ಹೆಚ್ಚಿನ ಬಡ್ಡಿಯ ಆಮಿಷವೊಡ್ಡಿ ಹಣ ಹೂಡಿಕೆ ಮಾಡಿಸಿಕೊಂಡು ಜನರಿಗೆ ಮೋಸ ಮಾಡಿದ ದರ್ವೇಶ್ ಗ್ರೂಪ್ ಕಂಪನಿಯ ಮಾಲೀಕ ಮಹ್ಮದ್ ಹುಸೇನ್ ಸುಜ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ಹಣ ಹೂಡಿಕೆ ಮಾಡಿರುವವರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿ ಅಂಬೇಡ್ಕರ್ ಸೇನೆ ರಾಯಚೂರು ಜಿಲ್ಲಾ ಘಟಕದಿಂದ ನಗರದ ರಿಮ್ಸ್ ಕಚೇರಿಯ ದರ್ವೇಶ ಗ್ರೂಪ್ ಕಂಪನಿ ಎದುರು ಪ್ರತಿಭಟನೆ ನಡೆಸಲಾಯಿತು.
“ದರ್ವೇಶ್ ಕಂಪೆನಿಯಲ್ಲಿ ಸಾವಿರಾರು ಜನರು ಸಾಲ ಮಾಡಿ, ಆಭರಣಗಳನ್ನು ಮಾರಾಟ ಮಾಡಿ, ಹೆಚ್ಚಿನ ಬಡ್ಡಿ ಆಸೆಗೆ ಹಣ ಹೂಡಿಕೆ ಮಾಡಿದ್ದಾರೆ. ಶೇ.12 ರಿಂದ 15 ರಷ್ಟು ಬಡ್ಡಿ ನೀಡುವುದಾಗಿ ಸಾರ್ವಜನಿಕರನ್ನು ನಂಬಿಸಿ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿಕೊಂಡು ಕಂಪನಿಯ ಮಾಲೀಕ ಓಡಿ ಹೋಗಿದ್ದಾನೆ” ಎಂದು ಪ್ರತಿಭಟನಾಕಾರರು ಆರೋಪಿಸಿದರು.
“ದರ್ವೇಶ್ ಗ್ರೂಪ್ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿಸಿದ ಏಜೆಂಟರ್ ಕೂಡ ಪರಾರಿಯಾಗಿದ್ದಾರೆ. ಹಣ ಹೂಡಿಕೆ ಮಾಡಿದ ಸಾರ್ವಜನಿಕರು ದೂರು ನೀಡಲು ಹೋದರೆ ಬೇದರಿಕೆ ಹಾಕುವುದರ ಜತೆಗೆ ಹಣ ಕೊಡುವುದಿಲ್ಲವೆಂದು ಹೆದರಿಸುತ್ತಿದ್ದಾರೆ. ಇದರಿಂದಾಗಿ ಹೂಡಿಕೆ ಮಾಡಿದವರು ದೂರು ನೀಡಲು ಹಿಂಜರಿಯುತ್ತಿದ್ದಾರೆ” ಎಂದು ಪ್ರತಿಭಟನಾಕಾರರು ದೂರಿದರು.
ಸ್ಥಳಕ್ಕೆ ಡಿವೈಎಸ್‌ಪಿ ಭೇಟಿ ನೀಡಿ, “ದರ್ವೇಶ್ ಗ್ರೂಪ್ ಕಂಪನಿಯಲ್ಲಿ ಹೂಡಿಕೆ ಮಾಡಿ ಹಣ ಕಳೆದುಕೊಂಡವರು ಸ್ವಯಂ ಪ್ರೇರಿತರಾಗಿ ಮುಂದೆಬಂದು ದೂರು ನೀಡಿದಲ್ಲಿ ಕಾನೂನು ಕ್ರಮ ಕೈಗೊಳ್ಳಲು ಸಾಧ್ಯ. ಹಣ ಕಳೆದುಕೊಂಡವರು ದೂರು ನೀಡಿದರೆ ಆರೋಪಿಯನ್ನು ಬಂಧಿಸಲಾಗುವುದು” ಎಂದು ಭರವಸೆ ನೀಡಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಎಫ್‌ಪಿಒಗಳೊಂದಿಗೆ ಸೃಜನಾತ್ಮಕ ಹೆಜ್ಜೆಯನ್ನಿಡಲು ರೈತರಿಗೆ ಕರೆ
ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಪಟ್ಟಿ, ಮಹೇಶ ಕುಮಾರ, ಈ ಕುಮಾರಸ್ವಾಮಿ, ಕೆ ಸಂತೋಷ, ಚಂದ್ರಶೇಖರ, ಗಂಗಾಧರ ಇದ್ದರು.