ಹಿರೇಮಠ ಸಂದರ್ಶನ-3 | ಕೋಟ್ಯಾಧಿಪತಿಗಳು ಪ್ರಜಾಪ್ರಭುತ್ವಕ್ಕೆ ಕಪ್ಪು ಚುಕ್ಕಿ

Date:

Advertisements
ಪರಿಸರ ಕಾರ್ಯಕರ್ತ ಮತ್ತು ಭ್ರಷ್ಟಾಚಾರ ವಿರೋಧಿ ಹೋರಾಟಗಾರ, ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್‌.ಆರ್ ಹಿರೇಮಠ ಅವರನ್ನು ಲೇಖಕಿ ರೂಪ ಹಾಸನ ಅವರು ಸಂದರ್ಶಿಸಿದ್ದಾರೆ. ಸಂದರ್ಶನದ ಮೊದಲ ಭಾಗವನ್ನು ಜುಲೈ 22ರಂದು ‘ಹಿರೇಮಠ ಸಂದರ್ಶನ-1 | ಮನುಷ್ಯನಲ್ಲಿ ಮನುಷ್ಯತ್ವನೇ ಇಲ್ಲ ಅಂದ್ರೆ, ಪ್ರಕೃತಿ ಸರಿಪಡಿಸಲಾಗದ ರೀತಿ ಬುಡಮೇಲಾಗ್ತದೆ‘ ಮತ್ತು ಎರಡನೇ ಭಾಗವನ್ನು ಜುಲೈ 24ರಂದು ‘ಹಿರೇಮಠ ಸಂದರ್ಶನ-2 | ಸರ್ಕಾರಕ್ಕೆ ಹಣ ಬರಬೇಕಂದ್ರೆ ಗಣಿಗಾರಿಕೆ ರಾಷ್ಟ್ರೀಕರಣ ಮಾಡ್ಬೇಕು‘ ಶೀರ್ಷಿಕೆಯಲ್ಲಿ ಪ್ರಕರಟಿಸಲಾಗಿತ್ತು. ಸಂದರ್ಶನದ ಮುಂದುರೆದ 3ನೇ ಮತ್ತು ಅಂತಿಮ ಭಾಗ ಇಲ್ಲಿದೆ;

• ನಿಮ್ಮ ಈ ಎಲ್ಲ ಹೋರಾಟದ ಮಾರ್ಗದಲ್ಲಿ ಕಾನೂನು ಹೋರಾಟಕ್ಕೂ ಹೆಚ್ಚು ಪ್ರಾಮುಖ್ಯತೆ ಇದೆಯಲ್ಲಾ?
ಜನ ಹೋರಾಟದ್ದೊಂದು, ಸಾಂವಿಧಾನಿಕವಾದ್ದೊಂದು ನಮಗೆ ಎರಡು ಮಾರ್ಗ ಇದ್ದಾವೆ. ಎರಡನ್ನೂ ಒಂದು ಬ್ಯಾಲೆನ್ಸ್‌ನ್ಯಾಗೇ ತಗೊಂಡು ಹೋಗಬೇಕಾಗದಾ. ಜನ ಸಂಘಟಿತವಾಗಿ ಬೇಡಿಕೆ ಮುಂದಿಟ್ಟಾಗ ತಾನೇ, ಕಾನೂನು ಹೋರಾಟ ಮಾಡಲಿಕ್ಕೆ ಸಾಧ್ಯ? ಹಿಂಗಾಗಿ ಕಾನೂನು ಹೋರಾಟ ಕೂಡ ಒಂದು ರೀತಿನಾಗೆ ಜನ ಹೋರಾಟಾನೇ ಆಗೈತಿ. 80ರ ದಶಕದಾಗ ನ್ಯಾಯಮೂರ್ತಿಗಳಾದ ಪಿ.ಎನ್ ಭಗವತಿ, ಕೃಷ್ಣ ಅಯ್ಯರ್ ಮುಂತಾದವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನ ಒಂದು ನ್ಯಾಯಾಂಗದ ಚಳವಳಿಯಾಗಿಸಿದರು. ಇವತ್ತು ಅದರ ಫಲವನ್ನ ನಾವು ಪಡೀತಿದ್ದೀವಲ್ಲ? ಹಾಗೇ ಮಾಹಿತಿ ಹಕ್ಕು ಕಾಯ್ದೆ ಸಹಿತ, ಜನ ಹೋರಾಟದಿಂದಲೇ ಬಂದದ್ದು. ಅದು ಇವತ್ತು ನಮ್ಮ ಎಲ್ಲ ಹೋರಾಟಗಳಿಗೆ ಒಂದು ಪ್ರಬಲ ಅಸ್ತ್ರ ಆಗೇತಿ. ಹಿಂಗಾಗಿ ನ್ಯಾಯಾಂಗದ ಹೋರಾಟವನ್ನ ಜನ ಹೋರಾಟದಿಂದ ತೀರಾ ಪ್ರತ್ಯೇಕಿಸಿ ನೋಡು ಹಂಗಿಲ್ಲ.

