ನೀಟ್ ಪ್ರಕರಣದಲ್ಲಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತಮ್ಮನ್ನು ಹೊರತುಪಡಿಸಿ ಎಲ್ಲರನ್ನೂ ದೂಷಿಸಿದ್ದಾರೆ ಎಂದು ಸಂಸದ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ದೂರಿದ್ದಾರೆ.
ಸೋಮವಾರ ಸಂಸತ್ತಿನಲ್ಲಿ ಮುಂಗಾರು ಅಧಿವೇಶನ ಪ್ರಾರಂಭವಾಗುತ್ತಿದ್ದಂತೆ, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
“ನೀಟ್ ಮಾತ್ರವಲ್ಲ ನಮ್ಮ ಪರೀಕ್ಷಾ ವ್ಯವಸ್ಥೆಯಲ್ಲಿಯೇ ಬಹಳ ಗಂಭೀರವಾದ ಸಮಸ್ಯೆಯಿದೆ ಎಂಬುವುದು ಇಡೀ ದೇಶಕ್ಕೆ ಸ್ಪಷ್ಟವಾಗಿದೆ. ಸಚಿವರು [ಧರ್ಮೇಂದ್ರ ಪ್ರಧಾನ್] ತಮ್ಮನ್ನು ಹೊರತುಪಡಿಸಿ ಎಲ್ಲರನ್ನೂ ದೂಷಿಸಿದ್ದಾರೆ. ಇಲ್ಲಿ ಏನು ನಡೆಯುತ್ತಿದೆ ಎಂಬುದರ ಪ್ರಾಥಮಿಕ ವಿಚಾರವನ್ನೂ ಕೂಡ ಅವರು ಅರ್ಥಮಾಡಿಕೊಳ್ಳುತ್ತಿದ್ದಾರೆ ಅನಿಸುವುದಿಲ್ಲ” ಎಂದು ಹೇಳಿದರು.
“ನಮ್ಮ ದೇಶದ ಲಕ್ಷಾಂತರ ವಿದ್ಯಾರ್ಥಿಗಳು ಭಾರತೀಯ ಪರೀಕ್ಷಾ ವ್ಯವಸ್ಥೆಯು ಮೋಸದಿಂದ ಕೂಡಿದೆ ಎಂದು ನಂಬಿದ್ದಾರೆ. ನೀವು ಶ್ರೀಮಂತರಾಗಿದ್ದರೆ ಮತ್ತು ನಿಮ್ಮ ಬಳಿ ಹಣವಿದ್ದರೆ, ನೀವು ಭಾರತೀಯ ಪರೀಕ್ಷಾ ವ್ಯವಸ್ಥೆಯನ್ನು ಖರೀದಿಸಬಹುದು ಎಂದು ಲಕ್ಷಾಂತರ ಜನರು ನಂಬುತ್ತಾರೆ. ಪ್ರತಿಪಕ್ಷಗಳು ಹೊಂದಿರುವುದು ಕೂಡ ಅದೇ ಭಾವನೆಯಾಗಿದೆ” ಎಂದು ಹೇಳಿದ ರಾಹುಲ್ ಗಾಂಧಿ ಸಂಸತ್ತಿನಲ್ಲಿ ನೀಟ್ ವಿಚಾರದಲ್ಲಿ ಪ್ರತ್ಯೇಕ ಒಂದು ದಿನದ ಚರ್ಚೆಗೆ ಒತ್ತಾಯಿಸಿದರು.
ಇನ್ನು ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರವನ್ನು ಟೀಕಿಸಿದ ಎಸ್‌ಪಿ ನಾಯಕ, ಸಂಸದ ಅಖಿಲೇಶ್ ಯಾದವ್, “ಈ ಸರ್ಕಾರವು ಪೇಪರ್ ಸೋರಿಕೆಯ ದಾಖಲೆಯನ್ನು ಮಾಡುತ್ತದೆ. ಕೆಲವು ಕೇಂದ್ರಗಳಲ್ಲಿ 2 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಸಚಿವರು (ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್) ಇರುವವರೆಗೂ ವಿದ್ಯಾರ್ಥಿಗಳಿಗೆ ನ್ಯಾಯ ಸಿಗುವುದಿಲ್ಲ” ಎಂದು ಹೇಳಿದರು.
ಇದನ್ನು ಓದಿದ್ದೀರಾ? ನೀಟ್ ವಿವಾದ | ದೊಡ್ಡ ಪ್ರಮಾಣದಲ್ಲಿ ಅಕ್ರಮವಾಗಿದ್ದರೆ ಮಾತ್ರ ಮರು ಪರೀಕ್ಷೆ: ಸುಪ್ರೀಂ ಕೋರ್ಟ್
ರಾಹುಲ್ ಗಾಂಧಿ ಆರೋಪಕ್ಕೆ ಪ್ರತಿಕ್ರಿಯಿಸಿರುವ ಶಿಕ್ಷಣ ಸಚಿವ ಪ್ರಧಾನ್, ”ತಮ್ಮ ಕಣ್ಗಾವಲಿನಲ್ಲಿ ಯಾವುದೇ ಪೇಪರ್ ಸೋರಿಕೆಯಾಗಿಲ್ಲ” ಎಂದು ಹೇಳಿದರು. “ಕಳೆದ ಏಳು ವರ್ಷಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯ ಯಾವುದೇ ಪುರಾವೆಗಳು ಕಂಡುಬಂದಿಲ್ಲ. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯಲ್ಲಿದೆ. ಎನ್‌ಟಿಎ 240ಕ್ಕೂ ಹೆಚ್ಚು ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಿದೆ ಎಂದು ನಾನು ಸಂಪೂರ್ಣ ಜವಾಬ್ದಾರಿಯಿಂದ ಹೇಳಬಲ್ಲೆ” ಎಂದಿದ್ದಾರೆ.
ಇನ್ನು ಎಸ್‌ಪಿ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿದ ಧರ್ಮೇಂದ್ರ ಪ್ರಧಾನ್, “ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಪರೀಕ್ಷೆಯ ಫಲಿತಾಂಶಗಳನ್ನು ಸಾರ್ವಜನಿಕಗೊಳಿಸಲಾಗಿದೆ. ನಾನು ಈ ವಿಚಾರದಲ್ಲಿ ರಾಜಕೀಯ ಮಾಡಲು ಬಯಸುವುದಿಲ್ಲ, ಆದರೆ ಅಖಿಲೇಶ್ ಯಾದವ್ ಅವರು ಉಸ್ತುವಾರಿ ವಹಿಸಿದ್ದಾಗ ಎಷ್ಟು ಪೇಪರ್ ಸೋರಿಕೆಯಾಗಿದೆ ಎಂಬ ಪಟ್ಟಿ ನನ್ನ ಬಳಿ ಇದೆ” ಎಂದು ಹೇಳಿದರು.
The Education Minister – far removed from India’s ground reality – claims there have been no paper leaks in the last 7 years.
The unfortunate truth is that the Indian examination system is up for sale to the rich, causing millions of students to suffer.
The issue is systemic… pic.twitter.com/PJpdjKK3jn
— Rahul Gandhi (@RahulGandhi) July 22, 2024