ಕಳೆದ ವಾರದಿಂದ ಸುರಿಯುತ್ತಿರುವ ಜಿಟಿಜಿಟಿ ಮಳೆಗೆ ಜಿಲ್ಲೆಯ ಜನಜೀವನ ಅಸ್ತವ್ಯಸ್ತಗೊಂಡಿದೆ. ಒಂದೇ ವಾರದಲ್ಲಿ ಜಿಲ್ಲಾದ್ಯಂತ 204ಕ್ಕೂ ಅಧಿಕ ಮನೆಯ ಗೋಡೆಗಳು ಕುಸಿದು ಬಿದ್ದು ಹಾನಿಗೊಳಗಾದ ಬಗ್ಗೆ ಜಿಲ್ಲಾಡಳಿತ ಮಾಹಿತಿ ನೀಡಿದೆ.
ನಗರ ಸೇರಿದಂತೆ ಗ್ರಾಮೀಣ ಭಾಗದ ಹಳ್ಳಿಗಳಲ್ಲಿ ಮೂಲ ಸೌಕರ್ಯಗಳಾದ ಚರಂಡಿ, ಸಿಸಿ ರಸ್ತೆ, ಶುದ್ಧ ಕುಡಿಯುವ ನೀರಿನ ಸಮಸ್ಯೆ ಸೇರಿ ಇತ್ಯಾದಿ ಸಮಸ್ಯೆಗಳು ಎದುರಾಗಿವೆ.
ಈ ಬಗ್ಗೆ ಈದಿನ.ಕಾಮ್ ಬೀದರ್ ಸಹಾಯವಾಣಿಗೆ ಸಾರ್ವಜನಿಕರು ಕಳುಹಿಸಿದ ಕುಂದು ಕೊರತೆ ಇಲ್ಲಿವೆ.
ಬೀದರ್ : ಕನಸಾಗೇ ಉಳಿದ ಜಿಲ್ಲಾಡಳಿತ ಕಚೇರಿಗಳ ಸಂಕೀರ್ಣ!
ವಾರದಿಂದ ಬಿಟ್ಟು ಬಿಡದೇ ಸತತವಾಗಿ ಸುರಿಯುತ್ತಿರುವ ಜಿಟಿಜಿಟಿ ಮಳೆಯಿಂದ ಬೀದರ್ ಜಿಲ್ಲಾಡಳಿತ ಕಚೇರಿಯ ಹಿಂಬದಿಯ ಆವರಣ ಕೆಸರು ಗದ್ದೆಯಂತಾಗಿದೆ.
ಜಿಲ್ಲಾಧಿಕಾರಿಗಳ ಕಚೇರಿಯ ಹಿಂದುಗಡೆ ಸಿಸಿ ರಸ್ತೆ ಸಹ ಇಲ್ಲ. ಹೀಗಾಗಿ ಮಳೆಯಾದರೆ ಇಡೀ ಆವರಣದಲ್ಲಿ ನೀರು ಸಂಗ್ರಹವಾಗುತ್ತದೆ. ವಿವಿಧ ಕೆಲಸ ಕಾರ್ಯಗಳಿಗಾಗಿ ನಿತ್ಯ ನೂರಾರು ಸಂಖ್ಯೆಯಲ್ಲಿ ಆಗಮಿಸುವ ಸಾರ್ವಜನಿಕರು ಕೆಸರಿನಲ್ಲೇ ಓಡಾಡಬೇಕಾದ ಪರಿಸ್ಥಿತಿ ಇದೆ.

ಜಿಲ್ಲೆಯ ಜನರಿಗೆ ಮೊದಲೇ ಡೆಂಗ್ಯೂ ರೋಗದ ಭೀತಿ ಕಾಡುತ್ತಿದೆ. ಆದರೆ, ಜಿಲ್ಲಾಡಳಿತ ಕಚೇರಿ ಸುತ್ತಮುತ್ತವೇ ಅಸ್ವಚ್ಛತೆ ಎದ್ದು ಕಾಣುತ್ತಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ಸ್ವಚ್ಛಗೊಳಿಸಬೇಕು ಎಂದು ಕನ್ನಡ ಹೋರಾಟಗಾರ ಗುರುದಾಸ ಅಮದಾಲಪಾಡ್ ಆಗ್ರಹಿಸಿದರು.
