ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಸರ್ಕಾರಿ ನೇಮಕಾತಿಗಳಲ್ಲಿ ಮೀಸಲಾತಿಯನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಕಳೆದ ವಾರದಿಂದ ನಡೆಯುತ್ತಿರುವ ಪ್ರತಿಭಟನೆಯಲ್ಲಿ 163ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, 1000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದ್ದು, ಪ್ರತಿಭಟನಾಕಾರರು ಶುಕ್ರವಾರ ನರಸಿಂಗಡಿಯ ಜೈಲಿಗೆ ನುಗ್ಗಿ ಬೆಂಕಿ ಹಚ್ಚಿದ್ದಾರೆ. ಅಲ್ಲದೇ, ಢಾಕಾದಲ್ಲಿನ ರಾಜ್ಯ ಸರ್ಕಾರ ಸುದ್ದಿವಾಹಿನಿಯ ಪ್ರಧಾನ ಕಚೇರಿಗೆ ಬೆಂಕಿ ಹಚ್ಚಿದ್ದಾರೆ. ಪ್ರಧಾನ ಕಚೇರಿಯಲ್ಲಿ ನಿಲ್ಲಿಸಿದ್ದ ಹಲವಾರು ವಾಹನಗಳನ್ನು ಸಹ ನಾಶಪಡಿಸಿದ್ದಾರೆ ಎಂದು ವರದಿಯಾಗಿದೆ.
ಈ ಪ್ರತಿಭಟನೆಗಳನ್ನು ನಿಯಂತ್ರಿಸಲು ಬಾಂಗ್ಲಾ ಸರ್ಕಾರ ದೇಶದ ಹಲವೆಡೆ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಕಡಿತಗೊಳಿಸಿದೆ. ಈ ಕಾರಣದಿಂದ ಬೇಸರಗೊಂಡ ವಿದ್ಯಾರ್ಥಿಗಳು ಢಾಕಾದಲ್ಲಿ ಕೋಲು, ದೊಣ್ಣೆ ಮತ್ತು ಕಲ್ಲುಗಳೊಂದಿಗೆ ರಸ್ತೆಗಿಳಿದು ಹೆದ್ದಾರಿಗಳನ್ನು ತಡೆದು ಪ್ರತಿಭಟಿಸುತ್ತಿದ್ದಾರೆ. ಸರ್ಕಾರಿ ಕಟ್ಟಡಗಳನ್ನು ಹಾನಿಗೊಳಿಸಿ, ಸಶಸ್ತ್ರ ಪೊಲೀಸರರೊಂದಿಗೆ ಘರ್ಷಣೆಗೆ ಇಳಿದಿದ್ದರಿಂದ ಪರಿಸ್ಥಿತಿ ಉದ್ವಿಗ್ನಗೊಂಡಿದೆ.
ಢಾಕಾ ವಿಶ್ವವಿದ್ಯಾಲಯದ ಆವರಣ ಸೇರಿದಂತೆ ವಿವಿಧೆಡೆ ಪ್ರತಿಭಟನಾನಿರತರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ರಬ್ಬರ್ ಬುಲೆಟ್ಗಳು, ಅಶ್ರುವಾಯುಗಳನ್ನೂ ಸಿಡಿಸಿದರು. ಇದರ ಪರಿಣಾಮ ಹಲವರು ಗಾಯಗೊಂಡರು.
ವಿದ್ಯಾರ್ಥಿಗಳ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಶುಕ್ರವಾರ ನರಸಿಂಗಡಿಯ ಜೈಲಿಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದ ಘಟನೆಯಿಂದಾಗಿ ಈ ವಾರ ಕನಿಷ್ಠ 50 ಸಾವುಗಳು ಸಂಭವಿಸಿವೆ ಎಂದು ಹೇಳಲಾಗಿದೆ. ಜೈಲಿಗೆ ಬೆಂಕಿ ಹಚ್ಚುವ ಮೊದಲು ನೂರಾರು ಕೈದಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. “ಜೈಲಿನಿಂದ ಕೈದಿಗಳು ಓಡಿಹೋದರು. ಪ್ರತಿಭಟನಾಕಾರರು ಜೈಲಿಗೆ ಬೆಂಕಿ ಹಚ್ಚಿದರು. ತಪ್ಪಿಸಿಕೊಂಡ ಕೈದಿಗಳ ಸಂಖ್ಯೆ ನೂರಕ್ಕಿಂತ ಜಾಸ್ತಿ ಇದೆ” ಎಂದು ಪೊಲೀಸರು ಹೇಳಿದ್ದಾರೆ.
