ಈ ದಿನ ಸಂಪಾದಕೀಯ | ರಾಹುಲ್ ಜಾತಿಯನ್ನು ಪ್ರಶ್ನಿಸಿದ ವಿಕೃತಿಗೆ ಮೋದಿ ಚಪ್ಪಾಳೆ ನಾಚಿಕೆಗೇಡು

Date:

Advertisements

‘ಖುದ್ದು ತನ್ನ ಜಾತಿ ಯಾವುದು ಅಂತಾನೇ ಗೊತ್ತಿಲ್ಲದವನು (ಜಾತಿ)ಗಣತಿಯ ಮಾತಾಡ್ತಾನೆ’ ಎಂಬುದಾಗಿ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಬಿಜೆಪಿಯ ಅನುರಾಗ್ ಠಾಕೂರ್ ಮಂಗಳವಾರ ಲೋಕಸಭೆಯಲ್ಲಿ ಹೀಗಳೆದಿದ್ದರು. ಆಡಳಿತ ಪಕ್ಷದ ಸದಸ್ಯರು ಈ ವರ್ತನೆಯನ್ನು ಮೇಜು ಗುದ್ದಿ ಬಹು ಉತ್ಸಾಹದಿಂದ ಸ್ವಾಗತಿಸಿದ್ದರು. ಬಿಜೆಪಿ ಸುದೀರ್ಘ ಸಮಾಲೋಚನೆಯ ನಂತರವೇ ನಡೆಸಿರುವ ಪೂರ್ವ ನಿಯೋಜಿತ ದಾಳಿಯಿದು.


ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಹಾಗೂ ಪಂಚಮರ ಮೇಲುಕೀಳಿನ ಆಳುಕಾಳಿನ ಶಾಶ್ವತ ವರ್ಣವ್ಯವಸ್ಥೆಯ ಏಣಿಯನ್ನು ಸೃಷ್ಟಿಸಿ ಅದನ್ನು ಸೂರ್ಯಚಂದ್ರರು ಇರುವ ತನಕ ಜೀವಂತ ಇರಿಸಲು ಅತಿ ಕ್ರೂರ ಜಾತಿವ್ಯವಸ್ಥೆಯನ್ನು ಸೃಷ್ಟಿಸಿದ ದುಷ್ಟ ಸಮಾಜ ನಮ್ಮದು.

ಕೂಸು ತಾಯಿಯ ಗರ್ಭದಿಂದ ಹೊರಬೀಳುವಾಗಲೇ ಅದರ ಹಣೆಯ ಮೇಲೆ ಜಾತಿ ಉಪಜಾತಿಯ ಮೊಹರು ಬಿದ್ದಿರುತ್ತದೆ. ತೊಟ್ಟಿಲಿಂದ ಚಟ್ಟದವರೆಗೆ ಅನುದಿನವೂ ಪ್ರತಿಕ್ಷಣವೂ ಕಡ್ಡಾಯವಾಗಿ ಧರಿಸಬೇಕಿರುವ ಈ ಮೊಹರನ್ನು ಅಳಿಸುವುದು ಅಸಾಧ್ಯ. ತುಳಿಸಿಕೊಂಡವನ ಕೆಳಗೊಬ್ಬ ತುಳಿಸಿಕೊಳ್ಳುವವನ ಸರಣಿಯನ್ನೇ ಸೃಷ್ಟಿಸಿರುವ ಅಪೂರ್ವ ಅನಿಷ್ಟ ಸಂಶೋಧನೆ. ಶೂದ್ರ ಜಾತಿಗಳು ಮತ್ತು ‘ಪಂಚಮ’ರೆಂಬ ‘ಮುಟ್ಟಿಸಿಕೊಳ್ಳಬಾರದವರ’ ಪಾಲಿಗೆ ಉಕ್ಕಿನಲ್ಲಿ ಹೊಯ್ದ ಈ ಎರಕ ಭೂಮಿಯ ಮೇಲಿನ ಜೀವಂತ ನರಕ.