ಜಿಲ್ಲಾಧಿಕಾರಿ ಕಚೇರಿ ಹಾಗೂ ನಗರ ಸಭೆ ಕಚೇರಿ ಇರುವ ಸ್ಥಳದಲ್ಲೇ ನೂತನ ಜಿಲ್ಲಾಡಳಿತ ಕಚೇರಿಗಳ ಸಂಕೀರ್ಣ ನಿರ್ಮಿಸಲಾಗುವುದು. ಇದಕ್ಕಾಗಿ ಅಂದಾಜು 100 ಕೋಟಿ ರೂ. ಅನುದಾನದ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಲಾಗಿದೆ, ಫೆಬ್ರವರಿ ಮೊದಲ ವಾರದಲ್ಲಿ ಸಚಿವ ಸಂಪುಟದ ಅನುಮೋದನೆ ಪಡೆದು ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಮಂತ್ರಿ ಈಶ್ವರ ಖಂಡ್ರೆಯವರು ಕಳೆದ ಆಗಸ್ಟ್ ತಿಂಗಳಲ್ಲಿ ಹೇಳಿದರು.
ಆದರೆ ಇಲ್ಲಿಯವರೆಗೆ ಯಾವುದೇ ಕಾರ್ಯ ನಡೆಯದೇ ಹೊಸ ಜಿಲ್ಲಾಡಳಿತ ಕಚೇರಿಗಳ ಸಂಕೀರ್ಣ ಕನಸಾಗೇ ಉಳಿದಿದೆ ಎಂದು ಸಾಮಾಜಿಕ ಕಾರ್ಯಕರ್ತರಾದ ಜಗದೀಶ್ವರ ಬಿರಾದರ್ ಅಸಮಧಾನ ವ್ಯಕ್ತಪಡಿಸುತ್ತಾರೆ.
ಹುಮನಾಬಾದ್ : ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿಗೆ ಮನವಿ
ಹುಮನಾಬಾದ್ ತಾಲೂಕಿನ ಮಾಣಿಕನಗರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಗಡವಂತಿ ಹಾಗೂ ಮೊಳಕೇರಾ ಗ್ರಾಮಗಳಲ್ಲಿ ಅಳವಡಿಸಲಾದ ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟು ಹೋಗಿ ಹಲವು ತಿಂಗಳು ಕಳೆದರೂ ಸಂಬಂಧಪಟ್ಟ ಅಧಿಕಾರಿಗಳು ದುರಸ್ತಿಗೊಳಿಸಲು ಮುಂದಾಗುತ್ತಿಲ್ಲ.

ಗ್ರಾಮೀಣ ಭಾಗದ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಸರ್ಕಾರ ಲಕ್ಷಾಂತರ ರೂಪಾಯಿ ವೆಚ್ಚದಿಂದ ನಿರ್ಮಿಸಿದ ಶುದ್ಧ ನೀರಿನ ಘಟಕಗಳು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ನಿರುಪಯುಕ್ತವಾಗಿವೆ.

ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಎರಡು ಗ್ರಾಮಗಳ ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿಗೊಳಿಸಿ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಬೇಕೆಂದು ಸಾಮಾಜಿಕ ಕಾರ್ಯಕರ್ತ ಶಶಿಕಾಂತ್ ಡಾಂಗೆ ಹಾಗೂ ಭೀಮರೆಡ್ಡಿ ಸಿಂಧನಕೇರಾ ಒತ್ತಾಯಿಸಿದ್ದಾರೆ.
ಕಮಲನಗರ : ಪ್ರಾಣಕ್ಕೆ ಸಂಚಕಾರವಾದ ಸೇತುವೆ ಮೇಲಿನ ರಸ್ತೆ
ಕಮಲನಗರ ತಾಲೂಕಿನ ಗಡಿ ಗ್ರಾಮ ದಾಬಕಾ(ಸಿಎಚ್) ದಿಂದ ಖೇರ್ಡಾ(ಬಿ) ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮಧ್ಯೆ ದಾಬಕಾ ಗ್ರಾಮದ ಬಳಿಯಿರುವ ಸೇತುವೆ ಮೇಲಿನ ರಸ್ತೆ ಸಂಪೂರ್ಣ ಹದಗೆಟ್ಟು ತಗ್ಗು ಗುಂಡಿಗಳು ಬಿದ್ದು ಮಳೆ ನೀರು ಸಂಗ್ರಹವಾಗಿದೆ.
ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಸೇತುವೆ ಮೇಲೆ ಮೊಳಕಾಲುದ್ದ ತಗ್ಗು ಬಿದ್ದು ನೀರು ಸಂಗ್ರಹವಾದ ಕಾರಣ ವಾಹನ ಸವಾರರು ಓಡಾಡಲು ಹರಸಾಹಸ ಪಡುತ್ತಿದ್ದಾರೆ. ಅಲ್ಲದೇ ಸ್ವಲ್ಪ ಆಯಾ ತಪ್ಪಿದರೂ ಅವಘಡ ಕಟ್ಟಿಟ್ಟ ಬುತ್ತಿ ಎನ್ನುವಂತಿದೆ.

ಗಂಗನಬೀಡ, ಚಿಕ್ಲಿ(ಯು) ದಾಬಕಾ, ಖೇರ್ಡಾ(ಬಿ) ಗ್ರಾಮಗಳ ಜನರು ಜೀವ ಕೈಲಿಹಿಡಿದು ಸಂಚರಿಸಬೇಕಾದ ಪರಿಸ್ಥಿತಿ ಇದೆ. ಮಹಾರಾಷ್ಟ್ರ ಹಾಗೂ ಕರ್ನಾಟಕ ಸಾರಿಗೆ ಬಸ್ ಸೇರಿದಂತೆ ನಿತ್ಯ ನೂರಾರು ವಾಹನಗಳು ಇದೇ ತಗ್ಗು, ಗುಂಡಿ ದಾಟಬೇಕಾಗಿರುವುದು ಅನಿವಾರ್ಯವಾಗಿದೆ.
ದೊಡ್ಡ ಅವಘಡಗಳು ನಡೆಯುವ ಮುನ್ನ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕೂಡಲೇ ದುರಸ್ತಿಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ದಾಬಕಾ(ಸಿಎಚ್) ಗ್ರಾಮ ಪಂಚಾಯತ್ ಸದಸ್ಯ ಸಂತೋಷ ಜಾಧವ್ ಆಗ್ರಹಿಸಿದ್ದಾರೆ.
ಔರಾದ್ : ಗುಡಪಳ್ಳಿ ಗ್ರಾಮದಲ್ಲಿ ಸಿಸಿ ರಸ್ತೆ ನಿರ್ಮಿಸಿ
ಔರಾದ ತಾಲೂಕಿನ ಗುಡಪಳ್ಳಿ ಗ್ರಾಮ ಪಂಚಾಯತ್ ಕೇಂದ್ರ ಸ್ಥಾನದ ಗುಡಪಳ್ಳಿ ಗ್ರಾಮದ ವಿವಿಧ ಓಣಿಯಲ್ಲಿ ಸೂಕ್ತ ರಸ್ತೆ ಇಲ್ಲದೆ ಸಾರ್ವಜನಿಕರು, ರೈತರು, ದ್ವಿಚಕ್ರ ವಾಹನ ಸವಾರರು ಹಾಗೂ ಶಾಲೆಗೆ ತೆರಳುವ ಪುಟ್ಟ ಮಕ್ಕಳು ಕೆಸರಿನಲ್ಲಿಯೇ ಓಡಾಡಬೇಕಾದ ಅನಿವಾರ್ಯತೆ ಇದೆ.
ಕೂಡಲೇ ಗ್ರಾಮ ಪಂಚಾಯತ್ ಪಿಡಿಓ ಹಾಗೂ ಜನಪ್ರತಿನಿಧಿಗಳು ಗಮನಹರಿಸಿ ಸಿಸಿ ರಸ್ತೆ ನಿರ್ಮಾಣ ಮಾಡಬೇಕೆಂದು ಗ್ರಾಮಸ್ಥ ಸಂತೋಷ ಪಾಟೀಲ್ ಮನವಿ ಮಾಡಿದ್ದಾರೆ.
– ನಿಮ್ಮ ಊರು, ನಗರ, ಪಟ್ಟಣದ ಕುಂದು ಕೊರತೆಗಳ ಪೋಟೋ, ವಿಡಿಯೋ ಮಾಹಿತಿಯನ್ನು
ಈದಿನ.ಕಾಮ್ ನ್ಯೂಸ್ ಬೀದರ್ ಸಹಾಯವಾಣಿ 9035053805 ವಾಟ್ಸಪ್ ನಂಬರ್‌ಗೆ ಕಳುಹಿಸಿ.