ರಾಯಚೂರು ಜಿಲ್ಲೆ ಸಿರವಾರ ತಾಲೂಕು ಘೋಷಣೆಯಾಗಿ ಸುಮಾರು 7ವರ್ಷ ಗತಿಸಿದರೂ ತಹಶೀಲ್ದಾರ್ ಕಚೇರಿ ತಾಡಪತ್ರಿ ಮೇಲ್ಛಾವಣಿಯಿಂದ ಕೂಡಿರುವುದನ್ನು ಕಂಡ ಸ್ಥಳೀಯರು, ದನದ ಕೊಟ್ಟಿಗೆಯಂತೆ ಮೇಲ್ಛಾವಣಿಗೆ ತಾಡಪತ್ರಿ ಹಾಕಿದ್ದು, ಇದು ತಹಶೀಲ್ದಾರ್ ಕಚೇರಿಯೋ ಇಲ್ಲವೇ ಹಳ್ಳಿ ಗುಡಿಸಲೋ ಎನ್ನುತ್ತಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ಮೊದಲನೇ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಮಸ್ಕಿ, ಸಿರವಾರ ತಾಲೂಕುಗಳನ್ನು ಘೋಷಣೆ ಮಾಡುವ ಮೂಲಕ ಕಚೇರಿಗಳನ್ನೂ ಉದ್ಘಾಟಿಸಿದ್ರು. ತಾಲೂಕಿಗೆ ಒದಗಿಸಬೇಕಾದ ತಹಶೀಲ್ದಾರ್ ಕಚೇರಿ, ವಿವಿಧ ಇಲಾಖೆಗಳು, ಅಧಿಕಾರಿಗಳು, ಸಿಬ್ಬಂದಿಯನ್ನು ಅವ್ಯಶಕತೆಗೆ ಅನುಗುಣವಾಗಿ ನಿಯೋಜನೆ ಮಾಡಬೇಕು. ಆದ್ರೆ ಈವರೆಗೆ ಸರ್ಕಾರ ಆ ಕಾರ್ಯ ಮಾಡಿಲ್ಲ. ಅಲ್ಲಿಂದ ಇಲ್ಲಿಯವರೆಗೂ ಯಾವುದೇ ಅಭಿವೃದ್ಧಿ ಕಾಣದ ತಹಶೀಲ್ ಕಟ್ಟಡ ಇವತ್ತು ನಾಳೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಿದ್ದಾರೆ ಸ್ಥಳಿಯರು.

ತಹಶೀಲ್ದಾರ್ ಕಚೇರಿ ಎಂದರೆ ತಾಲೂಕಿನ ಕಾರ್ಯ ಚಟುವಟಿಕೆಗಳಿಗೆ ಹೃದಯದ ಭಾಗ ಇದ್ದಂತೆ, ಕಚೇರಿಗೆ ನಿತ್ಯ ನೂರಾರು ಜನ ತಮ್ಮ ಕೆಲಸ ಕಾರ್ಯಗಳಿಗಾಗಿ ಆಗಮಿಸುವುದು, ಅಲೆದಾಡುವುದು ಸರ್ವೇ ಸಾಮಾನ್ಯವಾದರೆ, ಇನ್ನೊಂದೆಡೆ ಕಟ್ಟಡ ಯಾವಾಗ ಕುಸಿದು ಬೀಳುತ್ತೋ, ನಮ್ಮ ದಾಖಲೆಗಳು ಎಲ್ಲಿ ಹೋಗುತ್ತವೆಯೋ ಎನ್ನುವ ಭೀತಿ ಸಾರ್ವಜನಿಕರಿಗೆ ಕಾಡುತ್ತಿದೆ.