ನಿನ್ನ ಜಾತಿ ಯಾವುದೆಂದು ಸಂಸತ್ತಿನ ವೇದಿಕೆಯಲ್ಲಿ ನಿಂತು ಕೇಳಿದ ಬಿಜೆಪಿ ಸದಸ್ಯನ ದ್ವೇಷ ಭಾಷಣವನ್ನು ಹಾಡಿ ಹೊಗಳಿ ಹರಸಿದ್ದಾರೆ ಪ್ರಧಾನಮಂತ್ರಿ ನರೇಂದ್ರ ಮೋದಿ. ಸಂಸದೀಯ ಘನತೆ ಗರಿಮೆಗಳನ್ನು ಕೆಳಗೆ ತುಳಿದ ತಮ್ಮ ಸಹೋದ್ಯೋಗಿಯನ್ನು ತಲೆಯ ಮೇಲಿಟ್ಟು ಮೆರೆಸಿದ್ದಾರೆ. ಪ್ರಧಾನಿ ಹುದ್ದೆಯ ಹಿರಿಮೆಗೆ ತಕ್ಕುದಲ್ಲದ ಅವರ ನೂರಾರು ನಡೆನುಡಿಗಳ ಸಾಲಿಗೆ ಮತ್ತೊಂದು ‘ಆಣಿಮುತ್ತು’ ಪೋಣಿಸಿದ್ದಾರೆ

‘ಖುದ್ದು ತನ್ನ ಜಾತಿ ಯಾವುದು ಅಂತಾನೇ ಗೊತ್ತಿಲ್ಲದವನು (ಜಾತಿ)ಗಣತಿಯ ಮಾತಾಡ್ತಾನೆ’ ಎಂಬುದಾಗಿ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಬಿಜೆಪಿಯ ಅನುರಾಗ್ ಠಾಕೂರ್ ಮಂಗಳವಾರ ಲೋಕಸಭೆಯಲ್ಲಿ ಹೀಗಳೆದಿದ್ದರು. ಆಡಳಿತ ಪಕ್ಷದ ಸದಸ್ಯರು ಈ ಭರ್ತ್ಸನೆಯನ್ನು ಮೇಜು ಗುದ್ದಿ ಬಹು ಉತ್ಸಾಹದಿಂದ ಸ್ವಾಗತಿಸಿದ್ದರು. ಬಿಜೆಪಿ ಸುದೀರ್ಘ ಸಮಾಲೋಚನೆಯ ನಂತರವೇ ನಡೆಸಿರುವ ಪೂರ್ವ ನಿಯೋಜಿತ ದಾಳಿಯಿದು.

ನೀವು ಎಷ್ಟೇ ಅಪಮಾನ ಮಾಡಿದರೂ ನಿಂದಿಸಿದರೂ ಜಾತಿಜನಗಣತಿಯನ್ನು ನಾವು ನಡೆಸಿಯೇ ನಡೆಸುತ್ತೇವೆ. ಅನುರಾಗ್ ಠಾಕೂರ್ ಅವರಿಂದ ನಾವು ಕ್ಷಮಾಪಣೆ ಕೇಳುವುದಿಲ್ಲ. ಅವರ ಕ್ಷಮಾಪಣೆ ನಮಗೆ ಬೇಕಿಲ್ಲ. ಹಿಂದುಸ್ತಾನದ ಶೇ.95ರಷ್ಟು ಜನಕ್ಕೆ ಜಾತಿಜನಗಣತಿ ಬೇಕು. ತಮ್ಮ ಭಾಗೀದಾರಿ (ಜನಸಂಖ್ಯೆ) ಎಷ್ಟು, ಹಿಸ್ಸೇದಾರಿ (ಸಂಪನ್ಮೂಲಗಳಲ್ಲಿ ಪಾಲುದಾರಿಕೆ) ಎಷ್ಟು ಎಂಬುದನ್ನು ದೇಶದ ಬಹುಜನರು ತಿಳಿಯಬಯಸಿದ್ದಾರೆ.

