ಉದ್ಯೋಗ ಮತ್ತು ಬೆಲೆ ಏರಿಕೆ ಕುರಿತು ಪ್ರತಿಪಕ್ಷಗಳ ಕಠಿಣ ಪ್ರಶ್ನೆಗಳ ನಡುವೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಮೋದಿ 3.0ರ ಮೊದಲ ಕೇಂದ್ರ ಬಜೆಟ್ ಅನ್ನು ಮಂಡಿಸಲಿದ್ದಾರೆ. ಈಗಾಗಲೇ 2025ರ ಆರ್ಥಿಕ ವರ್ಷದಲ್ಲಿ ಶೇಕಡ 6.5-7 ಬೆಳವಣಿಗೆಯನ್ನು ಬಜೆಟ್ ಪೂರ್ವ ಆರ್ಥಿಕ ಸಮೀಕ್ಷೆಯು ಮುನ್ಸೂಚನೆ ನೀಡಿದೆ.
ನಿರ್ಮಲಾ ಸೀತಾರಾಮನ್ ಅವರ ಏಳನೇ ಕೇಂದ್ರ ಬಜೆಟ್ ಇದಾಗಿದ್ದು, ಹೊಸ ಉತ್ಪಾದನಾ ಸೌಲಭ್ಯಗಳಿಗೆ ತೆರಿಗೆ ಪ್ರೋತ್ಸಾಹವನ್ನು ನೀಡುವ ಸಾಧ್ಯತೆಯಿದೆ. ನಿರುದ್ಯೋಗ ಹೆಚ್ಚಳದಿಂದಾಗಿ ವಿಪಕ್ಷಗಳ ವಾಗ್ದಾಳಿಗೆ ಗುರಿಯಾಗುತ್ತಿರುವ ಕೇಂದ್ರ ಸರ್ಕಾರ ಈ ಬಾರಿಯಾದರೂ ಉದ್ಯೋಗ ಸೃಷ್ಟಿ ಕಡೆ ಹೆಚ್ಚಿನ ಗಮನ ಹರಿಸುವುದು ಅನಿವಾರ್ಯವಾಗಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿಯು ಲೋಕಸಭೆ ಚುನಾವಣೆಯಲ್ಲಿ ಸ್ವಂತವಾಗಿ ಬಹುಮತವನ್ನು ಗಳಿಸಲು ವಿಫಲವಾಗಿ, ಮಿತ್ರಪಕ್ಷಗಳ ಬೆಂಬಲದಿಂದ ಎನ್‌ಡಿಎ ಸರ್ಕಾರವನ್ನು ರಚಿಸಬೇಕಾಯಿತು. ಬಿಜೆಪಿ ಬಹುಮತವೂ ಕೂಡಾ ಲಭಿಸದಿರಲೂ ಪ್ರಮುಖ ಕಾರಣ ಜನರಲ್ಲಿ ಉದ್ಯೋಗಾವಕಾಶ ವಿಚಾರದಲ್ಲಿ ಬಿಜೆಪಿಯೊಂದಿಗಿರುವ ಅಸಮಾಧಾನವಾಗಿದೆ ಎಂದು ಹಲವಾರು ಸಮೀಕ್ಷಾ ವರದಿಗಳು ಹೇಳಿದೆ.
ಇದನ್ನು ಓದಿದ್ದೀರಾ? ಕೇಂದ್ರ ಬಜೆಟ್ | ‘ಎಕನಾಮಿಕ್ ಸರ್ವೇ’ ಗಾಳಿ ಬಂದತ್ತ ತೂರಿಕೊಳ್ಳುವ ಪ್ಲಾನ್ ಇರಬಹುದೇ?
ಈ ನಡುವೆ ಸೀತಾರಾಮನ್ ಅವರು ಮಧ್ಯಮ ವರ್ಗದವರಿಗೆ ತೆರಿಗೆ ವಿನಾಯಿತಿಯನ್ನು ಘೋಷಿಸುತ್ತಾರೆಯೇ? ಈ ಮೂಲಕ ಮಧ್ಯಮ ವರ್ಗವನ್ನು ಸೆಳೆಯುವ ಪ್ರಯತ್ನ ಮಾಡುತ್ತಾರೆಯೇ ಎಂದು ಕಾದುನೋಡಬೇಕಿದೆ.
ಚುನಾವಣಾ ಪೂರ್ವ ಮಧ್ಯಂತರ ಬಜೆಟ್‌ನಲ್ಲಿ ಚುನಾವಣೆ ಸಮೀಪವಿರುವ ಕಾರಣ ಮಧ್ಯಮ ವರ್ಗಕ್ಕೆ ತಕ್ಕುದಾದ ಬಜೆಟ್ ಇರಲಿದೆ ಎಂಬ ಭರವಸೆಯಿತ್ತು. ಆದರೆ ಕೇಂದ್ರ ಸರ್ಕಾರ ಈ ಭರವಸೆಯನ್ನು ಹುಸಿಗೊಳಿಸಿತ್ತು. ಮಧ್ಯಂತರ ಬಜೆಟ್‌ನಲ್ಲಿ ಮಧ್ಯಮ ವರ್ಗಕ್ಕೆ ಯಾವುದೇ ಲಾಭ ಉಂಟಾಗುವ ಬದಲಾವಣೆ ಘೋಷಿಸಲಾಗಿಲ್ಲ. ಇದು ಮಧ್ಯಮ ವರ್ಗದ ಜನರಲ್ಲಿ ಅಸಮಾಧಾನ ಉಂಟು ಮಾಡಿರುವುದು ಅಲ್ಲಗಳೆಯುವಂತಿಲ್ಲ.
ಕೇಂದ್ರ ಬಜೆಟ್ 2024 ಜುಲೈ 30ರಂದು ಅಂಗೀಕಾರವಾಗುವ ಸಾಧ್ಯತೆಯಿದೆ. ವಿರೋಧ ಪಕ್ಷದ ನಾಯಕರು ಈಗಾಗಲೇ ಬೆಲೆ ಏರಿಕೆ, ನಿರುದ್ಯೋಗ, ಪ್ರಮುಖ ಕ್ಷೇತ್ರಗಳಲ್ಲಿನ ಬೆಳವಣಿಗೆಯ ಕೊರತೆ ಮತ್ತು ಕೃಷಿ ಸಂಕಷ್ಟದ ಪ್ರಸ್ತಾಪ ಮಾಡಿ ಸರ್ಕಾರವನ್ನು ಮೂಲೆಗುಂಪು ಮಾಡಲು ನಿರ್ಧರಿಸಿದ್ದಾರೆ.
#WATCH | Delhi: Finance Minister Nirmala Sitharaman arrives at the Ministry of Finance
She will present the Union Budget today pic.twitter.com/ZK5q6V1aSA
— ANI (@ANI) July 23, 2024