ಮೋದಿ ಸರ್ಕಾರ ಆಡಳಿತಕ್ಕೆ ಬಂದು ಹತ್ತು ವರ್ಷಗಳು ಕಳೆದಿವೆ. ಇದೀಗ, ಮೂರನೇ ಬಾರಿಯ ಆಡಳಿತವನ್ನೂ ಕೂಡ ಮೋದಿ ಅವರು ಪ್ರಾರಂಭ ಮಾಡಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ಇಡೀ ದೇಶದಲ್ಲಿಯೇ ಎಲ್ಲಿ ನೋಡಿದರು, ಕೇಳಿದರು ಇಡಿ (ಜಾರಿ ನಿರ್ದೇಶನಾಲಯ) ದಾಳಿ, ಇಡಿ ದಾಳಿ, ಇಡಿ ದಾಳಿ ಎಂಬುದೇ ಪದೇಪದೆ ಕೇಳಿ ಬರುತ್ತಿತ್ತು. ಇವತ್ತು ತಡರಾತ್ರಿ ಈ ರಾಜಕಾರಣಿ ಮನೆ ಮೇಲೆ ಇಡಿ ದಾಳಿ, ಈ ಉದ್ಯಮಿ ಮನೆ ಮೇಲೆ ಇಡಿ ದಾಳಿ ಎಂಬ ಭರಾಟೆ ಮಾತ್ರ ಜೋರಾಗಿರುತ್ತಿತ್ತು. ಆದರೀಗ, ರಾಜಕಾರಣಿಗಳಿಗೆ, ಉದ್ಯಮಿಗಳಿಗೆ ಅದರಲ್ಲೂ ವಿಪಕ್ಷಗಳ ಶಾಸಕ-ಸಂಸದರಿಗೆ ದಃಸ್ವಪ್ನವಾಗಿ ಕಾಡುತ್ತಿದ್ದ ಇಡಿ ಮೇಲೆಯೇ ಕರ್ನಾಟಕದಲ್ಲಿ ಮೊದಲ ಬಾರಿಗೆ ಎಫ್ಐಆರ್ ದಾಖಲಾಗಿದೆ.
ಭ್ರಷ್ಟಾಚಾರದಂತಹ ಪ್ರಕರಣಗಳ ತನಿಖೆ ನಡೆಸುತ್ತಿರುವ ಅಧಿಕಾರಿಗಳ ಮೇಲೆ ಎಫ್‌ಐಆರ್ ದಾಖಲಾಗಿರೋದು ರಾಜ್ಯದಲ್ಲಿ ಇದೇ ಮೊದಲಾದರೂ, ದೇಶದಲ್ಲಿ ಈ ಹಿಂದೆ ಹಲವು ಬಾರಿ ಅಧಿಕಾರಿಗಳ ಮೇಲೆಯೇ ಎಫ್‌ಐಆರ್ ದಾಖಲಾಗಿ, ತನಿಖೆ ನಡೆಸಿರುವ ಉದಾಹರಣೆಗಳಿವೆ. ಅಲ್ಲದೇ, ಪ್ರಕರಣದ ತನಿಖೆ ನಡೆಸುತ್ತಿದ್ದ ಸಿಬಿಐ ಅಧಿಕಾರಿಗಳನ್ನೇ ಬಂಧನ ಮಾಡಿರುವ ಪ್ರಕರಣಗಳು ಕೂಡ ನಡೆದಿವೆ. ಈಗ, ಕರ್ನಾಟಕದಲ್ಲಿ ಯಾಕೆ ಇಡಿ ಅಧಿಕಾರಿಗಳ ಮೇಲೆ ಎಫ್ಐಆರ್ ದಾಖಲಾಗಿದೆ ಎಂಬ ಬಗ್ಗೆ ನೋಡುವುದಕ್ಕೂ ಮೊದಲು ದೇಶದ ನಾನಾ ರಾಜ್ಯಗಳಲ್ಲಿ ಸಿಬಿಐ, ಇಡಿ ಅಧಿಕಾರಿಗಳ ಮೇಲೆ ಎಫ್ಐಆರ್ ದಾಖಲಾಗಿ, ಅವರನ್ನು ಬಂಧನ ಮಾಡಿದ ಘಟನೆಗಳ ಬಗ್ಗೆ ನೋಡೋಣ;
