ವಿದ್ಯಾರ್ಥಿಗಳು ಮೊಬೈಲ್‌ದಿಂದ ದೂರ ಉಳಿದು ಹೆಚ್ಚಿನ ಅಧ್ಯಯನದಲ್ಲಿ ತೊಡಗಿಸಿಕೊಂಡು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ.ಜೆ.ಎಂ.ನಾಗಯ್ಯ ಹೇಳಿದರು.
ಧಾರವಾಡದ ಶ್ರೀಮತಿ ಲಲಿತ ಬ.ಗೊಬ್ಬರ ಗುಂಪಿ ಕಲಾ ಹಾಗೂ ಶ್ರೀ ಶಂಭುಲಿಂಗಪ್ಪ ವ್ಹಿ. ಬುಡಪನಹಳ್ಳಿ ವಾಣಿಜ್ಯ ಬಾಲಕಿಯರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಪ್ರಸಕ್ತ ಸಾಲಿನ ವಿದ್ಯಾರ್ಥಿ ಒಕ್ಕೂಟ ಮತ್ತು ಕ್ರೀಡಾ ವಿಭಾಗದ ಚಟುವಟಿಕೆಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ʼಕಾಲೇಜಿನಲ್ಲಿ ನಡೆಯುವ ಎಲ್ಲ ರೀತಿಯ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸದೃಢ ದೇಹ ಬೆಳೆಸಿಕೊಳ್ಳಬೇಕು. ಪೋಷಕ, ರೈತ ಹಾಗೂ ಗುರುಗಳ ಋಣ ತೀರಿಸುವ ಮನೋಭಾವ ಮೈಗೂಡಿಸಿಕೊಳ್ಳಬೇಕು. ಅಧ್ಯಯನದ ಜೊತೆಗೆ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕುʼ ಎಂದು ಕಿವಿಮಾತು ಹೇಳಿದರು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಗೌರವ ಕಾರ್ಯದರ್ಶಿ ಎಂ.ಸಿ.ಬಂಡಿ ಮಾತನಾಡಿ, ʼವಿದ್ಯಾರ್ಥಿಗಳು ಆಸಕ್ತಿಯಿಂದ ಕಲಿಕೆಯಲ್ಲಿ ತೊಡಗಿಸಿಕೊಳ್ಳುವ ಜೊತೆ ಜೊತೆಗೆ ಕ್ರೀಡೆ ಹಾಗೂ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಈ ಮೂಲಕ ತಮ್ಮ ಪ್ರತಿಭೆ ಗುರುತಿಸಿಕೊಳ್ಳಬೇಕುʼ ಎಂದು ಸಲಹೆ ನೀಡಿದರು.
ಕರ್ನಾಟಕ ವಿಶ್ವವಿದ್ಯಾಲಯ ಕುಲಸಚಿವ ಡಾ.ಎ.ಚನ್ನಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಸಂಸ್ಥೆಯ ಆಡಳಿತಾಧಿಕಾರಿ ಎಸ್.ಕೆ. ಹೊಸಂಗಡಿ ಹಾಗೂ ಪಿಯು ಕಾಲೇಜು ಪ್ರಾಂಶುಪಾಲ ಡಾ.ರಾಜೇಶ್ವರಿ ಶೆಟ್ಟರ್ ಮಾತನಾಡಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಹೊಂದಾಣಿಕೆ ರಾಜಕಾರಣ ಮತ್ತು ಪಾದಯಾತ್ರೆ ಪಾಲಿಟಿಕ್ಸ್
ಕಾರ್ಯಕ್ರಮದಲ್ಲಿ ಪ್ರಮುಖರಾದ ಯು.ಬಿ. ನದಾಫ್, ಮಹದೇವ ಸುಳ್ಳದ, ಮಂಜುನಾಥ ಹೊನ್ನಕ್ಕಳವರ, ನಂದಾ ಗೋಡ್ಸೆ, ವಿಜಯಲಕ್ಷ್ಮಿ ಚಂದಾವರಕರ, ರವಿ ಭರಮಪ್ಪನವರ, ಗಂಗೂ ಕೊಣ್ಣೂರ ಹಾಗೂ ಕಾಲೇಜಿನ ಪ್ರಾಧ್ಯಾಪಕರು, ಸಿಬ್ಭಂದಿ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಡಾ.ಕಸ್ತೂರಿ ಹಾದಿಮನಿ ನಿರೂಪಿಸಿದರು. ನಾಗವೇಣಿ ಕೊಲ್ಲಾವರ ಸ್ವಾಗತಿಸಿದರು, ಶಾಂತಾಬಾಯಿ ನಾಡಿಗೇರ ವಂದಿಸಿದರು.