ಬಾಂಗ್ಲಾದೇಶದ ಸರ್ಕಾರಿ ವಾಹಿನಿ ಬಿಟಿವಿಯ ಪ್ರಧಾನ ಕಚೇರಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಕಚೇರಿಯೊಳಗೆ ಹಲವರು ಸಿಕ್ಕಿಬಿದ್ದು, ತೊಂದರೆ ಅನುಭವಿಸಿದರು. ಏಕಾಏಕಿ ನೂರಾರು ಪ್ರತಿಭಟನಕಾರರು ಕಚೇರಿಯ ಆವರಣದೊಳಗೆ ನುಗ್ಗಿ ಕನಿಷ್ಠ 60ಕ್ಕೂ ಹೆಚ್ಚು ವಾಹನಗಳು ಮತ್ತು ಕಚೇರಿಯ ಕಟ್ಟಡಕ್ಕೆ ಬೆಂಕಿ ಹಚ್ಚಿದರು.
ಆರಂಭದಲ್ಲಿ ಸರ್ಕಾರಿ ಉದ್ಯೋಗದ ಕೋಟಾಗಳ ಮೇಲಿನ ಕೋಪದಿಂದ ಪ್ರಾರಂಭವಾದ ಪ್ರತಿಭಟನೆಗಳು ಪ್ರಧಾನ ಮಂತ್ರಿ ಶೇಖ್ ಹಸೀನಾ ಸರ್ಕಾರದ ವಿರುದ್ಧ ವ್ಯಾಪಕವಾದ ಚಳುವಳಿಯಾಗಿ ಮಾರ್ಪಟ್ಟಿತ್ತು. ಪ್ರತಿಭಟನೆ ತೀವ್ರ ಹಿಂಸಾಚಾರಕ್ಕೆ ತಿರುಗಿದ್ದು ಪ್ರಧಾನಿ ಶೇಖ್ ಹಸೀನಾ ಸರ್ಕಾರ ಶುಕ್ರವಾರ ಕರ್ಫ್ಯೂ ಘೋಷಣೆ ಮಾಡಿದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಾಲು ರಾಜಧಾನಿ ಸೇರಿದಂತೆ ದೇಶದಾದ್ಯಂತ ಗಡಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ಅಲ್ಲದೆ ಪರಿಸ್ಥಿತಿ ನಿಯಂತ್ರಿಸಲು ಬಿಗಿ ಬಂದೋಬಸ್ತ್ ಮಾಡುವಂತೆ ಸೂಚನೆ ನೀಡಲಾಗಿದೆ.