ಮೊದಲನೇಯದಾಗಿ 2019ರ ಫೆಬ್ರವರಿ 3ರಂದು ರೋಸ್ ವ್ಯಾಲಿ ಮತ್ತು ಶಾರದಾ ಪೋಂಜಿ ಹಗರಣಗಳಲ್ಲಿ ವಿಚಾರಣೆಗಾಗಿ ನಗರ ಪೊಲೀಸ್ ಕಮಿಷನರ್ ರಾಜೀವ್ ಕುಮಾರ್ ಅವರ ಮನೆಗೆ ಆಗಮಿಸಿದ್ದ ಸಿಬಿಐ ತಂಡವನ್ನು ಪಶ್ಚಿಮ ಬಂಗಾಳದ ಕೊಲ್ಕತ್ತಾ ಪೊಲೀಸರು ಬಂಧಿಸಿದ್ದರು. ಸಿಬಿಐ ಅಧಿಕಾರಿಗಳನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಸುಮಾರು 2 ಗಂಟೆಗಳ ಕಾಲ ವಿಚಾರಣೆ ನಡೆಸಿ, ಬಳಿಕ ಬಿಡುಗಡೆ ಮಾಡಲಾಗಿತ್ತು. ಮಾತ್ರವಲ್ಲದೆ, ಸಿಬಿಐ ಅಧಿಕಾರಿಗಳನ್ನು ಬಂಧಿಸಿದ ಕೂಡಲೇ, ಕೋಲ್ಕತ್ತಾ ಪೊಲೀಸ್ ಅಧಿಕಾರಿಗಳ ತಂಡ ಸಿಬಿಐ ಪ್ರಧಾನ ಕಚೇರಿಯನ್ನು ಸುತ್ತುವರೆದಿತ್ತು.
ಇನ್ನೊಂದು ಪ್ರಕರಣದಲ್ಲಿ, ಮಧ್ಯಪ್ರದೇಶದ ನರ್ಸಿಂಗ್ ಹಗರಣದ ತನಿಖೆ ನಡೆಸುತ್ತಿರುವ ಕೇಂದ್ರೀಯ ತನಿಖಾ ದಳದ ಅಧಿಕಾರಿಗಳ ಗುಂಪು ಅದರ ಭಾಗವಾಗಿದೆ ಎಂದು ಆರೋಪಿಸಿ, ಲಂಚ ಸ್ವೀಕರಿಸಿದ ಆರೋಪದ ಮೇಲೆ ಕೇಂದ್ರೀಯ ತನಿಖಾ ದಳದ (ಸಿಬಿಐ) ನಾಲ್ವರು ಅಧಿಕಾರಿಗಳನ್ನು ಬಂಧಿಸಲಾಗಿದೆ. ಮಧ್ಯಪ್ರದೇಶ ಪೊಲೀಸರಿಂದ ಡೆಪ್ಯೂಟೇಶನ್‌ನಲ್ಲಿ ಇಬ್ಬರು ಸೇರಿದಂತೆ ಅಧಿಕಾರಿಗಳನ್ನು ದೆಹಲಿಯ ವಿಶೇಷ ತಂಡವು ಬಂಧಿಸಿದೆ. ಈ ಪ್ರಕರಣದಲ್ಲಿ ಕೇಂದ್ರೀಯ ಸಂಸ್ಥೆ 23 ಜನರ ವಿರುದ್ಧ ಪ್ರಕರಣ ದಾಖಲಿಸಿದೆ. ಎಫ್‌ಐಆರ್‌ನಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿಯನ್ನು ಹೆಸರಿಸಲಾಗಿತ್ತು.
