ಮೈಸೂರು ಜಿಲ್ಲೆ ಹೆಗ್ಗಡ ದೇವನ ಕೋಟೆ(ಹೆಚ್ ಡಿ ಕೋಟೆ) ತಾಲೂಕಿನ ಡಿ ಬಿ ಕುಪ್ಪೆ ಗ್ರಾಮ ಪಂಚಾಯಿತಿ ಎದುರು ಅಖಿಲ ಭಾರತ ಜನಾಧಿಕಾರ ಸುರಕ್ಷಾ ಸಮಿತಿ(AIJASC) ನೇತೃತ್ವದಲ್ಲಿ ಆದಿವಾಸಿ ಜನರಿಗೆ ಮೂಲಭೂತ ಸೌಕರ್ಯವನ್ನು ಒದಗಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಮಾತನಾಡಿದ ಸುನಿಲ್ ಟಿ ಆರ್, “ಡಿ ಬಿ ಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಸಿಸುವ ಬಹುತೇಕ ಜನರು ಪರಿಶಿಷ್ಟ ಪಂಗಡ ಹಾಗೂ ಅರಣ್ಯ ಆಧಾರಿತ ಮೂಲ ಬುಡಕಟ್ಟು ಜನಾಂಗವರಾಗಿದ್ದಾರೆ. ಕೇರಳ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ಗಡಿ ಪ್ರದೇಶದಲ್ಲಿದ್ದು, ಪ್ರಾಕೃತಿಕವಾಗಿ ನಾಗರಹೊಳೆ ರಾಷ್ಟ್ರೀಯ ಅಭಯಾರಣ್ಯ, ಇನ್ನೊಂದೆಡೆ ಕಪಿಲಾ ನದಿ ಹರಿಯುವ ಸುಂದರವಾದ ಭೂ ಪ್ರದೇಶದಲ್ಲಿ ವಾಸಿಸುವ ಈ ಜನರ ಬದುಕು ಮಾತ್ರ ಹಸನಾಗಿಲ್ಲ” ಎಂದು ಹೇಳಿದರು.
“ಬಹುತೇಕ ಆದಿವಾಸಿ ಜನರು ಜೀವನೋಪಾಯಕ್ಕಾಗಿ ಅರಣ್ಯ ಕಿರು ಉತ್ಪನ್ನಗಳ ಸಂಗ್ರಹಣೆ ಹಾಗೂ ಕೃಷಿ ಭೂಮಿ ಇಲ್ಲದಿರುವುದರಿಂದ ಕೇರಳ ಹಾಗೂ ಕೊಡಗಿನ ಎಸ್ಟೇಟ್‌ಗಳಿಗೆ ವಲಸೆ ಹೋಗಿ ಕೃಷಿ ಕೂಲಿ
ಕಾರ್ಮಿಕರಾಗಿದ್ದಾರೆ. ಅನಕ್ಷರತೆ, ಅಪೌಷ್ಟಿಕತೆ, ಬಡತನ ಹಾಗೂ ಕಾನೂನಿನ ಅರಿವಿಲ್ಲದ ಮುಗ್ಧರಾಗಿದ್ದಾರೆ. ಇವರಿಗೆ ವಾಸಿಸಲು ಯೋಗ್ಯವಾದ ಮನೆ, ಶೌಚಾಲಯ, ಕುಡಿಯುವ ನೀರು, ವಿದ್ಯುತ್ ಸಂಪರ್ಕ, ರಸ್ತೆ, ಇನ್ನಿತರ ಕನಿಷ್ಠ ಮೂಲಭೂತ ಸೌಕರ್ಯಗಳು ಸಿಗದೇ ವಂಚಿತರಾಗಿದ್ದಾರೆ” ಎಂದು ತಿಳಿಸಿದರು.
