ಗ್ಯಾರಂಟಿ ಯೋಜನೆಗೆ ದಲಿತರ ಹಣ ಬಳಕೆಮಾಡದಂತೆ ಕ್ರಮ ವಹಿಸಬೇಕು ಎಂದು ದಸಂಸ ಮುಖಂಡರು ಚಿಕ್ಕಮಗಳೂರು ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಕುರಿತು ದಸಂಸ ಮಖಂಡರು ಅಪರ ಜಿಲ್ಲಾಧಿಕಾರಿ ನಾರಾಯಣರೆಡ್ಡಿ ಕನಕರೆಡ್ಡಿ ಅವರಿಗೆ ಮನವಿ ಸಲ್ಲಿಸಿ, “ದಲಿತ ಸಮುದಾಯಕ್ಕೆ ಮೀಸಲಿರಿಸಿದ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿದರೆ ವಿಶ್ವಾಸ ದ್ರೋಹವೆಸಗಿದಂತೆ” ಎಂದು ಹೇಳಿದರು.
ದಸಂಸ ಜಿಲ್ಲಾ ಸಂಚಾಲಕ ಪಿ ಟಿ ಚಂದ್ರಶೇಖರ್ ಮಾತನಾಡಿ, “ಎಸ್‌ಸಿ/ಎಸ್‌ಟಿಗಳ ವಿಶೇಷ ಅನುದಾನದ ಹಣವನ್ನು ಸರ್ಕಾರ ಗ್ಯಾರಂಟಿ ಯೋಜನೆಗೆ ಬಳಸುತ್ತಿರುವುದು ಖಂಡನೀಯ. ಗ್ಯಾರಂಟಿ ಯೋಜನೆ ಸಾಮಾನ್ಯ ಕಾರ್ಯಕ್ರಮವಾದ ಕಾರಣ ದಲಿತರ ಮೀಸಲು ಬಳಸದಂತೆ ಕ್ರಮ ವಹಿಸಬೇಕು. ದಲಿತರನ್ನು ಆರ್ಥಿಕವಾಗಿ ಬಲಪಡಿಸುವ ಉದ್ದೇಶದಿಂದ ವಿಶೇಷವಾಗಿ ಮೀಸಲಿಟ್ಟಿರುವ ಹಣವನ್ನು ದಲಿತರಿಗೆ ಮಾತ್ರ ಸೀಮಿತಗೊಳಿಸಬೇಕು” ಎಂದು ಆಗ್ರಹಿಸಿದರು.
“ಹಿಂದಿನ ಸರ್ಕಾರ ದಲಿತರ ಹಣವನ್ನು ದುರುಪಯೋಗ ಮಾಡಿಕೊಂಡಿರುವ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು. ಮೀಸಲು ಹಣ ದುರುಪಯೋಗ ಆಗದಂತೆ ತಪ್ಪಿಸಲು ಸರ್ಕಾರ ಕೂಡಲೇ 7ಸಿ ಕಾಯ್ದೆಯನ್ನು ರದ್ದುಪಡಿಸಬೇಕು. ಒಂದು ವೇಳೆ ಗ್ಯಾರಂಟಿ ಯೋಜನೆಗಳಿಗೆ ಮೀಸಲು ಹಣ ಮುಂದುವರೆಸಿದಲ್ಲಿ ಸರ್ಕಾರದ ವಿರುದ್ಧ ದಲಿತರು ಹೋರಾಟಕ್ಕೆ ಮುಂದಾಗಬೇಕಾಗುತ್ತದೆ” ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಕೆಸರುಗದ್ದೆಯಂತಾದ ರಸ್ತೆಗಳು; ರಸ್ತೆ ಮಧ್ಯೆ ನೇಗಿಲಿನಿಂದ ಉತ್ತು, ಸಸಿ ನೆಟ್ಟು ರೈತರ ಆಕ್ರೋಶ
ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಅಶೋಕ್ ರಾಜರತ್ನಂ, ಹಾದಿಹಳ್ಳಿ ಪುಟ್ಟಸ್ವಾಮಿ, ತಾಲೂಕು ಸಂಚಾಲಕ ಅಶೋಕ್ ಹಾದಿಹಳ್ಳಿ, ಸಂಘಟನಾ ಸಂಚಾಲಕ ಪೂರ್ಣೇಶ್, ಮುಖಂಡರುಳಾದ ದಿವಾಕರ್, ಮಂಜುನಾಥ್ ಸೇರಿದಂತೆ ಬಹುತೇಕರು ಇದ್ದರು.