ನಮ್ಮದೇನದ ಅದು ಒಂದು ‘ರಾಜಕೀಯ ಜನಾಂದೋಲನ’. ಈ ರೀತಿಯ ರಾಜಕೀಯವನ್ನ ಅವತ್ತಿನ ಪ್ರತಿಕೂಲ ವಾತಾವರಣದಾಗೂ ನಮ್ಮದೇ ಆದ ರೀತಿಯೊಳಗ ಜೋಡಣೆ ಮಾಡ್ಕೋತಾ ಇದ್ದೇವಿ. ತುಂಗಭದ್ರಾ ನದಿಯ ಜಾಡಿನಾಗ ಜನ ಜಾನುವಾರುಗಳ ಆರೋಗ್ಯ ಕೆಡ್ತಾ ಬಂತು. ‘ತುಂಗಭದ್ರಾ ಉಳಿಸಿ’ ಆಂದೋಲನದಿಂದ ಜನತೆ ಜಾಗೃತರಾಗಿ, ಸಂಘಟಿತರಾಗಿ ಭಾಗವಹಿಸಿ ನೇತೃತ್ವವಹಿಸಿದ್ದರಿಂದಲೇ ಯಶಸ್ವಿಯಾಯ್ತು. ಅದು ಅಲ್ಲಿಗೇ ನಿಲ್ಲಲಿಲ್ಲ. ತುಂಗಭದ್ರಾ ನದಿಯನ್ನೇನು ಮಲಿನ ಮಾಡ್ತಿದ್ದರಲ್ಲ ಆ ಹರಿಹರ ಪಾಲಿಫೈರ‍್ಸ್ ತ್ಯಾಜ್ಯದ ವಿರುದ್ಧ ಆಂದೋಲನ ವಿಸ್ತರಿಸಿತು. ಇದನ್ನ ಇನ್ನೂ ವಿಸ್ತರಿಸಿಕೊಂಡು ಇದೇ ಹರಿಹರ ಪಾಲಿಫೈರ‍್ಸ್ ಜಂಟಿಯಾಗಿ 75,000 ಎಕರೆ ನೀಲಗಿರಿ ಮರ ಬೆಳೆಯೋ ಯೋಜನೆ ಏನು ಆರಂಭ ಆಗಿತ್ತೋ ಅದರ ವಿರುದ್ಧ, ಪರಿಸರಕ್ಕೆ ಹಾನಿಕಾರಕ ನೀಲಗಿರಿ ಕಿತ್ತು ಜನೋಪಯೋಗಿ ಮರ ನೆಡುವಂತಹ ರಚನಾತ್ಮಕವಾದ ‘ಕಿತ್ತಿಕೊ ಹಚ್ಚಿಕೋ’ ಚಳವಳಿ ವ್ಯಾಪಕವಾಗಿ ಹಬ್ಬಿತು. ಆ ಹೋರಾಟದಿಂದಾಗಿ 75,000 ಎಕರೆ ಮತ್ತೆ ಜನೋಪಯೋಗಿ ಆಯ್ತು. ಊರೊಟ್ಟಿನ ಭೂಮಿ ಆಯ್ತು. ಇಷ್ಟು ಹೋರಾಟ ಮಾಡಿ ಸಂತೃಪ್ತಿ ಮಾಡಿದ್ರೆ ನಾವು ಬಾವಿಯೊಳಗಿನ ಕಪ್ಪೆ ಆಗ್ತಿದ್ವಿ. ಕುಸನೂರಿಂದ ಹೊರಟು, ಪಶ್ಚಿಮಘಟ್ಟ ಉಳಿಸಿ ಅಂತ ಹೋರಾಟ ಮಾಡಿ, ರಾಷ್ಟ್ರೀಯ ಅರಣ್ಯ ನೀತಿಯನ್ನ ಮಾಡಿದೆವು. ಈ ಹೋರಾಟಗಳ ಒಳಗೆಲ್ಲ ಜನಜಾಗೃತಿ, ಜನಸಂಘಟನೆ, ಜನತೆಯ ಭಾಗವಹಿಸುವಿಕೆ ಇದೇನಿದ್ಯಲ್ಲ ಇಲ್ಲಿ ರಾಜಕೀಯ ನಡೆ ಒಂದರೊಳಗೊಂದು ಅಂತರ್ಗತವಾಗೇದ.

