ಶಿವಮೊಗ್ಗದಲ್ಲಿ ಅಣ್ಣಾಮಲೈ ನೇತೃತ್ವದಲ್ಲಿ ಆಯೋಜಿಸಿದ್ದ ಬಿಜೆಪಿ ಸಮಾವೇಶದಲ್ಲಿ ತಮಿಳುನಾಡಿನ ನಾಡಗೀತೆ ಪ್ರಸಾರ ಮಾಡಲಾಗಿದೆ. ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಅದನ್ನು ಅರ್ಧಕ್ಕೆ ತಡೆದು, ಕನ್ನಡ ನಾಡಗೀತೆ ಹಾಕಿಸಿದ್ದಾರೆ.
ನಗರದ ಎನ್‌ಇಎಸ್ ಮೈದಾನದಲ್ಲಿ ಗುರುವಾರ ಮಧ್ಯಾಹ್ನ ತಮಿಳು ಮಾತನಾಡು ಸಮುದಾಯದ ಜನರನ್ನು ಸೇರಿಸಿ ಬಿಜೆಪಿ ಸಮಾವೇಶ ಆಯೋಜಿಸಿತ್ತು. ತಮಿಳುನಾಡು ಬಿಜೆಜೆ ಅಧ್ಯಕ್ಷ, ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಸಮಾವೇಶದ ನೇತೃತ್ವ ವಹಿಸಿದ್ದರು. ಅವರೇ ಸಮಾವೇಶದಲ್ಲಿ ತಮಿಳುನಾಡಿನ ನಾಡಗೀತೆ ಹಾಕಿಸಿದ್ದರು ಎನ್ನಲಾಗಿದೆ.
ಸಮಾವೇಶದ ಆರಂಭದ ವೇಳೆ ತಮಿಳು ನಾಡಗೀತೆ ಪ್ರಸಾರವಾಗುತ್ತಿದ್ದಂತೆ ಅಲ್ಲಿ ನೆರೆದಿದ್ದ ಮುಖಂಡರು, ಕಾರ್ಯಕರ್ತರು ಎದ್ದುನಿಂತು ಗೌರವ ಸಲ್ಲಿಸಿದ್ದಾರೆ. ಆದರೆ, ಅದು ತಮಿಳು ನಾಡಗೀತೆಯೆಂದು ಅರಿತ ಈಶ್ವರಪ್ಪ, ತಮಿಳು ನಾಡಗೀತೆಯನ್ನು ಅರ್ಧಕ್ಕೆ ತಡೆದಿದ್ದಾರೆ.
ಕ್ಯಾಸೆಟ್‌ನಲ್ಲಿ ತಮಿಳು ನಾಡಗೀತೆ ಹಾಕುವುದು ಬೇಡ. ಬೇಕಿದ್ದರೆ ತಮಿಳು ಹೆಣ್ಣುಮಕ್ಕಳು ವೇದಿಕೆ ಮೇಲೆ ಹಾಡಲಿ ಎಂದು ಈಶ್ವರಪ್ಪ ಹೇಳಿದ್ದಾರೆ. ಆದರೆ, ಯಾರೂ ಮುಂದೆಬರದಿದ್ದಾಗ, ತನಿಳು ನಾಡಗೀತೆ ಹಾಕಿದ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾದ ಈಶ್ವರಪ್ಪ, ರಾಜ್ಯದ ನಾಡಗೀತೆಯನ್ನು ಹಾಕಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಒಟ್ಟು ಮೀಸಲಾತಿ ಶೇ. 75ಕ್ಕೆ ಹೆಚ್ಚಳ: ಸಿದ್ದರಾಮಯ್ಯ
ಕರ್ನಾಟಕ ವಿಧಾನಸಭಾ ಚುನಾವಣೆಗಾಗಿ ರಾಜ್ಯದಲ್ಲಿ ಬಿಜೆಪಿ ಪರವಾಗಿ ಪ್ರಚಾರ ಮಾಡಲು ಪಕ್ಷವು ತನ್ನ ರಾಷ್ಟ್ರ ನಾಯಕರು ಮತ್ತು ವಿವಿಧ ರಾಜ್ಯಗಳ ನಾಯಕರನ್ನು ರಾಜ್ಯಕ್ಕೆ ಕರೆತರುತ್ತಿದೆ. ಅದೇ ರೀತಿಯಲ್ಲಿ ರಾಜ್ಯಕ್ಕೆ ಬಂದಿದ್ದ ಅಣ್ಣಾಮಲೈ, ತಮಿಳು ನಾಡಗೀತೆ ಹಾಕಿಸಿ, ಯಡವಟ್ಟು ಮಾಡಿದ್ದಾರೆ.
ಸಮಾವೇಶದಲ್ಲಿ ಶಿವಮೊಗ್ಗ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಎನ್. ಚನ್ನಬಸಪ್ಪಕೂಡ ಇದ್ದರು.