಕ ತಿಳಿಸುವಿರಾ?
ಇವತ್ತಾದ್ರೂ ಕೂಡ ಜೀವನದಾಗ ಅತಿ ಮಹತ್ವದ ಕೊಡುಗೆ ಏನಂದುಕೊಂಡೇನಿ ಅಂದ್ರ, ಬ್ರಿಟಿಷರು 1894ರಾಗ ತಮ್ಮ ಕೈಗಾರಿಕೆ ವ್ಯಾಪಾರ ಮತ್ತು ಯುದ್ಧದ ಸಲುವಾಗಿ, ತಮ್ಮ ನೌಕಾಪಡೆ ಬೆಳಸಲಿಕ್ಕೆ, ವಸಾಹತುಶಾಹಿ ಸಾಮ್ರಾಜ್ಯದ ಹಿತಾಸಕ್ತಿ ಸಲುವಾಗಿ ಮಾಡಿದ ಅರಣ್ಯ ನೀತಿಯನ್ನ ಬದಲಿಸಿ, 1988ರ ರಾಷ್ಟ್ರೀಯ ಅರಣ್ಯ ನೀತಿಯನ್ನ ರೂಪಿಸಿದ್ದು. ಒಟ್ಟಿನಲ್ಲಿ ಮನುಷ್ಯರಿಗೂ ಪ್ರಕೃತಿಗೂ ಅರಣ್ಯಕ್ಕೂ ಪರಸ್ಪರ ಅಳಿವು-ಉಳಿವಿನ ಕರುಳುಬಳ್ಳಿ ನಂಟದ ಅನ್ನೊದ ನಾವು ನೆನಪಿಟ್ಟುಕೊಂಡೆ ಹೆಜ್ಜೆಯಿಡಬೇಕು. ಪ್ರಾಕೃತಿಕ ಸಮತೋಲನ ನಮ್ಮ ಉದ್ದೇಶ ಆಗಬೇಕಂದ್ರೆ, ಮುಖ್ಯವಾಗ ಇದರಾಗ ಸರ್ಕಾರದ ಹಿಡಿತ ಕಡಿಮೆಯಾಗಿ, ಸಮುದಾಯದ ಜವಾಬ್ದಾರಿಗೆ ಬರಬೇಕು. ಯಾಕಂದ್ರೆ ಈಗ ಹವಾಮಾನ ವೈಪರೀತ್ಯದ ಕಾಲಾನೂ ಮುಗಿದು, ‘ಹವಾಮಾನ ತುರ್ತು ಪರಿಸ್ಥಿತಿ’ ಕಾಲ ಬಂದೇತಿ. ಯುದ್ಧೋಪಾದಿಯಾಗೆ ಕೆಲಸ ಆಗ್ಬೇಕಾಗೇದಾ.

ಎರಡನೇದ್ದು ‘ಮೀಟಿಂಗ್ ದ ಬೇಸಿಕ್ ನೀಡ್ಸ್ ಆಫ್ ದ ಪೀಪಲ್, ಇನ್ ಅಂಡ್ ಅರೌಂಡ್ ದ ಫಾರೆಸ್ಟ್’. ಅಂದ್ರ, ಅರಣ್ಯದ ಒಳಗ ಮತ್ತು ಸುತ್ತಮುತ್ತಲಿನ ಸಮುದಾಯದ ಮೂಲಭೂತ ಅಗತ್ಯ ಏನಿದಾವೋ ಅವಕ್ಕೆ ಚ್ಯುತಿಯಾಗದಂತೆ ನೋಡಿಕೊಳ್ಳಬೇಕು. ಆ ಸಮುದಾಯಗಳನ್ನ ನಿರಾಶ್ರಿತರಾಂಗ- ಅಂದ್ರ ಬರೀ ಫಲಾನುಭವಿಗಳಾಗಿ ಅನ್ನ ಕೊಟ್ಟೆ, ಸೀರಿ ಕೊಟ್ಟೆ ಅದು ಬ್ಯಾಡ. ಅವರು ಡಿಸಿಷನ್ ಮೇಕರ್ಸ್, ನಿರ್ಣಾಯಕ ಸ್ಥಾನಗಳಲ್ಲಿ ಕೂರುವಂತಾಗಬೇಕು. ಅದಕ್ಕೆ ಗ್ರಾಮಸಭೆ ಮತ್ತು ಪಂಚಾಯತ್‌ರಾಜ್ ವ್ಯವಸ್ಥೆ ಸಶಕ್ತೀಕರಣ ಏನದಲ್ಲ ಅದು ನಮ್ಮ ಎರಡನೇ ಮಹತ್ವದ ಹೋರಾಟ.

