ಕರ್ನಾಟಕದ ಜನತೆಯ ಪರಸ್ಪರ ಪ್ರೀತಿ, ಕೂಡಿ ಬಾಳುವ ಸಂಸ್ಕೃತಿ ನನ್ನ ಮೇಲೆ ಗಾಢವಾದ ಪರಿಣಾಮ ಬೀರಿದೆ. ಧರ್ಮ, ಸಂಸ್ಕೃತಿ, ಭಾಷೆ ಹಾಗೂ ಆಚಾರಣೆಯಲ್ಲಿ ಭಿನ್ನವಿದ್ದರೂ ಏಕತೆ ಇದೆ ಎಂದು ಎಫ್‌ಡಿಸಿಎ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರೊ. ಮೂಹಮ್ಮದ್ ಸಲೀಮ್ ಇಂಜಿನೀಯರ್ ಹೇಳಿದರು.
ಬೀದರ ನಗರದಲ್ಲಿ ಭಾನುವಾರ ಜಮಾಅತೆ ಇಸ್ಲಾಮಿ ಹಿಂದ್ ಹಾಗೂ ಸದ್ಭಾವನಾ ಮಂಚ್ ಹಮ್ಮಿಕೊಂಡಿದ್ದ ಸದ್ಭಾವನಾ ಸೌಹಾರ್ದ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ʼಇಂದಿನ ಸಮಾರಂಭ ತಮ್ಮ ಏಕತೆಯ ಪ್ರಾಯೋಗಿಕ ಉದಾರಹಣೆ. ವೈವಿಧ್ಯತೆ ನಮ್ಮ ದೇಶದ ವೈಶಿಷ್ಟತೆ. ಅದನ್ನು ಕಾಪಾಡುವುದು, ಸಂರಕ್ಷಿಸುವುದು, ಬೆಳೆಸುವುದು ಮತ್ತು ಆಚರಿಸುವುದು ಅವಶ್ಯಕವಾಗಿದೆʼ ಎಂದರು.
ʼಭಾರತದ ಸಂವಿಧಾನ ಪೀಠಿಕೆಯಲ್ಲಿ ಪ್ರಸ್ತಾಪಿಸಿರುವ ಸಮಾನತೆ, ಸ್ವಾತಂತ್ರ್ಯ, ನ್ಯಾಯ ಮತ್ತು ಭಾತೃತ್ವದ ತತ್ವಗಳು ಶ್ರೇಷ್ಠವಾಗಿದ್ದು, ಅವುಗಳ ಅನುಸರಣೆ ಚಾಚೂ ತಪ್ಪದೇ ಮಾಡಿದರೆ ನಮ್ಮ ದೇಶ ಜಗತ್ತಿಗೆ ಮಾದರಿಯಾಗಬಲ್ಲದು. ಧರ್ಮ ಅಶಾಂತಿಗೆ ಕಾರಣವಲ್ಲ, ಧಾರ್ಮಿಕ ಜ್ಞಾನದ ಕೊರತೆಯೇ ಅಶಾಂತಿಗೆ ಕಾರಣ. ಧರ್ಮ ಶಾಂತಿ, ಸಹೋದರತೆ ಹಾಗೂ ಮಾನವತೆಯನ್ನು ಬೋಧಿಸುತ್ತದೆ. ಮೇಲು-ಕೀಳು, ಬಡವ-ಶ್ರೀಮಂತ ಶ್ರೇಷ್ಠ-ಕನಿಷ್ಠ ಭೇದಭಾವ ಹೋಗಲಾಡಿಸಿ, ಮಾನವ ಕುಲ ಒಂದೇ ತಾಯಿಯ ಮಕ್ಕಳು ಎಂಬ ಸಹೋದರತೆಯ ಭಾವನೆ ಬೆಳೆಸುತ್ತದೆʼ ಎಂದು ಪ್ರತಿಪಾದಿಸಿದರು.