“ಸರ್ಕಾರದಿಂದ ಮನೆ ಮಂಜೂರಾದರೂ ಸಹ ಅರಣ್ಯ ಇಲಾಖೆ ಹಕ್ಕು ಪತ್ರದ ನೆಪ ಹೇಳಿ ಕಟ್ಟಲು ಬಿಡುತ್ತಿಲ್ಲ. ಸರ್ಕಾರ ಕೊಡುವ ಪುಡಿಗಾಸಿನ ಹಣದಲ್ಲಿ ಅರ್ಧದಷ್ಟು ಹಣ ಓಡಾಟಕ್ಕೆ ಖರ್ಚಾಗುತ್ತದೆ. ಅದಲ್ಲದೆ, ಅಡಿಪಾಯ ಹಾಕುವುದರಿಂದ ಹಿಡಿದು, ಮೇಲ್ಛಾವಣಿ ಹಾಕುವವರೆಗೂ ಲಂಚ ಇಲ್ಲದೆ ಒಂದು ಕೆಲಸವೂ ಸಹ ಮುಂದೆ ಹೋಗುವುದಿಲ್ಲ ಎನ್ನುವ ಪರಿಸ್ಥಿತಿ ಇದೆ. ಮನೆ ಕಟ್ಟಲೇಬೇಕಾದ ಅನಿವಾರ್ಯತೆ ಇರುವ ಮುಗ್ಧ ಜನರ ಅಸಹಾಯಕತೆಯನ್ನು ಬಳಸಿಕೊಂಡ ಅಧಿಕಾರಿಗಳು, ಜನಪ್ರತಿನಿಧಿಗಳು ಜನರನ್ನು ದುರುಪಯೋಗ ಪಡಿಸಿಕೊಳ್ಳುತ್ತ ತಮ್ಮ ರಾಜಕೀಯ ಇಚ್ಛಾಶಕ್ತಿಗೆ ಬಳಸಿಕೊಳ್ಳುತ್ತಾ ಇದ್ದಾರೆ” ಎಂದು ಆರೋಪಿಸಿದರು.
ಬಳಿಕ ಮಾತನಾಡಿದ ಗೌರಿ, “ರಾಜ್ಯದಲ್ಲಿ ಅಚ್ಚರಿ ಪಡಬೇಕಾದ ವಿಚಾರ ಅಂದರೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಾಲ್ಕು ಮದ್ಯದಂಗಡಿ ಹೊಂದಿರುವ ಪಂಚಾಯಿತಿ ಅಂದ್ರೆ ಇದೆ ಇರಬೇಕು. ಇಲ್ಲಿ ಆದಿವಾಸಿ ಮಕ್ಕಳಿಗೆ ಶಿಕ್ಷಣ, ಆರೋಗ್ಯ ಮೂಲಭೂತ ಸೌಕರ್ಯಗಳು, ಪೌಷ್ಟಿಕ ಆಹಾರ ಸಿಗದಿದ್ದರು, ಜೀವನವನ್ನೆ ಹಾಳುಗೆಡುವ ಮದ್ಯ ಸಿಗುವ ಅವಕಾಶ ಕಲ್ಪಿಸಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಸ್ವಚ್ಛ ಭಾರತ ಬರೀ ಘೋಷಣೆಯಾಗಿಯೇ ಉಳಿದಿದ್ದು ಇಂದಿಗೂ ಸಹ ಈ ಭಾಗದ ಮಹಿಳೆಯರು, ಮಕ್ಕಳು, ಜನರು ಬಯಲಿನಲ್ಲೇ ಶೌಚಾಲಯಕ್ಕೆ ಹೋಗುವ ಪರಿಸ್ಥಿತಿ ಇದೆ. ಮಳೆಗಾಲದಲ್ಲಂತು ಮಹಿಳೆಯರು ಬಹಳ ಆತಂಕದಲ್ಲಿ ಓಡಾಡುವ ಪರಿಸ್ಥಿತಿ ಇರುತ್ತದೆ” ಎಂದರು.
ಪಂಚಾಯಿತಿ ನೌಕರ ಮಂಜು ಅವರಿಗೆ ಗೋಳೂರು ಹಾಡಿಯ ಗಂಗೆ, ಗೌರಿ, ಪುಟ್ಟಿ, ಕಾಳಿ, ಅಶೋಕ, ಮಣಿ, ಬಾವಲಿ ಹಾಡಿಯ ಪೊನ್ನಮ್ಮ, ಕಣ್ಣ, ಮೀನಾಕ್ಷಿ, ಬಳ್ಳೆ ಹಾಡಿಯ ವಾಣಿ, ಮೂಲೆಯೂರು ಹಾಡಿ, ವಡಕನಮಾಳ, ಮಚ್ಚೂರು, ತಿಮ್ಮನ ಹೊಸಳ್ಳಿ ಗ್ರಾಮಕ್ಕೆ ಸೇರಿದ ಸಂತ್ರಸ್ತರು ಹಾಗೂ ಮುಖಂಡರು ಮನವಿ ಸಲ್ಲಿಸಿದರು.
