ಮೈಸೂರು ಎಕ್ಸ್ ಸರ್ವಿಸ್ ಮೆನ್ ಮೂವ್ಮೆಂಟ್(ರಿ) ತಂಡದವರು ಹಮ್ಮಿಕೊಂಡಿದ್ದ 25ನೇ ವರ್ಷದ ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಹೆಬ್ಬಾಗಿಲಿನಲ್ಲಿ ಕಾರ್ಗಿಲ್ ಹುತಾತ್ಮರಾದ ಕ್ಯಾಪ್ಟನ್ ವಿಕ್ರಂ ಭತ್ರ, ಲೆಫ್ಟಿನೆಂಟ್ ಮನೋಜ್ ಕುಮಾರ್ ಪಾಂಡೆ ಮತ್ತು ಕ್ಯಾಪ್ಟನ್ ಸೌರಭ್ ಕಾಲಿಯ ಭಾವಚಿತ್ರಕ್ಕೆ ಜಿಲ್ಲಾಧಿಕಾರಿ ಲಕ್ಷ್ಮಿಕಾಂತ್ ಪುಷ್ಪಾರ್ಚನೆ ಮಾಡುವುದರ ಮೂಲಕ ಪಾದಯಾತ್ರೆಗೆ
ಚಾಲನೆ ನೀಡಿದರು.
ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ದೊಡ್ಡ ಗಡಿಯಾರ, ಗಾಂಧಿ ವೃತ್ತ, ದೇವರಾಜ ಅರಸ್ ರಸ್ತೆ ಮೂಲಕ ಮೆಟ್ರೋಪಾಲ್ ವೃತ್ತದಲ್ಲಿರುವ ಫೀಲ್ಡ್ ಮಾರ್ಷಲ್ ಕೆ ಎಂ ಕಾರಿಯಪ್ಪ ಪ್ರತಿಮೆ ಬಳಿಗೆ ತೆರಳಿದರು.
ಪಾದಯಾತ್ರೆಯಲ್ಲಿ ಮೈಸೂರು ಎಕ್ಸ್ ಸರ್ವಿಸ್ ಮನ್ ಮೂವ್ಮೆಂಟ್‌ನ 70ಕ್ಕೂ ಹೆಚ್ಚು ಮಾಜಿ ಸೈನಿಕರು, 250 ಎನ್‌ಸಿಸಿ ವಿದ್ಯಾರ್ಥಿಗಳು, 60 ಸೈನಿಕ್ ಅಕಾಡೆಮಿಯ ಭವಿಷ್ಯದ ಸೈನಿಕರು ಹಾಗೂ ನೂರಾರು ಸಂಖ್ಯೆಯಲ್ಲಿ ದೇಶಭಿಮಾನಿಗಳು, ಭಾಗಿಯಾಗಿ ಪಾದಯಾತ್ರೆ ಉದ್ದಕ್ಕೂ “ಭಾರತ್ ಮಾತಾಕೀ” ಜೈ ಘೋಷಣೆಯೊಂದಿಗೆ ಸಾಗಿದರು.
ಫೀಲ್ಡ್ ಮಾರ್ಷಲ್ ಕೆ ಎಂ ಕಾರಿಯಪ್ಪ ಪ್ರತಿಮೆ ಬಳಿ ಹುತಾತ್ಮರಾದ ಕಾರ್ಗಿಲ್ ಯೋಧರಿಗೆ ಮುಖ್ಯ ಅತಿಥಿಗಳಾದ ನಿವೃತ್ತ ಸೈನ್ಯಾಧಿಕಾರಿ ಕರ್ನಲ್ ಮಹೇಂದ್ರ ಸಿಂಗ್‌ರವರಿಂದ ರಿತ್ ಪೆರೇಡ್ ಮಾಡಿಸಿಲಾಯಿತು.
ಜಿಲ್ಲಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ ಮಾತನಾಡಿ, “ನಾವುಗಳು ಇಲ್ಲಿ ಸುರಕ್ಷಿತವಾಗಿ,ಕ್ಷೇಮವಾಗಿ ಇದ್ದೇವೆ ಅಂದ್ರೆ ಅದಕ್ಕೆ ಗಡಿ ಕಾಯುತ್ತಿರುವ ಸೈನಿಕರೇ ಕಾರಣ. ಈ ಸಂದರ್ಭದಲ್ಲಿ ಹುತಾತ್ಮ ವೀರ ಯೋಧರನ್ನು ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ” ಎಂದರು.
ಮೈಸೂರು ಎಕ್ಸ್ ಸರ್ವಿಸ್ ಮೆನ್ ಮೂವ್ಮೆಂಟ್ ನ ಸಂಸ್ಥಾಪಕ ಮಹೇಶ್ ವಿ ಮಾತನಾಡಿ, “ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾಗಿರುವ 527 ವೀರ ಯೋಧರನ್ನು ನಾವುಗಳು ಸ್ಮರಿಸಬೇಕು ಈ ದಿನ ನಮಗೆಲ್ಲ ವಿಶೇಷವಾದದ್ದು. ದೇಶಕ್ಕಾಗಿ ಬಲಿದಾನ ನೀಡಿದ ವೀರ ಯೋಧರ ಸ್ಮರಣೆ ಮಾಡುವುದು ಭಾರತೀಯರಾದ ನಮ್ಮೆಲ್ಲರ ಕರ್ತವ್ಯ. ಯೋಧರಿಗೆ ನಾವು ಸಲ್ಲಿಸುವ ಗೌರವ. ದೇಶ ರಕ್ಷಣೆಗಾಗಿ, ನಮ್ಮೆಲ್ಲರ ರಕ್ಷಣೆಗಾಗಿ ಹೋರಾಡಿ ವೀರ ಮರಣನಪ್ಪಿದ ಸಾಹಸಿಗರಿಗೆ ನಾವೆಂದೂ ಚಿರಋಣಿಯಾಗಿರಬೇಕು” ಎಂದರು.
ಕಾರ್ಯಕ್ರಮದಲ್ಲಿ ಮಹಾ ನಗರ ಪಾಲಿಕೆ ಉಪ ಆಯುಕ್ತ ಮಂಜುನಾಥ್ ರೆಡ್ಡಿ,ಮಣಿಪಾಲ ಆಸ್ಪತ್ರೆಯ ಡಾ ಸುಮಿತ್,ಎಂಇಎಂನ ಉಪಾಧ್ಯಕ್ಷ ವಿವೇಕಾನಂದ, ಪ್ರಧಾನ ಕಾರ್ಯದರ್ಶಿ ಶ್ರೀಧರ್,ನಿರ್ದೇಶಕರುಗಳಾದ ಕಿಶೋರ್ ಕದಂ,ವಿಶ್ವನಾಥ್, ಲೋಕೇಶ್,ಧನಂಜಯ,ಸುರೇಶ್,ರಾಮನಾರಾಯಣ,ಮೋಹನ್,ಮಹದೇವ್ ಸೇರಿದಂತೆ ಪ್ರಮುಖರು ಭಾಗಿಯಾಗಿದ್ದರು.