ಆಮ್ಯಾಗ, ಬಳ್ಳಾರಿಯಿಂದ ಒಂದಿಷ್ಟು ಜನ ಬಂದು ‘ಬಳ್ಳಾರಿಯ ಗಣಿ ಲೂಟಿ ವಿರುದ್ಧ ಹೋರಾಟ ಮಾಡಬೇಕು’ ಅಂದಾಗ ನಾನು- ‘ನೀವು ಸ್ಥಾನಿಕರು ಒಂದಾಗಿ ಪ್ರತಿಭಟನೆ ಮಾಡಿದರೆ ಅದಕ್ಕ ನಾವೂ ಜತೆ ಸರ‍್ತಿವಿ’ ಅಂದೆ. ಇದೂ ಒಂದು ರಾಜಕೀಯ ನಡೇನೇ ಅದ. 2010ರೊಳಗ 20 ಜಿಲ್ಲೆಯವರು ಸೇರಿ ‘ಜನಸಂಗ್ರಾಮ ಪರಿಷತ್’ ಅಂತ ಮಾಡಿದಿವಿ. ಶಿವಮೊಗ್ಗದಿಂದ ಬಳ್ಳಾರಿವರೆಗೂ ಮತದಾರರ ಜಾಗೃತಿ ಜಾಥ ಮಾಡಿದ್ವು. ಪಶ್ಚಿಮಘಟ್ಟದಿಂದ-ಬಳ್ಳಾರಿವರೆಗೂ, ಅಲ್ಲಿಂದ ಕಪ್ಪತಗುಡ್ಡದವರೆವಿಗೂ, ಮಲೆಮಹದೇಶ್ವರ ಬೆಟ್ಟದಿಂದ ಬೆಂಗಳೂರಿನವರೆಗೂ… ಜಾಥಾ. ಇದರ ಉದ್ದೇಶ ಎಲ್ಲಕ್ಕಿಂತ ಮುಖ್ಯವಾಗಿ ಫ್ಯಾಸಿಸ್ಟ್ ಬಿಜೆಪಿ ಸರ್ಕಾರವನ್ನ ಕೆಳಗಿಳಸೋದೇ ಆಗಿತ್ತು. ಇವೆಲ್ಲ ರಾಜಕೀಯ ನಡೆಗಳೇ ಅಲ್ಲೇನ್ರಿ? ಪ್ರತಿಕೂಲ ಪರಿಸರದೊಳಗೆ ಅವು ಕಂಡು ಬರೂದಿಲ್ಲ ಅಷ್ಟೇ. ರಾಜ್ಯದಲ್ಲಿ ಇಂದಿನ ಪಂಚಾಯತ್‌ ರಾಜ್ ವ್ಯವಸ್ಥೆ ಏನದ ಅದು ರೂಪುಗೊಳ್ಳುವಲ್ಲಿ ನಮ್ಮ ಸಂಸ್ಥೆಯ ಶ್ರಮ ಭಾಳ ಅದ. ನನಗ ಅನ್ನಿಸೋ ಮಟ್ಟಿಗೆ ಇಂದು ಸಾರ್ವತ್ರಿಕವಾದ ರಾಜಕೀಯ ಅತೃಪ್ತಿಯ ತಳಮಳ ಏನದ ಅದು, ರಾಜಕೀಯ ಹಾದಿಯನ್ನ ತೆಗೆದುಕೊಂಡೇ ತೆಗೆದುಕೊಳ್ತದೆ ಎನ್ನೋ ಆಳವಾದ ವಿಶ್ವಾಸ ಅದ. ಆಗ ಪ್ರಜಾತಂತ್ರದೊಳಗ, ಜನಹಿತಕ್ಕೆ ಪೂರಕ ರಾಜಕೀಯ ಪಕ್ಷವೂ ಹುಟ್ಟು ಪಡೀತದೆ!