ಮತ್ತೊಂದು ಪ್ರಕರಣದಲ್ಲಿ, ಸರ್ಕಾರಿ ನೌಕರನ ವಿರುದ್ಧ ತನಿಖೆ ನಡೆಸಲು ₹20 ಲಕ್ಷ ಹಣವನ್ನು ಪಡೆದ ಆರೋಪದ ಮೇಲೆ ಕಳೆದ ವರ್ಷ ಡಿಸೆಂಬರ್‌ನಲ್ಲಿ ತಮಿಳುನಾಡು ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ನಿರ್ದೇಶನಾಲಯ (ಡಿವಿಎಸಿ) ಅಧಿಕಾರಿ ಅಂಕಿತ್ ತಿವಾರಿ ಅವರನ್ನು ಬಂಧನ ಮಾಡಲಾಗಿತ್ತು. ಇದೀಗ, ಅಧಿಕಾರಿಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿದೆ.
ಈಗ ಕರ್ನಾಟಕದ ವಿಚಾರಕ್ಕೆ ಬರೋಣ; ತಪ್ಪಿತಸ್ಥರ ವಿರುದ್ಧ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳಬೇಕಾದ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ವಿರುದ್ಧವೇ ಬೆಂಗಳೂರಿನಲ್ಲಿ ಎಫ್ಐಆರ್ ದಾಖಲಾಗಿದೆ. ಹೌದು, ಭಾರತ ಸರ್ಕಾರದ ಕಾನೂನು ಜಾರಿ ಮತ್ತು ಆರ್ಥಿಕ ಗುಪ್ತಚರ ಸಂಸ್ಥೆಯಾದ ಜಾರಿ ನಿರ್ದೇಶನಾಲಯವು ಆದಾಯ ಇಲಾಖೆ, ಹಣಕಾಸು ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಕರ್ನಾಟಕದಲ್ಲಿ ಕಳೆದ ಹಲವು ದಿನಗಳಿಂದ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದಲ್ಲಿ ನಡೆದಿದೆ ಎನ್ನಲಾದ ₹187 ಕೋಟಿ ಅವ್ಯವಹಾರದ ತನಿಖೆಯನ್ನು ಇಡಿ ನಡೆಯುತ್ತಿದೆ. ಈ ಅವ್ಯವಹಾರ ಪ್ರಕರಣದಲ್ಲಿ ಟ್ವಿಸ್ಟ್ ಸಿಕ್ಕಿದ್ದು ಜಾರಿ ನಿರ್ದೇಶನಾಲಯದ (ಇಡಿ) ಇಬ್ಬರು ಅಧಿಕಾರಿಗಳ ವಿರುದ್ಧವೇ ಎಫ್ಐಆರ್ ದಾಖಲಾಗಿದೆ.
ಆಪಾದಿತ ಅವ್ಯವಹಾರದ ತನಿಖೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಸಂಘರ್ಷಕ್ಕೆ ಹಾದಿ ಮಾಡಿಕೊಟ್ಟಿದೆ. ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದಲ್ಲಿ ನಡೆದಿದೆ ಎನ್ನಲಾದ ಕೋಟ್ಯಾಂತರ ರೂಪಾಯಿ ಅವ್ಯವಹಾರದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಅವರನ್ನು ಸಿಲುಕಿಸುವ ಷಡ್ಯಂತ್ರ ನಡೆದಿದೆ ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ಬಾಂಗ್ಲಾದೇಶ | ಮೀಸಲಾತಿ – ಪ್ರತಿಭಟನೆ – ಹಿಂಸಾಚಾರ
ದೆಹಲಿ, ಜಾರ್ಖಂಡ್‌ನಲ್ಲಿ ಮುಖ್ಯಮಂತ್ರಿಗಳನ್ನು ಬಂಧಿಸಿರುವ ರೀತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಿಲುಕಿಸುವ ಹುನ್ನಾರದಿಂದ ವಾಲ್ಮೀಕಿ ನಿಗಮದ ಅವ್ಯವಹಾರ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆರೋಪಿಯನ್ನಾಗಿಸಲು ಒತ್ತಡ ಹೇರಲಾಗುತ್ತಿದೆ ಎಂದು ಆರೋಪಿಸಿ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳ ವಿರುದ್ದ ಎಫ್ಐಆರ್ ದಾಖಲಿಸಲಾಗಿದೆ.
