ಮುಂದಿನ ಕಲವು ದಿನಗಳಲ್ಲಿ ಮಹಾರಾಷ್ಟ್ರ ದ ಹಲವು ಭಾಗಗಳಲ್ಲಿ ಅತಿ ಹೆಚ್ಚು ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವುದರಿಂದ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದ್ದು, ಹಲವು ಜಾಗೃತಗೊಳಿಸುವ ಸರ್ಕಾರಿ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ.
ತನ್ನ ಬುಲೆಟಿನ್‌ನಲ್ಲಿ ತಿಳಿಸಿರುವ ಹವಾಮಾನ ಇಲಾಖೆಯು, ಜುಲೈ 26 ಮತ್ತು 27 ರಂದು ಮಧ್ಯ ಮಹಾರಾಷ್ಟ್ರದ ಕೆಲವು ಭಾಗಗಳು, ಕೊಂಕಣ ಪ್ರದೇಶ ಮತ್ತು ರಾಜ್ಯದ ಇತರ ಪ್ರದೇಶಗಳಲ್ಲಿ ” ಭಾರೀ ಮಳೆ” ಆಗಲಿದೆ ಎಂದು ಹೇಳಿದೆ.
ಮುಂಬೈ ಮತ್ತು ಪುಣೆಯಲ್ಲಿಯೂ ಹವಾಮಾನ ಇಲಾಖೆಯು ‘ರೆಡ್ ಅಲರ್ಟ್’ ನೀಡಿದ್ದು, ಭಾರಿ ಮಳೆ ಸುರಿಯುತ್ತಿದೆ.
ಮಳೆಯ ಹಿನ್ನೆಲೆಯಲ್ಲಿ, ಶುಕ್ರವಾರ ಎಲ್ಲ ಶಾಲಾ-ಕಾಲೇಜುಗಳು ತೆರೆದಿರುತ್ತವೆ ಎಂದು ಬೃಹನ್ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ದಿನಕ್ಕೆ 14 ಗಂಟೆ ಕೆಲಸ ಅಮಾನವೀಯ ನಡೆ, ಸರ್ಕಾರ ತಿರಸ್ಕರಿಸಲಿ
“ಮುಂಬೈನಲ್ಲಿ ಪ್ರಸ್ತುತ ಹವಾಮಾನದಂತೆ ಮಳೆ ಸಾಮಾನ್ಯವಾಗಿದ್ದು, ಮೆಟ್ರೋಪಾಲಿಟನ್ ನಗರದಲ್ಲಿ ಜನಜೀವನವು ಸುಗಮವಾಗಿ ಮುಂದುವರಿಯಲು ಅನುವು ಮಾಡಿಕೊಡುತ್ತದೆ. ಬಿಎಂಸಿ ಪ್ರದೇಶದ ಎಲ್ಲ ಶಾಲಾ-ಕಾಲೇಜುಗಳು ಶುಕ್ರವಾರದಂದು ನಿಯಮಿತವಾಗಿ ತೆರೆದಿರುತ್ತವೆ. ಶಾಲಾ ಮತ್ತು ಕಾಲೇಜು ರಜೆಗಳಿಗೆ ಸಂಬಂಧಿಸಿದ ಯಾವುದೇ ಮಾಹಿತಿ ಅಥವಾ ವದಂತಿಗಳನ್ನು ನಂಬಬೇಡಿ. ಬಿಎಂಸಿಯ ಅಧಿಕೃತ ಮಾಹಿತಿಯನ್ನು ಮಾತ್ರ ಅವಲಂಬಿಸಬೇಕು” ಎಂದು ಬಿಎಂಸಿ ಪ್ರಕಟಣೆಯಲ್ಲಿ ತಿಳಿಸಿದೆ.
ಇದಕ್ಕೂ ಮುನ್ನ ಗುರುವಾರ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಉಪಮುಖ್ಯಮಂತ್ರಿಗಳಾದ ಅಜಿತ್ ಪವಾರ್ ಮತ್ತು ದೇವೇಂದ್ರ ಫಡ್ನವಿಸ್ ಅವರೊಂದಿಗೆ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಪರಿಶೀಲಿಸಲು ಉನ್ನತ ಮಟ್ಟದ ಸಭೆಯನ್ನು ಕರೆದಿದ್ದರು.
ಸಭೆಯ ನಂತರ ಮಾತನಾಡಿದ ಮುಖ್ಯಮಂತ್ರಿಗಳು, ಪುಣೆ, ಮಾವಲ್ ಮತ್ತು ಮುಲ್ಶಿ ಅಣೆಕಟ್ಟು ಪ್ರದೇಶದಲ್ಲಿ ಭಾರೀ ಮಳೆಯಾಗಿದೆ. ಮುಂಬೈ ನಗರ ಮತ್ತು ಉಪನಗರಗಳಲ್ಲಿಯೂ ಹೆಚ್ಚು ಮಳೆಯಾಗಿದೆ. ಮುಂಬೈನಲ್ಲಿ ಯಾವುದೇ ವಿಪತ್ತು ಎದುರಿಸಲು ಆಡಳಿತವು ಸಂಪೂರ್ಣ ಸಜ್ಜಾಗಿದೆ. ಪರಿಹಾರ ಕಾರ್ಯಾಚರಣೆಗಳನ್ನು ವೇಗಗೊಳಿಸಲು ಮತ್ತು ಸಹಾಯ ನೀಡಲು ರಾಜ್ಯಾದ್ಯಂತ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಘಟಕಗಳು, ಭೂಸೇನೆ, ನೌಕಾಪಡೆ, ಪೊಲೀಸ್, ಅಗ್ನಿಶಾಮಕ ದಳ ಮತ್ತು ವೈದ್ಯರ ತಂಡಗಳನ್ನು ಸಜ್ಜುಗೊಳಿಸಲಾಗಿದೆ ಎಂದು ಹೇಳಿದರು.
“ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಸೇನೆ, ನೌಕಾಪಡೆ, ಪೊಲೀಸ್, ಅಗ್ನಿಶಾಮಕ ದಳ, ಆರೋಗ್ಯ ವ್ಯವಸ್ಥೆಗಳ ಘಟಕಗಳು ಪರಸ್ಪರ ಸಮನ್ವಯ ಸಾಧಿಸಿ ಸಹಾಯ ಮಾಡಲು ಸೂಚಿಸಲಾಗಿದೆ” ಎಂದು ಏಕನಾಥ್ ಶಿಂಧೆ ತಿಳಿಸಿದ್ದಾರೆ.