ʼಪ್ರತಿಯೊಬ್ಬರು ತಮ್ಮ ಧರ್ಮದ ಪಾಲನೆ ಜೊತೆಗೆ ಬೇರೆಯವರನ್ನು ಗೌರವದಿಂದ ಕಾಣಬೇಕು. ನಮ್ಮ ನಡುವೆ ಒಡಕು ಮೂಡಿಸುವಲ್ಲಿ ಕೆಲವು ಮಾಧ್ಯಮ ಮತ್ತು ರಾಜಕೀಯ ವ್ಯಕ್ತಿಗಳ ಪಾತ್ರವಿದೆ. ಇವು ನಮ್ಮ ಧರ್ಮ, ಆಚಾರ-ವಿಚಾರ, ಪರಂಪರೆಯ ತಪ್ಪು ಪರಿಚಯ ಮಾಡುತ್ತಿವೆ. ಹೀಗಾಗಿ ಪರಸ್ಪರ, ಅಪನಂಬಿಕೆ ಹೆಚ್ಚುತ್ತಿದೆ. ಇದನ್ನು ತಡೆಯಲು ನಾವೆಲ್ಲರೂ ಒಗ್ಗೂಡಿ ಶ್ರಮಿಸಬೇಕುʼ ಎಂದರು.
ʼಭೌತಿಕ ಪ್ರಗತಿಯೊಂದಿಗೆ ನೈತಿಕ ಮೌಲ್ಯದ ತಳಹದಿಯ ಸಮಾಜ ನಿರ್ಮಾಣ ನಮ್ಮ ಗುರಿಯಾಗಬೇಕು. ಇಂದು ಸಮಾಜದ ಒಡಕು ಮತ್ತು ಅಶಾಂತಿ ನಮ್ಮ ದೇಶದ ಬಹುದೊಡ್ಡ ಸಾಮಾಜಿಕ ಸಮಸ್ಯೆಯಾಗಿದೆ. ಇಂತಹ ಸಮಾಜಘಾತುಕ ಶಕ್ತಿಗಳ ವಿರುದ್ಧ ನಾವು ಸಂಘಟಿತರಾಗಿ ವಿರೋಧಿಸಬೇಕುʼ ಎಂದರು.
ಬೆಂಗಳೂರಿನ ಚನ್ನಬಸವೇಶ್ವರ ಜ್ಞಾನಪೀಠ ಬಸವಗಂಗೋತ್ರಿ ಕುಂಬಳಗೋಳದ ಪೀಠಾಧ್ಯಕ್ಷರಾದ ಜಗದ್ಗುರು ಚನ್ನಬಸವಾನಂದ ಸ್ವಾಮೀಜಿ ಮಾತನಾಡಿ, ʼಭಾರತ ಸ್ವಾತಂತ್ರಕ್ಕಾಗಿ ಎಲ್ಲ ಧರ್ಮದ ಜನ ಒಗ್ಗಟ್ಟಾಗಿ ಹೋರಾಡಿದ್ದಾರೆ. ಅದರಂತೆ ಈ ಭಾರತ ನಮ್ಮೆಲ್ಲರ ದೇಶ, ಒಬ್ಬರ ದೇಶವಾಗಲು ಹೇಗೆ ಸಾಧ್ಯವಿಲ್ಲ. ಭಾರತದ ಸಂವಿಧಾನದಲ್ಲಿ ‘ಭಾರತೀಯರಾದ ನಾವು’ ಎಂದು ಹೇಳಿರುವಂತೆ ನಾವೆಲ್ಲರೂ ಒಂದಾಗಿ ಬಾಳಬೇಕಾಗಿದೆ. ಸಮಾಜದ ಎಲ್ಲ ಸಮುದಾಯದ ಜನರು ಒಗ್ಗೂಡಿದಾಗ ರಾಷ್ಟ್ರ ಸದೃಢವಾಗಿರಲು ಸಾಧ್ಯʼ ಎಂದು ಹೇಳಿದರು.