ಇನ್ನು ಬಾಂಗ್ಲಾದೇಶದ ಪ್ರತಿಭಟನಾಕಾರರು ಮೀಸಲಾತಿಯನ್ನು ಕೊನೆಗೊಳಿಸಬೇಕೆಂಬ ತಮ್ಮ ಬೇಡಿಕೆಯೊಂದಿಗೆ ಪಟ್ಟುಹಿಡಿದ್ದಾರೆ. ಹಿಂಸಾಚಾರದ ಹಿನ್ನೆಲೆ, ದೇಶದ ಎಲ್ಲ ಶಾಲೆಗಳು ಮತ್ತು ವಿಶ್ವವಿದ್ಯಾಲಯಗಳನ್ನು ಅನಿರ್ದಿಷ್ಟಾವಧಿಯವರೆಗೆ ಮುಚ್ಚುವಂತೆ ಶೇಖ್ ಹಸೀನಾ ಸರ್ಕಾರ ಆದೇಶಿಸಿದೆ. ಜತೆಗೆ, ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರಗೊಂಡ ಬೆನ್ನಲ್ಲೇ ಕಾನೂನು ಸಚಿವ ಅನಿಸುಲ್ ಹಕ್ ಅವರು ಗುರುವಾರ ಸುದ್ದಿಗೋಷ್ಠಿ ನಡೆಸಿದರು. “ಮೀಸಲು ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳ ಜತೆ ಮಾತುಕತೆ ನಡೆಸಲು ಸರ್ಕಾರ ನಿರ್ಧರಿಸಿದೆ. ಈ ಕಾರ್ಯಕ್ಕಾಗಿ ಸರ್ಕಾರ ನನ್ನನ್ನು ಮತ್ತು ಶಿಕ್ಷಣ ಸಚಿವ ಮೊಹಿಬುಲ್ ಹಸನ್ ಚೌಧರಿ ಅವರನ್ನು ನಿಯೋಜಿಸಿದೆ” ಎಂದು ತಿಳಿಸಿದರು.
ಈ ಮೀಸಲಾತಿ ಪ್ರತಿಭಟನೆ ಏಕೆ?
ಬಾಂಗ್ಲಾದೇಶದಲ್ಲಿ ಸ್ವಾತಂತ್ರ್ಯದ ನಂತರ ಮೀಸಲಾತಿ ವ್ಯವಸ್ಥೆ ಜಾರಿಯಲ್ಲಿದೆ. ಪ್ರಸ್ತುತ ಕೋಟಾ ವ್ಯವಸ್ಥೆ ಪ್ರಕಾರ, ಸರ್ಕಾರಿ ಉದ್ಯೋಗಗಳಲ್ಲಿನ ಶೇ.56ರಷ್ಟನ್ನು ಕಾಯ್ದಿರಿಸಲಾಗಿದೆ. ಇದರಲ್ಲಿ 1971ರ ವಿಮೋಚನಾ ಸ್ವಾತಂತ್ರ್ಯ ಯುದ್ಧದ ಹೋರಾಟಗಾರರ ಕುಟುಂಬದವರಿಗೆ ಶೇ.30, ಹಿಂದುಳಿದ ಜಿಲ್ಲೆಗಳವರಿಗೆ ಶೇ.10, ಮಹಿಳೆಯರಿಗೆ ಶೇ.10, ಜನಾಂಗೀಯ ಅಲ್ಪಸಂಖ್ಯಾತರಿಗೆ ಶೇ.5 ಹಾಗೂ ಅಂಗವಿಕಲರಿಗೆ ಶೇ.1ರಷ್ಟು ಮೀಸಲಾತಿ ಕಲ್ಪಿಸಲಾಗಿದೆ.
ಹೀಗಾಗಿ, ಬಾಂಗ್ಲಾದೇಶದಲ್ಲಿ ಸರ್ಕಾರಿ ಉದ್ಯೋಗಗಳಲ್ಲಿ 56% ಮೀಸಲಾತಿ ಇತ್ತು. 2018 ರಲ್ಲಿ, ಬಾಂಗ್ಲಾದೇಶದ ಯುವಕರು ಈ ಮೀಸಲಾತಿಯನ್ನು ವಿರೋಧಿಸಿದರು. ಹಲವಾರು ತಿಂಗಳುಗಳ ಪ್ರತಿಭಟನೆಯ ನಂತರ, ಬಾಂಗ್ಲಾದೇಶ ಸರ್ಕಾರವು ಮೀಸಲಾತಿಯನ್ನು ರದ್ದುಗೊಳಿಸಿತ್ತು. ಕಳೆದ ತಿಂಗಳು, ಜೂನ್ 5 ರಂದು, ಬಾಂಗ್ಲಾದೇಶದ ಸರ್ವೋಚ್ಚ ನ್ಯಾಯಾಲಯವು ದೇಶದಲ್ಲಿ ಹಳೆಯ ಮೀಸಲಾತಿ ವ್ಯವಸ್ಥೆಯನ್ನು ಮರು ಜಾರಿಗೊಳಿಸಲು ಆದೇಶಿಸಿತು. ಶೇಖ್ ಹಸೀನಾ ಸರ್ಕಾರವೂ ಸುಪ್ರೀಂ ಕೋರ್ಟ್‌ನ ತೀರ್ಪಿನ ವಿರುದ್ಧ ಮೇಲನವಿ ಸಲ್ಲಿಸಿತು. ಆದರೆ ಸುಪ್ರೀಂ ಕೋರ್ಟ್ ಆದೇಶವನ್ನು ಎತ್ತಿಹಿಡಿಯಿತು.
