ಔರಾದ ಹಾಗೂ ಕಮಲನಗರ ತಾಲೂಕಿನ ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಸಂಪೂರ್ಣ ಹದಗೆಟ್ಟು ತಗ್ಗು, ಗುಂಡಿಗಳು ಬಿದ್ದಿವೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ಗುಂಡಿ ಮುಚ್ಚಬೇಕು ಎಂದು ದಲಿತ ಸಂಘರ್ಷ ಸಮಿತಿ ಆಗ್ರಹಿಸಿದೆ.
ಈ ಸಂಬಂಧ ಔರಾದ ತಾಲೂಕು ದಸಂಸ ಸಮಿತಿಯ ಪದಾಧಿಕಾರಿಗಳು ಸೋಮವಾರ ಔರಾದ್ ತಹಸೀಲ್ದಾರ್ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ತಹಸೀಲ್ ಕಚೇರಿ ಅಧಿಕಾರಿ ವೆಂಕಟೇಶ ಅವರಿಗೆ ಸಲ್ಲಿಸಿದರು.
ʼಕಮಲನಗರ ತಾಲೂಕಿನ ದಾಬಕಾ (ಸಿಎಚ್) – ಚಿಕ್ಲಿ(ಯು) ಮಧ್ಯದ ರಸ್ತೆ ಹಾಗೂ ಔರಾದ್‌ದಿಂದ ವ್ಹಾಯಾ ಬೆಳಕುಣಿ(ಸಿ), ಮಹಾಡೋಣಗಾಂವ್, ಠಾಣಾ ಕುಶನೂರ್, ಹಿಪ್ಪಳಗಾಂವ್ ಗ್ರಾಮಗಳಿಗೆ ಸಂಪರ್ಕಿಸುವ ರಸ್ತೆಗಳಲ್ಲಿ ತಗ್ಗು, ಗುಂಡಿಗಳದ್ದೇ ಕಾರುಬಾರು. ಹೀಗಾಗಿ ವಾಹನ ಸವಾರರು ಗುಂಡಿಗಳ ಮಧ್ಯ ರಸ್ತೆ ಹುಡುಕಬೇಕಾದ ಪರಿಸ್ಥಿತಿ ಇದೆ. ಇಲ್ಲಿನ ನಾಗರಿಕರು ಪ್ರತಿನಿತ್ಯ ಓಡಾಡಲು ಹರಸಾಹಸ ಪರದಾಡುತ್ತಿದ್ದಾರೆ. ಆದರೂ ಸಂಬಂಧಪಟ್ಟ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ರಸ್ತೆ ದುರಸ್ತಿಗೆ ಮುಂದಾಗುತ್ತಿಲ್ಲʼ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ರಸ್ತೆ ಪರಿಶೀಲಿಸಿ ಎರಡ್ಮೂರು ದಿನಗಳಲ್ಲಿ ರಸ್ತೆ ತಗ್ಗು, ಗುಂಡಿ ಮುಚ್ಚಿ ದುರಸ್ತಿಗೊಳಿಸಿ, ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. ಇಲ್ಲದಿದ್ದರೆ ರಸ್ತೆ ಗುಂಡಿಗಳಲ್ಲಿ ಸಸಿ ನೆಟ್ಟು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಬಲಿಗಾಗಿ ಕಾದಿರುವ ರಸ್ತೆ ಗುಂಡಿಗಳು : ದುರಸ್ತಿ ಯಾವಾಗ?
ಈ ಸಂದರ್ಭದಲ್ಲಿ ದಸಂಸ ತಾಲೂಕು ಸಂಚಾಲಕ ಸುಭಾಷ ಲಾಧಾ, ಸಹ ಸಂಚಾಲಕ ಗಣಪತರಾವ್ ವಾಸುದೇವ, ದತ್ತಾತ್ರಿ ದತ್ತೂರೆ, ಪ್ರಕಾಶ ಕಾಂಬಳೆ ಇದ್ದರು.