ನೆಚ್ಚಿನ ನಟನ ನೋಡಲು ಕಾದು ಕುಳಿತ ಸಂಡೂರಿನ ಅಭಿಮಾನಿಗಳಿಗೆ ನಿರಾಸೆ
ಕೂಡ್ಲಿಗಿಯಲ್ಲಿ ಕಿಚ್ಚನ ಅಭಿಮಾನಿಗಳ ಮೇಲೆ ಪೊಲೀಸರಿಂದ ಲಾಠಿ ಪ್ರಹಾರ
ವಿಜಯನಗರ ಜಿಲ್ಲೆಯ ಕೂಡ್ಲಿಗಿಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದ ನಟ ಕಿಚ್ಚ ಸುದೀಪ್ ಅವರನ್ನು ನೋಡಲು ಮುಗಿಬಿದ್ದ ಜನರ ಮೇಲೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ.
ಗುರುವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಕೂಡ್ಲಿಗಿ ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಲೋಕೇಶ್ ನಾಯಕ್ ಪರ ಸುದೀಪ್ ರೋಡ್ ಶೋ ನಡೆಸಿದ್ದಾರೆ. ಈ ವೇಳೆ ಸುದೀಪ್ ಅವರನ್ನು ಕಣ್ತುಂಬಿಕೊಳ್ಳುವ ಸಲುವಾಗಿ ಸಾವಿರಾರು ಅಭಿಮಾನಿಗಳು ಮುಗಿ ಬಿದ್ದಿದ್ದಾರೆ. ಜನ ದಟ್ಟಣೆ ಹೆಚ್ಚುತ್ತಲೇ ಅವಸರವಾಗಿ ರೋಡ್ ಶೋ ಮುಗಿಸಿದ ಕಿಚ್ಚ ಕಾರು ಏರಿ ಸ್ಥಳದಿಂದ ತೆರಳಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ನೂರಾರು ಅಭಿಮಾನಿಗಳು ಅವರಿದ್ದ ಕಾರನ್ನು ಸುತ್ತುವರಿದಿದ್ದಾರೆ. ಇದರಿಂದ ಕೆಲ ಕಾಲ ಸ್ಥಳದಲ್ಲಿ ನೂಕು ನುಗ್ಗಲು ಕೂಡ ಉಂಟಾಗಿದೆ. ಈ ಹಿನ್ನೆಲೆ ಜನರನ್ನು ಚದುರಿಸುವ ಸಲುವಾಗಿ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ.
ಬುಧವಾರ ಮೊಳಕಾಲ್ಮೂರು, ಜಗಳೂರು ಮತ್ತು ಸಂಡೂರು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಸುದೀಪ್ ಪ್ರಚಾರ ನಡೆಸಿದ್ದರು. ಬುಧವಾರ ತಡರಾತ್ರಿ ಸಂಡೂರಿನಲ್ಲಿ ಬಿಜೆಪಿಯ ಅಭ್ಯರ್ಥಿ ಶಿಲ್ಪಾ ಅವರ ಪರ ರೋಡ್ ಶೋ ನಡೆಸಿದ್ದ ಸುದೀಪ್ ಗುರುವಾರ ಬೆಳಗ್ಗೆ ಕೂಡ ಸಂಡೂರಿನಲ್ಲಿ ಪ್ರಚಾರ ಕೈಗೊಳ್ಳಲಿದ್ದಾರೆ ಎಂದು ಅಭಿಮಾನಿಗಳು ನೀರಿಕ್ಷಿಸಿದ್ದರು. ಆದರೆ, ಅವರು ಬೆಳಗ್ಗೆ ನೇರವಾಗಿ ಕೂಡ್ಲಿಗಿಯತ್ತ ಪ್ರಯಾಣ ಬೆಳೆಸಿದ್ದು, ತಮಗಾಗಿ ಕಾದು ಕುಳಿತಿದ್ದ ಸಂಡೂರಿನ ಅಭಿಮಾನಿಗಳನ್ನು ನಿರಾಸೆಗೊಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ವೈಯಕ್ತಿಕ ಕೆಲಸಕ್ಕೆ ಸರ್ಕಾರಿ ವಾಹನ ಬಳಕೆ: ತಾರಾ ವಿರುದ್ಧ ಪ್ರಕರಣ ದಾಖಲು
ಕೂಡ್ಲಿಗಿ ಬಳಿಕ ರಾಣೆಬೆನ್ನೂರು ತಲುಪಿದ ಸುದೀಪ್ ಅಲ್ಲಿನ ಬಿಜೆಪಿ ಅಭ್ಯರ್ಥಿ ಅರುಣ್ ಕುಮಾರ್ ಪರ ಪ್ರಚಾರ ಮಾಡಿದ್ದಾರೆ. ನಂತರ ಹಿರೇಕೆರೂರಿಗೆ ಭೇಟಿ ನೀಡಿರುವ ಕಿಚ್ಚ, ಸಚಿವ ಬಿ.ಸಿ ಪಾಟೀಲ್ ಜೊತೆಗೂಡಿ ರೋಡ್ ಶೋ ನಡೆಸಿದ್ದಾರೆ.