ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದ ಕೆಲವು ಭಾಗಗಳನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಬೇಕು ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಗುರುವಾರ ಒತ್ತಾಯಿಸಿದರು. ಈ ಪ್ರದೇಶದಲ್ಲಿ ಬಾಂಗ್ಲಾದೇಶದಿಂದ ಅಕ್ರಮ ವಲಸಿಗರ ಸಂಖ್ಯೆ ಹೆಚ್ಚುತ್ತಿದೆ ಎಂದು ದುಬೆ ಹೇಳಿದ್ದಾರೆ.
ಲೋಕಸಭೆಯ ಶೂನ್ಯ ವೇಳೆಯಲ್ಲಿ ಮಾತನಾಡಿದ ಜಾರ್ಖಂಡ್‌ನ ಗೊಡ್ಡಾ ಕ್ಷೇತ್ರದ ಸಂಸದ, ಜಾರ್ಖಂಡ್‌ನಲ್ಲಿ ಬುಡಕಟ್ಟು ಜನಸಂಖ್ಯೆಯು ಶೇಕಡಾ 10 ರಷ್ಟು ಕಡಿಮೆಯಾಗಿದೆ. ಈ ಸಮಸ್ಯೆಯನ್ನು ಪರಿಹರಿಸಲು ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಹೇಳಿದರು.
“ಮಾಲ್ಡಾ, ಮುರ್ಷಿದಾಬಾದ್, ಅರಾರಿಯಾ, ಕಿಶನ್‌ಗಂಜ್, ಕತಿಹಾರ್ ಮತ್ತು ಸಂತಾಲ್ ಪರಗಣ ಪ್ರದೇಶವನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಬೇಕೆಂದು ನಾನು ಒತ್ತಾಯಿಸುತ್ತೇನೆ. ಇಲ್ಲದಿದ್ದರೆ ಹಿಂದೂಗಳು ಕಣ್ಮರೆಯಾಗುತ್ತಾರೆ. ಅಲ್ಲಿ ಎನ್‌ಆರ್‌ಸಿ ಜಾರಿಗೆ ತರಬೇಕು” ಎಂದು ಒತ್ತಾಯಿಸಿದರು.
ಬಾಂಗ್ಲಾದೇಶದ ಮುಸ್ಲಿಮರು ಈ ಪ್ರದೇಶದಲ್ಲಿ ನೆಲೆಸಿದ್ದು, ಜಿಲ್ಲಾ ಪಂಚಾಯತ್‌ನಿಂದ ಲೋಕಸಭೆಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಬುಡಕಟ್ಟು ಮಹಿಳೆಯರನ್ನು ಮದುವೆಯಾಗುತ್ತಿದ್ದಾರೆ ಎಂದು ದುಬೆ ಹೇಳಿದ್ದಾರೆ.
“ಲೋಕಸಭೆ ಅಥವಾ ಜಿಲ್ಲಾ ಪಂಚಾಯತ್ ಚುನಾವಣೆಗೆ ಸ್ಪರ್ಧಿಸುವ ಮಹಿಳೆಯ ಪತಿ ಮುಸ್ಲಿಂ ಸಮುದಾಯದವರಾಗಿದ್ದಾರೆ. ರಾಜ್ಯದಲ್ಲಿ ಕನಿಷ್ಠ 100 ಗ್ರಾಮದಲ್ಲಿ ಇಂತಹವರಿದ್ದಾರೆ” ಎಂದು ದುಬೆ ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ದಿನಕ್ಕೆ 14 ಗಂಟೆ ಕೆಲಸ ಅಮಾನವೀಯ ನಡೆ, ಸರ್ಕಾರ ತಿರಸ್ಕರಿಸಲಿ
ಪಶ್ಚಿಮ ಬಂಗಾಳದ ಮಾಲ್ಡಾ ಮತ್ತು ಮುರ್ಷಿದಾಬಾದ್ ಜಿಲ್ಲೆಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಜಾರ್ಖಂಡ್‌ನ ಹಳ್ಳಿಗಳಿಂದ ಹಿಂದೂ ಜನಸಂಖ್ಯೆಯನ್ನು ಓಡಿಸುತ್ತಿರುವುದರಿಂದ ಸಂತಾಲ್ ಪರಗಣ ಪ್ರದೇಶದಲ್ಲಿ ಮುಸ್ಲಿಮರ ಜನಸಂಖ್ಯೆ ಹೆಚ್ಚಾಗಿದೆ ಎಂದು ಬಿಜೆಪಿ ನಾಯಕ ಹೇಳಿದರು.
ಈ ಪ್ರದೇಶದಲ್ಲಿ ಬುಡಕಟ್ಟು ಸಮುದಾಯದವರು ಶೇ.36 ರಿಂದ ಶೇ. 26ಕ್ಕೆ ಕಣ್ಮರೆಯಾಗಿದ್ದಾರೆ. ಇದಕ್ಕೆ ಜೆಎಂಎಂ ಮತ್ತು ಕಾಂಗ್ರೆಸ್ ನೇತೃತ್ವದ ನಮ್ಮ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಬಾಂಗ್ಲಾದೇಶದವರ ನುಸುಳುವಿಕೆ ನಮ್ಮ ರಾಜ್ಯಗಳಲ್ಲಿ ಹೆಚ್ಚುತ್ತಿದೆ ಎಂದು ಅವರು ಹೇಳಿದರು.
ಹಿಂದೂ ಸಮುದಾಯದ ಹಳ್ಳಿಗಳು ಖಾಲಿಯಾಗುತ್ತಿವೆ. ಇದು ಗಂಭೀರ ವಿಷಯವಾಗಿದೆ. ನಾನು ಇದನ್ನು ದಾಖಲೆಯಲ್ಲಿ ಹೇಳುತ್ತಿದ್ದೇನೆ. ಜಾರ್ಖಂಡ್ ಪೊಲೀಸರಿಗೆ ಏನನ್ನೂ ಮಾಡಲು ಸಾಧ್ಯವಾಗುತ್ತಿಲ್ಲ. ಕಿಶನ್‌ಗಂಜ್, ಅರಾರಿಯಾ, ಕತಿಹಾರ್, ಮಾಲ್ಡಾ, ಮುರ್ಷಿದಾಬಾದ್ ಪ್ರದೇಶವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಬೇಕು, ಇಲ್ಲದಿದ್ದರೆ ಹಿಂದೂಗಳು ಕಣ್ಮರೆಯಾಗುತ್ತಾರೆ ಎಂದು ದುಬೆ ಹೇಳಿದ್ದಾರೆ.
