ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮುಂದಾಗಿರುವ ಕೋಲಾರ ಪೊಲೀಸರು, ಮಾರ್ಪಡಿಸಿದ ಸೈಲೆನ್ಸರ್‌ಗಳನ್ನು ಬಳಸುತ್ತಿದ್ದ ದ್ವಿಚಕ್ರ ವಾಹನಗಳನ್ನು ಹಿಡಿದು, ವಶಕ್ಕೆ ಪಡೆದುಕೊಂಡಿದ್ದಾರೆ. ಅಂತಹ 126 ಸೈಲೆನ್ಸರ್‌ಗಳನ್ನು ರೋಡ್ ರೋಲರ್ ಮೂಲಕ ಪುಡಿ ಮಾಡಿದ್ದಾರೆ.
ಕೋಲಾರದ ಅಮ್ಮಾವರಪೇಟೆಯಲ್ಲಿ ಕೋಲಾರ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ ಅವರ ಸಮ್ಮುಖದಲ್ಲಿ ರೋಡ್ ರೋಲರ್ ಬಳಸಿ ಸೈಲೆನ್ಸರ್‌ಗಳನ್ನು ಪುಡಿ ಮಾಡಿದ್ದಾರೆ. ಸೈಲೆನ್ಸರ್‌ಗಳನ್ನು ಪುಡಿ ಮಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
“ಮಾರ್ಪಡಿಸಿದ ಸೈಲೆನ್ಸರ್‌ಗಳನ್ನು ಬಳಸುತ್ತಿದ್ದ ದ್ವಿಚಕ್ರ ವಾಹನಗಳ ಮಾಲೀಕರಿಗೂ ಪೊಲೀಸರು ದಂಡ ವಿಧಿಸಿದ್ದಾರೆ. ಮಾರ್ಪಡಿಸಿದ್ದ ಸೈಲೆನ್ಸರ್‌ಗಳನ್ನು ಗುರುತಿಸುವ ಕ್ರಮಗಳನ್ನು ಮುಂದುವರೆಸಲಾಗಿದೆ” ಎಂದು ನಿಖಿಲ್ ತಿಳಿಸಿದ್ದಾರೆ.
“ಬೈಕ್‌ನಲ್ಲಿ ವ್ಹೀಲಿಂಗ್ ಮಾಡುವವರಿಗೆ ದಂಡ ವಿಧಿಸಲಾಗಿದೆ. ಬೆಂಗಳೂರು-ಚೆನ್ನೈ ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ವ್ಹೀಲಿಂಗ್ ಮಾಡುವ ವ್ಯಕ್ತಿಗಳ ಬಗ್ಗೆ ನಿಗಾ ವಹಿಸುವಂತೆ ಪೊಲೀಸ್ ಸಿಬ್ಬಂದಿಗಳು ಮತ್ತು ಗಸ್ತು ತಂಡಗಳಿಗೆ ಸೂಚನೆ ನೀಡಲಾಗಿದೆ. ಅಂತವರ ವಾಹನಗಳನ್ನು ವಶಕ್ಕೆ ಪಡೆಯುವುದರ ಜೊತೆಗೆ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ” ಎಂದು ಅವರು ವಿವರಿಸಿದ್ದಾರೆ.
ಈ ವರದಿ ಓದಿದ್ದೀರಾ?: ಕೇಂದ್ರ ಬಜೆಟ್ | ಚುನಾವಣಾ ಫಲಿತಾಂಶಗಳು ಮತ್ತು ಆರ್ಥಿಕ ವಾಸ್ತವಗಳೇ ಆಧಾರ
“ಹೆಚ್ಚು ಶಬ್ದ ಮಾಡಿಕೊಂಡು ಅಡ್ಡಾಡುವ ವಾಹನಗಳು ಕಂಡುಬಂದರೆ ಸಾರ್ವಜನಿಕರು ಪೊಲೀಸರಿಗೆ ತಿಳಿಸಬಹುದು. ಇದರಿಂದ ವಾಹನಗಳನ್ನು ತಕ್ಷಣವೇ ಪತ್ತೆಹಚ್ಚಲು ಸಹಾಯವಾಗುತ್ತದೆ” ಎಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.