ಹಣ ದುರುಪಯೋಗ ಆರೋಪ ಹಿನ್ನೆಲೆ ಚಳ್ಳಕೆರೆ ತಾಲೂಕಿನ ನನ್ನಿವಾಳ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಸ್.ಪಾಲಯ್ಯ ಅವರನ್ನು ಅಮಾನತುಗೊಳಿಸಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್.ಜೆ.ಸೋಮಶೇಖರ್ ಆದೇಶಿಸಿದ್ದಾರೆ.
ಗ್ರಾಮ ಪಂಚಾಯತಿಯ ಸಿಬ್ಬಂದಿ ವೇತನ, 14 ಮತ್ತು 15 ನೇ ಹಣಕಾಸು ಯೋಜನೆಯ ಹಣ ದುರುಪಯೋಗ ಸೇರಿ ಅಧಿಕಾರ ದುರುಪಯೋಗ ಆರೋಪದಡಿ ಅಮಾನತುಗೊಳಿಸಲಾಗಿದೆ.
ಚಳ್ಳಕೆರೆ ತಾಲ್ಲೂಕಿನ ವೆಂಕಟೇಶ್ವರ ನಗರದ ಕಿವುಡ, ಮೂಕರಿಗೆ ನೀವೇಶನ ಹಂಚಿಕೆ ಮಾಡದೇ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದರು. ಗ್ರಾ.ಪಂ. ವ್ಯಾಪ್ತಿಯ ಆಯಿಲ್ ಮಿಲ್ ಮತ್ತು ಕ್ರಷರ್ ಗಳಿಂದ ಅವೈಜ್ಞಾನಿಕವಾಗಿ ಸಣ್ಣ ಮೊತ್ತದ ತೆರಿಗೆ ಸಂಗ್ರಹಿಸಿ ಪಂಚಾಯತಿಗೆ ಆರ್ಥಿಕ ನಷ್ಟ ಉಂಟು ಮಾಡಿರುವ ಆರೋಪ ಕೇಳಿ ಬಂದಿತ್ತು.
ಈ ಕುರಿತು ಚಳ್ಳಕೆರೆ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ನೇತ್ರತ್ವದ ತಂಡ ತನಿಖೆ ನಡೆಸಿ ವರದಿ ಸಲ್ಲಿಸಿತ್ತು. ತನಿಖಾ ವರದಿ ಆಧರಿಸಿ ಪಿಡಿಒ ಎನ್. ಪಾಲಯ್ಯ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ತಿಳಿಸಿದ್ದಾರೆ.