ಸರ್ಕಾರಿ ಬಸ್ ಮತ್ತು ಖಾಸಗಿ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಮೂವರು ಸಾವನ್ನಪ್ಪಿ ಸುಮಾರು 49 ಪ್ರಯಾಣಿಕರು ಗಾಯಗೊಂಡಿರುವ ಘಟನೆ ದೆಹಲಿ-ಬರೇಲಿ ಹೆದ್ದಾರಿಯ ಮಿಲಾಕ್ ಪ್ರದೇಶದಲ್ಲಿ ಸೋಮವಾರ ಮುಂಜಾನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದೆಹಲಿ-ಬರೇಲಿ ಹೆದ್ದಾರಿಯು ಕಾವಡ್ ಯಾತ್ರೆ ಮಾರ್ಗವಾಗಿದೆ ಎಂದು ವರದಿಯಾಗಿದೆ.
ಖಾಸಗಿ ಬಸ್ ಹರಿದ್ವಾರದಿಂದ ಶ್ರಾವಸ್ತಿ ಜಿಲ್ಲೆಗೆ ಸಾಗುತ್ತಿದ್ದರೆ, ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಯುಪಿಎಸ್‌ಆರ್‌ಟಿಸಿ) ಬಸ್ ಬರೇಲಿಯಿಂದ ದೆಹಲಿಗೆ ಸಾಗುತ್ತಿತ್ತು. ಎರಡೂ ಬಸ್‌ಗಳು ಮುಖಾಮುಖಿ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೆಹಲಿ-ಬರೇಲಿ ಹೆದ್ದಾರಿ ಅಪಘಾತದ ಬಗ್ಗೆ ಮಾಹಿತಿ ಪಡೆದ ಬೆನ್ನಲ್ಲೇ ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ಜೋಗಿಂದರ್ ಸಿಂಗ್ ಮತ್ತು ರಾಮ್‌ಪುರ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ವಿದ್ಯಾಸಾಗರ್ ಮಿಶ್ರಾ ಅವರು ಸ್ಥಳಕ್ಕೆ ಧಾವಿಸಿದ್ದಾರೆ.
ಇದನ್ನು ಓದಿದ್ದೀರಾ? ಕೋಲಾರ | ಬಸ್ ಅಪಘಾತ; ಬೆಂಗಳೂರಿಂದ ತಿರುಪತಿಗೆ ಹೊರಟ್ಟಿದ್ದವರು ದಾರುಣ ಸಾವು
“ಯುಪಿಎಸ್‌ಆರ್‌ಟಿಸಿ ಬಸ್ ಮತ್ತು ಖಾಸಗಿ ಬಸ್ ಎನ್‌ಎಚ್-24 ನಲ್ಲಿ ಮುಂಜಾನೆ 4 ಗಂಟೆ ಸುಮಾರಿಗೆ ಡಿಕ್ಕಿ ಹೊಡೆದಿದ್ದು, ಬಸ್ ಚಾಲಕ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ. ಸುಮಾರು 49 ಮಂದಿ ಗಾಯಗೊಂಡಿದ್ದಾರೆ” ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಜೋಗಿಂದರ್ ಸಿಂಗ್ ತಿಳಿಸಿದ್ದಾರೆ.
ಮಿಲಾಕ್‌ನಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಗಾಯಾಳುಗಳನ್ನು ದಾಖಲಿಸಲಾಗಿದ್ದು, ಒಂಬತ್ತು ಜನರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿದರು.
ಖಾಸಗಿ ಬಸ್ ತಪ್ಪು ದಾರಿಯಲ್ಲಿ ಸಾಗುತ್ತಿತ್ತು, ಇದರಿಂದಾಗಿ ಮುಖಾಮುಖಿ ಡಿಕ್ಕಿಯಾಗಿದೆ ಎಂದು ಜೋಗಿಂದರ್ ಸಿಂಗ್ ಮಾಹಿತಿ ನೀಡಿದ್ದಾರೆ.
ಮೃತ ಚಾಲಕ ಯುಪಿ ರೋಡ್‌ವೇಸ್ ಬಸ್‌ನವನಾಗಿರಬಹುದು. ಇನ್ನೂ ಮೃತರ ಗುರುತು ಪತ್ತೆಯಾಗಿಲ್ಲ ಎಂದು ಹೇಳಿದರು.