Advertisements

• ಹಾಗಾದರೆ ಆರಂಭ ಎಲ್ಲಿಂದ?
ಇಂದಿನ ಸ್ಥಿತಿ ಬದಲಾಗಬೇಕಂದರೆ ಹಳ್ಳಿಗಳಿಂದಲೇ ಆಗಬೇಕಾಗದಾ. ಪ್ರಜೆಗಳು ತಾವೇ ಸಾರ್ವಭೌಮರು. ಸಮರ್ಪಕ ಮತದಾನದ ಮೂಲಕ ಅದನ್ನ ಜಾರಿ ಮಾಡ್ಬೇಕದಾ. ತಮ್ಮ ಅಭ್ಯರ್ಥಿಯನ್ನ ತಾವೇ ಜನಸಮುದಾಯದ ನಾಯಕರಿಂದ ಆರಿಸಿಕೊಳ್ಳಬೇಕಾಗದಾ. ಅಭ್ಯರ್ಥಿಗೂ ಜನತಂತ್ರದ ಅರಿವು ಕೊಟ್ಟು ಕಳಿಸಬೇಕದಾ. ಮತ ಎನ್ನೋದು ದಾನ ಮಾತ್ರ ಅಲ್ಲ. ಮತಾಧಿಕಾರ ಅನ್ನೋದು ಅರಿವಾಗ್ಬೇಕದಾ. ಆದ್ರೆ ಈ ಬಗ್ಗೆ ಅರಿವು ಕಡಿಮೆ. ಅವರಿಗೆ ಆಡಳಿತ ಹಾಗೂ ಸಂವಿಧಾನದ ತಿಳಿವಳಿಕೆ ಕೊಡಬೇಕದಾ. ಅಂಚಿಗೊತ್ತರಿಸಲ್ಪಟ್ಟ ಜಾತಿ ಸಮುದಾಯಗಳ ಯುವಕರು, ಭೂರಹಿತರು, ಕಾರ್ಮಿಕರು, ಸಣ್ಣ ರೈತರು, ಮಹಿಳೆಯರು ಸಂಘಟಿತರಾಗಬೇಕಾಗದಾ. ಕೃಷಿ ಸಹಕಾರಿ ಸಂಘಗಳನ್ನ ಆರಂಭಿಸಬೇಕಾಗದಾ. ಕಾರ್ಪೊರೇಟ್ ಕೃಷಿಯನ್ನ ಎದುರಿಸಲಿಕ್ಕೆ ಇದು ಮುಖ್ಯ ದಾರಿ.

ಎಸ್.ಆರ್ ಹಿರೇಮಠ

ಕೋಟ್ಯಾಧಿಪತಿಗಳು ಎನ್ನೋದು ನಮ್ಮ ಪ್ರಜಾಪ್ರಭುತ್ವಕ್ಕೆ ಕಪ್ಪು ಚುಕ್ಕಿ. ಮೊದಲಿಗೆ ಸಂಪತ್ತಿನ ವಿಕೇಂದ್ರಿಕರಣ ಆಗಬೇಕು. ಕಾರ್ಪೊರೇಟ್ ಕಂಪನಿಗಳನ್ನ ಕಿತ್ತೊಗೆಯಬೇಕದಾ. ಭ್ರಷ್ಟಾಚಾರ ಮುಕ್ತ ಭಾರತ, ಕೋಮುವಾದ ಮುಕ್ತ ನಾಡು, ವಿದೇಶಿ ಬಂಡವಾಳ ಮುಕ್ತ ಕೈಗಾರೀಕರಣ ಇವು ನಮ್ಮ ಪ್ರಮುಖ ಆಶಯಗಳಾಗ್ಯಾವೆ.

ರಾಜಕಾರಣದಲ್ಲಿ ಹಣ ಶಕ್ತಿ ಇರಬಾರದು. ಈ ಹೊತ್ತಿನಲ್ಲಿ ಪರ್ಯಾಯ ರಾಜಕಾರಣ ಬೇಕು. ಇಲ್ಲದಿದ್ದರೆ ಹೋರಾಟದಿಂದ ಬಂದ ಸ್ವಾತಂತ್ರ್ಯವನ್ನ, ನಾವೇ ನಾಶ ಮಾಡಿದ ಹಂಗೆ ಆಗ್ತದಾ. ಹಿಂಗಾಗಿ ಎಲ್ಲವನ್ನೂ ಯಾವ ರೀತಿ ರಾಜಕೀಯವಾಗಿ ಮಾಡ್ಬೇಕಂತಾ ಯೋಚಿಸ್ತಾ ಪರ್ಯಾಯಗಳನ್ನ ಹುಡುಕ್ಬೇಕಾಗೇದ. ನಮ್ಮ ಸರಕಾರ ಮಂದಿಯ ಹಕ್ಕನ್ನ ಹಿತವನ್ನ ಕಾಪಾಡಲಿಲ್ಲ ಅಂದರೆ, ಅದನ್ನ ವಿರೋಧಿಸಿ ನಾವು ಹೊಸ ಪರ್ಯಾಯವನ್ನ ಹೆಂಗೆ ಕಟ್ಟಿಕೊಡ್ಬೇಕನ್ನೋದನ್ನ ಯೋಚಿಸ್ಬೇಕಾಗೇದ. ನಮ್ಮ ಜನತೆಗೆ ಎಲ್ಲಾ ರೀತಿನಾಗೂ ಶಕ್ತಿ ಅದಾ. ಸಂಘಟಿತರಾಗ್ಬೇಕಷ್ಟೆ.