ಬಜೆಟ್ ತಯಾರಿಕೆಯಲ್ಲಿ ದಲಿತರು, ಆದಿವಾಸಿಗಳು ಹಾಗೂ ಹಿಂದುಳಿದವರ ಪಾಲು ನಗಣ್ಯವಾಗಿ ಹೋಗಿದೆ. ಪಾಲ್ಗೊಂಡಿದ್ದ 20 ಮಂದಿ ಅಧಿಕಾರಿಗಳ ಪೈಕಿ ಒಬ್ಬ ಅಲ್ಪಸಂಖ್ಯಾತ ಮತ್ತು ಒಬ್ಬ ಹಿಂದುಳಿದ ಜಾತಿಗೆ ಸೇರಿದವರಿದ್ದರು. ಭಾಗೀದಾರಿ ಇಲ್ಲದೆ ಹಿಸ್ಸೇದಾರಿ ಹೇಗೆ ಬಂದೀತು ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದರು. ಬಜೆಟ್ಟಿನಲ್ಲಿ ತಮ್ಮ ಪಾಲು ಎಷ್ಟೆಂದು ದಲಿತರು ಆದಿವಾಸಿಗಳು ಹಿಂದುಳಿದವರು ಅಲ್ಪಸಂಖ್ಯಾತರು ತಿಳಿದುಕೊಂಡು ಅದಕ್ಕಾಗಿ ದಾವೆ ಹೂಡಬೇಕಿದೆ. ಈ ದಿಸೆಯಲ್ಲಿ ಜಾತಿ ಜನಗಣತಿ ಅತ್ಯವಶ್ಯ. ಇಂಡಿಯಾ ಮೈತ್ರಿ ಕೂಟ ಇದೇ ಸದನದಲ್ಲಿ ಜಾತಿ ಜನಗಣತಿ ವಿಧೇಯಕವನ್ನು ಅಂಗೀಕರಿಸಲಿದೆ. ಈ ಮಾತನ್ನು ಬರೆದಿಟ್ಟುಕೊಳ್ಳಿ ಎಂದು ರಾಹುಲ್ ಗಾಂಧಿ ಎರಡು ದಿನಗಳ ಹಿಂದೆ ಕಳೆದ ಸೋಮವಾರ ಮೋದಿ ಸರ್ಕಾರಕ್ಕೆ ಸವಾಲು ಹಾಕಿದ್ದರು. ಈ ಸವಾಲಿಗೆ ಪ್ರತಿಕ್ರಿಯೆಯಾಗಿ ಸಿಡಿದದ್ದು ಅನುರಾಗ್ ಠಾಕೂರ್ ನಂಜು. ಈ ಜಾತಿದ್ವೇಷದ ಈ ವಿಷವನ್ನು ‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ಹಾಡಿ ಹರಸಿದ್ದಾರೆ ಪ್ರಧಾನಿಯವರು.

ದೇಶದ ಸಂಪನ್ಮೂಲಗಳು ಕೆಳಗೆ ಬಿದ್ದ ಜನಸಮುದಾಯಗಳಿಗೆ ದಕ್ಕುತ್ತಲೇ ಇಲ್ಲ. ಹಾಗೆ ದಕ್ಕಬೇಕಿದ್ದರೆ ಯಾವ ಜಾತಿಯ ಜನರ ಸಂಖ್ಯೆ ಎಷ್ಟು ಎಂಬುದು ಗೊತ್ತಾಗಬೇಕು. ಗೊತ್ತಾಗಲು ಜಾತಿ ಜನಗಣತಿ ನಡೆಯಬೇಕು ಎಂಬುದು ಕಾಂಗ್ರೆಸ್ ಪಕ್ಷದ ನಿಲುವು. ಕಾಂಗ್ರೆಸ್ ನ ಮಿತ್ರಪಕ್ಷವಾದ ಸಮಾಜವಾದಿ ಪಕ್ಷ ಮತ್ತು ರಾಷ್ಟ್ರೀಯ ಜನತಾದಳವೂ ಈ ನಿಲುವನ್ನು ಪ್ರತಿಪಾದಿಸಿವೆ. ಲೋಕಸಭೆ ಚುನಾವಣೆಗೆ ತುಸುವೇ ಮುನ್ನ ಬಿಜೆಪಿಯನ್ನು ಆಲಂಗಿಸಿದ ನಿತೀಶ್ ಕುಮಾರ್ ಅವರ ಸಂಯುಕ್ತ ಜನತಾದಳವೂ ಜಾತಿ ಜನಗಣತಿಯ ಆದ್ಯ ಪ್ರತಿಪಾದಕ ಪಕ್ಷ. ನಿತೀಶ್ ಸರ್ಕಾರ ಬಿಹಾರದಲ್ಲಿ ಜಾತಿ ಜನಗಣತಿಯನ್ನು ಪೂರ್ಣಗೊಳಿಸಿ ಹೊರಹಾಕಿದ ಅಂಕಿಅಂಶಗಳು ಕಣ್ಣು ತೆರೆಸುವಂತಹವು. ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಶೇ.65ಕ್ಕೆ ಏರಿಸಿದ ನಿತೀಶ್ ಸರ್ಕಾರದ ತೀರ್ಮಾನಕ್ಕೆ ನ್ಯಾಯಾಂಗದ ಅನುಮೋದನೆ ದೊರೆತಿಲ್ಲ. ಅದು ಬೇರೆಯೇ ಚರ್ಚೆಯ ಸಂಗತಿ.

