ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಸೃಜನಶೀಲತೆ ಬಹಳ ಮುಖ್ಯ. ಪ್ರಸ್ತುತದಲ್ಲಿ ಮುದ್ರಣ ಮಾಧ್ಯಮಕ್ಕಿಂತ ಡಿಜಿಟಲ್ ಮಾಧ್ಯಮ ಹೆಚ್ಚು ಆಕರ್ಷಣೆ ಪಡೆದುಕೊಳ್ಳುತ್ತಿದೆ ಎಂದು ಡಾ ವಿಶ್ವನಾಥ ಕೋಟಿ ತಿಳಿಸಿದರು.
ಧಾರವಾಡ ನಗರದ ಕರ್ನಾಟಕ ಕಲಾ ಕಾಲೇಜಿನ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವು ಕಾಲೇಜಿನ ವಾಣಿಜ್ಯ ವಿಭಾಗದ ಸಭಾಂಗಣದಲ್ಲಿ ಪತ್ರಿಕಾ ದಿನಾಚರಣೆ ಮತ್ತು ಅಂತಿಮ ವರ್ಷದ ಬೀಳ್ಕೊಡುಗೆ ಸಮಾರಂಭದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಪತ್ರಿಕೋದ್ಯಮ ಕ್ಷೇತ್ರದಲ್ಲಿನ ಇತ್ತೀಚಿನ ಬದಲಾವಣೆಗಳುʼ ಎಂಬ ವಿಷಯದ ಕುರಿತು ಮಾತನಾಡಿದರು.
“ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಸೃಜನಶೀಲತೆ ಬಹಳ ಮುಖ್ಯ. ಪ್ರಸಕ್ತ ಪತ್ರಿಕೊದ್ಯಮ ವಿದ್ಯಾರ್ಥಿಗಳು ನಿರಂತರ ಅಧ್ಯಯನದತ್ತ ಗಮನ ಹರಿಸಬೇಕು ಮತ್ತು ನಿತ್ಯದ ಪ್ರಸಕ್ತ ವಿದ್ಯಮಾನಗಳನ್ನು ಅರಿಯಬೇಕು. ಪ್ರಸ್ತುತ ಮುದ್ರಣ ಮಾಧ್ಯಮದಲ್ಲಿ ತಂತ್ರಜ್ಞಾನ ಹೆಚ್ಚು ಪಾತ್ರ ವಹಿಸಿದೆ. ಇಂದು ಕೃತಕ ಬುದ್ಧಿಮತ್ತೆ ಹೆಚ್ಚು ಪ್ರಸ್ತುತತೆ ಪಡೆದಿದೆ. ತಂತ್ರಜ್ಞಾನ ಎಷ್ಟೇ ಮುಂದುವರೆದರೂ ಸುದ್ದಿ ಕೊಠಡಿಯಲ್ಲಿ ಪತ್ರಕರ್ತನನ್ನು ಬದಲಾಯಿಸಲು ಸಾಧ್ಯವಿಲ್ಲ. ತಂತ್ರಜ್ಞಾನ ಕೇಂದ್ರಿತ ಸಾಮಾಜಿಕ ಮಾಧ್ಯಮಗಳು ಹೆಚ್ಚು ಆಕರ್ಷಣೆಗೆ ಒಳಪಟ್ಟಿವೆ ಮತ್ತು ಬರವಣಿಗೆ ಕೌಶಲ್ಯಗಳನ್ನು ಇಂದಿನ ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಇಂದು ಅನುವಾದ ಕ್ಷೇತ್ರ ಹೆಚ್ಚು ಪ್ರವರ್ಧಮಾನ ಕ್ಷೇತ್ರವಾಗಿ ಬೆಳೆಯುತ್ತಿದೆ” ಎಂದರು.
