ಪರಿಶಿಷ್ಟರ ಓಣಿಗಳಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ರಾಜ್ಯ ಸರ್ಕಾರ 2023-24 ಹಾಗೂ 2024-25ನೇ ಸಾಲಿನಲ್ಲಿ ನಯಾ ಪೈಸೆ ಅನುದಾನ ಬಿಡುಗಡೆ ಮಾಡಿಲ್ಲ ಎಂಬ ವಿಷಯ ಮಂಗಳವಾರ ವಿಧಾನಮಂಡಲ ಅಧಿವೇಶನದಲ್ಲಿ ಪ್ರತಿಧ್ವನಿಸಿತು.
ಮಂಗಳವಾರ ನಡೆದ ವಿಧಾನಸಭೆ ಅಧಿವೇಶನದಲ್ಲಿ ಚುಕ್ಕೆ ಗುರುತಿನ ಪ್ರಶ್ನೆ ಮೇಲೆ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಅವರು ಈ ವಿಷಯ ಪ್ರಸ್ತಾಪಿಸಿದರು.
ʼಮಾತೆತ್ತಿದ್ದರೆ ಮುಖ್ಯಮಂತ್ರಿಗಳು ನಮ್ಮದು ಪರಿಶಿಷ್ಟರ ಕಲ್ಯಾಣದ ಸರ್ಕಾರ ಎಂದು ಹೇಳುತ್ತಾರೆ. ಆದರೆ ಈ ಬಡಾವಣೆಗಳಲ್ಲಿ ಅಭಿವೃದ್ಧಿ ಕೆಲಸ ಕೈಗೊಳ್ಳಲು ನಯಾ ಪೈಸೆ ಅನುದಾನ ಕೊಟ್ಟಿಲ್ಲ. ಎಲ್ಲಿದೆ ಹಣ? ಅಭಿವೃದ್ಧಿ ಎಲ್ಲಿ ಆಗಿದೆ? ಎಂದು ಖಾರವಾಗಿ ಪ್ರಶ್ನಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ʼಬೀದರ್ ಜಿಲ್ಲೆಯಲ್ಲಿ ಆರು ವಿಧಾನಸಭಾ ಕ್ಷೇತ್ರಗಳಿವೆ. ಪ್ರತಿ ಕ್ಷೇತ್ರದಲ್ಲೂ ಪರಿಶಿಷ್ಟ ಪಂಗಡದ ಸರಾಸರಿ 40 ಸಾವಿರದಷ್ಟು ಜನಸಂಖ್ಯೆಯಿದೆ. ಬೀದರ್ ದಕ್ಷಿಣ ವಿಧಾನಸಭೆ ಕ್ಷೇತ್ರದಲ್ಲಿ ಈ ಸಂಖ್ಯೆ 50 ಸಾವಿರಕ್ಕೂ ಜಾಸ್ತಿಯಿದೆ. ಕುರುಬ, ಕಬ್ಬಲಿಗ ಹಾಗೂ ವಾಲ್ಮೀಕಿ ಸಮಾಜದ ಜನ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇನ್ನು ಪರಿಶಿಷ್ಟ ಜಾತಿಯವರ ಸಂಖ್ಯೆ ಇದಕ್ಕೂ ದುಪ್ಪಟ್ಟಿದೆ. ಹೀಗಿರುವಾಗ ಈ ಓಣಿಗಳಲ್ಲಿ ಒಂದೇ ಒಂದು ಪ್ರಗತಿ ಕೆಲಸ ನಡೆದಿಲ್ಲ ಎಂದರೆ ಹೇಗೆ? ಈ ಸಮಾಜದ ಜನರು ನಮಗೆ ಕೇಳಿದರೆ ಏನು ಹೇಳಬೇಕುʼ ಎಂದು ಪ್ರಶ್ನಿಸಿದರು.
ಪರಿಶಿಷ್ಟರ ಬಡಾವಣೆಗಳಲ್ಲಿ ಅಭಿವೃದ್ಧಿ ಕೆಲಸಗಳಿಗೆ ನನ್ನ ವಿಧಾನಸಭಾ ಕ್ಷೇತ್ರದಲ್ಲಿ 33 ಕೋಟಿ ರೂ.ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿಗಳು ಕೊಟ್ಟಿರುವ ಮಾಹಿತಿ ಶುದ್ಧ ಸುಳ್ಳು. ಪ್ರಗತಿ ಕಾಲೋನಿ, ನವಗ್ರಾಮ ಯೋಜನೆ ಸೇರಿದಂತೆ ಯಾವುದರಲ್ಲೂ ನಯಾಪೈಸೆ ಹಣ ಬಂದಿಲ್ಲ. ಈ ಕುರಿತಾಗಿ ನಾನು ನಿರಂತರ ಅಧಿಕಾರಿಗಳೊಂದಿಗೆ ಸಂಪರ್ಕಿಸುತ್ತಲೇ ಇದ್ದೇನೆ. ಆದರೆ, ಅಂಕಿಅಂಶ ತಪ್ಪು ನೀಡಿರುವುದು ಖಂಡನೀಯ. ನನ್ನ ಕ್ಷೇತ್ರಕ್ಕಂತೂ ಹಣ ಬಂದಿಲ್ಲ. ಬೇರೆಯವರ ಕ್ಷೇತ್ರಕ್ಕೆ ಬಂದಿದ್ದು ಗೊತ್ತಿಲ್ಲ ಎಂದು ಬೆಲ್ದಾಳೆ ಅವರು ಹೇಳಿದಾಗ, ಇತರೆ ಬಿಜೆಪಿ ಶಾಸಕರು ಸಹ ನಮಗೂ ನಯಾಪೈಸೆ ಬಂದಿಲ್ಲʼ ಎಂದು ದನಿಗೂಡಿಸಿದರು.
