ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಶಿರೂರು ಬಳಿ ಬೃಹತ್ ಗುಡ್ಡ ಕುಸಿದು 8ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಕಾಣೆಯಾದವರ ಪೈಕಿ ಇನ್ನೂ ಮೂವರ ಮೃತದೇಹ ಪತ್ತೆಯಾಗಿಲ್ಲ. ಘಟನೆ ನಡೆದು ಬರೊಬ್ಬರಿ 11 ದಿನಗಳಾಗಿವೆ. ಹಲವಾರು ರೀತಿಯಲ್ಲಿ ರಕ್ಷಣಾ, ಗುಡ್ಡ ಕುಸಿತದ ಮಣ್ಣು ತೆರವು ಕಾರ್ಯಾಚರಣೆ 12ನೇ ದಿನವೂ ಮುಂದುವರಿಸಲಾಗಿದೆ. ಅದಾಗ್ಯೂ, ಗಂಗಾವಳಿ ನದಿಗೆ ಉರುಳಿದ್ದ ಲಾರಿಯನ್ನು ಮೇಲೆತ್ತಲಾಗಿಲ್ಲ. ಲಾರಿಯ ಚಾಲಕ ಪೂರ್ಣ ಮೃತದೇಹವೂ ದೊರೆತಿಲ್ಲ. ಕಾಣೆಯಾದವರನ್ನು ಹುಡುಕಲು ಅಂತಿಮವಾಗಿ ಈಗ ಜಿಲ್ಲಾಡಳಿತವು ಮುಳುಗು ತಜ್ಞ ಈಶ್ವರ್ ಮಲ್ಪೆ ನೇತೃತ್ವದ ಎಂಟು ಮಂದಿಯ ತಂಡವನ್ನು ಕರೆಸಲಾಗಿದ್ದು, ನೀರಿಗೆ ಇಳಿಸಲಾಗಿದೆ.
ಕಂದಾಯ ಸಚಿವ ಕೃಷ್ಣಭೈರೇಗೌಡ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ರಾಜ್ಯ ಸರ್ಕಾರದ ಹಲವಾರು ಶಾಸಕ, ಸಚಿವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾರವಾರ-ಅಂಕೋಲ ಶಾಸಕ ಸತೀಶ್ ಸೈಲ್ ನಿರಂತರವಾಗಿ ಅಲ್ಲೇ ಮೊಕ್ಕಾಂ ಹೂಡಿ, ಕಾರ್ಯಾಚರಣೆಯ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಕೂಡ ಭೇಟಿ ನೀಡಿದ್ದಾರೆ. ಕೇರಳದ ಮಂಜೇಶ್ವರದ ಶಾಸಕ ಎ ಕೆ ಎಂ ಅಶ್ರಫ್, ಸಂಸದ ರಾಘವನ್, ಕೇರಳದ ಇಬ್ಬರು ಸಚಿವರು ಶಿರೂರಿನಲ್ಲಿದ್ದು, ಕಾರ್ಯಾಚರಣೆಯ ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ.
ಇಷ್ಟೆಲ್ಲ ಘಟಿಸಿದ್ದರೂ, ಜನರು ಮಳೆಯ ಅಬ್ಬರಕ್ಕೆ ತತ್ತರಿಸಿದ್ದರೂ, ಉತ್ತರ ಕನ್ನಡದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತ್ರ ಶಿರೂರಿನತ್ತ ಸುಳಿದಿಲ್ಲ. ಶಿರೂರು ದುರಂತದ ಬಗ್ಗೆ ಎಲ್ಲಿಯೂ ಮಾತನಾಡಿಲ್ಲ. ಅಷ್ಟೇ ಯಾಕೆ? ಇತ್ತೀಚಿನ ದಿನಗಳಲ್ಲಿ ಅವರು ಎಲ್ಲಿಯಾದರೂ ಕಾಣಿಸಿಕೊಂಡೂ ಇಲ್ಲ.
