ಕಳೆದ ವಾರವಿಡೀ ಸುರಿದ ಧಾರಾಕಾರ ಮಳೆಯಿಂದಾಗಿ ಹಾನಿಗೀಡಾದ ವಿವಿಧ ಗ್ರಾಮಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು.
ಬೀದರ ದಕ್ಷಿಣ ಕ್ಷೇತ್ರದ ಖಾಶೆಂಪುರ್, ಕಾಡವಾದ, ಚಟ್ನಳ್ಳಿ ಗ್ರಾಮಗಳಿಗೆ ಜಿಲ್ಲೆಯ ಉನ್ನತ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಮನೆಯ ಗೋಡೆಗಳು ಹಾಗೂ ಮೇಲ್ಛಾವಣಿಗಳು ಕುಸಿದು ಬಿದ್ದಿರುವ ಬಗ್ಗೆ ಪರಿಶೀಲನೆ ನಡೆಸಿದರು.
ಈ ವೇಳೆ ಮಾತನಾಡಿದ ಸಚಿವರು, ʼಮಳೆಯಿಂದಾಗಿ ಭಾಗಶಃ ಕುಸಿದಿರುವ ಮನೆಗೆ ತುರ್ತು 6,500 ರೂ. ಆದೇಶ ಜೊತೆಗೆ 50 ಸಾವಿರ ಪರಿಹಾರ ಹಾಗೂ ಪೂರ್ತಿ ಮನೆ ಬಿದ್ದಿರುವ ಸಂತ್ರಸ್ಥರಿಗೆ ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ಅಡಿ 1.20 ಲಕ್ಷ ರೂ. ಪರಿಹಾರ ಧನ ಮತ್ತು ಸರ್ಕಾರದ ವತಿಯಿಂದ ಒಂದು ಮನೆ ಕೊಡಲಾಗುವುದುʼ ಎಂದು ಭರವಸೆ ನೀಡಿದರು.
ಮಳೆ ಅವಾಂತರದಿಂದ ಜಿಲ್ಲೆಯ ಜನರಿಗೆ ಸಂಕಷ್ಟ ಆಗದಂತೆ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕೆಂದು ಸಚಿವ ಈಶ್ವರ ಖಂಡ್ರೆ ಅಧಿಕಾರಿಗಳಿಗೆ ಸೂಚಿಸಿದರು.
ಕ್ರೀಡಾ ವಸತಿ ನಿಲಯ ಕಟ್ಟಡಕ್ಕೆ ಶಂಕುಸ್ಥಾಪನೆ :
ಕ್ರೀಡಾಪಟುಗಳ ಕ್ರೀಡಾ ಚಟುವಟಿಕೆಗೆ ಉಪಯೋಗ ಆಗಲೆಂದು ಬೀದರ ನಗರದ ಜಿಲ್ಲಾ ನೆಹರೂ ಕ್ರೀಡಾಂಗಣದಲ್ಲಿ ಸುಮಾರು 3.25 ಕೋಟಿ ರೂ. ವೆಚ್ಚದ ಕ್ರೀಡಾ ವಸತಿ ನಿಲಯದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಸೋಮವಾರ ಶಂಕುಸ್ಥಾಪನೆ ನೆರವೇರಿಸಿದರು.

ಈ ವೇಳೆ ಮಾತನಾಡಿದ ಸಚಿವರು, ʼಅಥ್ಲೆಟಿಕ್ಸ್ ಹಾಗೂ ಕ್ರೀಡಾ ತರಬೇತಿಗೆ ಬರುವ ಕ್ರೀಡಾಪಟುಗಳಿಗೆ ಜಿಲ್ಲೆಯ ಕ್ರೀಡಾಂಗಣದಲ್ಲಿ ಒಳ್ಳೆಯ ವಸತಿ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಚಿವರಿಗೆ ಮನವಿ ಮಾಡಿ ಸುಮಾರು 3 ಕೋಟಿ 25 ಲಕ್ಷ ರೂ ಅನುದಾನ ಬಿಡುಗಡೆ ಮಾಡಿಸಿದ್ದು, ಕಾಲಮಿತಿಯಲ್ಲಿ ಉತ್ತಮ ಗುಣಮಟ್ಟದ ವಸತಿ ನಿಲಯ ಕಟ್ಟಡ ನಿರ್ಮಾಣ ಮಾಡಬೇಕುʼ ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಆಗ ಬರ, ಈಗ ನೆರೆ- ಸಂತ್ರಸ್ತರತ್ತ ಧಾವಿಸಲಿ ಸರ್ಕಾರ
ಈ ಸಂದರ್ಭದಲ್ಲಿ ಪೌರಾಡಳಿತ ಸಚಿವ ರಹೀಂ ಖಾನ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯಿತಿ ಸಿಇಒ ಗಿರೀಶ ಬದೋಲೆ, ಗ್ಯಾರಂಟಿ ಅನುಷ್ಠಾನ ಜಿಲ್ಲಾಧ್ಯಕ್ಷ ಅಮೃತರಾವ್ ಚಿಮಕೋಡೆ, ನಗರಸಭೆ ಅಧ್ಯಕ್ಷ ಮಹಮ್ಮದ್ ಗೌಸ್ ಸೇರಿದಂತೆ ಇತರ ಅಧಿಕಾರಿಗಳು ಇದ್ದರು.