• ಹೇಗೆ ಸಾಧ್ಯವಾಗಿಸೋದು?
ನಮ್ಮ ಜೈವಿಕ ವೈವಿಧ್ಯತೆ, ಸಾಂಸ್ಕೃತಿಕ ವೈವಿಧ್ಯತೆ, ಆಹಾರದ್ದು, ಉಡುಪು, ಭಾಷೆ… ಹಿಂಗೆ ವೈವಿಧ್ಯತೆಗಳನ್ನ ನಾಶ ಮಾಡಿ ಏಕರೂಪತೆಯನ್ನ ಎಲ್ಲ ಕ್ಷೇತ್ರದಾಗೂ ತರೋ ಕೆಲಸ ಏನು ನಡೆದೈತಿ ಇವತ್ತು, ಅದೂ ಒಂದು ರೀತಿದಾಗ ನಮ್ಮನ್ನ ದಾಸ್ಯದಾಗೆ ಇಡೂದೇ ಆಗೈತಿ. ಯಾವ ರೀತಿ ಆರ್ಥಿಕ ಸಂಪತ್ತನ್ನ ದೋಚಿಕೊಳ್ತಾ, ಕೆಳಗಿನ ಮಂದಿಯನ್ನ ವಸ್ತುಗಳನ್ನಾಗಿ ಮಾಡ್ಲಿಕ್ಕೆ ಪ್ರಯತ್ನ ಮಾಡಿದ್ದಾರೋ, ಅದೇ ಪ್ರಕಾರ ಸಾಮಾಜಿಕವಾಗೂ ನಡೆದದಾ. ಇದೆಲ್ಲ ವೈಫಲ್ಯಗಳಿಂದ ಹೊರಬರಬೇಕಂದ್ರೆ ನಾವು ಇನ್ನೊಂದು ಬೃಹತ್ ಹೋರಾಟವನ್ನೇ ಮಾಡ್ಬೇಕಾಗೇದಾ.

ನಮ್ಮ ಗುರಿ ಏನಂದ್ರೆ ಸಮಗ್ರ ಅಥವಾ ಪೂರ್ಣ ಸ್ವರಾಜ್ಯ. ಹಿಂಗಾಗಿ ‘ಎಲ್ಲರನ್ನೂ ಸಮಾನವಾಗಿ ಕಾಣುವಂತಹ ಆರ್ಥಿಕ, ಸಾಮಾಜಿಕ, ರಾಜಕೀಯ ಅಧಿಕಾರ ಏನದಾ, ಇದು ಮಂದಿ ಕೈಯಾಗ ಮಾತ್ರ ಇರಬೇಕು. ಯಾವ ಅಧಿಕಾರಸ್ಥರಲ್ಲೂ ಕೇಂದ್ರೀಕೃತವಾಗಿರಬಾರದು’ ಅಂತ ಎರಡು ಸಾವಿರ ವರ್ಷಗಳ ಹಿಂದೆ ಸಾಕ್ರಟೀಸ್, ಪ್ಲೇಟೋ, ಅರಿಸ್ಟಾಟಲ್ ಏನು ಹೇಳಿದ್ದರೋ ಅದು. ಮತ್ತೆ ಶರಣರ ಸಮಾನತೆಯ ನುಡಿಗಳೇನಿವೆಯೋ ಅವೇ ನನ್ನ ಸಮಾನತೆಯ ಪರಿಕಲ್ಪನೆಯ ಅಡಿಪಾಯ ಅದಾ. ಜೊತ್ಯಾಗ ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯ, ನನ್ನ ಮಾರ್ಗದರ್ಶಿ ಗುರು- ಶೂಮಾಕರ್‌ರವರ ದಾರ್ಶನಿಕತೆ, ಇದರ ಕೂಡೆ ಗಾಂಧಿ ಎಂಬ ಫಕೀರನ ಹೆಜ್ಜೆ ಗುರುತುಗಳ ರಚನಾತ್ಮಕ ರಾಜಕಾರಣದ ಜಾಡು ಹಿಡಿದು ನಡೀತಾ ಬಂದೇನಿ. ಹಿಂಗಾಗಿ ಇದೇ ರೀತಿದಾಗೆ ಯೋಚಿಸೋ ಸಮಾನಮನಸ್ಕರೆಲ್ಲಾ ಒಗ್ಗೂಡ್ಬೇಕಾಗೇದ. ನಮ್ಮ ಗುರಿ- ಸಂಪೂರ್ಣ, ಸಮಗ್ರ ಸ್ವರಾಜ್ಯ ಆಗ್ಬೇಕದಾ. ಮನುಷ್ಯನ ತುಂಬಾ ಕಾಮ, ಕ್ರೋಧ, ದ್ವೇಷ, ಮದ ಇಂತಾವೇ ತುಂಬಿದ್ದಾವೆ. ಇದರಿಂದ ಬಿಡುಗಡೆ ಅಂದ್ರೆ- ಒಳಗೂ ಹೋರಾಟ, ಹೊರಗೂ ಹೋರಾಟ ಮಾಡ್ಬೇಕಾಗೇದಾ.

