ರೋಗಿಯೋರ್ವರ ಶಸ್ತ್ರಚಿಕಿತ್ಸೆಗಾಗಿ 4 ಸಾವಿರ ಲಂಚ ಪಡೆದಿದ್ದ ಚಿತ್ರದುರ್ಗ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಜಿಲ್ಲಾ ಸರ್ಜನ್ ಡಾ.ಸಾಲಿ ಮಂಜಪ್ಪ ಅವರನ್ನು ಅಮಾನತುಗೊಳಿಸಿ, ರಾಜ್ಯ ಆರೋಗ್ಯ ಇಲಾಖೆ ಜುಲೈ 28ರಂದು ಆದೇಶ ಹೊರಡಿಸಿದೆ.
ಚಿತ್ರದುರ್ಗ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಇದಕ್ಕೆ ಸಾಕ್ಷಿ ಎಂಬಂತೆ ಜಿಲ್ಲಾ ಆಸ್ಪತ್ರೆಯ ಸರ್ಜನ್ ಲಂಚ ಪಡೆದಿರುವ ವಿಡಿಯೋವೊಂದು ಕೆಲದಿನಗಳ ಹಿಂದೆ ವೈರಲ್ ಆಗಿತ್ತು.
ಜಿಲ್ಲಾ ಸರ್ಜನ್ ಡಾ. ಸಾಲಿ ಮಂಜಪ್ಪ ಅವರು ರೋಗಿಯ ಸಂಬಂಧಿ ಬಳಿ, 6 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಕೊನೆಗೆ 4 ಸಾವಿರ ಹಣ ಪಡೆದಿದ್ದಾರೆ. ಲಂಚ ಪಡೆಯುತ್ತಿರುವ ದೃಶ್ಯವನ್ನು ರೋಗಿಯ ಸಂಬಂಧಿ ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದರು. ಅದು ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾದ ಬಳಿಕ ರಾಜ್ಯ ಆರೋಗ್ಯ ಇಲಾಖೆಯು ಜುಲೈ 28ರಂದು ಸೇವೆಯಿಂದ ಅಮಾನತುಗೊಳಿಸಿ, ಆದೇಶ ಹೊರಡಿಸಿದೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಹೊಸ ನಾಯಕರಹಟ್ಟಿ ಮೂಲದ ಚಂದ್ರಶೇಖರ್ ಎಂಬ ವ್ಯಕ್ತಿಯಿಂದ ಲಂಚ ಸ್ವೀಕರಿಸಿದ್ದರು. ಲಂಚ ಸ್ವೀಕರಿಸಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ, ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೂ ಕಾರಣವಾಗಿತ್ತು. ಕಳೆದ ಜುಲೈ 25 ರಂದು ಮಹಾನಾಯಕ ದಲಿತ ಸೇನೆಯು ಸರ್ಜನ್ ವಿರುದ್ಧ ಕ್ರಮ ಆಗ್ರಹಿಸಿ ಚಿತ್ರದುರ್ಗ ನಗರದಲ್ಲಿ ಜಿಲ್ಲಾಸ್ಪತ್ರೆಯಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿತ್ತು.
ಅಮಾನತು ಆದೇಶದಲ್ಲಿ ಏನಿದೆ?
ಚಿತ್ರದುರ್ಗ ಜಿಲ್ಲೆಯಲ್ಲಿರುವ ಜಿಲ್ಲಾಸ್ಪತ್ರೆಯಲ್ಲಿ ಜನರಲ್ ಸರ್ಜನ್ ಆಗಿರುವ ಡಾ. ಸಾಲಿ ಮಂಜಪ್ಪನವರು ಸಾರ್ವಜನಿಕ ಉಚಿತ ಸೇವೆಗಾಗಿ ಬರುವ ರೋಗಿಗಳ ಬಳಿ ಶಸ್ತ್ರಚಿಕಿತ್ಸೆಗಾಗಿ ಹಣದ ಬೇಡಿಕೆ ಇಟ್ಟು, ಸರ್ಕಾರಿ ವೈದ್ಯರ ಹುದ್ದೆಗೆ ತರವಲ್ಲದ ರೀತಿಯಲ್ಲಿ ವರ್ತಿಸುವುದರ ಮೂಲಕ ನಿಯಮಗಳನ್ನು ಉಲ್ಲಂಘಿಸಿ ಕರ್ತವ್ಯಲೋಪ ಎಸಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಇದರ ವಿಡಿಯೋ ಚಿತ್ರೀಕರಣಗೊಂಡು ಮಾಧ್ಯಮಗಳಲ್ಲಿ ಪ್ರಸಾರವಾಗಿರುವುದರಿಂದ ಇವರನ್ನು ಈ ತಕ್ಷಣದಿಂದಲೇ ಜಾರಿಗೆ ಬರುವಂತೆ ಸರ್ಕಾರಿ ಸೇವೆಯಿಂದ ಅಮಾನತುಗೊಳಿಸಲು ತೀರ್ಮಾನಿಸಿದೆ.
ತಮ್ಮ ವ್ಯಾಪ್ತಿಯ ಅಧಿಕಾರವನ್ನು ಚಲಾಯಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಡಿ.ರಂದೀಪ್ ಈ ಆದೇಶ ಹೊರಡಿಸಿದ್ದಾರೆ. ಅಮಾನತ್ತಿನ ಅವಧಿಯಲ್ಲಿ ಆರೋಪಿ ವೈದ್ಯರು ನಿಯಮಾನುಸಾರ ಜೀವನಾಂಶ ಭತ್ಯೆಗೆ ಅರ್ಹರಾಗಿರುವುದರಿಂದ ಅವರನ್ನು ಶಿವಮೊಗ್ಗ ಜಿಲ್ಲೆಯ ಸೊರಬದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಖಾಲಿ ಇರುವ ಹುದ್ದೆಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ. ಅಮಾನತಿನ ಅವಧಿಯಲ್ಲಿ ತಮ್ಮ ಕೇಂದ್ರ ಸ್ಥಾನವನ್ನು ಬಿಡುವುದಕ್ಕೂ ಮುನ್ನ ಪೂರ್ವಾನುಮತಿ ಪಡೆಯಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