ವಿಮೋಚನಾ ಹೋರಾಟದ ಕುಟುಂಬದವರಿಗೆ ಕಲ್ಪಿಸಿರುವ ಶೇ.30ರಷ್ಟು ಮೀಸಲಾತಿಯನ್ನು ರದ್ದುಪಡಿಸಬೇಕು ಎಂಬುದು ಪ್ರತಿಭಟನಾಕಾರರ ಆಗ್ರಹವಾಗಿತ್ತು. ಈ ಬೇಡಿಕೆಗಳನ್ನು ಪ್ರಧಾನಿ ಶೇಖ್ ಹಸೀನಾ ತಿರಸ್ಕರಿಸಿದ್ದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಪ್ರತಿಭಟನೆ ಆರಂಭಿಸಿದರು. ಬಾಂಗ್ಲಾದೇಶದ ವಿಶ್ವವಿದ್ಯಾಲಯಗಳಿಂದ ಆರಂಭವಾದ ಈ ಪ್ರತಿಭಟನೆ ಈಗ ಹಿಂಸಾಚಾರಕ್ಕೆ ತಿರುಗಿದೆ. ಬಾಂಗ್ಲಾದೇಶದ ರಾಜಧಾನಿ ಢಾಕಾ ಸೇರಿದಂತೆ ದೇಶದ ಹಲವು ನಗರಗಳನ್ನು ಹಿಂಸಾಚಾರ ಆವರಿಸಿದೆ.
50 ವರ್ಷಗಳ ಹಿಂದೆ ಬಾಂಗ್ಲಾದೇಶದ ಹುಟ್ಟಿನಲ್ಲಿ ಭಾರತದ ಮೊದಲ ಮಹಿಳಾ ಪ್ರಧಾನಮಂತ್ರಿ ಇಂದಿರಾ ಗಾಂಧಿ ಅವರು ದೊಡ್ಡ ಪಾತ್ರ ವಹಿಸಿದ್ದರು. 1971ರಲ್ಲಿ ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕೂ ಮುನ್ನ ನಡೆದ ಭಾರತ-ಪಾಕಿಸ್ತಾನ ಯುದ್ಧ, ಬಾಂಗ್ಲಾದೇಶದ ‘ಮುಕ್ತಿ ವಾಹಿನಿ’ಗೆ ಭಾರತ ನೀಡಿದ ಬೆಂಬಲ ಮತ್ತು ನಂತರದ ರಾಜತಾಂತ್ರಿಕತೆ ಇಂದಿರಾ ಗಾಂಧಿಯವರ ನಾಯಕತ್ವದ ಸಾಹಸಗಾಥೆಯಾಗಿದೆ. 1971 ರ ಯುದ್ಧವು ಭಾರತಕ್ಕೆ ಕೇವಲ ಮಿಲಿಟರಿ ವಿಜಯವಾಗಿರಲಿಲ್ಲ. ಬದಲಿಗೆ, ಇದು ಒಂದು ದೊಡ್ಡ ರಾಜಕೀಯ ಮತ್ತು ರಾಜತಾಂತ್ರಿಕ ಯಶಸ್ಸು.
