ಜಾನಪದವು ಜನ ಬದುಕಿನ ಕನ್ನಡಿಯಾಗಿದೆ. ಜೀವನದ ಎಲ್ಲ ವಲಯವು ಜಾನಪದದಿಂದ ಆವೃತ್ತವಾಗಿದೆ. ಅದರ ಉಳಿವು ಇಂದಿನ ವಿದ್ಯಾರ್ಥಿಗಳ ಮೇಲಿದೆ ಎಂದು ಜಾನಪದ ಪರಿಷತ್ತು ಜಿಲ್ಲಾಧ್ಯಕ್ಷ ಡಾ.ಜಗನ್ನಾಥ ಹೆಬ್ಬಾಳೆ ಹೇಳಿದರು.
ಬಸವಕಲ್ಯಾಣದ ಶ್ರೀ ಬಸವೇಶ್ವರ ದೇವಸ್ಥಾನ ಶಿಕ್ಷಣ ಸಂಸ್ಥೆಯ ಸ್ನಾತಕೋತ್ತರ ಮಹಾವಿದ್ಯಾಲಯದಲಿ ಇತ್ತಿಚಿಗೆ ಹಮ್ಮಿಕೊಂಡಿದ್ದ ಶಾಲಾ-ಕಾಲೇಜಿಗೊಂದು ಜಾನಪದ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ʼಪಾರಂಪರಿಕ ಕಲೆ, ಸಾಹಿತ್ಯ, ವೈದ್ಯ ವಿಜ್ಞಾನ ಆಧುನಿಕ ಕಾಲದಲ್ಲಿ ಉಳಿಸಿ, ಮುಂದಿನ ಪೀಳಿಗೆಗೆ ವರ್ಗಾಯಿಸಬೇಕಾಗಿದೆ. ಮೌಖಿಕ ಸಂಸ್ಕೃತಿಯಲ್ಲಿ ಜೀವನದ ಹಲವು ಅನುಭವ ಅಡಕವಾಗಿವೆ, ಅದು ಬದುಕಿನ ಎಲ್ಲ ಮುಖಗಳನ್ನು ಒಳಗೊಂಡಿದೆ. ಜಾನಪದದ ಕುರಿತು ಹೊಸ ವಿದ್ಯಾರ್ಥಿಗಳು, ಯುವ ಸಂಶೋಧಕರು ಆಸಕ್ತಿಯಿಂದ ಅಧ್ಯಯನ ಮಾಡಬೇಕಿದೆʼ ಎಂದು ಸಲಹೆ ನೀಡಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪ್ರೊ.ಶಂಭುಲಿಂಗ ಕಾಮಣ್ಣ ಅವರು ‘ಜಾನಪದದಲ್ಲಿ ಮೌಲ್ಯಗಳು’ ಕುರಿತು ಮಾತನಾಡಿ, ʼಮನುಷ್ಯನ ಬದುಕಿನಲ್ಲಿ ಮಾನವ ಸಂಬಂಧಗಳಿಗೆ ಹೆಚ್ಚು ಮಹತ್ವ ನೀಡಿದ ಜಾನಪದವು ಪ್ರೀತಿ, ಪ್ರೇಮ, ಸೋದರತ್ವ, ಸೌಹಾರ್ದತೆ, ಸಾಮರಸ್ಯಕ್ಕೆ ಆದ್ಯತೆ ನೀಡಿದೆ. ಕೌಟುಂಬಿಕ ಮೌಲ್ಯಗಳಿಗೆ, ಕೂಡು ಕುಟುಂಬಕ್ಕೆ ಹೆಚ್ಚಿನ ಒತ್ತು ನೀಡುವ ಅಂಶಗಳು ಜಾನಪದದಲ್ಲಿ ಇವೆ. ಮನುಷ್ಯನ ಮೌಲ್ಯ ಎತ್ತಿ ಹಿಡಿಯುವ ತತ್ವ ಜಾನಪದದ ಜೀವಾಳವಾಗಿದೆ. ಜಾನಪದ ಹಾಡು, ಒಗಟು, ಗಾದೆ, ಒಡಪು, ಜನಪದ ರಂಗಭೂಮಿ, ಕಲೆಗಳ ಬಗೆಗೆ ಸಾಹಿತ್ಯದ ಮತ್ತು ಸಾಹಿತ್ಯೆತರ ವಿದ್ಯಾರ್ಥಿಗಳು ಅರಿಯಬೇಕುʼ ಎಂದು ಹೇಳಿದರು.
ಬಸವೇಶ್ವರ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಭೀಮಾಶಂಕರ ಬಿರಾದಾರ ಮಾತನಾಡಿ, ʼಆಧುನಿಕತೆ ಬೆಳೆದಂತೆ ಜಾನಪದ ನಶಿಸುವ ಸಾಧ್ಯತೆಯಿದೆ. ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಜಾನಪದದ ದಾಖಲೀಕರಣ ಮೂಲಕ ಜಾನಪದ ಉಳಿಸಿಕೊಳ್ಳಬೇಕಾಗುತ್ತದೆ. ಜಾನಪದ ಜಗತ್ತಿನ ಕುರಿತು ಹೆಚ್ಚು ಹೊಸ ಸಂಶೋಧನೆ ನಡೆಯಬೇಕು. ದುಡಿಮೆ, ಜೀವನಾನುಭವ, ಲೋಕ ಗ್ರಹಿಕೆಗಳು ಮೇಳೈಸಿ ಜಾನಪದದಲ್ಲಿ ಸೃಜನಶೀಲತೆ ಹುಟ್ಟಿದೆʼ ಎಂದರು.
ಈ ಸುದ್ದಿ ಓದಿದ್ದೀರಾ? ವಯನಾಡ್ ಭೂಕುಸಿತ | ಮೃತರ ಸಂಖ್ಯೆ 84ಕ್ಕೆ ಏರಿಕೆ; ಕೇರಳದಲ್ಲಿ ಭಾರೀ ಮಳೆ
ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಡಾ. ಮಲ್ಲಿಕಾರ್ಜುನ ಲಕಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಾನಪದ ಪರಿಷತ್ತಿನ ತಾಲೂಕು ಅಧ್ಯಕ್ಷ ಡಾ.ಬಸವರಾಜ ಸ್ವಾಮಿ, ಪ್ರಾಧ್ಯಾಪಕ ಡಾ. ಅಶೋಕ ಕೋರೆ, ಡಾ.ಶಿವಾಜಿ ಮೇತ್ರೆ, ದೇವೆಂದ್ರ ಬರಗಾಲೆ, ಲಕ್ಷ್ಮಿಬಾಯಿ ಪಾಟೀಲ, ಚನ್ನಬಸವ ಗೌರ, ಗಂಗಾಧರ ಸಾಲಿಮಠ ಮೊದಲಾದವರಿದ್ದರು. ಬಸವೇಶ್ವರ ಸ್ನಾತಕೋತ್ತರ ಕಾಲೇಜು ಪ್ರಾಚಾರ್ಯೆ ಡಾ. ಶಾಂತಲಾ ಪಾಟೀಲ ಸ್ವಾಗತಿಸಿದರು. ಡಾ.ಬಸವರಾಜ ಖಂಡಾಳೆ ನಿರೂಪಿಸಿದರು, ಬಸವರಾಜ ಗುಂಗೆ ವಂದಿಸಿದರು.