ಕೋಮುವಾದ ಬೆಳೆಯಲು ಮಾಧ್ಯಮ ಪಾತ್ರ ಮುಖ್ಯ :
ʼಇಂದಿನ ಮುಖ್ಯವಾಹಿನಿಯ ಮಾಧ್ಯಮಗಳು ಒಂದು ಸಣ್ಣ ಕೋಮುವಾದ ಘಟನೆಯನ್ನು ರಾಷ್ಟ್ರದ ಪ್ರಮುಖ ಸುದ್ದಿಯನ್ನಾಗಿ ಮಾಡುತ್ತವೆ. ಆದರೆ, ಮಹತ್ವದ ಧಾರ್ಮಿಕ ವಿಷಯಗಳ ಬಗ್ಗೆ ಚರ್ಚೆ, ಸುದ್ದಿ ಮಾಡಲು ಮುಂದೆ ಬರುವುದಿಲ್ಲ. ದೇಶದಲ್ಲಿ ಕೋಮುವಾದ ಬೆಳೆಯಲು ಮಾಧ್ಯಮ ಪಾತ್ರ ಮುಖ್ಯವಾಗಿದೆ. ಇಂದು ಮಾಧ್ಯಮ ಪತ್ರಿಕಾ ಧರ್ಮ ಮರೆತು, ಪತ್ರಿಕೋದ್ಯಮವಾಗಿದೆʼ ಎಂದು ಬೇಸರ ವ್ಯಕ್ತಪಡಿಸಿದರು.
ಜಮಾತೆ ಇಸ್ಲಾಮಿ ಹಿಂದ್ ಕರ್ನಾಟಕ ರಾಜ್ಯಾಧ್ಯಕ್ಷ ಡಾ.ಮುಹಮ್ಮದ ಸಾದ ಬೆಳಗಾವಿ ಪ್ರಾಸ್ತಾವಿಕವಾಗಿ ಮಾತನಾಡಿ, ʼಸೌಹಾರ್ದ ಭಾವನೆ ಜನರಲ್ಲಿ ಬೆಳೆಸುವಲ್ಲಿ ಜಮಾಅತೆ ಮಾಡುತ್ತಿರುವ ಪ್ರಯತ್ನದ ಪರಿಚಯ ಮಾಡಿಕೊಟ್ಟರು. ಈ ನಿಟ್ಟಿನಲ್ಲಿ ಶಾಂತಿ ಪ್ರಕಾಶನದ ಕೆಲಸ ಶ್ಲಾಘನೀಯʼ ಎಂದು ಕೊಂಡಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಬಸವಕಲ್ಯಾಣ ಅನುಭವ ಮಂಟಪ ಸಂಚಾಲಕರಾದ ಶಿವಾನಂದ ಮಹಾಸ್ವಾಮಿಗಳು, ಬ್ರಹ್ಮಕುಮಾರ ಶಿಲ್ಪಾ ದೀದಿ, ಮೌಲಾನಾ ಮೊನಿಸ ಕಿರ್ಮಾನಿ, ಶ್ರೀಜ್ಞಾನಿ ದರ್ಬಾರಾಸಿಂಗ್ ಹಾಗೂ ವಿಮಲಾ ಚಾಲಕ್ ಮಾತನಾಡಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಜೆಜೆಎಂ ಕಾಮಗಾರಿ ಅಪೂರ್ಣ: ಕೆಸರು ಗದ್ದೆಯಂತಾದ ರಸ್ತೆಗಳು
ಸಮಾರಂಭದಲ್ಲಿ ಬಸವ ಮಹಾಮನೆಯ ಜಗದ್ಗುರು ಸಿದ್ದರಾಮೇಶ್ವರ ಮಹಾಸ್ವಾಮಿಗಳು ಹಾಗೂ ಜಮಾತೆ ಇಸ್ಲಾಮಿ ಹಿಂದ್‌ನ ಬೀದರ ಸಂಚಾಲಕ ಇಕ್ಬಾಲ್ ಗಾಜಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಗಣ್ಯರು ಉಪಸ್ಥಿತರಿದ್ದರು. ಜಮಾಅತೆ ಇಸ್ಲಾಮಿ ಸಂಘಟನೆಯ ಮಹಮ್ಮದ್ ಮೋಅಜ್ಜಮ್ ಸ್ವಾಗತಿಸಿದರು. ಮುಹಮ್ಮದ್ ನಿಝಾಮುದ್ದೀನ್ ನಿರೂಪಿಸಿದರು. ಸದ್ಭಾವನಾ ಮಂಚ್ ಜಿಲ್ಲಾ ಸಂಚಾಲಕ ಗುರುನಾಥ ಗಡ್ಡೆ ವಂದಿಸಿದರು.