ಒಂದು ಕಾಯ್ದೆ ಬದಲು ಮಾಡಿದ್ವಿ ಅದು, ಕರ್ನಾಟಕ ಪಂಚಾಯತ್‌ರಾಜ್ ಆಕ್ಟ್. ಆಗ ವಿಕೇಂದ್ರೀಕರಣವಾಯ್ತು. ರಾಜಕೀಯ, ಅಧಿಕಾರ, ಹಣ, ಕೆಲಸ -ಸಾಮಾನ್ಯ ಜನರ ಹತ್ತ್ತಿರಕ್ಕೇ ಬರುವಂಗಾಯ್ತು. ಈ ಒಂದು ಆಕ್ಟ್ನಿಂದ ರಾಜಕೀಯ ಸೀನರಿ ಬದಲಾಯಿತು! ಈ ವಿಕೇಂದ್ರಿಕರಣ ಎನ್ನುವುದು ಬಹಳೇ ಮಹತ್ವದ್ದು.

• ಐಡಿಎಸ್‌ನಲ್ಲಿ ತಳಮಟ್ಟದಲ್ಲೇ ಸ್ವಾವಲಂಬನೆ, ಜನರ ಭಾಗವಹಿಸುವಿಕೆ, ಸಹಕಾರ ಸಂಘ ಮುಂತಾದ ವಿಕೇಂದ್ರಿಕೃತ ಕಾರ್ಯ ಚಟುವಟಿಕೆ ನಡೆಸಿ ಯಶಸ್ವಿಯಾಗಿದ್ದೀರಿ. ಆದರೂ ವಿಕೇಂದ್ರಿಕರಣದ ಆಶಯ ದೂರದ ಮಾತಲ್ಲವೇ?
ಮೇಲ್ನೋಟಕ್ಕೆ ಹಾಗೇ ಕಾಣಿಸ್ತದೆ. ಆದರೆ ನಾವು ವಿಕೇಂದ್ರೀಕರಣದ ಮಹತ್ವ ಅರಿತುಕೊಳ್ಳಬೇಕಾಗೇದ. ಯಾಕಂದರಾ ಕೇಂದ್ರಿಕರಣ ಏನದಲ್ಲಾ, ಅದೇ ಇವತ್ತಿನ ಭ್ರಷ್ಟಾಚಾರಕ್ಕೆ, ಲಂಚಗುಳಿತನಕ್ಕೆ, ದುಷ್ಟತನಕ್ಕೆ, ಅಕ್ರಮಕ್ಕೆ ದಾರಿ ಮಾಡಿಕೊಟ್ಟೇದ. ನಮ್ಮ ಇಡೀ ನಡೆದು ಬಂದ ದಾರಿ, ಮತ್ತ ತಲ್ಪಿರೋ ಜಾಗ ಎರಡೂ ತಪ್ಪಿದಾವ. ರಾಜಕೀಯ, ಆಡಳಿತಶಾಹಿ, ಅಧಿಕಾರವನ್ನ ನಿರ್ಧರಿಸೋ ಶಕ್ತಿ ಕೂಡ ಕೇಂದ್ರೀಕರಣನೇ ಆಗೇದ. ಇದು ನಿರ್ನಾಮ ಆಗ್ದೇ ಸಮಾನತೆ, ಭ್ರಾತೃತ್ವ, ಸ್ವಾತಂತ್ರ್ಯಕ್ಕೆ ಅರ್ಥನೇ ಇರೋದಿಲ್ಲ. ಹಣವೇ ರಾಜಕೀಯವನ್ನ ನಡೆಸೋ ಶಕ್ತಿಯಾಗಿರೋವಾಗ ಪ್ರಜಾಪ್ರಭುತ್ವಕ್ಕೆ ಅರ್ಥ ಎಲ್ಲೇದ? ದುರಂತ ಏನಂದ್ರ ಭಾರತದಾಗ ಬಹಳ ಮಂದಿಗೆ, ರಾಜಕೀಯ ತಮ್ಮ ಬದುಕನ್ನ ನಿರ್ಧರಿಸೋ ಶಕ್ತಿ ಅಂತ ಅರ್ಥ ಆಗೇ ಇಲ್ಲ! ಮಂದಿನೇ ಸಾರ್ವಭೌಮರಿದ್ದೇವೆ. ಮಿಕ್ಕೆಲ್ಲ ಅಧಿಕಾರ ಕೇಂದ್ರದವರು ಸಾರ್ವಜನಿಕ ಸೇವಕರು. ಇದನ್ನ ಈಗಾದರೂ ಅರ್ಥ ಮಾಡಿಕೊಳ್ಳಬೇಕಾಗಿದೆ.