ಎಸ್‌.ಆರ್‌. ಹಿರೇಮಠ

ಈ ಸ್ವರಾಜ್ ಕಡೀಕೆ ಹೋಗ್ಬೇಕಂದ್ರೆ ನಮಗೊಂದು ಎಚ್ಚರಿಕೆ ಬೇಕಾಗೇದ. ನಮ್ಮ ಸಮಾಜದೊಳಗೆ ವಿಭಿನ್ನ ಸಂಸ್ಕೃತಿಗಳಿದಾವೇ. ಆದಿವಾಸಿ ಸಂಸ್ಕೃತಿ ಇದೆ. ತಳಸಮುದಾಯದ ಸಂಸ್ಕೃತಿಗಳಾದಾವೆ, ಅಲ್ಪಸಂಖ್ಯಾತರ ಸಂಸ್ಕೃತಿ ಇದೆ. ಬಹುತ್ವ ಏನದಲ್ಲಾ ಅದೇ ಪ್ರಜಾಪ್ರಭುತ್ವದ ಸೊಗಸದಾ. ನಮ್ಮ ವ್ಯವಸ್ಥೆಲಿ ಒಳ್ಳೆದು ಕೆಟ್ಟದ್ದು ಎರಡೂ ಅದ. ಆದ್ರ ಸಮಾಜದೊಳಗ ಪ್ರಾಮಾಣಿಕತೆಗೆ ಇನ್ನೂ ಬೆಲೆ ಇದ್ದೇ ಇದ್ಯಲ್ಲ! ಒಳ್ಳೆ ಜನ, ಒಳ್ಳೆ ಕೆಲಸದ ಜೊತೆ ಇದ್ದೇ ಇರ‍್ತಾರ ಅನ್ನೋ ನಂಬಿಕೆ ನನಗದ. ಒಳ್ಳೆದಕ್ಕ ಜಯ ಇದ್ದೇ ಇರ‍್ತದ. ಎಲ್ಲವೂ ನನ್ನಿಂದಲೇ ಆಗಬೇಕು ಎನ್ನೋ ಆಶೆ ನನಗಿಲ್ಲ. ನಾವು ನಮಗಾಗಿದ್ದನ್ನ ಮಾಡ್ಬೇಕು. ಹೋರಾಡ್ಬೇಕು. ಎಲ್ಲಿಯೂ ಇದು ನಿಲ್ಬರ‍್ದು.

ನ್ಯಾಯದಾನದ ರಥಗಳು ನಿಧಾನವಾಗಿ ಸಾಗ್ತಿದ್ದಾವೆ. ಆದರೂ ಅವು ಸತ್ಯದ ಮೈಲಿಗಲ್ಲಿಗೆ ಹೋಗಿ ನಿಂತೇ ನಿಲ್ತವೆ. ದೇಶದ ಆರೋಗ್ಯಪೂರ್ಣ ಅಭಿವೃದ್ಧಿ ಬಗ್ಗೆ ಕಳಕಳಿ ಇರೋ ಮಂದಿ ಎಲ್ಲರೂ ಈ ಹೋರಾಟಕ್ಕೆ ಕೈಗೂಡಿಸಬೇಕಾಗೇದ ಅಷ್ಟೇ. ನನ್ನ ನಂತರ ಕೂಡ ಈ ರಥ ಸಾಗ್ತರ‍್ತದಾ. ಪ್ರಾಮಾಣಿಕರು ಇದಕ್ಕೆ ಕೈ ಹಚ್ಚುತ್ತಲೇ ರ‍್ತಾರ. ಮುಖ್ಯವಾಗಿ ಯುವಜನರಿದನ್ನ ಮುಂದಕ್ಕೆ ತೊಗೊಂಡು ಹೋಗೋ ಜವಾಬ್ದಾರಿ ತೊಗೋಬೇಕದಾ.