ʼಸರ್ಕಾರ ಪರಿಶಿಷ್ಟರ ಅಭಿವೃದ್ಧಿಗಾಗಿ ಬಜೆಟ್‌ನಲ್ಲಿ 39 ಸಾವಿರ ಕೋಟಿ ರೂ.ಮೀಸಲಿಟ್ಟಿದೆ ಎಂದು ಹೇಳುತ್ತಿದೆ. ಮುಖ್ಯಮಂತ್ರಿಗಳಂತೂ ಮಾತೆತ್ತಿದ್ದರೆ ಪರಿಶಿಷ್ಟರ ಕಲ್ಯಾಣ, ಹಿತದ ಬಗ್ಗೆ ಮಾತನಾಡುತ್ತಾರೆ. ಆದರೆ ಈ ಬಡಾವಣೆಗೆ ಏಕೆ ಹಣ ಕೊಟ್ಟಿಲ್ಲ? ಸಿಸಿ ರಸ್ತೆ, ಚರಂಡಿ, ಹೈಮಾಸ್ಟ್ ದೀಪ ಅಳವಡಿಕೆ ಸೇರಿದಂತೆ ಯಾವೊಂದು ಕೆಲಸ ಆಗಿಲ್ಲ. ಮುಖ್ಯಮಂತ್ರಿಗಳು ಇದಕ್ಕೆ ಉತ್ತರಿಸಬೇಕು. ಕಾಂಗ್ರೆಸ್ ಶಾಸಕರ ಕ್ಷೇತ್ರಕ್ಕೆ ಅನುದಾನ ಏನಾದರೂ ಕೊಟ್ಟಿದ್ದೀರಾʼ ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿಗಳ ಪರವಾಗಿ ಸಚಿವ ಎಚ್.ಕೆ.ಪಾಟೀಲ್ ಅವರು ಉತ್ತರಿಸಿ, ʼದಕ್ಷಿಣ ಕ್ಷೇತ್ರಕ್ಕೆ 2023-24ನೇ ಸಾಲಿನಲ್ಲಿ 707 ಲಕ್ಷ ರೂ.ಕೊಡಲಾಗಿದೆ. 2023-24ರಲ್ಲಿ ಬಿಡುಗಡೆ ಮೊದಲ ಕಂತಿನಲ್ಲಿ 19 ಲಕ್ಷ ರೂ. ಬಿಡುಗಡೆಯಾಗಿದೆ. ಪರಿಶಿಷ್ಟರ ವಿದ್ಯಾರ್ಥಿಗಳ ಶಿಷ್ಯವೇತನ, ಧನಸಹಾಯ, ಹಾಸ್ಟೆಲ್ ವೆಚ್ಚ ಇತರೆಗೆ ಇದು
ನೀಡಲಾಗಿದೆʼ ಎಂದು ಸ್ಪಷ್ಟಪಡಿಸಿದರು.
ʼವಿದ್ಯಾರ್ಥಿಗಳ ಧನ ಸಹಾಯದ ಹಣ ಬಂದಿದೆ. ಪರಿಶಿಷ್ಟರ ಬಡಾವಣೆ ಅಭಿವೃದ್ಧಿಗೆ ನಯಾಪೈಸೆ ಬಂದಿಲ್ಲ. ಇನ್ನು ಅಧಿಕಾರಿಗಳು 33 ಕೋಟಿ ರೂ. ಬಿಡುಗಡೆ ಬಗ್ಗೆ ಕೊಟ್ಟಿರುವ ಬಗ್ಗೆ ಸುಳ್ಳು ಮಾಹಿತಿ ಕೊಟ್ಟಿದ್ದಾರೆ. ಈ ಬಗ್ಗೆ ಉತ್ತರಿಸಿʼ ಎಂದು ಶಾಸಕ ಬೆಲ್ದಾಳೆ ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಸುಳ್ಳು ಮಾಹಿತಿ ನೀಡಿದ್ದರೆ ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಕುಂದು ಕೊರತೆ : ಮೂಲ ಸೌಕರ್ಯ ಕಲ್ಪಿಸಿ, ಸ್ವಚ್ಛತೆಗೆ ಆದ್ಯತೆ ಕೊಡಿ
ʼಪರಿಶಿಷ್ಟರ ಓಣಿಯಲ್ಲಿ ಎರಡು ಬಜೆಟ್‌ನಿಂದ ಒಂದೇ ಒಂದು ಕೆಲಸ ಆಗದಿರುವುದು ಅತೀ ಗಂಭೀರ ಪ್ರಕರಣವಿದೆ. ಈ ಬಗ್ಗೆ ಗಮನ ಹರಿಸಿ ಕೂಡಲೇ ಹಣ ಬಿಡುಗಡೆ ಮಾಡಬೇಕು. ಯಾವುದೇ ಕಾರಣಕ್ಕೂ ಈ
ಸಮಾಜಕ್ಕೆ ಅನ್ಯಾಯ ಆಗಬಾರದು ಎಂದು ಡಾ.ಬೆಲ್ದಾಳೆ ಅವರು ಸ್ಪೀಕರ್ ಅವರಲ್ಲಿ ಮನವಿ ಮಾಡಿದರು. ಈ ಬಗ್ಗೆ ಸ್ಪೀಕರ್ ಅವರು ಸೂಕ್ತ ಕ್ರಮದ ಭರವಸೆ ನೀಡಿ, ಚರ್ಚೆಗೆ ತೆರೆ ಎಳೆದರು.