ಗೋದಾವರಿ ನದಿ ಉಕ್ಕಿ ಹಿಯುತ್ತಿದ್ದು, ನದಿಗೆ ಒಳಹರಿವು ಹೆಚ್ಚಾಗಿದೆ. ಪರಿಣಾಮ, ಗೋದಾವರಿ ಜಲಾನಯ ಪ್ರದೇಶ ಮತ್ತು ಪೋಲಾವರಂ ಹಿನ್ನೀರು ಪ್ರದೇಶಗಳಲ್ಲಿ ‘ಹೈಅಲರ್ಟ್’ ಘೋಷಿಸಲಾಗಿದೆ. ಭದ್ರಾಚಲಂ ಮತ್ತು ದೌಲೇಶ್ವರಂ ಪಟ್ಟಣಗಳ ತಗ್ಗು ಪ್ರದೇಶಗಳು ಮುಳುಗಡೆಯಾಗುವ ಸಾಧ್ಯತೆ ಇದ್ದು, ಮತ್ತೆ ಪ್ರವಾಹವಾಗುವ ಆತಂಕ ಎದುರಾಗಿದೆ.
ಶನಿವಾರ ರಾತ್ರಿ 8 ಗಂಟೆಗೆ ಭದ್ರಾಚಲಂನಲ್ಲಿ ನೀರಿನ ಮಟ್ಟ 53.8 ಅಡಿ ಇದ್ದು, ದೌಲೇಶ್ವರಂ ಬ್ಯಾರೇಜ್ನಲ್ಲಿ ನೀರಿನ ಮಟ್ಟ 17 ಅಡಿ ಮೀರುತ್ತಿದೆ. ಮುಂದಿನ ದಿನಗಳಲ್ಲಿ ಹಲವು ಪ್ರದೇಶಗಳು ಮುಳುಗಡೆಯಾಗುವ ಸಾಧ್ಯತೆ ಇದ್ದು, ಹೈಅಲರ್ಟ್ ಘೋಷಿಸಲಾಗಿದೆ.
ದೌಲೇಶ್ವರಂನ ನದಿ ಸಂರಕ್ಷಣಾಧಿಕಾರಿ ಕಾಶಿ ವಿಶ್ವೇಶ್ವರರಾವ್ ಪ್ರಕಾರ, ಸುಮಾರು 14 ಲಕ್ಷ ಕ್ಯೂಸೆಕ್ ನೀರನ್ನು ಬಂಗಾಳಕೊಲ್ಲಿಗೆ ಬಿಡಲಾಗುತ್ತಿದೆ. ಕೇಂದ್ರ ಜಲ ಆಯೋಗದ ಪ್ರಕಾರ, ಮಹಾರಾಷ್ಟ್ರ, ಛತ್ತೀಸ್ಗಢ ಮತ್ತು ಒಡಿಶಾದಲ್ಲಿ ವ್ಯಾಪಕ ಮಳೆಯಾಗುತ್ತಿರುವ ಕಾರಣ ಗೋದಾವರ ಉಕ್ಕು ಹರಿಯುತ್ತಿದ್ದು, ಮುಂದಿನ ಮೂರು ದಿನಗಳಲ್ಲಿ ಪ್ರವಾಹದ ಒಳಹರಿವು ಹೆಚ್ಚಾಗುವ ನಿರೀಕ್ಷೆಯಿದೆ.
ಪ್ರವಾಹ ಪರಿಹಾರ ಕಾರ್ಯಾಚರಣೆಗಾಗಿ ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್ ತಂಡಗಳನ್ನು ನಿಯೋಜಿಸಲಾಗಿದೆ. ಪ್ರವಾಹ ಪೀಡಿತ ಪ್ರದೇಶಗಳಿಂದ 21,051 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ. 13,289 ಜನರನ್ನು 82 ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಈಗಾಗಲೇ, ವೇಲೇರುಪಾಡು ಮತ್ತು ಕುಕ್ಕುನೂರು ಮಂಡಲಗಳು ಪ್ರವಾಹಕ್ಕೆ ಸಿಲುಕಿವೆ. ಈ ಪ್ರದೇಶದ ಚಿಂತೂರು, ಯೆಟಪಾಕ, ಕುನವರಂ, ವಿಆರ್ ಪುರಂ ಮಂಡಲಗಳಲ್ಲಿ ಗ್ರಾಮಗಳು ಮತ್ತು ಜಮೀನುಗಳು ಮುಳುಗಡೆಯಾಗಿವೆ. ಪ್ರವಾಹ ಪೀಡಿತ ಜಿಲ್ಲೆಗಳ ವೇಲೇರುಪಾಡು, ಸೀತಾಗ್ರಾಮ, ಚಿಂತೂರು, ವಿಆರ್ ಪುರಂ, ಜಂಗಾರೆಡ್ಡಿಗುಡೆಂ, ಅಮಲಾಪುರಂ, ಕುನವರಂಗಳಲ್ಲಿ ಪ್ರವಾಹದ ಮಟ್ಟ ಹೆಚ್ಚಾದರೆ ಕ್ಷಿಪ್ರ ಕಾರ್ಯಾಚರಣೆಗೆ ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್ ಸಿಬ್ಬಂದಿಗಳಮನ್ನು ನಿಯೋಜಿಸಲಾಗಿದೆ.
ಕೃಷ್ಣಾ ನದಿಯಲ್ಲಿ ಭಾರೀ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು, ಐತಿಹಾಸಿಕ ಸಂಗಮೇಶ್ವರ ಸ್ವಾಮಿ ದೇವಸ್ಥಾನ ಮುಳುಗಡೆಯಾಗಿದೆ. ದೇವಾಲಯದ ಗೋಪುರಗಳು ಮಾತ್ರ ಗೋಚರಿಸುತ್ತಿವೆ. ಕೊತಪಲ್ಲಿ ಮಂಡಲದಲ್ಲಿರುವ ಈ ದೇವಾಲಯವು ಪ್ರತಿ ವರ್ಷ ಎಂಟು ತಿಂಗಳ ಕಾಲ ನೀರಿನಲ್ಲಿ ಮುಳುಗಿರುತ್ತದೆ. ನಾಲ್ಕು ತಿಂಗಳು ಮಾತ್ರ ಭಕ್ತರಿಗೆ ಕಾಣಸಿಗುತ್ತದೆ.