ಆದಿವಾಸಿ ಜನರ ಹಕ್ಕೊತ್ತಾಯಗಳು
- ಗೋಳೂರು ಹಾಡಿಗೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಮಾಡಿ, ಮನೆ ಮನೆಗೆ ನಲ್ಲಿ ವ್ಯವಸ್ಥೆ ಮಾಡಬೇಕು.
- ಗೋಳೂರು ಹಾಡಿಯಲ್ಲಿ ಅವಶ್ಯಕತೆ ಇರುವ ಪ್ರತಿಯೊಬ್ಬರಿಗೂ ಮನೆ ಹಾಗೂ ಶೌಚಾಲಯ ನಿರ್ಮಿಸಬೇಕು
- ಡಿ ಬಿ ಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಲ್ಲ ಆದಿವಾಸಿ ಹಾಡಿಗಳ ಮನೆಗಳಿಗೆ ಪ್ರತ್ಯೇಕ ಶೌಚಾಲಯದ ವ್ಯವಸ್ಥೆ ಮಾಡಬೇಕು.
- ಡಿ ಬಿ ಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಆದಿವಾಸಿ ಹಾಡಿಗಳಿಗೂ ವಿದ್ಯುತ್ ಸಂಪರ್ಕ, ರಸ್ತೆ, ಕುಡಿಯುವ ನೀರು, ಮನೆ, ಶೌಚಾಲಯ ಇತರೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು
- ಶಿಥಿಲಾವಸ್ಥೆಯಲ್ಲಿರುವ ಬಳ್ಳೆ, ಗೋಳೂರು ಹಾಗೂ ಆನೆಮಾಳ ಹಾಡಿಗಳ ಸರ್ಕಾರಿ ಶಾಲೆಗಳಿಗೆ ಹೊಸ ಕಟ್ಟಡಗಳನ್ನು ನಿರ್ಮಿಸಬೇಕು.
- ಕಳಪೆ ಕಾಮಗಾರಿಯಿಂದಾಗಿ ಸೋರುತ್ತಿರುವ ಬಾವಲಿ ಹಾಡಿ ಅಂಗನವಾಡಿಯನ್ನು ಈ ಕೂಡಲೇ ಸರಿಯಾದ ಗುಣಮಟ್ಟದಲ್ಲಿ ನಿರ್ಮಿಸಬೇಕು.
- ಮಾನಿ ಮೂಲೆ ಹಾಗೂ ಆನೆಮಾಳ ಹಾಡಿಗೆ ಶಾಶ್ವತ ಅಂಗನವಾಡಿ ಕಟ್ಟಡವನ್ನು ನಿರ್ಮಿಸಬೇಕು.
- ನೆರೆ ಸಂತ್ರಸ್ತರು ಹಾಗೂ ಕಾಡು ಪ್ರಾಣಿಗಳ ದಾಳಿಯಿಂದಾಗಿ ತೊಂದರೆಯಾಗಿರುವ ಕುಟುಂಬಗಳಿಗೆ ಈ ಕೂಡಲೇ ಸೂಕ್ತ ಪರಿಹಾರವನ್ನು ಒದಗಿಸಬೇಕು.
- ಗ್ರಾಮ ಪಂಚಾಯಿತಿಯಿಂದ ವಿದ್ಯಾರ್ಥಿಗಳಿಗೆ ನೀಡುವ ಪ್ರೋತ್ಸಾಹ ಧನವನ್ನು ವಿತರಿಸಬೇಕು.
- ಆದಿವಾಸಿಗಳ ಹಿತಕ್ಕೆ ಮಾರಕವಾದ ಅರಣ್ಯ ಸಂರಕ್ಷಣಾ ತಿದ್ದುಪಡಿ ಮಸೂದೆ 2023 ಮತ್ತು ಅರಣ್ಯ ಸಂರಕ್ಷಣಾ ನಿಯಮಾವಳಿ 2022ನ್ನು ರದ್ದುಗೊಳಿಸಬೇಕು. ಅರಣ್ಯ ಹಕ್ಕು ಕಾಯ್ದೆ 2006ನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸಬೇಕು. ಕಾರ್ಪೊರೇಟ್ ಕಂಪನಿಗಳ ಲಾಭಕ್ಕಾಗಿ ಅರಣ್ಯವನ್ನು ನಾಶಪಡಿಸುವ ನೀತಿಯನ್ನು ಕೈಬಿಡಬೇಕು.
