ರಾಮನಗರ ಜಿಲ್ಲೆಯ ಎಸ್‌ಆರ್‌ಎಸ್ ಬೆಟ್ಟದ ಕೂಗಳತೆಯ ದೂರದಲ್ಲಿರುವ ಮಧುಶ್ರೀ ದಿಬ್ಬದಲ್ಲಿ 23 ದಿನಗಳ ರಂಗಶಿಬಿರ ನಡೆಯಲಿದ್ದು, ವಸತಿಸಹಿತ ತರಬೇತಿ ನೀಡಲಾಗುವುದು ಎಂದು ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಅಧ್ಯಕ್ಷ ಡಾ. ಎ ಆರ್ ಗುರುಸ್ವಾಮಿ ತಿಳಿಸಿದರು.
ರಾಮನಗರದಲ್ಲಿ ರಂಗ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, “ಕೆ ಎಸ್ ಮುದ್ದಪ್ಪ ಸ್ಮಾರಕ ಟ್ರಸ್ಟ್‌ನಿಂದ ರಂಗಶಿಬಿರ ತರಬೇತಿ ಶುರುಮಾಡಲಾಯಿತು” ಎಂದು ತಿಳಿಸಿದರು.
“ಸಿನಿಮಾದ ಬಹುಪಾಲು ಮಂದಿ ಕಲಾವಿದರು ರಂಗಭೂಮಿಯಿಂದ ಬಂದವರು. ರಾಜ್‌ಕುಮಾರ್, ಬಾಲಕೃಷ್ಣ, ನರಸಿಂಹರಾಜು ಮುಂತಾದವರು ಗುಬ್ಬಿ ಕಂಪನಿಯಿಂದ ಬಂದವರು, ರಂಗಭೂಮಿ ಕಲಾವಿದರು ಆಗುವವರು, ಸಮಾಜಕ್ಕೆ ಕಣ್ಣು, ಕಿವಿ ಎಲ್ಲವನ್ನೂ ತೆರೆದುಕೊಳ್ಳಬೇಕು, ರಾಜ್‌ಕುಮಾರ್ ಸಮಾಜಕ್ಕೆ ತೆರದುಕೊಂಡದ್ದರಿಂದ ಸಾಂಸ್ಕೃತಿಕ ನಾಯಕರಾದರು” ಎಂದರು.
“ಎಲ್ಲ ತರಹದ ಓದನ್ನೂ ಓದಿಕೊಳ್ಳಬೇಕು. ಎಲ್ಲರೂ ಪ್ರಸ್ತುತ ರಾಜಕೀಯಕ್ಕೆ ಸ್ಪಂದಿಸಬೇಕು. ಸರ್ಕಾರವನ್ನು ಎಚ್ಚರಿಸಲು ತಯಾರಿರಬೇಕು. ರಂಗಭೂಮಿ ಕಲಾವಿದರು ಸದಾ ವಿರೋಧ ಪಕ್ಷದ ಸ್ಥಾನದಲ್ಲಿ ನಿಂತು ವಿಮರ್ಶಿಸಬೇಕು. ಸರ್ಕಾರದ ತಪ್ಪುಗಳನ್ನು ತೋರಿಸಲು, ಸಮಸ್ಯೆಗಳನ್ನು ಸರಿಪಡಿಸಲು ರಂಗಭೂಮಿಯನ್ನು ಒಂದು ಸಾಧನವಾಗಿ ಬಳಸಬಹುದು. ಹಿಂದೆಲ್ಲಾ ಬಹಳಷ್ಟು ಕಲಾವಿದರು ತಮ್ಮ ನಾಟಕಾಭಿನಯದ ಮೂಲಕ ಸಮಾಜದ ಮೇಲಾಗುತ್ತಿರುವ ಅನ್ಯಾಯವನ್ನು ಖಂಡಿಸುವುದರ ಮೂಲಕ ಸರ್ಕಾರವನ್ನು ಎಚ್ಚೆತ್ತುಕೊಳ್ಳುವಂತೆ ಮಾಡಿದ್ದಾರೆ. ರಂಗಭೂಮಿ ಕಲಾವಿದರಿಗೆ ಬಹಳ ಜನಗಳ ಒಡನಾಟ, ಪರಿಚಯ ಆಗುತ್ತೆ. ಇದರಿಂದ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬುಹುದು” ಎಂದು ಶಿಬಿರಾರ್ಥಿಗಳಿಗೆ ತಿಳಿಸಿಕೊಟ್ಟರು.
ಕೆಎಸ್‌ಎಂ ಟ್ರಸ್ಟ್‌ನ ಕಾರ್ಯದರ್ಶಿ ಡಾ. ಬೈರೇಗೌಡ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಮುಖ್ಯವಾಗಿ ಇದೊಂದು ಅಭಿನಯ ತರಬೇತಿ ಶಿಬಿವಾಗಿರುತ್ತದೆ. ಪ್ರವೇಶ ಉಚಿತ, ಯಾವುದೇ ಸಂಭಾವನೆ ನೀಡುವುದಿಲ್ಲ. ಊಟ, ವಸತಿ ಒಸಗಿಸಲಾಗುವುದು. ರಂಗಭೂಮಿಯ ಎಲ್ಲ ಮಗ್ಗಲುಗಳನ್ನು ಪರಿಚಯ ಮಾಡಿಸಲಾಗುವುದು. ಕೊನೆಯಲ್ಲಿ ಅವರೇ ರಚಿಸಿದ “ದೇವನಾಂಪ್ರಿಯ ಅಶೋಕ” ನಾಟಕ ನಿರ್ಮಾಣ ಮಾಡಿ ಆಡಿಸಲಾಗುವುದು” ಎಂದು ಮಾಹಿತಿ ನೀಡಿದರು.
ರಂಗ ತರಬೇತಿಯ ಉದ್ಘಾಟನಾ ಶಿಬಿರದಲ್ಲಿ 15 ಮಂದಿ ಶಿಬಿರಾರ್ಥಿಗಳು ಕರ್ನಾಟಕದ ಹಲವು ಜಿಲ್ಲೆಗಳಿಂದ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಬಂಜಾರ ಅಕಾಡೆಮಿ ಅಧ್ಯಕ್ಷ ಡಾ. ಎ ಆರ್ ಗೋವಿಂದಸ್ವಾಮಿ, ನಾಟಕ ಅಕಾಡೆಮಿ ಸದಸ್ಯ ಕಂಬದ ಬಾಬು, ಹೆಚ್ಚುವರಿ ಜಿಲ್ಲಾಧಿಕಾರಿ ಚಂದ್ರಯ್ಯ ಅವರನ್ನು ಗೌರವಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಕಬ್ಬು ಬೆಳೆಗಾರರ ಬಾಕಿಹಣ ಬಿಡುಗಡೆಗೆ ಆಗ್ರಹ; ಕೆಪಿಆರ್‌ಎಸ್ ಪ್ರತಿಭಟನೆ
ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಚಂದ್ರಯ್ಯ, ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಅಧ್ಯಕ್ಷ ಡಾ. ಎ ಆರ್ ಗುರುಸ್ವಾಮಿ, ನಾಟಕ ಅಕಾಡೆಮಿ ಸದಸ್ಯ ಕಂಬಾಪುರ ಬಾಬು, ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ರಮೇಶ್ ಬಾಬು, ಕೆಎಸ್‌ಎಂ ಟ್ರಸ್ಟ್‌ನ ಕಾರ್ಯದರ್ಶಿ ಡಾ. ಬೈರೇಗೌಡ ಸೇರಿದಂತೆ ಇತರರು ಇದ್ದರು.