ರೈತ ಹೋರಾಟದಲ್ಲಿ ಎಸ್.ಆರ್ ಹಿರೇಮಠ
ರೈತ ಹೋರಾಟದಲ್ಲಿ ಎಸ್.ಆರ್ ಹಿರೇಮಠ

ನಮ್ಮ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಕೂಡ ಸಂವಿಧಾನದ ಆಶಯಕ್ಕೆ ತಕ್ಕಂತೆ ಇನ್ನೂ ಕೆಲ್ಸ ಮಾಡ್ಲಿಕ್ಕೆ ಆಗ್ತಿಲ್ಲ. ಅದರ ಪ್ರಮಾಣ ದಿನದಿಂದ ದಿನಕ್ಕ ಜಾಸ್ತಿ ಆಗ್ಬೇಕಿದ್ದದ್ದು, ಕಡಿಮೆ ಆಗ್ತಾ ಹೋಗೇದಾ. ಅದನ್ನ ಸರಿ ಮಾಡೂದ್ಹೆಂಗ ಅಂತ ನಾವು ಯೋಚಿಸ್ಬೇಕಾಗೇದ. ಮೊದ್ಲು ಕೋಟ್ಯಾಧೀಶ್ವರ ಅಂದ್ರ ಮಂದಿಗೆ ನಾಚಿಕೆ ಅನ್ನಿಸ್ತಿತ್ತು. ಎಷ್ಟು ಜನರ ಅನ್ನ ದೋಚಿ ಇಂವ ಶ್ರೀಮಂತ ಆಗ್ಯಾನೆ ಅಂತ! ಆದ್ರೆ ಈಗ ಕೋಟಿ, ಕೋಟಿ, ಕೋಟ್ಯಾಧಿಪತಿಗೂ ಏನೂ ಅನ್ಸಂಗಿಲ್ಲ! ನಮ್ಮ ದೇಶದ ಇಡೀ ಸಂಪತ್ತಿನ ಅರ್ಧಭಾಗ ಕೇವಲ ನೂರು ಮಂದಿ ಶ್ರೀಮಂತರ ಕೈಯಾಗದೇ ಅಂದ್ರೆ ಎಂಥಾ ನಾಚಿಕೆಗೇಡು! ಭಾರತದಂತಹ ದೊಡ್ಡ ದೇಶ, ಹಳ್ಳಿಗಳ ದೇಶವನ್ನ ಒಂದೇ ತಕ್ಕಡಿನಾಗಿಟ್ಟು ಒಟ್ಟಾಗಿ ಸಮಾನವಾಗಿರ‍್ಕೊಂಡು ಹೋಗ್ಲಿಕ್ಕೆ ಒಂದು ದಾರಿ ಬೇಕಲ್ಲ? ನಗರಗಳಲ್ಲಿ ತಾನೇ ಎಲ್ಲಿ ಸಮಾನತೆ ಅದಾ? ಹಳ್ಳಿಗಳು ಮತ್ತು ನಗರದ ಸ್ಲಮ್‌ಗಳು ಇವತ್ತು ನರಕ ಆಗೇದಾ. ಸರಿಪಡಿಸಲಿಕ್ಕೆ ಪ್ರಾಮುಖ್ಯತೆ ಕೊಟ್ಟಿಲ್ಲ. ಈ ಕುರಿತು ರಾಜಕಾರಣಿಗಳಿಗೆ ಮಾನವೀಯತೆ ಇಲ್ಲೇ ಇಲ್ಲ. ಒಟ್ಟಾರೆ ಸಮಸ್ಯೆಯ ಜಡ ಎಲ್ಲೇತಿ ಅದನ್ನ ನಿರ್ಮೂಲನೆ ಮಾಡಲಿಕ್ಕೆ ನಾವು ನೋಡ್ಬೇಕಾಗೇದ.