ಈ ಬಗ್ಗೆ ಎಸ್‌ಎಫ್‌ಐ ರಾಯಚೂರು ಜಿಲ್ಲಾ ಮುಖಂಡ ರಮೇಶ್ ವೀರಾಪುರ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಸ್ಥಳೀಯ ಶಾಸಕರು ವಿಧಾನಸಭೆಯಲ್ಲಿ ತಾಲೂಕಿನ ಅಭಿವೃದ್ಧಿ ಬಗ್ಗೆ ಪ್ರಶ್ನಿಸುತ್ತಿಲ್ಲ. ಚುನಾವಣೆ ಸಂದರ್ಭದಲ್ಲಿ ತಾಲೂಕಿಗೆ ಅಭಿವೃದ್ಧಿ ಮಾಡುತ್ತೇವೆ, ನಮ್ಮ ಮೇಲೆ ಭರವಸೆ, ನಂಬಿಕೆಯಿಟ್ಟುಕೊಂಡು ಮತ ಹಾಕುವಂತೆ ಕಾಲಿಗೆ ಬಾಗುತ್ತಾರೆ. ಆದರೆ ಗೆದ್ದ ಬಳಿಕ ಕಾಣೆಯಾಗ್ತಾರೆ. ತಾಲೂಕು ಆಡಳಿತ ಕಚೇರಿಯ ಅವ್ಯವಸ್ಥೆ ನೋಡಿದರೆ ಇಲ್ಲಿ ಯಾವುದೇ ಭದ್ರತೆ ಇಲ್ಲದಂತೆ ಕಾಣಿಸುತ್ತದೆ” ಎಂದು ಜನರು ಆಕ್ರೋಶ ವ್ಯಕ್ತಪಡಿಸಿದರು.
“ಮಳೆಗಾಲದಲ್ಲಿ ಕಚೇರಿ ಸಿಬ್ಬಂದಿ ಕೊಡೆ ಹಿಡಿದು ಕುಳಿತು ಕೆಲಸ ಮಾಡುವ ಪರಿಸ್ಥಿತಿ ಉಂಟಾಗಿದೆ. ಇದನ್ನು ಮೇಲಾಧಿಕಾರಿಗಳು ಗಮನಿಸಿ ಸುಸಜ್ಜಿತವಾಗಿ ಕಟ್ಟಡ ನಿರ್ಮಿಸಿಕೊಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬೃಹತ್ ಹೋರಾಟ ಮಾಡಲಾಗುವುದು” ಎಂದು ಎಚ್ಚರಿಕೆ ನೀಡಿದರು.

ಸ್ಥಳೀಯ ಮುಖಂಡ ಶರಣಪ್ಪ ಬಲ್ಲಟಗಿ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ತಹಶೀಲ್ದಾರ್ ಕಚೇರಿ ಕಾರ್ಯ ಚಟುವಟಿಕೆಗಳು ತಾತ್ಕಾಲಿತವಾಗಿ ನೀರಾವರಿ ಇಲಾಖೆಯ ಕಟ್ಟಡದಲ್ಲಿ ನಡೆಯುತ್ತಿವೆ. ಹೊಸ ಮಿನಿ ವಿಧಾನ ಸೌಧಕ್ಕೆ ಜಾಗ ಮಂಜೂರಾಗಿ ಸುಮಾರು 4 ವರ್ಷಗಳು ಕಳೆದಿವೆ. ಆದರೆ ಕಟ್ಟಡ ಕಾಮಗಾರಿ ಇನ್ನೂ ಆರಂಭವಾಗಿಲ್ಲ. ಶಾಸಕರು ಇದನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರ ಕಟ್ಟಡ ನಿರ್ಮಾಣಕ್ಕೆ ಮುಂದಾಗಬೇಕು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಸೃಜನಶೀಲತೆ ಮುಖ್ಯ: ಡಾ ವಿಶ್ವನಾಥ ಕೋಟಿ
ಉಪ ತಹಶೀಲ್ದಾರ್ ಈ ಬಗ್ಗೆ ಮಾತನಾಡಿ, “ನಾವು ಇಲ್ಲಿ ಜೀವ ಪಣಕ್ಕಿಟ್ಟು ಕಾರ್ಯ ನಿರ್ವಹಿಸುತ್ತಿದ್ದೇವೆ. ಕಚೇರಿಯ ಮೇಲ್ಛಾವಣಿ ಯಾವಾಗ ಕುಸಿದು ಬೀಳುತ್ತೋ ಎಂಬುದು ಗೊತ್ತಿಲ್ಲ. ಇದನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಸಿರವಾರ ಪಟ್ಟಣದ ಹೊರವಲಯದಲ್ಲಿ ಮಿನಿ ವಿಧಾನಸಭಾ ಕಟ್ಟಡ ನಿರ್ಮಾಣಕ್ಕೆ ಜಾಗ ಗುರುತಿಸಲಾಗಿದೆ. ಆದಷ್ಟು ಬೇಗ ಕೆಲಸ ಪ್ರಾರಂಭ ಮಾಡಲಾಗುವುದು” ಎಂದು ಈ ದಿನ.ಕಾಮ್‌ಗೆ ಮಾಹಿತಿ ನೀಡಿದರು.