ಮಂಡಲ್ ವರದಿಯ ಸ್ವೀಕೃತಿಯ ನಂತರದ ಮಂಡಲ್ ರಾಜಕಾರಣವು ಕಮಂಡಲ ರಾಜಕಾರಣವನ್ನು ಕಕ್ಕಾಬಿಕ್ಕಿ ಆಗಿಸಿತ್ತು. ಆದರೆ ಉಗ್ರ ಹಿಂದುತ್ವದ ಅಸ್ತ್ರದಿಂದ ಮಂಡಲ್ ರಾಜಕಾರಣವನ್ನು ಅರಗಿಸಿಕೊಂಡಿತ್ತು ಕಮಂಡಲ ರಾಜಕಾರಣ. ಹತ್ತು ವರ್ಷಗಳ ನಂತರ ಇದೀಗ ಜಾತಿ ಜನಗಣತಿ ವಾದದ ಮುಂದೆ ಮತ್ತೊಮ್ಮೆ ತಬ್ಬಿಬ್ಬಾಗಿದೆ.

ಎದುರಾಳಿಯನ್ನು ವಾದ ಮತ್ತು ತರ್ಕದಲ್ಲಿ ಸೋಲಿಸುವುದು ಸಭ್ಯ ನಾಗರಿಕ ದಾರಿ. ಸಂಸತ್ತಿನಲ್ಲಿಯೂ ಇದೇ ಹೆದ್ದಾರಿ. ಆದರೆ ಈ ಜಾತಿಜನಗಣತಿಯ ಬೇಡಿಕೆಯನ್ನು, ಅದರ ಹಿಂದಿನ ತರ್ಕವನ್ನು, ಸಾಮಾಜಿಕ ನ್ಯಾಯದ ಹಂಬಲವನ್ನು ತಿರಸ್ಕರಿಸುತ್ತ ಬಂದಿರುವ ಮನಸ್ಥಿತಿಗಳು ಅಡ್ಡದಾರಿ ಹಿಡಿಯುತ್ತ ಬಂದಿವೆ. ಅನುರಾಗ್ ಠಾಕೂರ್ ಮತ್ತು ಅವರ ಪಕ್ಷ ಪರಿವಾರ ರಾಹುಲ್ ವಿರುದ್ಧ ಹಿಡಿದಿರುವುದು ಅಡ್ಡದಾರಿಯೇ. ಜಾತಿ ಜನಗಣತಿ ನಿಲುವನ್ನು ಚರ್ಚೆಯ ಮೂಲಕ ಸೋಲಿಸಲಾರದ ಬಿಜೆಪಿ ರಾಹುಲ್ ಅವರ ಅಪ್ಪ-ಅಮ್ಮನ ಧರ್ಮಗಳು, ಅಜ್ಜಿ-ತಾತನ ಧರ್ಮಮೂಲಗಳನ್ನು ಎತ್ತಿ ಆಡಿ ನಿಂದಿಸುತ್ತಿದೆ.

ಇತ್ತೀಚಿನ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿಗೆ ಸರಳ ಬಹುಮತ ಸಿಕ್ಕಿಲ್ಲ. ಮೋದಿ ಅಭದ್ರತೆಯ ಭಾವಕ್ಕೆ ಸಿಲುಕಿದ್ದಾರೆ. ಪ್ರತಿಪಕ್ಷಗಳ ಮೇಲಿನ ದಾಳಿಗಳು ಇನ್ನಷ್ಟು ಮತ್ತಷ್ಟು ಹೆಚ್ಚು ವ್ಯಕ್ತಿಗತವೂ, ವಿಕೃತವೂ ಆಗಲಿವೆ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ಬಿಜೆಪಿ ಮತ್ತು ಮೋದಿ ಅವಮಾನಿಸಿದಷ್ಟೂ ರಾಹುಲ್ ಗಟ್ಟಿಯಾಗುತ್ತಾ ಬೆಳೆಯುತ್ತಾ ಹೋಗುತ್ತಾರೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X