“ಮಾಧ್ಯಮ ವಿದ್ಯಾರ್ಥಿಗಳು ವಿಶೇಷವಾದ ಪರಿಣಿತಿಯಲ್ಲಿ ಪಳಗಬೇಕು. ಪ್ರಸ್ತುತ ಸಾರ್ವಜನಿಕ ಸಂಪರ್ಕ, ಟೆಕ್ನಿಕಲ್ ರೈಟರ್, ಕಾರ್ಪೊರೇಟ್ ಸಂವಹನ ಮತ್ತು ಜಾಹಿರಾತು ಕ್ಷೇತ್ರದಲ್ಲಿ ವಿಪುಲವಾಗಿ ಅವಕಾಶಗಳು ಬೆಳೆಯುತ್ತಿವೆ. ಮಾಧ್ಯಮ ವಿದ್ಯಾರ್ಥಿಗಳಿಗೆ ಸೃಜನಶೀಲತೆ ಬಹಳ ಮುಖ್ಯ. ಒಬ್ಬ ಪತ್ರಕರ್ತನಿಗೆ ಸುದ್ದಿ ಮೂಲಗಳು ಬಹಳ ಮುಖ್ಯ. ಆದ್ದರಿಂದ ಪತ್ರಕರ್ತನಿಗೆ ಸಮಾಜದಲ್ಲಿ ಎಲ್ಲರ ಸಂಪರ್ಕ ಬಹಳ ಮುಖ್ಯ. ವರದಿಗಾರಿಕೆಯಲ್ಲಿ ಇಂದು ತಂತ್ರಜ್ಞಾನದ ಪಾತ್ರ ಅಪಾರವಾಗಿದೆ. ಡಿಜಿಟಲ್, ವಿದ್ಯುನ್ಮಾನ ಮತ್ತು ಮುದ್ರಣಗಳನ್ನು ಪ್ರತಿನಿತ್ಯ ಅವಲೋಕನ ಮಾಡುವ ಅವಶ್ಯಕತೆ ಇದೆ” ಎಂದರು.
ಅಧ್ಯಾಪಕ ಡಾ. ಪ್ರಭಾಕರ್ ಕಾಂಬಳೆ ಮಾತನಾಡಿ, “ಸಿಕ್ಕ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಪತ್ರಿಕೋದ್ಯಮ ಕ್ಷೇತ್ರಕ್ಕೆ ಹೋಗಲಿಚ್ಛಿಸುವ ವಿದ್ಯಾರ್ಥಿಗಳು ನಿರಂತರವಾದ ಅಧ್ಯಯನದಲ್ಲಿ ತೊಡಗಿಕೊಳ್ಳಿ. ಜೊತೆಗೆ ಪ್ರವೃತ್ತಿಯನ್ನು ಮೈಗೂಡಿಸಿಕೊಳ್ಳಬೇಕು” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಡಿ ಬಿ ಕರಡೋಣಿ ಮಾತನಾಡಿ, “ವೃತ್ತಿಪರ ಕೋರ್ಸ್ಗಳನ್ನು ಇಂದಿನ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳವುದು ಸೂಕ್ತ. ಮಾಧ್ಯಮ ಕ್ಷೇತ್ರಕ್ಕೆ ಹೋಗ ಬಯಸುವ ವಿದ್ಯಾರ್ಥಿಗಳು ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಮಾಧ್ಯಮ ನಿರಂತರವಾಗಿ ಬದಲಾಗುತ್ತದೆ. ಅದಕ್ಕೆ ತಕ್ಕಂತೆ ಬರವಣಿಗೆ ರೂಪಿಸಿಕೊಳ್ಳಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಮೈಸೂರು | 5ನೇ ತರಗತಿ ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆ
ಪತ್ರಿಕೋದ್ಯಮ ಐದನೇ ಸೆಮಿಸ್ಟರ್ನಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಅಂತಿಮ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿಗಳಾದ ಮೇಘಾ, ಪಲ್ಲವಿ, ಬಸವರಾಜ, ಸಂದೀಪ, ಪವನ ತಮ್ಮ ಮೂರು ವರ್ಷದ ಶೈಕ್ಷಣಿಕ ಅನುಭವವನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ವಿಜಯ ಕರ್ನಾಟಕ ಪತ್ರಿಕೆಯ ಪ್ರಸರಣ ವಿಭಾಗದ ವ್ಯವಸ್ಥಾಪಕ ರವಿ, ಅಧ್ಯಾಪಕರಾದ ಡಾ ಪ್ರಭಾಕರ ಕಾಂಬಳೆ, ಡಾ ರವೀಂದ್ರ ಜಲರಡ್ಡಿ, ವರದಿಗಾರ ಮಂಜುನಾಥ ಕವಳಿ, ಪತ್ರಿಕಾ ಪ್ರಸರಣ ವಿಭಾಗದ ರವಿ, ವಿದ್ಯಾರ್ಥಿಗಳಾದ ಅರ್ಚನಾ, ಪೂಜಾ, ಭಿಮಪ್ಪ, ರಮ್ಯಾ, ಸ್ವಪ್ನಿಲ್ ಸೇರಿದಂತೆ ದ್ವೀತಿಯ, ನಾಲ್ಕನೆಯ ಮತ್ತು ಬಿ ಎ ಪತ್ರಿಕೋದ್ಯಮದ ಆರನೇ ಸೆಮಿಸ್ಟರ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.