ಶನಿವಾರ ರಾತ್ರಿ ತಮಿಳುನಾಡಿನ ಶಿವಗಂಗೈಯಲ್ಲಿ ಬಿಜೆಪಿ ಕಾರ್ಯಕರ್ತನೊಬ್ಬನನ್ನು ದುಷ್ಕರ್ಮಿಗಳ ತಂಡ ಬರ್ಬರವಾಗಿ ಹತ್ಯೆ ಮಾಡಿದೆ.
ಶಿವಗಂಗೈ ಜಿಲ್ಲೆಯ ಬಿಜೆಪಿ ಜಿಲ್ಲಾ ಕಾರ್ಯದರ್ಶಿಯಾಗಿದ್ದ ಸೆಲ್ವಕುಮಾರ್ ಅವರು ತಮ್ಮ ಮಾಲೀಕತ್ವದ ಇಟ್ಟಿಗೆಗೂಡಿನಿಂದ ದ್ವಿಚಕ್ರ ವಾಹನದಲ್ಲಿ ಮನೆಗೆ ಮರಳುತ್ತಿದ್ದಾಗ ದುಷ್ಕರ್ಮಿಗಳು ಮಾರ್ಗಮಧ್ಯೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ.
ದಾರಿಹೋಕರು ರಕ್ತದ ಮಡುವಿನಲ್ಲಿದ್ದ ಸೆಲ್ವಕುಮಾರ್ ಅವರನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಪೊಲೀಸರು ಆಗಮಿಸಿದಾಗ ಸೆಲ್ವಕುಮಾರ್ ಮೃತಪಟ್ಟಿದ್ದರು. ಪೊಲೀಸರು ಸೆಲ್ವಕುಮಾರ್ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಸೆಲ್ವಕುಮಾರ್ ಹತ್ಯೆ ಖಂಡಿಸಿ ಗ್ರಾಮಸ್ಥರು ಹಾಗೂ ಬೆಂಬಲಿಗರು ಪ್ರತಿಭಟನೆ ನಡೆಸಿದರು. ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ರಸ್ತೆ ತಡೆ ನಡೆಸಿ ಮೃತದೇಹ ಸ್ವೀಕರಿಸಲು ನಿರಾಕರಿಸಿದರು. ಕಾನೂನು ಸುವ್ಯವಸ್ಥೆ ಕಾಪಾಡಲು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಪಡೆಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಪ್ಯಾರಿಸ್ ಒಲಿಂಪಿಕ್ಸ್ 2024: ಪಿ ವಿ ಸಿಂಧು ಸೇರಿ ಭಾರತದ ಆರು ಕ್ರೀಡಾಪಟುಗಳ ಶುಭಾರಂಭ
ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗಾಗಿ ಆಡಳಿತಾರೂಢ ಡಿಎಂಕೆ ಸರ್ಕಾರವನ್ನು ರಾಜ್ಯ ಬಿಜೆಪಿ ಮುಖ್ಯಸ್ಥ ಕೆ ಅಣ್ಣಾಮಲೈ ಆರೋಪಿಸಿದರು.
ಈ ನಡುವೆ ಶಿವಗಂಗೈ ಸಂಸದ ಕಾರ್ತಿ ಪಿ ಚಿದಂಬರಂ ಹತ್ಯೆಯಲ್ಲಿ ಯಾವುದೇ ರಾಜಕೀಯ ಕೈವಾಡವಿಲ್ಲ, ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ನಡೆದ ಕೃತ್ಯ ಎಂದು ತಿಳಿಸಿದ್ದಾರೆ.
ರಾಜ್ಯ ಬಿಜೆಪಿ ಮುಖ್ಯಸ್ಥ ಕೆ. ಅಣ್ಣಾಮಲೈ ಅವರು ಸೆಲ್ವಕುಮಾರ್ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ್ದು, ಪಕ್ಷದಿಂದ ನೆರವು ನೀಡುವ ಭರವಸೆ ನೀಡಿದರು.
ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ನಡೆದ ಎರಡನೇ ರಾಜಕೀಯ ಕೊಲೆ ಇದಾಗಿದೆ. ತಮಿಳುನಾಡಿನ ಕಡಲೂರಿನಲ್ಲಿ ಶನಿವಾರ ಎಐಎಡಿಎಂಕೆ ಕಾರ್ಯಕರ್ತನನ್ನು ಕೊಲೆ ಮಾಡಲಾಗಿತ್ತು.
ಜುಲೈ 5 ರಂದು ಬಹುಜನ ಸಮಾಜ ಪಕ್ಷದ ರಾಜ್ಯಾಧ್ಯಕ್ಷ ಕೆ ಆರ್ಮ್‌ಸ್ಟ್ರಾಂಗ್ ಅವರನ್ನು ಚೆನ್ನೈನಲ್ಲಿ ಹತ್ಯೆ ಮಾಡಲಾಗಿತ್ತು.