• ಇಂದು ಎಲ್ಲಿ ಕೇಳಿದರೂ ಅಭಿವೃದ್ಧಿ ಎಂಬ ಮಾತೇ ಕೇಳಿಸುತ್ತಿದೆ. ಈ ಬಗ್ಗೆ ನಿಮಗೆ ಏನನ್ನಿಸುತ್ತದೆ?
ನಿಜವಾಗೂ ಅಭಿವೃದ್ಧಿ ಎಂದರೆ ನಮ್ಮ ಸಮಾಜ-ಸಂಸ್ಕೃತಿ-ನಿಸರ್ಗದ ಜತೆ ಉತ್ತಮ ಸಾಮರಸ್ಯದ ಸಂಬಂಧ ಬೆಳೆಸೋದು. ಅಭಿವೃದ್ಧಿ ಅನ್ನೋದೊಂದು ಮಾನಸಿಕತೆ. ಸಮಾಜಕ್ಕೆ ತಿರುಗಿ ಕೊಡಬೇಕನ್ನೋದೇ ಮುಖ್ಯ ಆಗಬೇಕು. ಹಿಂದೆ ‘ಯಥಾ ಪ್ರಜಾ, ತಥಾ ರಾಜಾ’ ವ್ಯವಸ್ಥೆ ಇತ್ತು. ಆದರೆ ಇವತ್ತು `ಯಥಾ ರಾಜಾ, ತಥಾ ಪ್ರಜಾ’ ಎನ್ನೋ ವ್ಯವಸ್ಥೆಗೆ ಬದಲಾಗೇತಿ! ಚುನಾವಣೆಯಲ್ಲಿ ಹಣ ಎನ್ನೋ ʼಸಿರಿ’ಗೆ ಮರುಳಾಗಿ ಓಟು ಮಾರಿಕೊಳ್ಳೋದು ಇದಕ್ಕೆ ಕಾರಣ ಐತಿ. ನಮ್ಮ ವ್ಯವಸ್ಥೆ ಕುರಿತು ಇವತ್ತು ಮಂದಿಗೆ ವಿಶ್ವಾಸ ಹೋಗೇತಿ. ಆದರೆ ವ್ಯವಸ್ಥೆ ಬಿಟ್ಟು ಹೋರಾಟ ಮಾಡಲಿಕ್ಕೆ ಆಗೂದಿಲ್ಲವಲ್ಲ! ಇಲ್ಲಿನ ಜನರನ್ನ ಬಿಟ್ಟು ಇಂದ್ರಲೋಕ, ಚಂದ್ರಲೋಕದಿಂದ ಜನರನ್ನ ತಂದು ಚಳವಳಿ ನಡೆಸಲಿಕ್ಕೆ ಸಾಧ್ಯ ಇದಿಯೇನು? ಸಾಮಾಜಿಕ-ಆರ್ಥಿಕ ಸಮಾನತೆ ಬರೋದು ಎಂದರೆ ಕೊಳಗೇರಿ ಮಧ್ಯದಾಗ ಮುಕೇಶ್ ಅಂಬಾನಿ ಬಂಗಲೆ ಕಟ್ಟಿಕೊಳ್ಳೋದರಿಂದಲ್ಲ. ಅದೇ ಕೊಳಗೇರಿಗಳಲ್ಲಿ ವಾಸಿಸೋ ಮಂದಿ ಬದುಕು ಬದಲಾಗೋದರಿಂದ!

