ವಿದ್ಯುತ್ ಸ್ಪರ್ಶದಿಂದ ಬಾಲಕಿ ಸಾವನ್ನಪ್ಪಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿರುವ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನಲ್ಲಿ ನಡೆದಿದೆ.
ಎಲ್ಲೆಡೆ ಮಳೆಯಾಗುತ್ತಿದ್ದು, ಅಪಾರ ಹಾನಿಯಾಗುತ್ತಿದೆ. ಮಳೆ, ಗಾಳಿ ಹೆಚ್ಚಾಗಿ ಜಾನುವಾರಗಳು ಮನೆ ಕಟ್ಟಡಗಳು ದುಃಸ್ತಿತಿಯಲ್ಲಿವೆ. ಬಹುತೇಕ ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿ ಗಿಡ ಮರಗಳಿಗೆ ತಗುಲಿ ಹಲವು ಕಡೆ ವಿದ್ಯುತ್ ಸ್ಪರ್ಶವಾಗುತ್ತಿದೆ.
ಅರಸೀಕೆರೆ ತಾಲೂಕಿನ ಕಾಮಸಮುದ್ರ ಗ್ರಾಮ ಪಂಚಾಯಿತಿ ಪಡುವನಹಳ್ಳಿ ಭೋವಿ ಕಾಲೋನಿಯಲ್ಲಿ ಶೇಖರ್ ಹಾಗೂ ಕರಿಯಮ್ಮ ದಂಪತಿಯ ಮಗಳು ತನುಜಾ(15) ಗುರುವಾರ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದಾರೆ.
ಸ್ಥಳೀಯ ಮುಖಂಡ ಶಿವಣ್ಣ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಶುಂಠಿ ಜಮೀನಿನಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ದಂಪತಿ ಮಗಳನ್ನು ನೋಡಬೇಕೆಂದು ಶಾಲೆಗೆ ರಜೆ ಮಾಡಿಸಿ, ಶುಂಠಿ ಜಮೀನಿನ ಬಳಿ ಕರೆಸಿಕೊಂಡಿದ್ದರು. ನೆನ್ನೆ ಸಂಜೆ 5:30ರ ಸಮಯದಲ್ಲಿ ಮಳೆ ಸುರಿಯುತ್ತಿರುವುದರಿಂದ ತೆಂಗಿನಮರದ ಬುಡದಲ್ಲಿ ತನುಜಾ ನಿಂತಿದ್ದಳು. ಮರ ಹಸಿಯಾಗಿದ್ದರಿಂದ ವಿದ್ಯುತ್ ತಂತಿ ಮರಕ್ಕೆ ತಗುಲಿದ್ದರಿಂದ ಪಕ್ಕದಲ್ಲಿದ್ದ ತನುಜಾಳಿಗೆ ವಿದ್ಯುತ್ ಸ್ಪರ್ಶಿಸಿ ಮೃತ ಪಟ್ಟಿದ್ದಾಳೆ. ಅಲ್ಲಿದ್ದ ಜನರು ಹಾಗೂ ಪೋಷಕರು ಕೂಡಲೇ ತಿಪಟೂರು ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಮಗಳ ಪ್ರಾಣ ಉಳಿಬಹುದೆಂದು ವೈದ್ಯರು ಪರೀಕ್ಷಿಸಿದ್ದಾರೆ. ಆದರೆ, ಅಷ್ಟರಲ್ಲೇ ತನುಜಾಳ ಪ್ರಾಣ ಹೋಗಿರುವುದಾಗಿ ವೈದ್ಯರು ತಿಳಿಸಿದ್ದಾರೆ” ಎಂದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ದಿಢೀರ್ ಕುಸಿದ ಶಾಲೆಯ ಮೇಲ್ಛಾವಣಿ; ಸ್ವಲ್ಪದರಲ್ಲೇ ಪಾರಾದ ವಿದ್ಯಾರ್ಥಿಗಳು
“ಕೂಲಿ ಕೆಲಸ ಮಾಡಿ ಬದುಕು ಸಾಗಿಸುತ್ತಿದ್ದ ದಂಪತಿ ಮಗಳಿಗೆ ವಿದ್ಯಾಭ್ಯಾಸ ಕೊಡಿಸಿ ವಿದ್ಯಾವಂತಾಳಾಗಿ ಮಾಡಬೇಕೆಂದು ಆಸೆಪಟ್ಟಿದ್ದ ಪೋಷಕರು ಇದೀಗ ಮಗಳನ್ನು ಕಳೆದುಕೊಂಡು ಗೋಳಾಡುತ್ತಿದ್ದಾರೆ. ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಹಾಗೂ ಪಡುವನಹಳ್ಳಿ ಭೋವಿ ಕಾಲೊನಿ ಜನರು ಹದಿಹರೆಯದ ತನುಜಾಳನ್ನು ಕಳೆದುಕೊಂಡು ಕಣ್ಣೀರಿಡುತ್ತಿದ್ದಾರೆ. ಸಂಬಂದ ಪಟ್ಟ ಅಧಿಕಾರಿಗಳು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿರುವ ತನುಜಾಳ ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರ ದೊರಕಿಸಿಕೊಡಬೇಕು” ಎಂದು ಒತ್ತಾಯಿಸಿದರು.