ಏನಿದು ಪ್ರಕರಣ?
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ನಿಯಮಿತಕ್ಕೆ ಸಂಬಂಧಿಸಿದಂತೆ ಬ್ಯಾಂಕ್ ಖಾತೆಯಿಂದ 18 ಖಾತೆಗಳಿಗೆ ಬರೋಬ್ಬರಿ ₹94.73 ಕೋಟಿ ಅಕ್ರಮವಾಗಿ ಹಣ ವರ್ಗಾವಣೆಯಾಗಿತ್ತು. ಎಂಜಿ ರಸ್ತೆಯ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಿಂದ ಹಣ ವರ್ಗಾವಣೆಯಾಗಿತ್ತು. ರಾಜ್ಯ ಸರ್ಕಾರದ ವತಿಯಿಂದ ಎಸ್ಐಟಿ ತನಿಖೆ ನಡೆಸುತ್ತಿದೆ. ಬ್ಯಾಂಕ್ ಅಧಿಕಾರಿಗಳ ದೂರಿನ ಆಧಾರದ ಮೇಲೆ ಸಿಬಿಐ ತನಿಖೆ ನಡೆಸುತ್ತಿದೆ. ಹಗರಣದ ತನಿಖೆ ಸಂಬಂಧ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಜುಲೈ 10ರಂದು ಬೆಳ್ಳಂ ಬೆಳಗ್ಗೆ ನಿಗಮದ ಅಧ್ಯಕ್ಷ, ಶಾಸಕ ಬಸನಗೌಡ ದದ್ದಲ್ ಹಾಗೂ ಮಾಜಿ ಸಚಿವ ಬಿ. ನಾಗೇಂದ್ರ ಅವರ ಮನೆ ಮತ್ತು ಕಚೇರಿ ಮೇಲೆ ದಾಳಿ ಮಾಡಿದ್ದರು. ಹಗರಣದಲ್ಲಿ ಭಾಗಿಯಾಗಿರುವ ಬಗ್ಗೆ ಸಾಕ್ಷ್ಯಾಧಾರಗಳು ಸಿಕ್ಕ ಹಿನ್ನೆಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಮಾಜಿ ಸಚಿವ ಬಿ. ನಾಗೇಂದ್ರ ಅವರನ್ನು ಬಂಧಿಸಿದ್ದರು.
ಅಲ್ಲದೇ, ಇಲಾಖೆಯ ಅನುದಾನ ದುರ್ಬಳಕೆ ಮಾಡಿಕೊಂಡ ಆರೋಪದಡಿ ಕಳೆದ ಜೂನ್ 22 ರಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಕಲ್ಲೇಶ್.ಬಿ ಅವರನ್ನು ಅಮಾನತು ಮಾಡಲಾಗಿದೆ. ಇದಾದ ಬಳಿಕ ಪ್ರಕರಣದ ತನಿಖೆಗೆ ಹಾಜರಾಗುವಂತೆ ಇಡಿ ಅಧಿಕಾರಿಗಳು ಸೂಚಿಸಿದ ಹಿನ್ನೆಲೆ, ಜುಲೈ 16ರಂದು ಶಾಂತಿನಗರದ ಇಡಿ ಕಚೇರಿಗೆ ತೆರಳಿದ್ದಾರೆ. ಈ ವೇಳೆ, ಸಹಾಯಕ ನಿರ್ದೇಶಕ ಮುರುಳಿ ಕಣ್ಣನ್ ಅವರು ಕಲ್ಲೇಶ್ ಬಿ ಅವರ ಹೇಳಿಕೆಯನ್ನ ದಾಖಲಿಸಿಕೊಂಡಿದ್ದಾರೆ.