ಯೋಜನಾ ಆಯೋಗದ ಉಪಾಧ್ಯಕ್ಷ ಮಾಂಟೆಕ್‌ಸಿಂಗ್ ಅಹ್ಲುವಾಲಿಯ ಎಂಬಾತ, ಹಳ್ಳಿ ಜನ ಬದುಕಲಿಕ್ಕೆ ದಿನಕ್ಕೆ 27 ರೂಪಾಯಿ ಸಾಕು ಅಂತಾರ! ಹಾಗಂದರೆ ನೀವೂ ಮೊದಲು ಅದರಲ್ಲಿ ಬದುಕಿ ತೋರಿಸಿ ಅಂತ ಗಟ್ಟಿಸಿ ಕೇಳಬೇಕಾಗದ. ಯಾವಾಗಲೂ ಹೋರಾಟಗಳ ಮೂಲಕ ನಮ್ಮ ತಳವರ್ಗದ ಮಂದಿಗಾಗಿ ಜಾಗೃತಿ, ಜತೆಗೆ ಸುಧಾರಣೆ ಕೆಲಸ ಮಾಡಬೇಕಾಗಿದೆ. ʼನೀತಿ’ಗಳನ್ನ ಜನರ ಪರವಾಗಿ ರೂಪುಗೊಳ್ಳುಹಂಗೆ ವಾತಾವರಣ ನಿರ್ಮಿಸಬೇಕದ. ಹಿಂಗಾಗಿ ನಾವು ಸಿದ್ಧಾಂತ, ಕಾರ್ಯ ಮತ್ತು ವಿಶ್ಲೇಷಣೆ ಎನ್ನೋ ಮೂರು ಸೂತ್ರಗಳನ್ನ ಪ್ರತಿ ಕೆಲಸದಾಗೂ ಅಳವಡಿಸಿಕೊಳ್ತಾ ಬಂದಿದ್ದೇವೆ. ಆ್ಯಡಂ ಸ್ಮಿತ್ ಕೂಡ ತನ್ನ ʼವೆಲ್ತ್ ಅಫ್ ದಿ ನೇಷನ್ಸ್’ನಲ್ಲಿ ಕ್ಯಾಪಿಟಲಿಸಂನ ಮಿತಿಗಳ ಬಗ್ಗೆ ಎಚ್ಚರಿಸಿದ. ಹಣವಂತರು ಮತ್ತು ಅಧಿಕಾರ ಒಂದಾಗಲು ಬಿಡಬಾರದು ಎನ್ನೋದು ಆತನ ತಿಳಿವಳಿಕೆಯಾಗಿತ್ತು. ಆದರೆ ಇವತ್ತು ಏನಾಗೇತಿ? ಸರಕಾರ `ಜಾಗತಿಕ ಹೂಡಿಕೆದಾರರ ಸಮಾವೇಶ’ದ ಹೆಸರಿನಾಗ ಹಣವಂತರಿಗೆ ರತ್ನಗಂಬಳಿ ಹಾಸ್ತಾ ಕುಂತದ!

