ನಾಲ್ಕು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಂದ ಘಟನೆ ಬೆಂಗಳೂರು ಸಮೀಪದ ರಾಮನಗರ ಜಿಲ್ಲೆಯಲ್ಲಿ ನಡೆದಿದ್ದು, 34 ವರ್ಷದ ಆರೋಪಿಯನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಆರೋಪಿ ಇರ್ಫಾನ್ ಖಾನ್ ಬಾಲಕಿಯ ದೂರದ ಸಂಬಂಧಿಯಾಗಿದ್ದು, ಬಾಲಕಿಗೆ ಐಸ್‌ಕ್ರೀಮ್ ಕೊಡಿಸುವ ಆಮಿಷ ಒಡ್ಡಿ ಅತ್ಯಾಚಾರ ಮತ್ತು ಕೊಲೆ ಮಾಡಿದ್ದಾನೆ. ಮೃತದೇಹವನ್ನು ರಸ್ತೆಬದಿಯಲ್ಲಿ ಎಸೆದಿದ್ದಾನೆ ಎಂದು ವರದಿಯಾಗಿದೆ.
ಬಾಲಕಿಯ ತಾಯಿ ಶನಿವಾರ ಸಂಜೆಯವರೆಗೂ ತನ್ನ ಮಗಳ ಹುಡುಕಾಟ ನಡೆಸಿದ್ದಾರೆ. ನೆರೆಹೊರೆಯಲ್ಲಿದ್ದ ಹಲವಾರು ಮಂದಿಯ ಬಳಿ ಕೇಳಿದಾಗ ಕೊನೆಯದಾಗಿ ಬಾಲಕಿಯನ್ನು ಆರೋಪಿ ಇರ್ಫಾನ್ ಜೊತೆ ನೋಡಿರುವುದಾಗಿ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಚಲಿಸುತ್ತಿದ್ದ ಕಾರಿನಲ್ಲಿ ಬಾಲಕಿ ಮೇಲೆ ಅತ್ಯಾಚಾರ; ಇಬ್ಬರು ಕಾಮುಕರ ಬಂಧನ
ಇರ್ಫಾನ್‌ಗೆ ಬಾಲಕಿಯ ತಾಯಿ ಕರೆ ಮಾಡಿದಾಗ ಆತ ತಬ್ಬಿಬ್ಬಾಗಿ ತನ್ನ ಮೊಬೈಲ್ ಫೋನ್ ಅನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ ಎಂದು ವರದಿಯಾಗಿದೆ. ತನ್ನ ಮಗಳು ನಾಪತ್ತೆಯಾಗಿರುವ ಬಗ್ಗೆ ತಾಯಿ ಪೊಲೀಸರಿಗೆ ದೂರು ನೀಡಿದ್ದು, ಈ ವೇಳೆಯೇ ರಸ್ತೆ ಬದಿಯಲ್ಲಿ ಬಾಲಕಿಯ ಮೃತದೇಹ ಕಂಡುಬಂದಿದೆ.
ಸಿಸಿಟಿವಿ ದೃಶ್ಯ ಮತ್ತು ಇತರ ತಾಂತ್ರಿಕ ಸುಳಿವುಗಳನ್ನು ಅನುಸರಿಸಿದ ಪೊಲೀಸರು ಆರೋಪಿಯನ್ನು ಬೆಂಗಳೂರಿನ ಕಲಾಸಿಪಾಳ್ಯದಲ್ಲಿ ಬಂಧಿಸಿದ್ದಾರೆ.
ಆರೋಪಿ ದಿನಗೂಲಿ ಕಾರ್ಮಿಕನಾಗಿದ್ದು ಆಗಾಗ್ಗೆ ಸಂತ್ರಸ್ತೆಯ ಮನೆಗೆ ಭೇಟಿ ನೀಡುತ್ತಿದ್ದ. ಈ ಹಿಂದೆ ಜೇಬುಗಳ್ಳತನ ಪ್ರಕರಣಗಳಲ್ಲಿ ಬಂಧಿತನಾಗಿದ್ದ. ಪೊಲೀಸರು ಆತನ ಮೇಲೆ ಅಪಹರಣ ಮತ್ತು ಕೊಲೆ ಪ್ರಕರಣ ದಾಖಲಿಸಿದ್ದಾರೆ. ಪೋಕ್ಸೊ ಕಾಯ್ದೆ ಕೂಡಾ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.