“ನನಗೆ ಕೇಳಲಾದ 17 ಪ್ರಶ್ನೆಗಳಿಗೆ ಉತ್ತರ ನೀಡಿದ್ದೇನೆ. ಅದರಲ್ಲಿ ಕೇಳಲಾದ ಮೂರು ಪ್ರಶ್ನೆಗಳಿಗೆ ಉತ್ತರಿಸಲು ನನಗೆ ಕಡತಗಳು ಹಾಗೂ ನನ್ನ ಕೆಳಹಂತದ ಅಧಿಕಾರಿಗಳು ಬೇಕಾಗುತ್ತಾರೆ ಎಂದು ತಿಳಿಸಿದ್ದೇನೆ. ಆಗ ಕಣ್ಣನ್ ಅವರು ಜುಲೈ 18ರಂದು ಮಧ್ಯಾಹ್ನ 2 ಗಂಟೆಗೆ ಬನ್ನಿ ಎಂದು ತಿಳಿಸಿದ್ದಾರೆ” ಎಂದು ಕಲ್ಲೇಶ್ ಅವರು ಹೇಳಿದ್ದಾರೆ.
“ನಂತರ ನನ್ನ ಹೇಳಿಕೆಗಳಿಗೆ ಸಹಿ ಪಡೆದಾಗ ನಾನು ಅದರ ಒಂದು ಪ್ರತಿಯನ್ನ ನನಗೂ ಕೊಡಿ ಎಂದರೂ ಕೊಡಲಿಲ್ಲ. ನಂತರದಲ್ಲಿ ಯಾವುದೇ ಲಿಖಿತ ರೂಪದ ಪ್ರಶ್ನೆಗಳನ್ನ ಕೇಳದೆಯೇ, ಎಂ.ಜಿ ರೋಡ್ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಲು ಮಾಜಿ ಸಚಿವ ಬಿ. ನಾಗೇಂದ್ರ ಮತ್ತು ಸಿಎಂ ಸಿದ್ದರಾಮಯ್ಯ ಅವರ ಹೆಸರು ಹೇಳುವಂತೆ ಒತ್ತಾಯಿಸಿದ್ದಾರೆ. ಇದಕ್ಕೆ ಒಪ್ಪದಿದ್ದರೇ, ಬಂಧನ ಮಾಡುತ್ತೇವೆ ಎಂದು ಇಡಿ ಅಧಿಕಾರಿ ಕಣ್ಣನ್ ಬೆದರಿಸಿದ್ದಾರೆ. ನನಗೆ ಮಾನಸಿಕವಾಗಿ ಹಿಂಸೆ ನೀಡಿದ್ದಾರೆ” ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ನಿಗಮದ ಹಿಂದಿನ ವ್ಯವಸ್ಥಾಪಕ ನಿರ್ದೇಶಕ ಕಲ್ಲೇಶ್ ಬಿ ಇ.ಡಿ ಅಧಿಕಾರಿಗಳ ವಿರುದ್ಧ ಶೇಷಾದ್ರಿಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸ್ಥಳದ ಆಧಾರದಲ್ಲಿ ದೂರನ್ನ ವರ್ಗಾವಣೆ ಪಡೆದಿರುವ ವಿಲ್ಸನ್ ಗಾರ್ಡನ್ ಠಾಣಾ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ದೂರು ಆಧರಿಸಿ ಇಡಿ ಬೆಂಗಳೂರು ವಲಯ ಕಚೇರಿಯ ಉಪ ನಿರ್ದೇಶಕ ಮನೋಜ್ ಮಿತ್ತಲ್ ಮತ್ತು ಸಹಾಯಕ ನಿರ್ದೇಶಕ ಮುರುಳಿ ಕಣ್ಣನ್ ವಿರುದ್ದ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲು ಮಾಡಲಾಗಿದೆ.
ಈ ನಡುವೆಯೇ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳ ವಿರುದ್ಧ ನಗರದ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ರದ್ದು ಕೋರಿ ಇಡಿ ಹೈಕೋರ್ಟ್ ಮೆಟ್ಟಿಲೇರಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಇಡಿ ಇಬ್ಬರು ಅಧಿಕಾರಿಗಳ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗೆ ತಡೆಯಾಜ್ಞೆ ನೀಡಿದೆ.