ಜೊತೆಗೆ ಸರ್ಕಾರ ಮತ್ತ ಧಾರ್ಮಿಕ ಗುರುಗಳು ಕೂಡ ಎಂದೂ ಒಗ್ಗೂಡಬಾರದು. ಇವರಿಬ್ಬರೂ ಪ್ರತ್ಯೇಕವಾಗೇ ಇರಬೇಕು. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಚರ್ಚ್ ಮತ್ತ ರಾಜಕಾರಣ ಬ್ಯಾರೆ ಬ್ಯಾರೇನೇ ಅದಾವು. ಚರ್ಚ್ ಯಾವತ್ತೂ ಆಡಳಿತದಾಗ ಮೂಗು ತೂರಿಸಿಲ್ಲ. ಇದನ್ನೇ ಫ್ರೆಂಚ್ ರಾಜಕೀಯ ತತ್ವಜ್ಞಾನಿ ಮಾಂಟೆಸ್ಕೋ, 1748ರಾಗ ಬರೆದ ತನ್ನ ಪುಸ್ತಕ `ಡಾಕ್ಟ್ರಿನ್ ಆಫ್ ಸೆಪರೇಷನ್’ನಲ್ಲಿ ವಿವರಿಸಿದ್ದು. ಅವನ ಅಧಿಕಾರಗಳ ಪ್ರತ್ಯೇಕತೆ ಕುರಿತ ಚಿಂತನೆ, ಬಹಳೇ ಮಹತ್ವದ್ದದ. ಇದು ಇಂದು ಎಲ್ಲದಾ? ನಮ್ಮ ಸಂವಿಧಾನದಾಗ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಒಂದಕ್ಕೊಂದು ಪೂರಕವಾಗಿ ಬದ್ಧತೆಯಲ್ಲಿ ಕೆಲಸ ಮಾಡಬೇಕೆನ್ನೋ ಆಶಯ ಇದೆ. ಅಕಸ್ಮಾತ್ ಶಾಸಕಾಂಗ ತಪ್ಪು ಹಾದಿಯಲ್ಲಿದ್ದರೆ, ಕಾರ್ಯಾಂಗ ಎಚ್ಚೆತ್ತುಕೊಳ್ಳಬೇಕು. ಎರಡೂ ಹಾದಿ ತಪ್ಪಿದರೆ ನ್ಯಾಯಾಂಗ ʼನ್ಯಾಯ’ದ ಪರವಾಗಿ ನಿಲ್ಲಬೇಕದಾ. ಆದರೆ ಇವತ್ತು ಶಾಸಕಾಂಗ, ಕಾರ್ಯಾಂಗ ಎರಡೂ ಕುರುಡಾಗಿರುವಾಗ, ಮಾಧ್ಯಮ ರಂಗ ಕೂಡ ಮಾರಿಕೊಳ್ತಿರುವಾಗ, ನ್ಯಾಯಾಂಗ ಸಹಿತ ಒತ್ತಡದಾಗಿದೆ.

ಸಂದರ್ಶನದ ಎರಡನೇ ಭಾಗಕ್ಕಾಗಿ ನಿರೀಕ್ಷಿಸಿ….!

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧರ್ಮಸ್ಥಳ | 20 ವರ್ಷಗಳ ಅಸಹಜ ಸಾವು ಪ್ರಕರಣ; ತನಿಖೆ ತೀವ್ರಗೊಳಿಸಲು ಸಮಾನ ಮನಸ್ಕರ ಆಗ್ರಹ

ಬೆಂಗಳೂರಿನ ಪ್ರಮುಖ ಸಮಾನ ಮನಸ್ಕ ಸಂಘಟನೆಗಳು ಗುರುವಾರ ಸಭೆ ಸೇರಿ ಧರ್ಮಸ್ಥಳ...

ಬ್ರಹ್ಮಾವರ | ಮಹೇಶ್ ಶೆಟ್ಟಿ ತಿಮರೋಡಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ಅವಹೇಳನಾಕಾರಿ ಹೇಳಿಕೆ...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಒಳಮೀಸಲಾತಿ | ಅಲೆಮಾರಿ ಸಮುದಾಯಗಳಿಗೆ ಸರ್ಕಾರದಿಂದ ನ್ಯಾಯ ಸಿಗಲಿ: ಬರಗೂರು ರಾಮಚಂದ್ರಪ್ಪ

ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಒಳಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಗಳಿಗೆ ನ್ಯಾಯ ಸಿಗಬೇಕು ಎಂದು...

Download Eedina App Android / iOS

X