ವಿಚಾರಣಾ ನ್ಯಾಯಾಧೀಶರು ಅಪರಾಧದ ಪ್ರಮುಖ ವಿಷಯಗಳ ಬಗ್ಗೆ ಅನುಮಾನ ಹೊಂದಿದ್ದಾಗ ಜಾಮೀನು ನೀಡದೆ ಸುರಕ್ಷಿತವಾಗಿ ಕೆಲಸ ಮಾಡಲು ಬಯಸುತ್ತಾರೆ. ಆದರೆ, ಅವರು ಪ್ರತಿ ಪ್ರಕರಣದ ಸೂಕ್ಷ್ಮತೆಗಳನ್ನು ಅರಿಯಲು ‘ದೃಢವಾದ ಸಾಮಾನ್ಯ ಜ್ಞಾನ’ವನ್ನು ಬಳಸಬೇಕು ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ನಡೆದ ‘ಬರ್ಕ್ಲಿ ಸೆಂಟರ್’ನ 11ನೇ ವಾರ್ಷಿಕ ಸಮ್ಮೇಳನದಲ್ಲಿ ಅವರು ಮಾತನಾಡಿದರು. “ವಿಚಾರಣಾ ನ್ಯಾಯಾಲಯಗಳಲ್ಲಿ ಜಾಮೀನು ಪಡೆಯಬೇಕಾದ ಜನರು, ನ್ಯಾಯಾಧೀಶರ ಹಿಂದೇಟಿನ ಕಾರಣದಿಂದಾಗಿ ಹೈಕೋರ್ಟ್‌ಗಳಿಗೆ ಹೋಗುವಂತಾಗಿದೆ. ಹೈಕೋರ್ಟ್‌ಗಳಲ್ಲಿಯೂ ಕೆಲವರು ಜಾಮೀನು ಪಡೆಯಲು ಸಾಧ್ಯವಾಗುತ್ತಿಲ್ಲ. ಈ ವಿಳಂಬದಿಂದ ಹಲವರು ಅನಿಯಂತ್ರಿತ ಬಂಧನವನ್ನು ಎದುರಿಸುವಂತಾಗಿದೆ” ಎಂದು ಹೇಳಿದ್ದಾರೆ.
“ವಿರೋಧ ಪಕ್ಷಗಳ ಮುಖ್ಯಮಂತ್ರಿಗಳು ಸೇರಿದಂತೆ ಮುಖಂಡರು, ಸಾಮಾಜಿಕ ಕಾರ್ಯಕರ್ತರು, ಶಿಕ್ಷಣ ತಜ್ಞರು, ಪತ್ರಕರ್ತರು ಮತ್ತು ರಾಜಕಾರಣಿಗಳನ್ನು ರಾಜಕೀಯ ಪ್ರೇರಿತವಾಗಿ ಬಂಧಿಸಲಾಗುತ್ತಿದೆ. ದುರದೃಷ್ಟವಶಾತ್, ವಿಚಾರಣಾ ನ್ಯಾಯಾಧೀಶರು ನೀಡುವ ಯಾವುದೇ ಆದೇಶವನ್ನು ನಾವು ಅನುಮಾನದಿಂದ ನೋಡುತ್ತೇವೆ. ಇದರರ್ಥ ವಿಚಾರಣಾ ನ್ಯಾಯಾಧೀಶರು ಹೆಚ್ಚು ಸುರಕ್ಷಿತವಾದ ನಡೆಗಳನ್ನು ಅನುಸರಿಸುತ್ತಿದ್ದಾರೆ. ಗಂಭೀರ ಅಪರಾಧಗಳಂತಹ ಪ್ರಮುಖ ವಿಷಯಗಳಲ್ಲಿ ಅವರು ಜಾಮೀನು ನೀಡುವುದಿಲ್ಲ,” ಎಂದು ಚಂದ್ರಚೂಡ್ ಬೇಸರ ವ್ಯಕ್ತಪಡಿಸಿದ್ದಾರೆ.
“ಬಹುತೇಕ ಪ್ರಕರಣಗಳು ಸುಪ್ರೀಂ ಕೋರ್ಟ್‌ಗೆ ಬರಬಾರದಿತ್ತು. ನಾವು ಜಾಮೀನಿಗೆ ಆದ್ಯತೆ ನೀಡಲು ಕಾರಣವೆಂದರೆ, ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಅತ್ಯಂತ ಆರಂಭಿಕ ಹಂತದಲ್ಲಿರುವವರು ಹಿಂಜರಿಕೆ ಇಲ್ಲದೆ ತಮ್ಮ ಕರ್ತವ್ಯ ನಿರ್ವಹಿಸಬೇಕು ಎಂಬ ಸಂದೇಶವನ್ನು ರಾಷ್ಟ್ರಾದ್ಯಂತ ರವಾನಿಸುವ ಉದ್ದೇಶವಿದೆ” ಎಂದು ಅವರು ಹೇಳಿದ್ದಾರೆ.