ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ವಿರುದ್ಧ ಸುಳ್ಳು ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ ಎಂದು ಆರೋಪಿಸಿ ಮಾಜಿ ಸಮಾಜ ಕಲ್ಯಾಣ ಇಲಾಖೆ ಸಚಿವ, ಹಾಲಿ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಅವರು ಸೋಮವಾರ ವಿಧಾನಸೌಧದಲ್ಲಿ ಧರಣಿ ಕುಳಿತಿದ್ದಾರೆ.
ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಧರಣಿ ಕುಳಿತಿರುವ ಅವರಿಗೆ ಶಾಸಕ ಸುರೇಶ್ ಕುಮಾರ್, ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ, ಎನ್ ರವಿಕುಮಾರ್ ಸಾಥ್ ನೀಡಿದ್ದಾರೆ.
‘ನನ್ನ ಮೇಲಿನ ಆರೋಪ ಹಿಂಪಡೆಯಿರಿ ಅಥವಾ ಸಿಬಿಐ ತನಿಖೆಗೆ ಕೊಡಿ’ ಎಂಬ ಪೋಸ್ಟ್ ಒಂದನ್ನು ಕೋಟ ಶ್ರೀನಿವಾಸ್ ಪೂಜಾರಿ ಹಿಡಿದುಕೊಂಡು ಪ್ರತಿಭಟಿಸುತ್ತಿದ್ದಾರೆ.
“ನನ್ನ ಮೇಲಿನ ಆರೋಪ ಸತ್ಯಕ್ಕೆ ದೂರವಾದುದು. ಅವರು ತಮ್ಮ ಆರೋಪ ವಾಪಸ್ ಪಡೆಯಬೇಕು. ಇಲ್ಲವಾದರೆ ಸಿಬಿಐ ತನಿಖೆಗೆ ಶಿಫಾರಸ್ಸು ಮಾಡಬೇಕು” ಎಂದು ಸಿಎಂಗೆ ಪತ್ರ ಬರೆದು ಮನವಿ ಮಾಡಿದ್ದೆ. ಆದರೆ, ಸಿದ್ದರಾಮಯ್ಯ ಅವರು ನನ್ನ ಪತ್ರಕ್ಕೆ ಈವರೆಗೂ ಸ್ಪಂದಿಸಿಲ್ಲ. ಅವರ ಮೌನ ನೋವು ತಂದಿದೆ. ಆದ್ದರಿಂದ ಗಾಂಧಿ ಪ್ರತಿಮೆ ಬಳಿ ಸಾಂಕೇತಿಕವಾಗಿ ಧರಣಿ ಕೂತ್ತಿದ್ದೇನೆ. ರಾಜ್ಯದ ಜನತೆ ತೀರ್ಪು ನೀಡಲಿ” ಎಂದಿದ್ದಾರೆ.
ಏನಿದು ಆರೋಪ
ಕೋಟ ಶ್ರೀನಿವಾಸ್ ಪೂಜಾರಿ ಅವಧಿಯಲ್ಲಿ ಕೊಳವೆ ಬಾವಿ ಟೆಂಡರ್ ಪ್ರಕ್ರಿಯೆಯಲ್ಲಿ ಹಗರಣ ನಡೆದಿದೆ ಎಂದು ಅಂದಿನ ವಿರೋಧ ಪಕ್ಷ ಕಾಂಗ್ರೆಸ್ ಮಾಡಿತ್ತು. ಈ ಆರೋಪವನ್ನು ಇದೀಗ ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ಮಾಡಿದ್ದರು. ಇದು ಕೋಟ ಪ್ರತಿಭಟನೆಗೆ ಕಾರಣವಾಗಿದೆ.