ಕಾಂಗ್ರೆಸ್ ನಾಯಕರ ಪ್ರತಿಭಟನೆ
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಮಾಜಿ ಸಚಿವ ನಾಗೇಂದ್ರ ಹೆಸರು ಹೇಳುವಂತೆ ಇಡಿ ಅಧಿಕಾರಿಗಳು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಕಾಂಗ್ರೆಸ್ ನಾಯಕರ ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳಾದ ಇಡಿ, ಸಿಬಿಐ, ಐಟಿ ದುರ್ಬಳಕೆ ಮಾಡಿಕೊಂಡಿದೆ ಅಂತ ಆರೋಪಿಸಿ, ಕೇಂದ್ರದ ವಿರುದ್ಧ ಕಾಂಗ್ರೆಸ್ ನಾಯಕರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ವಾಲ್ಮೀಕಿ ನಿಗಮದ ತನಿಖೆಯನ್ನು ರಾಜ್ಯ ಸರ್ಕಾರ ಎಸ್ಐಟಿಗೆ ವಹಿಸಿದ್ದರೆ, ಯೂನಿಯನ್ ಬ್ಯಾಂಕ್ ನೀಡಿದ ದೂರು ಆಧಾರಿಸಿ ಸಿಬಿಐ ತನಿಖೆಗೆ ಇಳಿದಿದೆ. ಈ ವೇಳೆ ಅಕ್ರಮ ಹಣ ವರ್ಗಾವಣೆ ನಡೆದಿರುವ ಹಿನ್ನೆಲೆ ಇಡಿ ಸಹ ತನಿಖೆ ನಡೆಸುತ್ತಿದೆ. ಇದೀಗ, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ನಡೆಸುತ್ತಿರುವ ED ಅಧಿಕಾರಿಗಳ ವಿರುದ್ಧವೇ ಆರೋಪ ಕೇಳಿ ಬಂದಿದೆ.
ಪ್ರಕರಣದ ತನಿಖೆ ನಡೆಸಬೇಕಾದ ಅಧಿಕಾರಿಗಳ ವಿರುದ್ಧವೇ, ದೂರು ದಾಖಲಾಗಿ, ಎಫ್‌ಐಆರ್ ದಾಖಲಾಗಿ, ಬಂಧನ ಕೂಡ ಆದ ಘಟನೆಗಳನ್ನ ತೆರೆದು ನೋಡಿದರೆ ಸುಮಾರು ಪ್ರಕರಣಗಳನ್ನು ಕಾಣಬಹುದು. ಇಂತಹ ಪರಿಸ್ಥಿತಿಗೆ ಅಧಿಕಾರಿಗಳ ಅಧಿಕಾರ ದುರುಪಯೋಗವೂ ಒಂದು ಕಾರಣ ಇರಬಹುದು. ಆದರೆ, ಇದಕ್ಕೆ ಮುಖ್ಯ ಕಾರಣ, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನ ದುರುಪಯೋಗ ಮಾಡಿಕೊಳ್ಳುತ್ತಿರುವುದು. ಪ್ರತಿಪಕ್ಷಗಳು, ವಿರೋಧಿಗಳ ಮೇಲೆ ದಾಳಿ ಮಾಡಲು, ಹೆದರಿಸಲು ಮೋದಿ ಸರ್ಕಾರ ಸಿಬಿಐ, ಇಡಿ, ಐಟಿಯಂತಹ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ ಎಂಬ ಆರೋಪಗಳಿವೆ. ಇಂತಹ ಕಾರಣಗಳಿಂದಾಗಿ, ನಿರಂತರ ದಾಳಿಗೆ ತುತ್ತಾಗುತ್ತಿರುವ ವಿಪಕ್ಷಗಳು ಈಗ ತನಿಖಾ ಸಂಸ್ಥೆಗಳ ವಿರುದ್ಧವೇ ಪ್ರಕರಣ ದಾಖಲಿಸುವಂತಹ ಪರಿಸ್ಥಿತಿ ಎದುರಾಗಿದೆ.