ಮುಸ್ಲಿಂ ಸಮುದಾಯವನ್ನು ಅವಹೇಳನಕಾರಿಯಾಗಿ ಚಿತ್ರಿಸಿದ್ದ ಪೋಸ್ಟ್‌ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕೋಲಾರ ಜಿಲ್ಲೆಯ ಕೆಜಿಎಫ್‌ನ ರಾಬರ್ಟ್‌ಸನ್ ಪೇಟೆ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಅವಹೇಳನಕಾರಿ ಪೋಸ್ಟ್ ಮೂಲಕ ಮುಸ್ಲಿಂ ಸಮುದಾಯ ವಿರುದ್ಧ ದ್ವೇಷ ಬಿತ್ತಲು ಯತ್ನಿಸಿದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿದೆ. ಆರೋಪಿಗಳಲ್ಲಿ ಓರ್ವ ಬಿಜೆಪಿ ಮುಖಂಡ ಎಂದು ಹೇಳಲಾಗಿದೆ. ಬಂಧಿತರನ್ನು ನವೀನ್ ಜೈನ್, ಚೇತನ್ ಎಂದು ಗುರುತಿಸಲಾಗಿದೆ.
ಹೆಚ್ಚು ಮಕ್ಕಳನ್ನು ಹೆರುವವರಿಗಾಗಿ ತೆರಿಗೆ ಕಟ್ಟಿರಿ ಎಂದು ಬಿಂಬಿಸುವ ರೀತಿಯಲ್ಲಿ ಕಾರ್ಟೂನ್‌ಅನ್ನು ಬರೆದು ಹಂಚಿಕೊಳ್ಳಲಾಗಿತ್ತು. ತಮ್ಮ ಸಮುದಾಯವನ್ನು ಅವಹೇಳನಕಾರಿಯಾಗಿ ಚಿತ್ರಿಸಿರುವ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡ ಹಿನ್ನಲೆ ಮುಸ್ಲಿಂ ಮುಖಂಡರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆರೋಪಿಗಳನ್ನು ಬಂಧಿಸಿ ಕ್ರಮ ಕೈಗೊಳ್ಳುವಂತೆ ಪ್ರತಿಭಟನೆ ನಡೆಸಿದ್ದರು. ಈ ಬೆನ್ನಲ್ಲೇ, ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಅಂದಹಾಗೆ, ಲೋಕಸಭಾ ಚುನಾವಣೆಯ ಸಮಯದಲ್ಲಿ ನಿರಂತರವಾಗಿ ದ್ವೇಷ ಭಾಷಣ ಮಾಡಿದ್ದ ಪ್ರಧಾನಿ ಮೋದಿ ಅವರು ‘ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಹೆಚ್ಚು ಮಕ್ಕಳನ್ನು ಹೆರುವವರಿಗೆ ನಿಮ್ಮ ಆಸ್ತಿಯನ್ನು ಕೊಡುತ್ತದೆ. ಅದಕ್ಕಾಗಿ, ಹಿಂದು ಹೆಣ್ಣುಮಕ್ಕಳ ಮಂಗಳಸೂತ್ರವನ್ನೂ ಬಿಡುವುದಿಲ್ಲ’ ಎಂದು ಹೇಳಿದ್ದರು. ಅವರ ಹೇಳಿಕೆಗಳ ನಂತರ ಇಂತಹ ಪೋಸ್ಟ್‌ಗಳು ವೈರಲ್ ಆಗುತ್ತಿವೆ.