- ಎಲ್ಲ ಆದಿವಾಸಿಗಳಿಗೆ ಅರಣ್ಯ ಭೂಮಿಗಾಗಿ ಹಕ್ಕು ಪತ್ರವನ್ನು ವಿತರಿಸಬೇಕು. ಹಕ್ಕುಪತ್ರ ವಿತರಿಸಿರುವವರಿಗೆ ವಾಸಿಸಲು ಮನೆ ಹಾಗೂ ಹಿಂದಿನಿಂದಲೂ ಕೃಷಿ ಮಾಡಿಕೊಂಡು ಬರುತ್ತಿದ್ದ ಭೂಮಿಗಳಿಗೂ ಕೃಷಿ ಮಾಡಲು ಅವಕಾಶ ನೀಡಬೇಕು. ಕಾಡು ಪ್ರಾಣಿಗಳು ಹಾಡಿ ಕಡೆಗೆ ಬರದಂತೆ ಸೋಲಾರ್ ಅಥವಾ ರೈಲು ಕಂಬಿಯನ್ನು ನಿರ್ಮಿಸಿ ಸೂಕ್ತ ಭದ್ರತೆ ಒದಗಿಸಬೇಕು.
- ಕುಡುಗೋಲು ಕಣ ರಕ್ತಹೀನತೆ ರೋಗಿಗಳಿಗೆ ವಿಶಿಷ್ಟ ಗುರುತಿನ ಚೀಟಿ, ಆಧಾರ್ ಕಾರ್ಡ್, ರೇಷನ್ ಕಾರ್ಡ್, ಜಾತಿ, ಆದಾಯ ಇನ್ನಿತರ ಅಗತ್ಯ ದಾಖಲಾತಿಗಳನ್ನು ಮಾಡಿಸಲು ಹಾಗೂ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ನೀಡಲು ಶಿಬಿರಗಳನ್ನು ಮಾಡಬೇಕು.
- ಬಾವಲಿ ಹಾಡಿಯ ನೀರು ಸೌಲಭ್ಯ ಇಲ್ಲದ ಐದು ಮನೆಗಳಿಗೆ ಈ ಕೂಡಲೇ ನೀರಿನ ವ್ಯವಸ್ಥೆ ಮಾಡಬೇಕು. ಎಲ್ಲ ಹಾಡಿಗಳಿಗೂ ಮನೆ ಮನೆಗೆ ನೀರಿನ ಸಂಪರ್ಕ ಕಲ್ಪಿಸಬೇಕು.
- ಮೂಲೆಯೂರು ಹಾಡಿಗೆ ಮನೆ, ಶೌಚಾಲಯ, ವಿದ್ಯುತ್ ಸಂಪರ್ಕ ಕಲ್ಪಿಸಬೇಕು.
- ಮಚ್ಚೂರು ಗ್ರಾಮದ ಗೋವಿಂದ ಎಂಬುವವರ ಪತ್ನಿ ಜಯಮ್ಮ ಮನೆಯ ಮೇಲೆ ಮಳೆಯಿಂದಾಗಿ ಮರ ಬಿದ್ದಿದ್ದು, ಈ ಕೂಡಲೇ ಸೂಕ್ತ ಪರಿಹಾರವನ್ನು ನೀಡಿ, ಹೊಸ ಮನೆಯನ್ನು ಮಂಜೂರು ಮಾಡಬೇಕು.
- ವಡಕನ ಮಾಳ ಗ್ರಾಮದ ಕೃಷ್ಣ, ಶ್ರೀನಿವಾಸ ಸೇರಿದಂತೆ ಗ್ರಾಮ ಪಂಚಾಯಿತಿಯಿಂದ ವಿದ್ಯಾರ್ಥಿಗಳಿಗೆ ನೀಡುವ ಪ್ರೋತ್ಸಾಹ ಧನವನ್ನು ವಿತರಿಸಬೇಕು.