ಉತ್ತರ ಕನ್ನಡ ಜಿಲ್ಲೆಗೆ ಸಂಸದರೇ ಶಾಪವಾದಂತೆ ಭಾಸವಾಗುತ್ತಿದೆ. ಈ ಹಿಂದೆ, ಐದು ಬಾರಿ ಸಂಸದರಾಗಿದ್ದ ಬಿಜೆಪಿಯ ಅನಂತ ಕುಮಾರ ಹೆಗಡೆ ಅವರು ತಮ್ಮ 25 ವರ್ಷಗಳ ಅಧಿಕಾರಾವಧಿಯಲ್ಲಿ ಜನರೊಂದಿಗೆ ಎಲ್ಲಿಯೂ ಕಾಣಿಸಿಕೊಳ್ಳುತ್ತಿರಲಿಲ್ಲ. ಚುನಾವಣೆಯ ಸಮಯದಲ್ಲಿ ಕ್ಷೇತ್ರಕ್ಕೆ ಬರುತ್ತಿದ್ದ ಹೆಗಡೆ, ಗೆದ್ದ ಕೂಡಲೇ ಕ್ಷೇತ್ರವನ್ನು ಮರೆತುಬಿಡುತ್ತಿದ್ದರು. ಮತ್ತೆ ಅವರು ಬರುತ್ತಿದ್ದದ್ದು ಮುಂದಿನ ಚುನಾವಣೆಗಾಗಿಯೇ. ಚುನಾವಣೆ ಸಮೀಪಿಸುತ್ತಿದ್ದಂತೆ ವಿವಾದಾತ್ಮಕ, ಹಿಂದುತ್ವವಾದಿ ಹೇಳಿಕೆ ನೀಡಿ ಸುದ್ದಿಯಾಗುತ್ತಿದ್ದ ಹೆಗಡೆ, ಹೇಗೋ ಮತದಾರರನ್ನು ಮರುಳು ಮಾಡಿ, ಗೆದ್ದುಬಿಡುತ್ತಿದ್ದರು. ಹಿಂದುತ್ವ, ಮೋದಿ ಅಲೆಯಲ್ಲಿ ಜನರು ಹೆಗಡೆ ಮತ ಹಾಕಿ ಗೆಲ್ಲಿಸುತ್ತಿದ್ದರು.
ಆದರೆ, ಹೆಗಡೆ ಎಂದೂ ಜನರ ಸಮಸ್ಯೆಗಳನ್ನೂ ಎಂದೂ ಆಲಿಸುತ್ತಿರಲಿಲ್ಲ. ಅವರ ಅವಧಿಯಲ್ಲಿ, 2014ರ ಮಾರ್ಚ್‌ನಲ್ಲಿ ಅರಂಭವಾಗಿದ್ದ ರಾಷ್ಟ್ರೀಯ ಹೆದ್ದಾರಿ 66ರ ಅಗಲೀಕರಣ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಕಾರವಾರ ಮೂಲಕ ಹಾದುಹೋಗಿರುವ ಈ ಹೆದ್ದಾರಿಯ ಕಾಮಗಾರಿಯಿಂದಾಗಿ ಸ್ಥಳೀಯ ಜನರು ನಿತ್ಯ ಜಿಲ್ಲಾಡಳಿತದೊಂದಿಗೆ ತಿಕ್ಕಾಟ ನಡೆಸುತ್ತಲೇ ಇದ್ದಾರೆ. ಅದರೆ, ಕಾಮಗಾರಿಯನ್ನು ಪೂರ್ಣಗೊಳಿಸುವ ಯಾವುದೇ ಔಚಿತ್ಯವನ್ನು ಹೆಗಡೆ ತೋರಿರಲಿಲ್ಲ.