1947 ರಲ್ಲಿ ಸ್ವಾತಂತ್ರ್ಯದೊಂದಿಗೆ ಭಾರತ ವಿಭಜನೆಯಾದಾಗ ಎರಡು ಪಾಕಿಸ್ತಾನಗಳು ಅಸ್ತಿತ್ವಕ್ಕೆ ಬಂದವು. ಒಂದು ಪಶ್ಚಿಮ ಪಾಕಿಸ್ತಾನ – ಇದನ್ನು ಈಗ ಪಾಕಿಸ್ತಾನ ಎಂದು ಕರೆಯಲಾಗುತ್ತದೆ ಮತ್ತು ಇನ್ನೊಂದು ಪೂರ್ವ ಪಾಕಿಸ್ತಾನ – ಇದನ್ನು ಈಗ ಬಾಂಗ್ಲಾದೇಶ ಎಂದು ಕರೆಯಲಾಗುತ್ತದೆ. ಈ ಎರಡೂ ಪಾಕಿಸ್ತಾನಗಳ ನಡುವಿನ ಅಂತರವು ಪರಿಮಾಣಾತ್ಮಕವಾಗಿ 2000 ಕಿಮೀಗಿಂತ ಹೆಚ್ಚು ಮತ್ತು ಸಾಂಸ್ಕೃತಿಕ ಗುಣಾತ್ಮಕ ದೃಷ್ಟಿಯಿಂದ ಅದಕ್ಕಿಂತಲೂ ಹೆಚ್ಚು. ಪಂಜಾಬಿ ಮತ್ತು ಉರ್ದು ಭಾಷಿಕರು ಪಶ್ಚಿಮ ಪಾಕಿಸ್ತಾನದ ರಾಜಕೀಯದಲ್ಲಿ ಪ್ರಾಬಲ್ಯ ಹೊಂದಿದ್ದರು. ಅದೇ ಸಮಯದಲ್ಲಿ, ಪೂರ್ವ ಪಾಕಿಸ್ತಾನ ಜನರು ಪ್ರಧಾನವಾಗಿ ಬಂಗಾಳಿ ಮಾತನಾಡುತ್ತಿದ್ದರು. ಪಾಕಿಸ್ತಾನ ಸೃಷ್ಟಿಯಾದಂದಿನಿಂದ, ಭಾಷೆ ಮತ್ತು ಸಂಸ್ಕೃತಿಯ ಈ ವ್ಯತ್ಯಾಸವು ದೊಡ್ಡ ಅಂತರವಾಗಿ ಬದಲಾಗಲು ಪ್ರಾರಂಭಿಸಿತು. ಪಾಕಿಸ್ತಾನದಿಂದ ಬಾಂಗ್ಲಾದೇಶ ಸ್ವತಂತ್ರ್ಯ ಪಡೆದುಕೊಳ್ಳಲು ಇಂದಿರಾ ಗಾಂಧಿ ಸಹಾಯ ಮಾಡಿದ್ದರು. ಭದ್ರತೆ ವಿಷಯದಲ್ಲಿ ಹಾಗೂ ಬಾಂಗ್ಲಾ ದೇಶಕ್ಕೆ ಸ್ವತಂತ್ರ್ಯದೊರಕುವ ವಿಚಾರದಲ್ಲಿ ಇಂದಿರಾ ಗಾಂಧಿ ಅವರು ತೆಗೆದುಕೊಂಡಿರುವ ನಡೆ ಉತ್ತಮವಾಗಿತ್ತು. ಇಂದಿರಾಗಾಂಧಿ ಅವರ ಈ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಅಟಲ್ ಬಿಹಾರಿ ವಾಜಪೇಯಿ ಅವರು ಇಂದಿರಾ ಗಾಂಧಿ ಅವರನ್ನು ‘ಕಾಳಿ’ ಎಂದು ಬಣ್ಣಿಸಿದ್ದರು.
