ಭಾರೀ ಮಳೆಯಿಂದ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಆಗಿರುವ ಅಪಾರ ಪ್ರಮಾಣದ ಹಾನಿಗೆ ವಿಶೇಷ ಪರಿಹಾರ ಕಲ್ಪಿಸುವ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ ಜೆ ಜಾರ್ಜ್ ಹೇಳಿದರು.
ಜಿಲ್ಲೆಯಲ್ಲಿ ಪ್ರವಾಹದಿಂದ ಆಗಿರುವ ಹಾನಿ ಮತ್ತು ಪ್ರವಾಹದಿಂದ ಆಗುತ್ತಿರುವ ಸಮಸ್ಯೆ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ಸಭೆ ನಡೆಸಿ ಮಾತನಾಡಿದರು.
“ಮಳೆ ಮತ್ತು ಪ್ರವಾಹದಿಂದ ಆಗಿರುವ ಹಾನಿ ಮತ್ತು ಒಟ್ಟಾರೆ ನಷ್ಟದ ಕುರಿತು ಸಮಗ್ರ ವರದಿ ಸಿದ್ಧಪಡಿಸುವಂತೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚಿಸಿದ್ದೇನೆ. ವರದಿ ಬಂದ ಬಳಿಕ ಸಿದ್ದರಾಮಯ್ಯ ಅವರನ್ನು ಭೇಟಿಯಾಗುವೆ” ಎಂದು ತಿಳಿಸಿದರು.
350 ಮನೆಗಳಿಗೆ ಹಾನಿ
ಮಳೆಹಾನಿ ಕುರಿತಂತೆ ವಿವರಣೆ ನೀಡಿದ ಜಿಲ್ಲಾಧಿಕಾರಿ ಮೀನಾ ನಾಗರಾಜ್, “ಜುಲೈ ತಿಂಗಳಿನಲ್ಲಿ ವಾಡಿಕೆಗಿಂತ ಶೇ. 64ರಷ್ಟು ಹೆಚ್ಚುವರಿ ಮಳೆ ಬಂದಿದೆ. ಇದರಿಂದ 350 ಮನೆಗಳಿಗೆ ಹಾನಿಯಾಗಿದೆ. ಈ ಪೈಕಿ 111 ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಉಳಿದ ಮನೆಗಳು ಬಹುತೇಕ ಹಾನಿಗೊಳಗಾಗಿವೆ” ಎಂದು ಹೇಳಿದರು.
“ಕಳೆದ ಎರಡು ದಿನಗಳಲ್ಲಿ ಕುಸಿದಿರುವ ಮನೆಗಳನ್ನು ಹೊರತುಪಡಿಸಿ ಇತರೆ ಹಾನಿಗೊಳಗಾದ ಮನೆಗಳಿಗೆ ಈಗಾಗಲೇ ತಾತ್ಕಾಲಿಕ ಪರಿಹಾರ ನೀಡಲಾಗಿದೆ. ಶೇ. 25ಕ್ಕಿಂತ ಹೆಚ್ಚು ಹಾನಿಗೊಳಗಾದ ಮನೆಗಳಿಗೆ 1.20 ಲಕ್ಷ ರೂ. ಮತ್ತು ಅದಕ್ಕಿಂತ ಕಡಿಮೆ ಹಾನಿಗೊಳಗಾದ ಮನೆಗಳಿಗೆ 6,500 ರೂ. ತಾತ್ಕಾಲಿಕ ಪರಿಹಾರ ವಿತರಿಸಲಾಗಿದೆ” ಎಂದು ಮಾಹಿತಿ ನೀಡಿದರು.
“ಅದೇ ರೀತಿ ರಸ್ತೆ ಮತ್ತು ಸೇತುವೆಗಳಿಗೂ ಹಾನಿಯಾಗಿದ್ದು, ಸುಮಾರು 55 ಕೋಟಿ ರೂ. ಹಾನಿಯಾಗಿದೆ. ಕೆಲವೆಡೆ ಸಂಪರ್ಕ ಕಡಿದಿದ್ದು, ಅಂತಹ ಪ್ರದೇಶಗಳ ಸಂಪರ್ಕಕ್ಕೆ ಬೇರೆ ಮಾರ್ಗಗಳ ಮೂಲಕ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ” ಎಂದು ತಿಳಿಸಿದರು.
ಜಿಲ್ಲೆಯನ್ನು ಪ್ರವಾಹ ಪೀಡಿತ ಎಂದು ಘೋಷಿಸುವಂತೆ ಈ ವೇಳೆ ಶಾಸಕರು ಮಾಡಿಕೊಂಡ ಮನವಿಗೆ ಪ್ರತಿಕ್ರಿಯಿಸಿದ ಸಚಿವರು, “ಈವರೆಗೆ ಸರ್ಕಾರ ಈ ರೀತಿ ಘೋಷಣೆ ಮಾಡಿಲ್ಲ. ಘೋಷಣೆ ಮಾಡುವ ವೇಳೆ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಲಾಗುವುದು” ಎಂದು ಭರವಸೆ ನೀಡಿದರು.