ಹೆಗಡೆಯ ವೈಫಲ್ಯಗಳಿಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂತಹ ನೂರಾರು ಉದಾಹರಣೆಗಳಿವೆ. ಇದೀಗ, ಹೆಗಡೆ ಬದಲಾಗಿ ಕಾಗೇರಿ ಸಂಸದರಾಗಿದ್ದಾರೆ. ಆದರೆ, ಕಾಗೇರಿಯೂ ಹೆಗಡೆ ಅವರ ಹಾದಿಯಲ್ಲೇ ಸಾಗುತ್ತಿದ್ದಾರೆಯೇ ಎಂಬ ಅನುಮಾನವನ್ನು ಸ್ವತಃ ಕಾಗೇರಿ ಅವರೇ ಕ್ಷೇತ್ರದ ಜನರಲ್ಲಿ ಹುಟ್ಟುಹಾಕಿದ್ದಾರೆ.
ಕಾಗೇರಿ ಸಂಸದರಾಗಿ ಆಯ್ಕೆಯಾಗಿ 2 ತಿಂಗಳುಗಳಾಗಿವೆ. ಅದರೆ, ಈ ಅಲ್ಪ ಅವಧಿಯಲ್ಲಿಯೂ ಅವರು ಕ್ಷೇತ್ರದ ಜನರೊಂದಿಗೆ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಇದೀಗ, ಮಳೆಯ ಅಬ್ಬರಕ್ಕೆ ಜಿಲ್ಲೆಯ ಜನರು ಸೊರಗುತ್ತಿದ್ದಾರೆ. ಅದರೂ, ಜನರ ಅಳಲನ್ನು ಕೇಳಲು, ಪರಿಹಾರ ಒದಗಿಸಲು, ರಕ್ಷಣಾ ಕಾರ್ಯಾಚರಣೆಗಳ ಬಗ್ಗೆ ಮಾಹಿತಿ ಪಡೆಯಲು ಕಾಗೇರಿ ಜಿಲ್ಲೆಗೆ ಬಂದಿಲ್ಲ.
ಈ ವರದಿ ಓದಿದ್ದೀರಾ?: ಶಿರೂರು ದುರಂತ : ನದಿಯಲ್ಲಿ ಸಿಕ್ಕಿದ್ದ ಅರ್ಧ ಮೃತದೇಹದ ಗುರುತು ಡಿಎನ್ಎ ಮೂಲಕ ಪತ್ತೆ
ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಡಿವೈಎಫ್‌ಐ ಮುಖಂಡರು, “ಕಾಗೇರಿ ಅವರು ಹಳೆಯ ಸಂಸದರ ಹಾದಿಯಲ್ಲೇ ಸಾಗುತ್ತಿದ್ದಾರೆ. ಅವರು ಕೂಡಲೇ ಜಿಲ್ಲಾಡಳಿತದ ಜೊತೆ ನಿಂತು, ಕೇಂದ್ರ ಸರ್ಕಾರದಿಂದ ಧನ ಸಹಾಯ, ಅಗತ್ಯವಿರುವ ಉಪಕರಣಗಳು, ತಂತ್ರಜ್ಞರನ್ನು ಕರೆಸಲು ಶ್ರಮಿಸಬೇಕು. ಉಳುವರೆ, ಕುಮಟಾ ಸೇರಿದಂತೆ ಜಿಲ್ಲೆಯ ಎಲ್ಲ ಮಳೆ ಸಂತ್ರಸ್ತರಿಗೆ ಖಾಯಂ ಪರಿಹಾರ ನೀಡಲು ಎಲ್ಲ ರೀತಿಯಲ್ಲೂ ಪ್ರಯತ್ನಿಸಬೇಕು” ಎಂದು ಆಗ್ರಹಿಸಿದ್ದಾರೆ.
ಜನರೊಂದಿಗೆ ಅವರ ಕಷ್ಟಗಳೊಂದಿಗೆ ನಿಲ್ಲುತ್ತೇವೆ ಎಂದೇನೂ ಇವರುಗಳು ನೈತಿಕ ಮೌಲ್ಯಗಳನ್ನು ಹಿಂದಿರುವುದಿಲ್ಲ, ಅದನ್ನಿಲ್ಲಿ ಈ ಮುಲಕ ವ್ಯಕ್ತಪಡಿಸಿದ್ದಾರೆ ಅಷ್ಟೇ.