• ಹಾಗಿದ್ರೆ ಯುವಜನರಿಂದ ನಿಮ್ಮ ನಿರೀಕ್ಷೆಗಳೇನು?
ನಾಳೆ ಬದುಕಿ ಬಾಳಬೇಕಾದವರಾಗೇ ತಾನೇ ನಿರೀಕ್ಷೆ ಇಡೂದು? ಯುವಜನರಲ್ಲಿ ಮೊದಲನೆಯದಾಗಿ ಆದರ್ಶ ಇದ್ರೆ, ಗುರಿ ಇದ್ರೆ ಮಾತ್ರ ಬದುಕು ಸಾರ್ಥಕ ಆಗೋದು. ಆಗ ಮಾತ್ರ ನಮ್ಮ ಕನಸಿನ ಭಾರತ ಕಟ್ಟಲು ಸಾಧ್ಯ. ಈಗ ಇರೋ ಈ ಸ್ಥಿತಿದಾಗಿಂದ ಹೆಂಗೆ ಧನಾತ್ಮಕವಾಗಿ ಎಲ್ಲಾ ಕೂಡಿಸೋದು, ರಚನಾತ್ಮಕ ಮಾಡೋದು ಅಂತ ನೋಡ್ಬೇಕಾಗೇದ. ಇಲ್ಲದಿದ್ರೆ ಛಿದ್ರ ಆಗಿ ಹೋಗ್ತರ‍್ತೀವಿ. ಸರ್ಕಾರ ಏನು ಮಾಡ್ಬೇಕಾಗೇದ ಅದೂ ಹೋರಾಟದಿಂದ ಮಾಡಿಸ್ಬೇಕು. ಜೊತೆಗೆ ನಾವು ಸಂಘಟನಾತ್ಮಕವಾಗಿ ಏನು ಮಾಡ್ಬೋದು ಅದನ್ನೂ ಮನಸಿಟ್ಟು ನೋಡ್ಬೇಕಾಗೇದ. ಮತ್ತ ರಾಜಕಾರಣವನ್ನ ನಾವೂ ಮಾಡ್ಬೇಕಾಗೇದ! ಆದ್ರೆ ನೈತಿಕವಾಗಿ, ಗುಣಾತ್ಮಕವಾಗಿ, ರಚನಾತ್ಮಕವಾಗಿ ಮಾಡ್ಬೇಕಾಗೇದ. ಅಂದ್ರ ಇಂತಹ ರಚನಾತ್ಮಕ, ಪ್ರಯೋಗಶೀಲ ದಾರಿನಾಗ ನಮ್ಮ ನೇರ ಪಾರ್ಟಿಸಿಪೇಶನ್ ರ‍್ಬೇಕು. ಇದಾಗ್ಬೇಕು ಅಂದ್ರ ನಮ್ಮ ಇಡೀ ಜೀವನ ಇದಕ್ಕೆ ಮುಡಿಪಾಗಿಟ್ಟು ಕೆಲ್ಸ ಮಾಡೋರು ಬೇಕು, ಅದರ ಜೊತಿಗೇ ನಿಲ್ಲಬೇಕದಾ. ಯುವಜನರಾಗ ಇದನ್ನ ನಾ ನಿರೀಕ್ಷಿಸ್ತಿನಿ.

ನಮ್ಮ ಮ್ಯಾಲೆ ನಮಗೆ ನಂಬಿಕೆ, ಪ್ರಜಾಪ್ರಭುತ್ವದ ಬಗ್ಗೆ ವಿಶ್ವಾಸ, ಧೈರ್ಯ ಮತ್ತು ಛಲ ಇವೇ ನಮ್ಗೆ ಬೇಕಾಗಿರೋ ಅಸ್ತ್ರಗಳಿದ್ದಾವಾ. ನನ್ನೊಬ್ಬನಿಂದ ಏನು ಸಾಧ್ಯ ಅಂತ ಕುಂತ್ರೆ, ಖರೇ ಏನೂ ಆಗಂಗಿಲ್ಲ. ಎಲ್ಲರಿಂದ ಎಲ್ಲಾ ಸಾಧ್ಯ ಅದ. ಮೊದ್ಲು ನಮಗೆ ಮಾಡೋ ಛಲ ಇರ‍್ಬೇಕಾಗೇದ. ಸಾಯೋಕಿಂತ ಮೊದ್ಲೇ- ಇವೆಲ್ಲಾ ನಂಗೇನೂ ಸಂಬಂಧ ಇಲ್ಲ ಅಂತ ನೀವು ಕೂತು ಬಿಟ್ರೆ, ಬದುಕಿದ್ದೇನು ಪ್ರಯೋಜ್ನ ಅಂತ ಯುವಜನರನ್ನ ನಾ ಕೇಳ್ಲಿಕ್ಕೆ ಬಯಸ್ತೀನಿ. ಹಾಗೆ ದೇಶದ ಕೊನೆಯ ವ್ಯಕ್ತಿಗೂ ಸಹಿತ, ‘ಇದು ನನ್ನ ದೇಶ. ಈ ಸ್ವಾತಂತ್ರ್ಯ ನನ್ನ ಬದುಕನ್ನ ಹಸನು ಮಾಡಲಿಕ್ಕೆ ಸಹಾಯ ಮಾಡ್ತದಾ, ನನಗೆ ಒಂದು ಗೌರವದಿಂದ ಬದುಕಲಿಕ್ಕೆ ಅವಕಾಶ ಕೊಡ್ತದಾ’ ಅಂತ ಆದಾಗ ಮಾತ್ರ, ಆ ಸ್ವಾತಂತ್ರ್ಯ ಹೋರಾಟಕ್ಕೆ ಅದರಿಂದ ಬಂದಂಥಾ ಸಂವಿಧಾನಕ್ಕೆ, ಅದರಿಂದ ಬಂದಂಥಾ ನಮ್ಮ ಸಾರ್ವಭೌಮ ಗಣರಾಜ್ಯ ಏನದಾ, ಅದಕ್ಕ ಅರ್ಥ ಇರ‍್ತದಾ. ಇಲ್ಲದಿದ್ರೆ ಹೆಂಗೆ ಇರ‍್ತದೆ?

