- ವಿಶೇಷ ಅಭಿಯಾನದ ಮೂಲಕ ಮತಯಾಚನೆ ಮಾಡಿದ ಮಧುಲತಾ
- ರಾಜ್ಯದಲ್ಲಿ ಅಧಿಕಾರ ನಡೆಸಿರುವ 3 ಪಕ್ಷಗಳ ವಿರುದ್ಧವಾಗಿ ಕಣಕ್ಕೆ
ಕರ್ನಾಟಕದಲ್ಲಿ ಆಡಳಿತ ನಡೆಸಿರುವ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳ ವಿರುದ್ಧ ಸಿಡಿದೆದ್ದು, ತನ್ನ ಹುದ್ದೆಗೆ ರಾಜೀನಾಮೆ ನೀಡಿ, ಎಸ್‌ಯುಸಿಐ (ಕಮ್ಯೂನಿಸ್ಟ್)ನಿಂದ ಸ್ಪರ್ಧೆ ಮಾಡಿರುವ ಮಧುಲತಾ ಅವರು ‘ಓಟು ಕೊಡಿ, ನೋಟೂ ಕೊಡಿ’ ಎಂಬ ಅಭಿಯಾನದ ಮೂಲಕ ಧಾರವಾಡ ಕ್ಷೇತ್ರದಲ್ಲಿ ಮತಯಾಚನೆ ಮಾಡಿದ್ದಾರೆ.
ಎಸ್‌ಯುಸಿಐ ಅಭ್ಯರ್ಥಿ ಮಧುಲತಾ ಅವರು ಧಾರವಾಡ ವಿಧಾನಸಭಾ ಕ್ಷೇತ್ರದ ಹೊಸಯಲ್ಲಾಪುರದಲ್ಲಿ ಮನೆಮನೆಗೆ ಪ್ರಚಾರಕ್ಕೆ ತೆರಳಿ ತಮಗೆ ಮತ ನೀಡುವಂತೆ ಮತಯಾಚಿಸಿದ್ದಾರೆ. ಜೊತೆಗೆ ನಿಧಿ ಸಂಗ್ರಹವನ್ನೂ ಮಾಡಿದರು.
ಈ ಸುದ್ದಿ ಓದಿದ್ದೀರಾ? : ರೈತರ ಹಕ್ಕೊತ್ತಾಯ ಈಡೇರಿಸುವುದಾಗಿ ಘೋಷಣೆ: ಪ್ರಮಾಣ ಪತ್ರಕ್ಕೆ ಸಹಿ ಹಾಕಿದ ಕಾಂಗ್ರೆಸ್ ಮತ್ತು ಜೆಡಿಎಸ್
ಈ ವೇಳೆ ಸಾರ್ವಜನಿಕರೊಂದಿಗೆ ಮಾತನಾಡಿ, “ಎಸ್‌ಯುಸಿಐ ಜನರ ಸಮಸ್ಯೆಗಳ ಕುರಿತು ನಿರಂತರವಾಗಿ ಹೋರಾಟ ಮಾಡುತ್ತಿದ್ದು, ಧಾರವಾಡ ಗ್ರಾಮೀಣ ಮತಕ್ಷೇತ್ರದ ಜನತೆಯು ತಮ್ಮ ಅಮೂಲ್ಯವಾದ ಓಟನ್ನು ತಮಗೆ ನೀಡುವುದರ ಜೊತೆಗೆ ನೋಟೂ ಕೊಡಬೇಕು” ಎಂದು ಮನವಿ ಮಾಡಿದರು.
“ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌ಗಳು ಬಂಡವಾಳಶಾಹಿಗಳಿಂದ ದುಡ್ಡು ತೆಗೆದುಕೊಂಡು ಅಧಿಕಾರಕ್ಕೆ ಬಂದ ನಂತರ, ಅವರ ಪರವಾಗಿ ನೀತಿಗಳನ್ನು ರೂಪಿಸುತ್ತವೆ. ಆದರೆ, ನಮ್ಮ ಪಕ್ಷವು ಸಂಪೂರ್ಣವಾಗಿ ಜನರ ಮೇಲೆಯೇ ಅವಲಂಬಿತವಾಗಿದ್ದು ಜನರೇ ಪಕ್ಷಕ್ಕೆ ತನು,ಮನ ಮತ್ತು ಧನದಿಂದ ಬೆಂಬಲವಾಗಿ ನಿಲ್ಲಬೇಕು” ಎಂದು ಮನವಿ ಮಾಡಿಕೊಂಡರು.