ಮಸೀದಿಯಲ್ಲಿ ರಾತ್ರಿ ನಮಾಜ್ ಮಾಡುವ ವೇಳೆ ಕಿಡಿಗೇಡಿಗಳು ಬಿಯರ್ ಬಾಟಲಿ ಎಸೆದ ಘಟನೆ ಸಿರವಾರ ಪಟ್ಟಣದಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.
ನಗರದ ಬಸ್ ನಿಲ್ದಾಣ ಹತ್ತಿರd ಫಿರ್ಧೋಸ್ ಪ್ರಾರ್ಥನಾ ಮಸೀದಿ ಒಳಗಡೆ ಕೆಲ ಯುವಕರು ಹೊಸ ಬಸ್ ನಿಲ್ದಾಣದಲ್ಲಿ ಕುಳಿತು ಕುಡಿದು ಅಮಲಿನಲ್ಲಿ ಮಸೀದಿ ಒಳಗಡೆ ಮದ್ಯದ ಖಾಲಿ ಬಾಟಲಿ ಎಸೆದಿದ್ದಾರೆ ಎನ್ನಲಾಗಿದೆ .
ವಿಷಯ ತಿಳಿದ ತಕ್ಷಣವೇ ಮುಸ್ಲಿಂ ಸಮಾಜದ ಮುಖಂಡರು ಜಮಾಯಿಸಿ ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ಮುಖ್ಯ ರಸ್ತೆ ತಡೆದು ತಡರಾತ್ರಿ ಪ್ರತಿಭಟನೆ ನಡೆಸಿದರು.

ಈ ಹಿಂದೆಯೂ ಸಿರವಾರ ಪಟ್ಟಣದಲ್ಲಿ ಟಿಪ್ಪು ಸುಲ್ತಾನ್ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ಅಪಮಾನ ಮಾಡಿದ ಘಟನೆ ನಡೆದಿತ್ತು. ಪದೇ ಪದೇ ಇಂತಹ ಕೃತ್ಯಗಳು ಸಂಭವಿಸುತ್ತಿವೆ ಎಂದು ಮುಸ್ಲಿಂ ಸಮುದಾಯದವರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಗಳನ್ನು ಶೀಘ್ರವೇ ಬಂಧಿಸುವ ಬಗ್ಗೆ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಬೆಳಿಗ್ಗೆ ಇಬ್ಬರು ಯುವಕರನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಇನ್ನಷ್ಟೇ ಹೆಚ್ಚಿನ ಮಾಹಿತಿ ಬರಬೇಕಾಗಿದೆ. ಈ ಕುರಿತು ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.