ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯಲ್ಲಿ ಸಮಾಜವಾದಿ ಪಕ್ಷದ (ಎಸ್‌ಪಿ) ನಾಯಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಿಜೆಪಿ ಕೌನ್ಸಿಲರ್ ಅನ್ನು ಬಂಧಿಸಲಾಗಿದೆ ಎಂದು ಬುಧವಾರ ಪೊಲೀಸ್ ವರಿಷ್ಠಾಧಿಕಾರಿ ವಿನೀತ್ ಜೈಸ್ವಾಲ್ ತಿಳಿಸಿದ್ದಾರೆ.
ಪರ್ಸಾಪುರ ಪಟ್ಟಣದ ಮೊಹಲ್ಲಾ ರಾಜ ತೋಲಾ ನಿವಾಸಿ ಎಸ್‌ಪಿ ನಾಯಕ ಓಂ ಪ್ರಕಾಶ್ ಸಿಂಗ್ (45) ಶುಕ್ರವಾರ ಹಾಡಹಗಲೇ ಹತ್ಯೆಗೀಡಾಗಿದ್ದಾರೆ. ಸಂತ್ರಸ್ತೆಯ ಪತ್ನಿ ನೀಡಿದ ದೂರಿನ ಮೇರೆಗೆ ಬಿಜೆಪಿ ಕೌನ್ಸಿಲರ್ ಉದಯಭನ್ ಸಿಂಗ್ ಅಲಿಯಾಸ್ ಲಲ್ಲನ್ ಸಿಂಗ್ ಮತ್ತು ಅವರ ಮೂವರು ಪುತ್ರರು ಸೇರಿದಂತೆ ಐವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ವಿನೀತ್ ಜೈಸ್ವಾಲ್ ಹೇಳಿದ್ದಾರೆ.
ಪ್ರಕರಣದಲ್ಲಿ ಇಬ್ಬರು ಆರೋಪಿಗಳಾದ ಚಂದನ್ ಸಿಂಗ್ ಮತ್ತು ರೋಹಿತ್ ಅನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಆದರೆ ಪ್ರಮುಖ ಆರೋಪಿ ಉದಯಭನ್ ಸಿಂಗ್ ತಲೆಮರೆಸಿಕೊಂಡಿದ್ದನು. ಆತನ ಬಗ್ಗೆ ಸುಳಿವು ನೀಡಿದವರಿಗೆ 25,000 ರೂಪಾಯಿ ಬಹುಮಾನ ನೀಡುವುದಾಗಿ ಪೊಲೀಸರು ಘೋಷಿಸಿದ್ದರು.
ಮಂಗಳವಾರ ರಾತ್ರಿ, ಕರ್ನಲ್‌ಗಂಜ್-ಬೆಲ್ಸರ್-ನವಾಬ್‌ಗಂಜ್ ರಸ್ತೆಯಲ್ಲಿ ಭದ್ರತಾ ಸಿಬ್ಬಂದಿಯ ಮೇಲೆ ಉದಯಭನ್ ಗುಂಡು ಹಾರಿಸಿದ್ದು ಪೊಲೀಸ್ ತಂಡವು ಆತನನ್ನು ಸುತ್ತುವರೆದಿದೆ. ಪೊಲೀಸರು ಕೂಡಾ ಗುಂಡಿನ ದಾಳಿ ನಡೆಸಿದ್ದು ಉದಯಭನ್‌ಗೆ ಗಾಯವಾಗಿದೆ. ಆತನನ್ನು ಸ್ಥಳದಲ್ಲೇ ಬಂಧಿಸಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜೈಸ್ವಾಲ್ ಮಾಹಿತಿ ನೀಡಿದ್ದಾರೆ.
ಇದನ್ನು ಓದಿದ್ದೀರಾ? ತಮಿಳುನಾಡು ಬಿಎಸ್‌ಪಿ ಮುಖ್ಯಸ್ಥ ಆರ್ಮ್‌ಸ್ಟ್ರಾಂಗ್ ಹತ್ಯೆ ಆರೋಪಿ ಎನ್‌ಕೌಂಟರ್‌ಗೆ ಬಲಿ
ಉದಯಭನ್ ಸಿಂಗ್ ಬಳಿಯಿದ್ದ ಮೋಟಾರ್ ಸೈಕಲ್, ಪಿಸ್ತೂಲ್ ಮತ್ತು ಖಾಲಿ ಕಾಟ್ರಿಡ್ಜ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಇನ್ನು ಆರೋಪಿಗೆ ಸ್ಥಳೀಯ ಪೊಲೀಸರು ಸಹಾಯ ಮಾಡಿದ್ದಾರೆ ಎಂದು ಆರೋಪಿಸಿ ಮೃತ ಎಸ್‌ಪಿ ನಾಯಕನ ಕುಟುಂಬಸ್ಥರು ದೂರಿದ್ದರು. ಹಾಗೆಯೇ ಆರೋಪಿಗಳನ್ನು ಬಂಧಿಸುವವರೆಗೂ ಶವ ಅಂತ್ಯಸಂಸ್ಕಾರ ಮಾಡಲು ನಿರಾಕರಿಸಿ ಶವವನ್ನು ರಸ್ತೆಯಲ್ಲೇ ಇಟ್ಟು ಧರಣಿ ನಡೆಸಿದರು.
ಈ ವೇಳೆಯೆ ಎಸ್‌ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಅವರ ಸೂಚನೆ ಮೇರೆಗೆ ಎಸ್‌ಪಿ ನಿಯೋಗ ಮೃತರ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಎಸ್‌ಪಿ ವತಿಯಿಂದ 5 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಿದೆ. ಕುಟುಂಬ ಸದಸ್ಯರಿಗೆ ನ್ಯಾಯ ದೊರಕಿಸಿಕೊಡಲು ಸಾಧ್ಯವಿರುವ ಎಲ್ಲ ನೆರವು ನೀಡುವುದಾಗಿ ನಿಯೋಗ ಭರವಸೆ ನೀಡಿದೆ.
ನಿಯೋಗದೊಂದಿಗೆ ಸಭೆ ನಡೆಸಿದ ಮೃತ ಎಸ್‌ಪಿ ನಾಯಕ ಓಂ ಪ್ರಕಾಶ್ ಸಿಂಗ್ ಮಗಳು ಸ್ಥಳೀಯ ಪೊಲೀಸರು ನಡೆಸಿದ ತನಿಖೆಯನ್ನು ಪ್ರಶ್ನಿಸಿದರು. ಈ ಪ್ರಕರಣದ ಸಿಬಿಐ ತನಿಖೆಗೆ ಒತ್ತಾಯಿಸಿದರು. ಕುಟುಂಬ ಸದಸ್ಯರೊಬ್ಬರಿಗೆ ಸರ್ಕಾರಿ ಉದ್ಯೋಗ ನೀಡಬೇಕು, ಜೊತೆಗೆ ರಾಜ್ಯ ಸರ್ಕಾರವು ಆರ್ಥಿಕ ಸಹಾಯ ನೀಡಬೇಕು ಎಂದು ಕುಟುಂಬ ಒತ್ತಾಯಿಸಿದೆ.