ಈ ಸುದ್ದಿ ಓದಿದ್ದೀರಾ? ಖ್ಯಾತ ಅಸ್ಸಾಮಿ ಸಂಗೀತ ಸಂಯೋಜಕ ರಾಮನ್ ಬರುವಾ ನಾಪತ್ತೆ
ಬಾಂಗ್ಲಾದೇಶ ಸ್ವತಂತ್ರ್ಯ ಪಡೆಯುವುದರಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಪಾತ್ರ ಪ್ರಮುಖವಾಗಿದೆ. ದೇಶಕ್ಕಾಗಿ ತ್ಯಾಗ ಮಾಡಿದ ಕುಟುಂಬದವರಿಗೆ ಮೀಸಲಾತಿ ಕೊಡುತ್ತಿರುವ ವಿಚಾರ ನಿಜಕ್ಕೂ ಒಳ್ಳೆಯ ಬೆಳವಣಿಗೆ…
ಮೀಸಲಾತಿ ಎನ್ನುವುದು ಸಮಾಜದ ಅಭಿವೃದ್ಧಿ ಕೆಲಸ ಮಾಡುತ್ತದೆ. ಆದರೆ, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಿಹಿಸಿ, ದೇಶ ಸ್ವತಂತ್ರ್ಯ ಹೊಂದಲು ಶ್ರಮಿಸಿದ ಮಕ್ಕಳಿಗೆ ಮೀಸಲಾತಿ ನೀಡುವುದರ ಬಗ್ಗೆ ವಿರೋಧಿಸಿ ಹಿಂಸಾಚಾರದ ಪ್ರತಿಭಟನೆ ನಡೆಸುತ್ತಿರುವುದು ನಿಜಕ್ಕೂ ವಿಪರ್ಯಾಸದ ಸಂಗತಿ.. ಹೀಗೇ, ವಿದ್ಯಾರ್ಥಿಗಳು ದೇಶ ಬೆಳೆದು ಬಂದ ಹಾದಿ, ದೇಶಕ್ಕೆ ಕೊಡುಗೆ ನೀಡಿದವರ ಬಗ್ಗೆ ಹಾಗೂ ಸ್ವಾತಂತ್ರ್ಯ ಹೋರಾಟದ ಬಗೆಗಿನ ಮಹತ್ವ ತಿಳಿದುಕೊಳ್ಳದೇ, ಅರ್ಥ ಮಾಡಿಕೊಳ್ಳದೇ ಹೇಗೆ ಎಂಬುದು ಸದ್ಯದ ಪ್ರಶ್ನೆಯಾಗಿದೆ
ಮೀಸಲಾತಿ ಎನ್ನುವುದು ಸಮಾಜದ ಅಭಿವೃದ್ಧಿ ಕೆಲಸ ಮಾಡುತ್ತದೆ. ಆದರೆ, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಿಹಿಸಿ, ದೇಶ ಸ್ವತಂತ್ರ್ಯ ಹೊಂದಲು ಶ್ರಮಿಸಿದ ಮಕ್ಕಳಿಗೆ ಮೀಸಲಾತಿ ನೀಡುವುದರ ಬಗ್ಗೆ ವಿರೋಧಿಸಿ ಹಿಂಸಾಚಾರದ ಪ್ರತಿಭಟನೆ ನಡೆಸುತ್ತಿರುವುದು ನಿಜಕ್ಕೂ ವಿಪರ್ಯಾಸದ ಸಂಗತಿ.. ಹೀಗೇ, ವಿದ್ಯಾರ್ಥಿಗಳು ದೇಶ ಬೆಳೆದು ಬಂದ ಹಾದಿ, ದೇಶಕ್ಕೆ ಕೊಡುಗೆ ನೀಡಿದವರ ಬಗ್ಗೆ ಹಾಗೂ ಸ್ವಾತಂತ್ರ್ಯ ಹೋರಾಟದ ಬಗೆಗಿನ ಮಹತ್ವ ತಿಳಿದುಕೊಳ್ಳದೇ, ಅರ್ಥ ಮಾಡಿಕೊಳ್ಳದೇ ಹೇಗೆ ಎಂಬುದು ಸದ್ಯದ ಪ್ರಶ್ನೆಯಾಗಿದೆ. Article is good… Last para Question is irrelevant… After 50 years independece. discriminated ration of Reservation ???