ದೆಹಲಿ ಗಲಭೆಗಳ ಪಿತೂರಿ ಪ್ರಕರಣಗಳ ಆರೋಪಿಯಾಗಿರುವ ಜೆಎನ್‌ಯು ಮಾಜಿ ವಿದ್ಯಾರ್ಥಿ ಉಮರ್ ಖಲೀದ್ ಜಾಮೀನು ಅರ್ಜಿ ವಿಚಾರಣೆಯಿಂದ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಅಮಿತ್ ವರ್ಮಾ ಹಿಂದೆ ಸರಿದಿದ್ದಾರೆ.
ನ್ಯಾಯಮೂರ್ತಿಗಳು ವಿಚಾರಣೆಯಿಂದ ಹಿಂದೆ ಸರಿದ ಪರಿಣಾಮ ಉಮರ್ ಖಲೀದ್ ಜಾಮೀನು ಅರ್ಜಿಯನ್ನು ಜುಲೈ 24ರಂದು ಬೇರೊಂದು ಪೀಠ ವಿಚಾರಣೆ ನಡೆಸಲಿದೆ. ಉಮರ್ ಅವರ ಜಾಮೀನು ಅರ್ಜಿಯನ್ನು ಇಂದು ನ್ಯಾಯಮೂರ್ತಿಗಳಾದ ಪ್ರತಿಭಾ ಎಂ ಸಿಂಗ್ ಹಾಗೂ ಅಮಿತ್ ಶರ್ಮಾ ಅವರಿದ್ದ ಪೀಠ ವಿಚಾರಣೆ ನಡೆಸಬೇಕಿತ್ತು.
ಖಾಲಿದ್ ಅವರನ್ನು ಸೆಪ್ಟೆಂಬರ್ 2020 ರಲ್ಲಿ ಕ್ರಿಮಿನಲ್ ಪಿತೂರಿ, ಗಲಭೆ, ಕಾನೂನುಬಾಹಿರ ಸಭೆ ಮತ್ತು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ) ಅಡಿಯಲ್ಲಿ ಬಂಧಿಸಲಾಯಿತು.
ಅಂದಿನಿಂದ ಜೈಲಿನಲ್ಲಿರುವ ಅವರು ಸಲ್ಲಿಸಿರುವ ಎರಡನೇ ಸುತ್ತಿನ ಜಾಮೀನು ಅರ್ಜಿ ಇದಾಗಿದೆ. ಖಾಲಿದ್‌ಗೆ ಎರಡು ಬಾರಿ ವಿಚಾರಣಾ ನ್ಯಾಯಾಲಯ ಮತ್ತು ಒಂದು ಬಾರಿ ಹೈಕೋರ್ಟ್ ಜಾಮೀನು ನಿರಾಕರಿಸಿವೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಿಜೆಪಿಯ ‘ಭಗವಂತ’ನಿಗೇ ಎಚ್ಚರಿಕೆ ಕೊಟ್ಟರೆ ಭಾಗವತ್?
ವಿಚಾರಣಾ ನ್ಯಾಯಾಲಯವು ಮೊದಲು ಮಾರ್ಚ್ 2022ರಲ್ಲಿ ಅವರಿಗೆ ಜಾಮೀನು ನಿರಾಕರಿಸಿತು. ನಂತರ ಅವರು ಹೈಕೋರ್ಟ್ ಅನ್ನು ಸಂಪರ್ಕಿಸಿದರು. ಆದರೆ ಹೈಕೋರ್ಟ್ ಅಕ್ಟೋಬರ್ 2022ರಲ್ಲಿ ಜಾಮೀನು ನಿರಾಕರಿಸಿದ ನಂತರ ಖಲೀದ್ ಅವರು ಸುಪ್ರೀಂ ಕೋರ್ಟ್ ಮೊರೆ ಹೋದರು.
ಮೇ 2023 ರಲ್ಲಿ, ಸುಪ್ರೀಂ ಕೋರ್ಟ್ ದೆಹಲಿ ಪೊಲೀಸರ ಪ್ರತಿಕ್ರಿಯೆ ಕೇಳಿತು. ನಂತರ ಖಾಲಿದ್ ಅವರ ಮನವಿಯನ್ನು 14 ಬಾರಿ ಮುಂದೂಡಲಾಯಿತು.
ನ್ಯಾಯಮೂರ್ತಿಗಳಾದ ಬೇಲಾ ಎಂ ತ್ರಿವೇದಿ ಮತ್ತು ಪಂಕಜ್ ಮಿತ್ತಲ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠ ಫೆಬ್ರವರಿ 14 ರಂದು ಪ್ರಕರಣದ ವಿಚಾರಣೆ ನಡೆಸಬೇಕಿತ್ತು. ಆದರೆ ಖಾಲಿದ್ ಪರ ವಕೀಲರಾದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಜಾಮೀನು ಅರ್ಜಿಯನ್ನು ಹಿಂತೆಗೆದುಕೊಳ್ಳುವುದಾಗಿ ನ್ಯಾಯಾಲಯಕ್ಕೆ ತಿಳಿಸಿದರು.