ಗಾಂಧಿ 1920-22ನೇ ಇಸವಿಯೊಳಗೆ ಏನು ಮಾಡಿದ್ರು? ಬ್ರಿಟೀಷರ ನೌಕಾಪಡೆ, ಅವರ ಸೈನ್ಯ, ಎಲ್ಲಿ ತಮ್ಮ ಸಾಮ್ರಾಜ್ಯದಲ್ಲಿ ಸೂರ್ಯ ಮುಳುಗೋದಿಲ್ಲ ಅನ್ನೋ ಅಹಂಕಾರ ಇತ್ತೋ, ಅದನ್ನ ಒಂದು ವಿಶಿಷ್ಟ ವಿನೂತನ ಸ್ವಾತಂತ್ರ್ಯ ಆಂದೋಲನದಿಂದ ಅಂದ್ರ- ಅಸಹಕಾರ ಚಳವಳಿ, ಕಾನೂನುಭಂಗ ಚಳವಳಿ ಏನು ಶುರು ಮಾಡಿದ್ರು… ಯಂಗ್ ಇಂಡಿಯಾ ಮೂಲಕ! ಅದೂ ಅಹಿಂಸೆಯಿಂದ ಮಾತ್ರ! ನಿಜವಾದ ಸ್ವರಾಜ್ಯ ಕೆಲವೇ ಜನರ ಕೈಯಲ್ಲಿ ಅಧಿಕಾರ ಬರೋದರಿಂದ ಆಗೋದಿಲ್ಲ. ಅಧಿಕಾರ ದುರುಪಯೋಗ ಆದಾಗ ಅದನ್ನ ಪರಿಣಾಮಕಾರಿಯಾಗಿ ಪ್ರತಿರೋಧ ಮಾಡ್ಬೇಕು.

ಇವತ್ತಿನ ಫ್ಯಾಸಿಸ್ಟ್ ಸರ್ಕಾರ ಯುವಕರನ್ನ ದುರುಪಯೋಗ ಮಾಡಿಕೊಳ್ತಿದೆ. ಆರ್‌ಎಸ್‌ಎಸ್ ಸಿದ್ಧಾಂತ ನಮ್ಮನ್ನ ಗಂಡಾಂತರಕಾರಿಯಾಗಿ ಸನಾತನತ್ವಕ್ಕೆ, ಹಿಂದಕ್ಕೆ ತೆಗೆದುಕೊಂಡು ಹೋಗೋದಾಗಿದೆ. ಸಹೋದರತ್ವಕ್ಕೆ ಆ ಸಿದ್ಧಾಂತವೇ ಧಕ್ಕೆ ಇರ‍್ತದೆ. ಹಿಂಗಾಗಿ ರಾಜಕೀಯ, ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ -ಚಳವಳಿಯೊಂದನ್ನ ಸಮಗ್ರವಾಗಿ ರೂಪಿಸಬೇಕಾಗೇದಾ. ಹಿಂಗಾಗೇ ಈಗ ಅನುಭವ ಮಂಟಪ ಚಳವಳಿ ಪ್ರಾರಂಭಿಸಿದ್ದೇವೆ. ಅದೇ ಯುವಜನರಿಗೆ ಪ್ರೇರಣೆ ಆಗಬೇಕದಾ. ಆ ದಿಸೆಯಲ್ಲಿ ಇವತ್ತಿನ ಯುವಕರು ನಮ್ಮ ದೇಶದೊಳಗೆ ಚಿಂತನೆ ಮಾಡ್ಬೇಕಾಗೇದಾ. ಈ ಚಳವಳಿ ಯುವಕರ ಹೆಗಲ ಮ್ಯಾಲೆ ಮುಂದುವರಿಯಬೇಕೆನ್ನೋ ಆಸೆ ನಂಗಿದೆ- The show must go on….

*****

[ರೂಪ ಹಾಸನ ಅವರು ರೂಪಿಸಿರುವ ‘ಮಹಾಸಂಗ್ರಾಮಿ’- ಎಸ್.ಆರ್.ಹಿರೇಮಠ ಅವರ ರಚನಾತ್ಮಕ ಪ್ರಯೋಗಗಳ ಬಾಳ್ಕಥನ ಕೃತಿಯಿಂದ ಆಯ್ದ ಸಂದರ್ಶನವಿದು]

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

Download Eedina App Android / iOS

X